Thursday 7 June 2018

Samyutta nikaya 43 ಅಸಙ್ಞತ (ಅಸಂಖತ) ಸಂಯುಕ್ತ


 ಅಸಙ್ಞತ (ಅಸಂಖತ) ಸಂಯುಕ್ತ 

1. ಪ್ರಥಮವರ್ಗ
1. ಕಾಯಗತಾಸತಿ ಸುತ್ತ

366. ಸಾವತ್ಥಿ (ಶ್ರಾವಸ್ತಿ)ಯಲ್ಲಿ ಹೇಳಿದ್ದು: ಭಿಕ್ಷುಗಳೇ, ನಾನು ಅಸಂಖತ (ಕಾರಣಾತೀತ) ಧಮ್ಮವನ್ನು ಬೋಧಿಸುತ್ತೇನೆ. ಹಾಗೆಯೇ ಅಸಂಖತ ಧಮ್ಮದೆಡೆಗೆ ಸಾಗುವ ಮಾರ್ಗವನ್ನು ಉಪದೇಶಿಸುತ್ತೇನೆ. ತಾವೆಲ್ಲರೂ ಕೇಳಿರಿ, ಯಾವುದು ಭಿಕ್ಷುಗಳೇ ಅಸಂಖತ ಧಮ್ಮ? ರಾಗಕ್ಷಯ, ದ್ವೇಷಕ್ಷಯ ಮತ್ತು ಮೋಹಕ್ಷಯ ಇದುವೇ ಅಸಂಖತವೆಂದು ಹೇಳುತ್ತೇನೆ. ಯಾವುದು ಭಿಕ್ಷುಗಳೇ, ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಕಾಯಗತಾಸತಿಯನ್ನೇ ಅಸಂಖತದೆಡೆಗೆ ಕರೆದೊಯ್ಯುವ ಮಾರ್ಗವೆಂದು ಹೇಳುತ್ತೇವೆ.
ಭಿಕ್ಷುಗಳೇ, ಹೀಗೆ ನಾನು ಅಸಂಖತ ಉಪದೇಶಿಸುತ್ತೇನೆ ಹಾಗು ಅಸಂಖತಗಾಮಿ ಮಾರ್ಗವನ್ನು ಉಪದೇಶಿಸುತ್ತೇನೆ. ಓರ್ವ ಅನುಕಂಪಭರಿತ ಉಪಾಧ್ಯಾಯನಿಂದ ತನ್ನ ಶಿಷ್ಯರಿಗೆ (ಅಂದರೆ ಶ್ರಾವಕರಿಗೆ) ಏನೆಲ್ಲಾ ಹಿತವನ್ನು ಕರುಣೆಯಿಂದ ಮಾಡಬಹುದೋ ಅದೆಲ್ಲವನ್ನು ನಾನು ಮಾಡಿದ್ದೇನೆ. ಭಿಕ್ಷುಗಳೇ, ಇದೇ ವೃಕ್ಷಮೂಲಗಳಾಗಿವೆ. ಇವೇ ಶೂನ್ಯಗೃಹಗಳಾಗಿವೆ. ಭಿಕ್ಷುಗಳೇ, ಧ್ಯಾನಸಿ, ಪ್ರಮಾದಿಗಳಾಗಬೇಡಿ, ಇಲ್ಲದೇಹೋದಲ್ಲಿ ನಂತರ ಪಶ್ಚಾತ್ತಾಪ ಬೀಳುವಿರಿ. ಇದೇ ನಾನು ನಿಮಗೆ ನೀಡುವ ಅನುಶಾಸನವಾಗಿದೆ.


2. ಸಮಥವಿಪಸ್ಸನಾ ಸುತ್ತ

367. ಭಿಕ್ಷುಗಳೇ, ನಾನು ಅಸಂಖತ ಧಮ್ಮವನ್ನು ಹಾಗೆಯೇ ಅಸಂಖತದೆಡೆಗೆ ಸಾಗುವ ಮಾರ್ಗವನ್ನು ಉಪದೇಶಿಸುತ್ತೇನೆ. ತಾವೆಲ್ಲರೂ ಕೇಳಿರಿ, ಮತ್ತೆ ಯಾವುದು ಭಿಕ್ಷುಗಳೇ, ಅಸಂಖತವು? ರಾಗಕ್ಷಯ, ದ್ವೇಷಕ್ಷಯ, ಮೋಹಕ್ಷಯ. ಇವನ್ನೇ ಅಸಂಖತವೆಂದು ಹೇಳುತ್ತೇನೆ. ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಸಮಥ ಹಾಗು ವಿಪಶ್ಶನವೇ ಭಿಕ್ಷುಗಳೇ ಅಸಂಖತದೆಡೆಗೆ ಕರೆದೊಯ್ಯುವ ಮಾರ್ಗವೆಂದು ಹೇಳುತ್ತೇನೆ.


3. ಸವಿತರ್ಕ ಸವಿಚಾರ ಸುತ್ತ

368. ಭಿಕ್ಷುಗಳೇ, ನಾನು ಅಸಂಖತ ಧಮ್ಮವನ್ನು ಹಾಗೆಯೇ ಅಸಂಖತದೆಡೆಗೆ ಸಾಗುವ ಮಾರ್ಗವನ್ನು ಉಪದೇಶಿಸುತ್ತೇನೆ. ತಾವೆಲ್ಲರೂ ಕೇಳಿರಿ, ಮತ್ತೆ ಯಾವುದು ಭಿಕ್ಷುಗಳೇ, ಅಸಂಖತವು? ರಾಗಕ್ಷಯ, ದ್ವೇಷಕ್ಷಯ, ಮೋಹಕ್ಷಯ. ಇವನ್ನೇ ಅಸಂಖತವೆಂದು ಹೇಳುತ್ತೇನೆ. ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಸವಿತರ್ಕ ಸವಿಚಾರ ಸಮಾದಿ (ಯೋಚನೆ ಹಾಗು ಪರೀಕ್ಷೆಯುತ) ಅಸವಿತರ್ಕ ಹಾಗು ಅವಿಚಾರ ಸಮಾದಿ (ಯೋಚನೆರಹಿತ ಹಾಗು ಪರೀಕ್ಷಾತೀತ) ಇವನ್ನೇ ಭಿಕ್ಷುಗಳೇ ಅಸಂಖತದೆಡೆಗೆ ಕರೆದೊಯ್ಯುವ ಮಾರ್ಗವೆಂದು ಹೇಳುತ್ತೇನೆ.


4. ಶೂನ್ಯತ ಸಮಾಧಿ ಸುತ್ತ

369. ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಸೂನ್ಯತಾ (ಶೂನ್ಯತೆ) ಸಮಾದಿ, ಸಂಕೇತರಹಿತ (ಅನಿಮಿತ್ತ) ಸಮಾದಿ, ಅಪ್ಪಣಿಹಿತೊ (ಆಸೆರಹಿತ/ಅಮಾರ್ಗದಶರ್ಿತ) ಸಮಾಧಿ. ಇವನ್ನೇ ಭಿಕ್ಷುಗಳೇ ಅಸಂಖತದೆಡೆಗೆ ಕರೆದೊಯ್ಯುವ ಮಾರ್ಗವೆಂದು ಹೇಳುತ್ತೇನೆ.


5. ಸತಿಪಟ್ಠಾನ ಸುತ್ತ (ಸ್ಮೃತಿಯ ಪ್ರತಿಷ್ಠಾಪನೆಯ ಸುತ್ತ)

370. ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಅವೇ ನಾಲ್ಕು ಸ್ಮೃತಿ ಪ್ರತಿಷ್ಠಾಪನೆ (ನಾಲ್ಕು ಸತಿಪಟ್ಠಾನ)ಗಳು. ಇವನ್ನೇ ಭಿಕ್ಷುಗಳೇ ಅಸಂಖತದೆಡೆಗೆ ಕರೆದೊಯ್ಯುವ ಮಾರ್ಗವೆಂದು ಹೇಳುತ್ತೇನೆ.


6. ಸಮ್ಮಪ್ರಧಾನ ಸುತ್ತ (ಯೋಗ್ಯ ಪ್ರಯತ್ನಶೀಲತೆಯ ಸುತ್ತ)

371. ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಅವೇ ನಾಲ್ಕು ಸಮಂಜಸ ಪ್ರಯತ್ನಶೀಲತೆ. ಇವನ್ನೇ ಭಿಕ್ಷುಗಳೇ ಅಸಂಖತದೆಡೆಗೆ ಕರೆದೊಯ್ಯುವ ಮಾರ್ಗವೆಂದು ಹೇಳುತ್ತೇನೆ.


7. ಇದ್ದಿಪಾದ [ಋದ್ದಿಪಾದ (ಆಧಾರ)] ಸುತ್ತ

372. ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ನಾಲ್ಕು ಇದ್ದಿಪಾದಗಳು (ಋದ್ದಿಶಕ್ತಿಗೆ ಆಧಾರವಾಗಿರುವಂತಹುದು). ಇವನ್ನೇ ಭಿಕ್ಷುಗಳೇ ಅಸಂಖತದೆಡೆಗೆ ಕರೆದೊಯ್ಯುವ ಮಾರ್ಗವೆಂದು ಹೇಳುತ್ತೇನೆ.


8. ಇಂದ್ರಿಯ ಸುತ್ತ

373. ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಅವೇ ಪಂಚೇಂದ್ರಿಯಗಳು. ಇವನ್ನೇ ಭಿಕ್ಷುಗಳೇ ಅಸಂಖತದೆಡೆಗೆ ಕರೆದೊಯ್ಯುವ ಮಾರ್ಗವೆಂದು ಹೇಳುತ್ತೇನೆ.


9. ಬಲ ಸುತ್ತ

374. ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಅವೇ ಪಂಚಬಲಗಳು. ಇವನ್ನೇ ಭಿಕ್ಷುಗಳೇ ಅಸಂಖತದೆಡೆಗೆ ಕರೆದೊಯ್ಯುವ ಮಾರ್ಗವೆಂದು ಹೇಳುತ್ತೇನೆ.


10. ಬೋಧಿ ಅಂಗಗಳ ಸುತ್ತ (ಭೋಜ್ಯಾಂಗ ಸುತ್ತ)

375. ಭಿಕ್ಷುಗಳೇ, ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಅವೇ ಸಪ್ತಬೋಧಿ ಅಂಗಗಳು. ಇವನ್ನೇ ಭಿಕ್ಷುಗಳೇ ಅಸಂಖತದೆಡೆಗೆ ಕರೆದೊಯ್ಯುವ ಮಾರ್ಗವೆಂದು ಹೇಳುತ್ತೇನೆ.


11. ಮಾರ್ಗ ಅಂಗಗಳ ಸುತ್ತ (ಮಾಗರ್ಾಂಗ ಸುತ್ತ)

376. ಭಿಕ್ಷುಗಳೇ, ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಅವೇ ಆರ್ಯ ಅಷ್ಠಾಂಗಿಕ ಮಾರ್ಗವೆಂದು ಹೇಳುತ್ತೇನೆ. ಹೀಗೆ ಭಿಕ್ಷುಗಳೇ, ನನ್ನಿಂದ ಅಸಂಖತವು ಹಾಗು ಅಸಂಖತದೆಡೆಗೆ ಕರೆದೊಯ್ಯುವ ಮಾರ್ಗವು ಉಪದೇಶಿಸಲಾಗಿದೆ. ಭಿಕ್ಷುಗಳೇ, ಓರ್ವ ಅನುಕಂಪಭರಿತವಾದ ಉಪಧ್ಯಾಯನಿಂದ ತನ್ನ ಶ್ರಾವಕ ಶಿಷ್ಯರಿಗೆ ಏನೆಲ್ಲಾ ಹಿತವನ್ನು ಕರುಣೆಯಿಂದ ಮಾಡಬಹುದೋ ಅವೆಲ್ಲವನ್ನು ನಾನು ಮಾಡಿದ್ದೇನೆ. ಭಿಕ್ಷುಗಳೇ, ಇವೇ ವೃಕ್ಷಮೂಲಗಳಾಗಿವೆ. ಇವೇ ಶೂನ್ಯಗೃಹಗಳಾಗಿವೆ. ಧ್ಯಾನಿಸಿ ಭಿಕ್ಷುಗಳೇ, ಪ್ರಮಾದಿಗಳಾಬೇಡಿ. ಇಲ್ಲದೇಹೋದಲ್ಲಿ ನಂತರ ಪಶ್ಚಾತ್ತಾಪ ಬೀಳುವಿರಿ. ಇದೇ ನಾನು ನಿಮಗೆ ನೀಡುವ ಅನುಶಾಸನವಾಗಿದೆ.


2. ದ್ವಿತೀಯ ವರ್ಗ

1. ಅಸಂಖತ ಸುತ್ತಂ

377. ಭಿಕ್ಷುಗಳೇ, ನಾನು ಅಸಂಖತ ಧಮ್ಮವನ್ನು ಹಾಗೆಯೇ ಅಸಂಖತದೆಡೆಗೆ ಸಾಗುವ ಮಾರ್ಗವನ್ನು ಉಪದೇಶಿಸುತ್ತೇನೆ. ತಾವೆಲ್ಲರೂ ಕೇಳಿರಿ, ಮತ್ತೆ ಯಾವುದು ಭಿಕ್ಷುಗಳೇ, ಅಸಂಖತವು? ರಾಗಕ್ಷಯ, ದ್ವೇಷಕ್ಷಯ, ಮೋಹಕ್ಷಯ. ಇವನ್ನೇ ಅಸಂಖತವೆಂದು ಹೇಳುತ್ತೇನೆ. ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಸಮಥವನ್ನು ಅಸಂಖತಗಾಮಿ ಮಾರ್ಗವೆನ್ನುತ್ತೇನೆ. ಹೀಗೆ ಭಿಕ್ಷುಗಳೇ, ನನ್ನಿಂದ ಅಸಂಖತವು ಹಾಗು ಅದರ ಮಾರ್ಗ ಉಪದೇಶಿತವಾಗಿದೆ. ಭಿಕ್ಷುಗಳೇ, ಓರ್ವ ಅನುಕಂಪಭರಿತನಾದ ಉಪಾಧ್ಯಾಯನಂದ ತನ್ನ ಶ್ರಾವಕ ಶಿಷ್ಯರಿಗೆ ಏನೆಲ್ಲಾ ಹಿತವನ್ನು ಕರುಣೆಯಿಂದ ಮಾಡಬಹುದೋ ಅದೆಲ್ಲವನ್ನು ನಾನು ಮಾಡಿದ್ದೇನೆ. ಭಿಕ್ಷುಗಳೇ, ಇವೇ ವೃಕ್ಷಮೂಲಗಳಾಗಿವೆ, ಇವೇ ಶೂನ್ಯಗೃಹಗಳಾಗಿವೆ. ಧ್ಯಾನಸಿ ಭಿಕ್ಷುಗಳೇ, ಪ್ರಮಾದಿಗಳಾಗಬೇಡಿ. ಇಲ್ಲದೇ ಹೋದಲ್ಲಿ ನಂತರ ಪಶ್ಚಾತ್ತಾಪದಲ್ಲಿ ಬೀಳುವಿರಿ. ಇದೇ ನಿಮಗೆ ನಾನು ನೀಡುವ ಅನುಶಾಸನವಾಗಿದೆ.
ಭಿಕ್ಷುಗಳೇ, ನಾನು ಅಸಂಖತ ಧಮ್ಮವನ್ನು ಹಾಗೆಯೇ ಅಸಂಖತದೆಡೆಗೆ ಸಾಗುವ ಮಾರ್ಗವನ್ನು ಉಪದೇಶಿಸುತ್ತೇನೆ. ತಾವೆಲ್ಲರೂ ಕೇಳಿರಿ, ಮತ್ತೆ ಯಾವುದು ಭಿಕ್ಷುಗಳೇ, ಅಸಂಖತವು? ರಾಗಕ್ಷಯ, ದ್ವೇಷಕ್ಷಯ, ಮೋಹಕ್ಷಯ. ಇವನ್ನೇ ಅಸಂಖತವೆಂದು ಹೇಳುತ್ತೇನೆ. ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ವಿಪಶ್ಶನವನ್ನು ಅಸಂಖತಗಾಮಿ ಮಾರ್ಗವೆನ್ನುತ್ತೇನೆ. ಹೀಗೆ ಭಿಕ್ಷುಗಳೇ, ನನ್ನಿಂದ ಅಸಂಖತವು ಹಾಗು ಅದರ ಮಾರ್ಗ ಉಪದೇಶಿತವಾಗಿದೆ. ಭಿಕ್ಷುಗಳೇ, ಓರ್ವ ಅನುಕಂಪಭರಿತನಾದ ಉಪಾಧ್ಯಾಯನಂದ ತನ್ನ ಶ್ರಾವಕ ಶಿಷ್ಯರಿಗೆ ಏನೆಲ್ಲಾ ಹಿತವನ್ನು ಕರುಣೆಯಿಂದ ಮಾಡಬಹುದೋ ಅದೆಲ್ಲವನ್ನು ನಾನು ಮಾಡಿದ್ದೇನೆ. ಭಿಕ್ಷುಗಳೇ, ಇವೇ ವೃಕ್ಷಮೂಲಗಳಾಗಿವೆ, ಇವೇ ಶೂನ್ಯಗೃಹಗಳಾಗಿವೆ. ಧ್ಯಾನಿಸಿ ಭಿಕ್ಷುಗಳೇ, ಪ್ರಮಾದಿಗಳಾಗಬೇಡಿ. ಇಲ್ಲದೇ ಹೋದಲ್ಲಿ ನಂತರ ಪಶ್ಚಾತ್ತಾಪದಲ್ಲಿ ಬೀಳುವಿರಿ. ಇದೇ ನಿಮಗೆ ನಾನು ನೀಡುವ ಅನುಶಾಸನವಾಗಿದೆ.
ಭಿಕ್ಷುಗಳೇ, ನಾನು ಅಸಂಖತ ಧಮ್ಮವನ್ನು ಹಾಗೆಯೇ ಅಸಂಖತದೆಡೆಗೆ ಸಾಗುವ ಮಾರ್ಗವನ್ನು ಉಪದೇಶಿಸುತ್ತೇನೆ. ತಾವೆಲ್ಲರೂ ಕೇಳಿರಿ, ಮತ್ತೆ ಯಾವುದು ಭಿಕ್ಷುಗಳೇ, ಅಸಂಖತವು? ರಾಗಕ್ಷಯ, ದ್ವೇಷಕ್ಷಯ, ಮೋಹಕ್ಷಯ. ಇವನ್ನೇ ಅಸಂಖತವೆಂದು ಹೇಳುತ್ತೇನೆ. ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಸವಿತರ್ಕ ಸವಿಚಾರ ಸಮಾಧಿ ಮತ್ತು ಅವಿತರ್ಕ ಅವಿಚಾರ ಸಮಾಧಿಯನ್ನು ಅಸಂಖತಗಾಮಿ ಮಾರ್ಗವೆನ್ನುತ್ತೇನೆ. ಹೀಗೆ ಭಿಕ್ಷುಗಳೇ, ನನ್ನಿಂದ ಅಸಂಖತವು ಹಾಗು ಅದರ ಮಾರ್ಗ ಉಪದೇಶಿತವಾಗಿದೆ. ಭಿಕ್ಷುಗಳೇ, ಓರ್ವ ಅನುಕಂಪಭರಿತನಾದ ಉಪಾಧ್ಯಾಯನಿಂದ ತನ್ನ ಶ್ರಾವಕ ಶಿಷ್ಯರಿಗೆ ಏನೆಲ್ಲಾ ಹಿತವನ್ನು ಕರುಣೆಯಿಂದ ಮಾಡಬಹುದೋ ಅದೆಲ್ಲವನ್ನು ನಾನು ಮಾಡಿದ್ದೇನೆ. ಭಿಕ್ಷುಗಳೇ, ಇವೇ ವೃಕ್ಷಮೂಲಗಳಾಗಿವೆ, ಇವೇ ಶೂನ್ಯಗೃಹಗಳಾಗಿವೆ. ಧ್ಯಾನಿಸಿ ಭಿಕ್ಷುಗಳೇ, ಪ್ರಮಾದಿಗಳಾಗಬೇಡಿ. ಇಲ್ಲದೇ ಹೋದಲ್ಲಿ ನಂತರ ಪಶ್ಚಾತ್ತಾಪದಲ್ಲಿ ಬೀಳುವಿರಿ. ಇದೇ ನಿಮಗೆ ನಾನು ನೀಡುವ ಅನುಶಾಸನವಾಗಿದೆ.
ಭಿಕ್ಷುಗಳೇ, ನಾನು ಅಸಂಖತ ಧಮ್ಮವನ್ನು ಹಾಗೆಯೇ ಅಸಂಖತದೆಡೆಗೆ ಸಾಗುವ ಮಾರ್ಗವನ್ನು ಉಪದೇಶಿಸುತ್ತೇನೆ. ತಾವೆಲ್ಲರೂ ಕೇಳಿರಿ, ಮತ್ತೆ ಯಾವುದು ಭಿಕ್ಷುಗಳೇ, ಅಸಂಖತವು? ರಾಗಕ್ಷಯ, ದ್ವೇಷಕ್ಷಯ, ಮೋಹಕ್ಷಯ. ಇವನ್ನೇ ಅಸಂಖತವೆಂದು ಹೇಳುತ್ತೇನೆ. ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಸುನ್ಯತೋ ಸಮಾಧಿ ಅನಿಮಿತ್ತ ಸಮಾಧಿ ಮತ್ತು ಅಪ್ಪಣಿಹಿತೋ ಸಮಾಧಿಯನ್ನು ಅಸಂಖತಗಾಮಿ ಮಾರ್ಗವೆನ್ನುತ್ತೇನೆ. ಹೀಗೆ ಭಿಕ್ಷುಗಳೇ, ನನ್ನಿಂದ ಅಸಂಖತವು ಹಾಗು ಅದರ ಮಾರ್ಗ ಉಪದೇಶಿತವಾಗಿದೆ. ಭಿಕ್ಷುಗಳೇ, ಓರ್ವ ಅನುಕಂಪಭರಿತನಾದ ಉಪಾಧ್ಯಾಯನಿಂದ ತನ್ನ ಶ್ರಾವಕ ಶಿಷ್ಯರಿಗೆ ಏನೆಲ್ಲಾ ಹಿತವನ್ನು ಕರುಣೆಯಿಂದ ಮಾಡಬಹುದೋ ಅದೆಲ್ಲವನ್ನು ನಾನು ಮಾಡಿದ್ದೇನೆ. ಭಿಕ್ಷುಗಳೇ, ಇವೇ ವೃಕ್ಷಮೂಲಗಳಾಗಿವೆ, ಇವೇ ಶೂನ್ಯಗೃಹಗಳಾಗಿವೆ. ಧ್ಯಾನಿಸಿ ಭಿಕ್ಷುಗಳೇ, ಪ್ರಮಾದಿಗಳಾಗಬೇಡಿ. ಇಲ್ಲದೇ ಹೋದಲ್ಲಿ ನಂತರ ಪಶ್ಚಾತ್ತಾಪದಲ್ಲಿ ಬೀಳುವಿರಿ. ಇದೇ ನಿಮಗೆ ನಾನು ನೀಡುವ ಅನುಶಾಸನವಾಗಿದೆ.
ಭಿಕ್ಷುಗಳೇ ಯಾವುದು ಅಸಂಖತ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಕಾಯದಲ್ಲಿ ಕಾಯಾನುಪಸ್ಸಿಯಾಗಿ ವಿಹರಿಸುತ್ತಾನೆ. ಉತ್ಕಟನಾಗಿ, ಸ್ಪಷ್ಟವಾದ ಅರಿವುಳ್ಳವನಾಗಿ, ಸ್ಮೃತಿವಂತನಾಗಿ, ದುರಾಸೆಯಿಂದ ದೂರಾಗಿ, ಲೋಕದ ಬಗ್ಗೆ ವಿರಾಗಿಯಾಗಿ ವಿಹರಿಸುತ್ತಾನೆ. ಇದನ್ನೇ ಭಿಕ್ಷುಗಳೇ ಅಸಂಖತ ಮಾರ್ಗವೆನ್ನುವರು. ಇಲ್ಲಿ ಭಿಕ್ಷುಗಳೇ, ಭಿಕ್ಷುವು ವೇದಾನಾನುಪ್ಪಸಿಯಾಗಿ ವಿಹರಿಸುತ್ತಾನೆ. ಆತನು ಉತ್ಕಟನಾಗಿ, ಸ್ಪಷ್ಟ ಅರಿವುಳ್ಳವನಾಗಿ ಸದಾ ಸ್ಮೃತಿವಂತನಾಗಿ, ದುರಾಸೆಯಿಂದ ದೂರಾಗಿ, ಲೋಕದ ಬಗೆಗಿನ ಎಲ್ಲದಕ್ಕೂ ಅಂಟದವನಾಗಿ ವಿಹರಿಸುತ್ತಾನೆ. ಭಿಕ್ಷುಗಳೇ, ಇಲ್ಲಿ ಭಿಕ್ಷುವು ಚಿತ್ತದಲ್ಲಿ ಚಿತ್ತಾನುಪಸ್ಸಿಯಾಗಿ ವಿಹರಿಸುತ್ತಾನೆ. ಆತನು ಉತ್ಕಟನಾಗಿ ಸ್ಪಷ್ಟವಾದ ಅರಿವಿನಿಂದ ಸದಾ ಸ್ಮೃತಿವಂತನಾಗಿ, ದುರಾಸೆಯಿಂದ ದೂರಾಗಿ, ಲೋಕದ ಬಗೆಗಿನ ಯಾವುದಕ್ಕೂ ಅಂಟದೆ ವಿಹರಿಸುತ್ತಾನೆ... ಭಿಕ್ಷುಗಳೇ, ಇಲ್ಲಿ ಭಿಕ್ಷುವು ಧಮ್ಮಗಳಲ್ಲಿ ಧಮ್ಮಾನುಪ್ಪಸ್ಸಿಯಾಗಿ ವಿಹರಿಸುತ್ತಾನೆ. ಆತನು ಉತ್ಕಟನಾಗಿ ಸ್ಪಷ್ಟವಾದ ಅರಿವಿನಿಂದ, ಸದಾ ಸ್ಮೃತಿವಂತನಾಗಿ, ದುರಾಸೆಯಿಂದ ದೂರಾಗಿ, ಲೋಕದ ಬಗೆಗಿನ ಯಾವುದಕ್ಕೂ ಅಂಟದೆ ವಿಹರಿಸುತ್ತಾನೆ. ಇದನ್ನೇ ಅಸಂಖತ ಧಮ್ಮಕ್ಕೆ ಮಾರ್ಗವೆಂದು ಹೇಳುತ್ತೇನೆ.
ಭಿಕ್ಷುಗಳೇ, ಯಾವುದು ಅಸಂಖತ ಧಮ್ಮಕ್ಕೆ ಮಾರ್ಗ? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಇನ್ನೂ ಉಂಟಾಗದೆ ಇರುವ ಪಾಪಯುತ ಅಕುಶಲ ಮಾನಸಿಕ ಸ್ಥಿತಿಗಳನ್ನು ಉಂಟಾಗದೆ ಇರುವಂತೆ ಪ್ರಬಲ ಇಚ್ಛಾಶಕ್ತಿಯನ್ನು ಬೆಳೆಸುತ್ತಾನೆ. ಹಾಗೆಯೇ ಪ್ರಯತ್ನಶಾಲಿಯಾಗುತ್ತಾನೆ. ಪ್ರಯತ್ನವನ್ನು ಸದಾ ಚಾಲನೆಯಲ್ಲಿಟ್ಟಿರುತ್ತಾನೆ. ಇದೇರೀತಿಯಾಗಿ ಚಿತ್ತವನ್ನು ಅನ್ವಯಿಸಿ ಶ್ರಮಿಸುತ್ತಾನೆ. ಇದನ್ನೇ ಅಸಂಖತ ಧಮ್ಮಕ್ಕಿರುವ ಮಾರ್ಗವೆನ್ನುತ್ತಾರೆ.
.... ಭಿಕ್ಷುಗಳೇ, ಯಾವುದು ಅಸಂಖತ ಧಮ್ಮಕ್ಕಿರುವ ಮಾರ್ಗ? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಉಂಟಾಗಿರುವಂತಹ ಪಾಪಯುತ ಅಕುಶಲ ಮಾನಸಿಕ ಸ್ಥಿತಿಗಳನ್ನೆಲ್ಲವನ್ನು ತೊರೆಯುವ ಪ್ರಬಲ ಇಚ್ಛೆಯನ್ನುಂಟುಮಾಡುತ್ತಾನೆ. ಅದರಂತೆಯೇ ಶ್ರಮಿಸುತ್ತಾನೆ. ಆ ಪ್ರಯತ್ನಶೀಲತೆಯನ್ನು ಸದಾ ಚಾಲನೆಯಲ್ಲಿಡುತ್ತಾನೆ. ತನ್ನ ಚಿತ್ತವು ಅದೇರೀತಿಯಲ್ಲಿ ಸಾಗುವಂತೆ ಅನ್ವಯಿಸುತ್ತಾನೆ ಹಾಗು ಶ್ರಮಿಸುತ್ತಾನೆ...
.... ಭಿಕ್ಷುಗಳೇ, ಮತ್ತೆ ಯಾವುದದು ಅಸಂಖತದೆಡೆಗೆ ಕೊಂಡೊಯ್ಯುವ ಮಾರ್ಗ? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಇದುವರೆಗೂ ಉದಯಿಸದ ಕುಶಲ ಮಾನಸಿಕ ಸ್ಥಿತಿಗಳನ್ನು ಉದಯಿಸುವಂತಹ ಪ್ರಬಲ ಇಚ್ಛೆಯನ್ನುಂಟುಮಾಡುತ್ತಾನೆ. ಅದರಂತೆಯೇ ಸತತ ಪರಿಶ್ರಮಪಡುತ್ತಾನೆ. ಆ ಪ್ರಯತ್ನಶೀಲತೆಯನ್ನು ಸದಾ ಚಾಲನೆಯಲ್ಲಿಡುತ್ತಾನೆ. ತನ್ನ ಚಿತ್ತವು ಅದೇರೀತಿಯಲ್ಲಿ ಸಾಗುವಂತೆ ಅನ್ವಯಿಸುತ್ತಾನೆ ಹಾಗು ಶ್ರಮಿಸುತ್ತಾನೆ...
.... ಭಿಕ್ಷುಗಳೇ, ಮತ್ತೆ ಯಾವುದದು ಅಸಂಖತದೆಡೆಗೆ ಕೊಂಡೊಯ್ಯುವ ಮಾರ್ಗ? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಉದಯಿಸಿದಂತಹ ಕುಶಲ ಮಾನಸಿಕ ಸ್ಥಿತಿಗಳನ್ನು ಅವು ನಿರಂತರವಾಗಿ ನೆಲೆಸುವಂತಹ ಪ್ರಬಲ ಇಚ್ಛೆಯನ್ನುಂಟುಮಾಡುತ್ತಾನೆ. ಅದರಂತೆಯೇ ಸತತ ಪರಿಶ್ರಮ ಪಡುತ್ತಾನೆ. ಕುಶಲ ಸ್ಥಿತಿಗಳು ಶಿಥಿಲವಾಗದಂತೆ ನೋಡಿಕೊಳ್ಳುತ್ತಾನೆ. ಅವುಗಳ ವೃದ್ಧಿಗಳೆಡೆ, ವಿಕಾಸದೆಡೆಗೆ, ವೃದ್ಧಿಯ ಪರಿಪೂರ್ಣತೆಯೆಡೆಗೆ ಆತನು ಪರಿಶ್ರಮಪಡುತ್ತಾನೆ. ತನ್ನ ಚಿತ್ತವು ಅದೇದಿಕ್ಕಿನಲ್ಲಿ ಸಾಗುವಂತೆ ಅನ್ವಯಿಸುತ್ತಾನೆ ಹಾಗು ಪ್ರಯತ್ನಪಡುತ್ತಾನೆ. ಇದೇ ಅಸಂಖತದೆಡೆಗೆ ಸಾಗುವ ಮಾರ್ಗವಾಗಿದೆ.
.... ಭಿಕ್ಷುಗಳೇ, ಯಾವುದದು ಅಸಂಖತದೆಡೆಗೆ ಕೊಂಡೊಯ್ಯುವ ಮಾರ್ಗವು? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಛನ್ದ (ಇಚ್ಛಾಶಕ್ತಿಯುತ) ಸಮಾಧಿ ಹಾಗು ಸಂಖಾರ ಸಮನ್ನಗತದಿಂದ (ಪರಿಶ್ರಮದ ಸಂಖಾರಗಳಿಂದ) ಪರಮಾರ್ಥ ಆಧಾರ (ಪಾದ)ವನ್ನು ವಿಕಸಿಸುತ್ತಾನೆ. ಇದೇ ಅಸಂಖತದೆಡೆಗೆ ಕೊಂಡೊಯ್ಯುವಂತಹ ಮಾರ್ಗವಾಗಿದೆ.
.... ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗವು? ಭಿಕ್ಷುಗಳೇ, ಇಲ್ಲಿ ಭಿಕ್ಷುವು ವೀರ್ಯವೇ (ಪ್ರಯತ್ನ) ಪ್ರಧಾನವಾಗಿರುವಂತಹ ಸಮಾಧಿಯನ್ನು ಹೊಂದುತ್ತಾನೆ ಹಾಗು ಸಂಖಾರದ ಸಮಾನ್ನಗತದಿಂದ ಅಂತಹ ಸಂಖಾರಗಳಿರುವಂತೆ ನೋಡಿಕೊಳ್ಳುತ್ತಾನೆ... ಮತ್ತೆ ಯಾವುದದು ಭಿಕ್ಷುಗಳೇ ಅಸಂಖತ ಧಮ್ಮವು? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಚಿತ್ತ ಏಕಾಗ್ರತೆ (ಸಮಾಧಿ) ಪ್ರಧಾನವಾದ ಸಮಾಧಿಯನ್ನು ಹೊಂದುತ್ತಾನೆ. ಹಾಗು ಅದಕ್ಕೆ ಸಹಾಯಕ ಸಮನ್ನಾಗತ ಸಂಖಾರಗಳು ಇರುವಂತೆ ನೋಡಿಕೊಳ್ಳುತ್ತಾನೆ. ಇದನ್ನೇ ಭಿಕ್ಷುಗಳೇ ಅಸಂಖತ ಧಮ್ಮಮಾರ್ಗವೆಂದು... ಮತ್ತೆ ಯಾವುದದು ಭಿಕ್ಷುಗಳೇ, ಅಸಂಖತ ಧಮ್ಮಕ್ಕಿರುವ ಮಾರ್ಗವು? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಮಿಮಾಂಸ ಪ್ರಧಾನವಾದ (ಸತ್ಯಶೋಧನೆಯ ಪ್ರಧಾನವಾದ) ಸಮಾಧಿಯನ್ನು ಹೊಂದಿರುತ್ತಾನೆ ಹಾಗು ಅಂತಹ ಸಮನ್ನಾಗತ ಸಂಖಾರಗಳಿರುವಂತೆ ನೋಡಿಕೊಳ್ಳುತ್ತಾನೆ. ಇವೇ ಭಿಕ್ಷುಗಳೇ, ಅಸಂಖತದೆಡೆಗೆ ಕರೆದೊಯ್ಯುವ ಮಾರ್ಗವಾಗಿದೆ.
ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಶ್ರದ್ಧೇಂದ್ರಿಯವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಪರಿಣಾಮವಾಗಿ ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿ ಮಾರ್ಗ ಎನ್ನುತ್ತಾರೆ.
ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ವೀರಿಯೀಂದ್ರಿಯವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಪರಿಣಾಮವಾಗಿ ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿ ಮಾರ್ಗ ಎನ್ನುತ್ತಾರೆ.
ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಸ್ಮೃತೀಂದ್ರಿಯವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಪರಿಣಾಮವಾಗಿ ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿ ಮಾರ್ಗ ಎನ್ನುತ್ತಾರೆ.
ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಸಮಾಧೀಂದ್ರಿಯವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಪರಿಣಾಮವಾಗಿ ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿ ಮಾರ್ಗ ಎನ್ನುತ್ತಾರೆ.
ಯಾವುದು ಭಿಕ್ಷುಗಳೇ ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಪನ್ನೇಂದ್ರೀಯವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಪರಿಣಾಮವಾಗಿ ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿ ಮಾರ್ಗ ಎನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಾಮಿ ಮಗ್ಗ? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಶ್ರದ್ಧಾಬಲವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆನಂದಿತವಾಗಿರುತ್ತದೆ. ಪರಿಣಾಮವಾಗಿ ಆತನು ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿಮಗ್ಗ ಎನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಾಮಿ ಮಗ್ಗ? ಇಲ್ಲಿ ಭಿಕ್ಷುಗಳೇ, ಭಿಕ್ಷುವು ವಿರಿಯಾ ಬಲವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆನಂದಿತವಾಗಿರುತ್ತದೆ. ಪರಿಣಾಮವಾಗಿ ಆತನು ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿಮಗ್ಗ ಎನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಾಮಿ ಮಗ್ಗ? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಸ್ಮೃತಿಬಲವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆನಂದಿತವಾಗಿರುತ್ತದೆ. ಪರಿಣಾಮವಾಗಿ ಆತನು ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿಮಗ್ಗ ಎನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಾಮಿ ಮಗ್ಗ? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಸಮಾಧಿ ಬಲವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆನಂದಿತವಾಗಿರುತ್ತದೆ. ಪರಿಣಾಮವಾಗಿ ಆತನು ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿಮಗ್ಗ ಎನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಾಮಿ ಮಗ್ಗ? ಇಲ್ಲಿ ಭಿಕ್ಷುಗಳೇ, ಭಿಕ್ಷುವು ಪ್ರಜ್ಞಾ ಬಲವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆನಂದಿತವಾಗಿರುತ್ತದೆ. ಪರಿಣಾಮವಾಗಿ ಆತನು ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿಮಗ್ಗ ಎನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಜಾಗರೂಕತೆಯ ಸ್ಮೃತಿ (ಜಾಗರೂಕತೆಯ) ಸಂಬೋಧಿಯಾಂಗವನ್ನು ವಿಕಸಿತಗೊಳಿಸುತ್ತಾನೆ. ಅದು ಏಕಾಂತತೆಯ, ವಿರಾಗದ, ವಿಕರ್ಷಣೆಯ ಹಾಗು ನಿರೋಧಗಳಿಂದ ಆಧಾರವಾಗಿರುತ್ತವೆ. ಆಗ ಆತನು ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಜಾಗರೂಕತೆಯ  ಧಮ್ಮವಿಚಯ (ಸ್ಥಿತಿಗಳ ವಿವೇಚನೆ) ಸಂಬೋಧಿಯಾಂಗವನ್ನು ವಿಕಸಿತಗೊಳಿಸುತ್ತಾನೆ. ಅದು ಏಕಾಂತತೆಯ, ವಿರಾಗದ, ವಿಕರ್ಷಣೆಯ ಹಾಗು ನಿರೋಧಗಳಿಂದ ಆಧಾರವಾಗಿರುತ್ತವೆ. ಆಗ ಆತನು ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಜಾಗರೂಕತೆಯ  ವಿರಿಯಾ ಸಂಬೋಧಿಯಾಂಗವನ್ನು ವಿಕಸಿತಗೊಳಿಸುತ್ತಾನೆ. ಅದು ಏಕಾಂತತೆಯ, ವಿರಾಗದ, ವಿಕರ್ಷಣೆಯ ಹಾಗು ನಿರೋಧಗಳಿಂದ ಆಧಾರವಾಗಿರುತ್ತವೆ. ಆಗ ಆತನು ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಜಾಗರೂಕತೆಯ ಪೀತಿ (ಆನಂದ) ಸಂಬೋಧಿಯಾಂಗವನ್ನು ವಿಕಸಿತಗೊಳಿಸುತ್ತಾನೆ. ಅದು ಏಕಾಂತತೆಯ, ವಿರಾಗದ, ವಿಕರ್ಷಣೆಯ ಹಾಗು ನಿರೋಧಗಳಿಂದ ಆಧಾರವಾಗಿರುತ್ತವೆ. ಆಗ ಆತನು ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಜಾಗರೂಕತೆಯ  ಪಸ್ಸದ್ದಿ (ಪ್ರಶಾಂತತೆಯ) ಸಂಬೋಧಿಯಾಂಗವನ್ನು ವಿಕಸಿತಗೊಳಿಸುತ್ತಾನೆ. ಅದು ಏಕಾಂತತೆಯ, ವಿರಾಗದ, ವಿಕರ್ಷಣೆಯ ಹಾಗು ನಿರೋಧಗಳಿಂದ ಆಧಾರವಾಗಿರುತ್ತವೆ. ಆಗ ಆತನು ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಜಾಗರೂಕತೆಯ ಸಮಾಧಿ ಸಂಬೋಧಿಯಾಂಗವನ್ನು ವಿಕಸಿತಗೊಳಿಸುತ್ತಾನೆ. ಅದು ಏಕಾಂತತೆಯ, ವಿರಾಗದ, ವಿಕರ್ಷಣೆಯ ಹಾಗು ನಿರೋಧಗಳಿಂದ ಆಧಾರವಾಗಿರುತ್ತವೆ. ಆಗ ಆತನು ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಜಾಗರೂಕತೆಯ  ಉಪೇಕ್ಖ (ಸಮಚಿತ್ತತೆಯ) ಸಂಬೋಧಿಯಾಂಗವನ್ನು ವಿಕಸಿತಗೊಳಿಸುತ್ತಾನೆ. ಅದು ಏಕಾಂತತೆಯ, ವಿರಾಗದ, ವಿಕರ್ಷಣೆಯ ಹಾಗು ನಿರೋಧಗಳಿಂದ ಆಧಾರವಾಗಿರುತ್ತವೆ. ಆಗ ಆತನು ವಿಮುಕ್ತಿಯಲ್ಲಿ ಪಕ್ವನಾಗುತ್ತಾನೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಸಮ್ಯಕ್ದೃಷ್ಟಿಕೋನವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಸಮ್ಯಕ್ಸಂಕಲ್ಪವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಸಮ್ಯಕ್ವಾಚವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಸಮ್ಯಕ್ಕರ್ಮವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಸಮ್ಯಕ್ಜೀವನವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಸಮ್ಯಕ್ವ್ಯಾಯಾಮವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಸಮ್ಯಕ್ಸ್ಮೃತಿವನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಯಾವುದು ಅಸಂಖತಗಾಮಿ ಮಾರ್ಗ? ಭಿಕ್ಷುಗಳೇ, ಇಲ್ಲಿ ಭಿಕ್ಷುವು ಸಮ್ಯಕ್ಸಮಾಧಿಯನ್ನು ವಿಕಸಿಸುತ್ತಾನೆ. ಅದು ಏಕಾಂತತೆ, ವಿರಾಗ, ವಿಕರ್ಷಣೆ ಹಾಗು ನಿರೋಧಗಳಿಂದ ಆಧಾರಿತವಾಗಿರುತ್ತದೆ. ಇದನ್ನೇ ಅಸಂಖತಗಾಮಿ ಮಾರ್ಗವೆನ್ನುತ್ತಾರೆ.
ಭಿಕ್ಷುಗಳೇ, ಹೀಗೆ ನಾನು ನಿಮಗೆ ಅಸಂಖತವನ್ನು ಮತ್ತು ಅಸಂಖತಗಾಮಿ ಮಾರ್ಗವನ್ನು ತಿಳಿಸಿದ್ದೇನೆ. ಓರ್ವ ಕರುಣಾಕರ ಗುರುವು ತನ್ನ ಶ್ರಾವಕ ಶಿಷ್ಯರಿಗೆ ಅನುಕಂಪದಿಂದಾಗಿ ಏನೆಲ್ಲಾ ಮಾಡಬಹುದಿತ್ತೋ ಅದೆಲ್ಲವನ್ನು ನಾನು ನಿಮಗೆ ಮಾಡಿದ್ದೇನೆ. ಇವೇ ವೃಕ್ಷಮೂಲವಾಗಿದೆ. ಭಿಕ್ಷುಗಳೇ, ಇವೇ ಶೂನ್ಯಗೃಹಗಳಾಗಿವೆ. ಧ್ಯಾನಸಿ ಭಿಕ್ಷುಗಳೇ, ಪ್ರಮಾದಿಗಳಾಗಬೇಡಿ. ಇಲ್ಲದಿದ್ದರೆ ಬಳಿಕ ಪಶ್ಚಾತ್ತಾಪಪಡುವಿರಿ. ಇದು ನಾನು ನಿಮಗೆ ನೀಡುವ ಅನುಶಾಸನವಾಗಿದೆ.


2. ಅನತ್ತಸುತ್ತಂ

378. ಭಿಕ್ಷುಗಳೇ, ನಾನು ನಿಮಗೆ ಈಗ ಅನತಂಚವನ್ನು (ತೃಷ್ಣೆಯ ಕಡೆಗೆ ಬಾಗಿಲ್ಲದ ಮನೋಸ್ಥಿತಿ) ಉಪದೇಶಿಸುತ್ತೇನೆ. ಹಾಗು ಈ ಅನತಂಚದೆಡೆಗೆ ಸಾಗುವ ಮಾರ್ಗವನ್ನು ಉಪದೇಶಿಸುತ್ತೇನೆ, ಆಲಿಸಿ. ಯಾವುದು ಭಿಕ್ಷುಗಳೇ, ಅನಸಂಚವು ಹಾಗು ಅದರೆಡೆಗೆ ಸಾಗುವ ಮಾರ್ಗವು? (ಅಸಂಚಿತ ಹಾಗು ಅಸಂಖತದೆಡೆಗೆ ಸಾಗುವ ಮಾರ್ಗವನ್ನೇ ಇಲ್ಲಿಯೂ ಓದಿಕೊಳ್ಳುವುದು.)


3-32 ಅನಾಸವಾದಿ ಸುತ್ತ

379 ರಿಂದ 408: ಭಿಕ್ಷುಗಳೇ, ನಾನು ನಿಮಗೆ ಅನಾಸವ (ಆಸ್ರವರಹಿತ) ಹಾಗು ಅನಾಸವಗಾಮಿಯ ಮಾರ್ಗವನ್ನು (ಆಸ್ರವರಹಿತತೆಗೆ ಸಿಗುವ ಮಾರ್ಗವನ್ನು) ಉಪದೇಶಿಸುತ್ತೇನೆ. ತಾವೆಲ್ಲರೂ ಆಲಿಸಿ... ಭಿಕ್ಷುಗಳೇ, ನಾನು ಸತ್ಯದ ಹಾಗು ಸತ್ಯದೆಡೆಗೆ ಸಾಗುವ ಮಾರ್ಗವನ್ನು ಉಪದೇಶಿಸುತ್ತೇನೆ. ತಾವೆಲ್ಲರೂ ಆಲಿಸಿ... ಭಿಕ್ಷುಗಳೇ ನಾನು ನಿಮಗೆ ಪಾರವೂ (ಆಚೆಗಿನ ದಡದ) ಹಾಗು ಪಾರದದೆಡೆಗಿನ ಮಾರ್ಗದ ಬಗ್ಗೆ ಉಪದೇಶಿಸುತ್ತೇನೆ. ತಾವೆಲ್ಲರೂ ಆಲಿಸಿ... ಭಿಕ್ಷುಗಳೇ, ನಾನು ನಿಮಗೆ ನಿಪುಣ (ಪರಮಸೂಕ್ಷ್ಮತೆಯ) ಬಗ್ಗೆ ಹಾಗೆಯೇ ನಿಪುಣಗಾಮಿಯ ಮಾರ್ಗದ ಬಗ್ಗೆ... ಭಿಕ್ಷುಗಳೇ, ಸಮದ್ದಸನ್ಯತೆಯ (ನೋಡಲು ಹಾಗು ಗ್ರಹಿಸಲು ಪರಮಕಷ್ಟಕರವಾಗಿರುವುದು) ಬಗ್ಗೆ ಹಾಗು ಅದರ ಪ್ರಾಪ್ತಿಯ ಮಾರ್ಗದ ಬಗ್ಗೆ ಹೇಳುತ್ತೇನೆ, ಆಲಿಸಿ. ಭಿಕ್ಷುಗಳೇ, ನಿಮಗೆ ಅಜರಾ (ಮುಪ್ಪಿಲ್ಲದ) ಅಜರಾದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ನಿಮಗೆ ದ್ರುವ (ಸ್ಥಿರವಾಗಿರುವ)ದ ಬಗ್ಗೆ... ದ್ರುವದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ಅಪಲೋಕಿಂಚದ (ಅಶಿಥಿಲತೆಯ) ಬಗ್ಗೆ ಅಶಿಥಿಲದೆಡೆಯ ಮಾರ್ಗದ ಬಗ್ಗೆ... ಭಿಕ್ಷುಗಳೇ, ಅನಿದಸ್ಸನಂಚ (ಅವ್ಯಕ್ತತೆಯ) ಬಗ್ಗೆ ಅನಿದಸ್ಸನಂಚದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ನಿಪ್ರಪಂಚ (ನಿಷ್ಪ್ರಪಂಚತೆಯ/ಅಗುಣಕವಾಗುವಿಕೆಯ) ಬಗ್ಗೆ ನಿಷ್ಪಪಂಚತೆಯೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ನಾನು ನಿಮಗೆ ಪರಮಶಾಂತತೆಯ (ಸಂತ) ಹಾಗು ಪರಮಶಾಂತತೆಯೆಡೆಗೆ ಸಾಗುವ ಮಾರ್ಗದ ಬಗ್ಗೆ ವಿವರಿಸುವೆನು, ಆಲಿಸಿರಿ... ಭಿಕ್ಷುಗಳೇ, ಅಮತ (ಅಮರತ್ವದ) ಹಾಗು ಅಮತದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ಪಣೀತ (ಉದಾತ್ತದ) ಹಾಗು ಉದಾತ್ತದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ಸಿವ (ಶುಭಕರ) ಹಾಗು ಸಿವದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ಖೇಮ (ಕ್ಷೇಮಕರ) ಹಾಗು ಖೇಮದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ತಣ್ಹಾಕ್ಷಯದ ಹಾಗು ತಣ್ಹಾಕ್ಷಯದೆಡೆಗೆ ಸಾಗುವ ಮಾರ್ಗದ ಬಗ್ಗೆ...
ಭಿಕ್ಷುಗಳೇ, ಆಶ್ಚರ್ಯದ ಹಾಗು ಆಶ್ಚರ್ಯದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ಅದ್ಭುತ ಹಾಗು ಅದ್ಭುತದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ಅನೀತಿಕಂ (ರೋಗರಹಿತ) ಹಾಗು ರೋಗರಹಿತದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ಅನೀತಿಕಧಮ್ಮ (ನೋವುರಹಿತ ಸ್ಥಿತಿ) ಹಾಗು ನೋವುರಹಿತ ಸ್ಥಿತಿಯೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ನಿಬ್ಬಾಣದ ಬಗ್ಗೆ ಹಾಗು ನಿಬ್ಬಾಣಗಾಮಿ ಮಾರ್ಗದ ಬಗ್ಗೆ... ಭಿಕ್ಷುಗಳೇ, ಅಭ್ಯಾಪಜ್ಝಂಚ (ನರಳಾಟವಿಲ್ಲದಿರುವ) ಹಾಗು ಅದರೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ವಿರಾಗದ ಹಾಗು ವಿರಾಗದೆಡೆಗೆ ಸಾಗುವ ಮಾರ್ಗದ ಬಗ್ಗೆ...
ಭಿಕ್ಷುಗಳೇ, ಸುದ್ದಿಂಚ (ಶುದ್ಧಿಯ) ಹಾಗು ಶುದ್ಧಿಯೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ಮುಕ್ತಿಯ ಹಾಗು ಮುಕ್ತಿಯೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ಅನಾಲಯ (ಅಂಟುವಿಕೆಯಿಲ್ಲದ) ಹಾಗು ಅನಾಲಯದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ದ್ವೀಪದ ಹಾಗು ದ್ವೀಪದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ಲೇಣಂಚ (ಪರಮವಸತಿ) ಹಾಗು ಪರಮ ವಸತಿಯೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ತಾಣಂಚ (ಪರಮ ಆಶ್ರಯ) ಹಾಗು ತಾಣದೆಡೆಗೆ ಸಾಗುವ ಮಾರ್ಗದ ಬಗ್ಗೆ... ಭಿಕ್ಷುಗಳೇ, ಶರಣು (ಶರಣುವಿಗೆ ಯೋಗ್ಯ) ಹಾಗು ಶರಣುಯೆಡೆಗೆ ಸಾಗುವ ಮಾರ್ಗದ ಬಗ್ಗೆ...


33. ಪರಾಯನ ಸುತ್ತ

409. ಭಿಕ್ಷುಗಳೇ, ನಾನು ನಿಮಗೆ ಪರಮಗಮ್ಯತೆಯ ಬಗ್ಗೆ ಹಾಗೆಯೇ ಪರಮಗಮ್ಯತೆಯೆಡೆಗೆ ಸಾಗುವ ಮಾರ್ಗದ ಬಗ್ಗೆ ಉಪದೇಶಿಸುವೆ ಆಲಿಸಿರಿ. ಭಿಕ್ಷುಗಳೇ, ಯಾವುವು ಪರಮಗಮ್ಯತೆ? ರಾಗಕ್ಷಯ, ದ್ವೇಷಕ್ಷಯ ಹಾಗು ಮೋಹಕ್ಷಯ. ಇದುವೇ ಭಿಕ್ಷುಗಳೇ ಪರಮಗಮ್ಯತೆಯಾಗಿದೆ. ಹಾಗು ಭಿಕ್ಷುಗಳೇ, ಯಾವುದದು ಪರಮಗಮ್ಯತೆಯೆಡೆಗೆ ಸಾಗುವ ಮಾರ್ಗವು? ಕಾರ್ಯಗತಾಸ್ಮೃತಿಯೇ ಭಿಕ್ಷುಗಳೇ, ಪರಮಗಮ್ಯತೆಯೆಡೆಗೆ ಸಾಗುವ ಮಾರ್ಗವಾಗಿದೆ ಎಂದು ಹೇಳುತ್ತೇನೆ. ಹೀಗೆ ಭಿಕ್ಷುಗಳೇ, ನಾನು ಪರಮಗಮ್ಯತೆಯನ್ನು ಹಾಗು ಪರಮಗಮ್ಯತೆಯೆಡೆಗೆ ಸಾಗುವ ಮಾರ್ಗವನ್ನು ಉಪದೇಶಿಸಿದ್ದೇನೆ. ಭಿಕ್ಷುಗಳೇ, ಓರ್ವ ಕರುಣಾಕರ ಪರಮಗುರುವು ಅನುಕಂಪದಿಂದ ಏನೆಲ್ಲವನ್ನು ತನ್ನ ಶ್ರಾವಕ ಶಿಷ್ಯರಿಗೆ ಮಾಡಬಹುದೋ ಅದೆಲ್ಲವನ್ನು ನಾನು ನಿಮಗೆ ಮಾಡಿರುವೆ. ಭಿಕ್ಷುಗಳೇ, ಇವೇ ವೃಕ್ಷಮೂಲಗಳಾಗಿವೆ. ಭಿಕ್ಷುಗಳೇ, ಇವೇ ಶೂನ್ಯಗೃಹಗಳಾಗಿವೆ. ಧ್ಯಾನಿಸಿ ಭಿಕ್ಷುಗಳೇ, ಪ್ರಮಾದಿಗಳಾಗದಿರಿ. ಇಲ್ಲದೇಹೋದಲ್ಲಿ ನಂತರ ಪಶ್ಚಾತ್ತಾಪಪಡುವಿರಿ. ಇದೇ ನಾನು ನಿಮಗೆ ನೀಡುವ ಅನುಶಾಸನವಾಗಿದೆ. (ಇದೇರೀತಿಯಾಗಿ ಅಸಂಖತ ಧಮ್ಮದೆಡೆಗೆ ಸಾಗುವ ಉಳಿದ ಮಾರ್ಗಗಳನ್ನು ಹಿಂದಿನಂತೆಯೇ ಓದಿಕೊಳ್ಳಬೇಕು)
ಅಸಂಖತ ಸಂಯುಕ್ತವು ಸಮಾಪ್ತಿಯಾಯಿತು.

No comments:

Post a Comment

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...