Saturday 2 September 2017

2. ಯಮಕವಗ್ಗೋ (ಯಮಕ ವರ್ಗ) pathama pubbe samboda suttam in kannada ಪಠಮಪುಬ್ಬೆಸಮ್ಬೋದ ಸುತ್ತಂ

ಸಳಾಯತನವಗ್ಗೋ (ಷಡ್ ಆಯಾತನ ವರ್ಗ)
1. ಯಮಕವಗ್ಗೋ (ಯಮಕ ವರ್ಗ)
35.2.1. ಪಠಮಪುಬ್ಬೆಸಮ್ಬೋದ ಸುತ್ತಂ

13. ನಾನು ಹೀಗೆ ಕೇಳಿದ್ದೇನೆ. ಒಮ್ಮೆ ಬುದ್ಧ ಭಗವಾನರು ಶ್ರಾವಸ್ತಿಯಲ್ಲಿನ ಜೇತವನದ ಅನಾಥಪಿಂಡಿಕನ ಆರಾಮದಲ್ಲಿ ವಿಹರಿಸುತ್ತಿದ್ದರು. ಆಗ ಅಲ್ಲಿ ಭಗವಾನರು ಭಿಕ್ಷುಗಳೊಂದಿಗೆ ಹೀಗೆ ಸಂಬೋಧಿಸಿದರು: ಭಿಕ್ಷುಗಳೇ, ಯಾವಾಗ ನಾನು ಬೋಧಿಸತ್ವನಾಗಿ ಸಂಬೋಧಿಯನ್ನು ಅನ್ವೇಷಿಸುತ್ತಿದ್ದೆನೋ ಆಗ ನನ್ನಲ್ಲಿ ಈ ಮೂರು ಪ್ರಶ್ನೆಗಳು ಉದಯಿಸಿದವು. ಅವೆಂದರೆ: ಚಕ್ಷುವಿನ ಆಸ್ವಾದನೆ ಎಂದರೇನು, ಚಕ್ಷುವಿನ ಅಪಾಯವೇನು ಹಾಗು ಚಕ್ಷುವಿನಿಂದ ಬಿಡುಗಡೆ ಹೇಗೆ? ಅದೇರೀತಿಯಲ್ಲಿ ಕಿವಿಯ ಆಸ್ವಾದನೆ ಎಂದರೇನು, ಕಿವಿಯಿಂದಾಗುವ ಅಪಾಯಗಳೇನು? ಕಿವಿಯಿಂದ ಬಿಡುಗಡೆ ಹೇಗೆ? ಅದೇರೀತಿಯಲ್ಲಿ ಮೂಗಿನ... ನಾಲಿಗೆಯ... ದೇಹದ... ಮನಸ್ಸಿನ ಅಸ್ವಾದತೆ ಎಂದರೇನು, ಮನಸ್ಸಿನಿಂದಾಗುವ ಅಪಾಯವೇನು ಮತ್ತು ಮನಸ್ಸಿನಿಂದ ಬಿಡುಗಡೆ ಹೇಗೆ? ಆಗ ನನ್ನಲ್ಲಿ ಹೀಗೆ ಉತ್ತರವು ಉದಯಿಸಿತು. ಚಕ್ಷು (ಕಣ್ಣಿನಿಂದ) ವಿನಿಂದ ಉಂಟಾಗುವ ಸುಖ ಹಾಗು ಸೋಮನಸ್ಸೆ ಇದರ ಆಸ್ವಾದವಾಗಿದೆ. ಚಕ್ಷುವಿನ ಅನಿತ್ಯತೆ, ದುಃಖ ಹಾಗು ವಿಪರಿಣಾಮ ಧಮ್ಮವೇ ಚಕ್ಷುವಿನ ಅಪಾಯವಾಗಿದೆ. ಚಕ್ಷು ಸಂಬಂಧಿ ಆಸೆ ಹಾಗು ರಾಗವೇನಿದೆಯೋ ಅವುಗಳನ್ನು ಪಳಗಿಸುವಿಕೆ ಹಾಗು ಅವುಗಳನ್ನು ದೂರೀಕರಿಸುವಿಕೆಯೇ ಚಕ್ಷುವಿನಿಂದ ಬಿಡುಗಡೆಯಾಗಿದೆ. ಅದೇರೀತಿಯಾಗಿ ಕಿವಿಯಿಂದ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಬಿಡುಗಡೆಯಾಗಿದೆ. ಯಾವುದೆಲ್ಲಾ ಸುಖ ಹಾಗು ಸೋಮನಸ್ಸು ಮನಸ್ಸಿನಿಂದ ಉಂಟಾಗುವುದೋ ಅವೇ ಮನಸ್ಸಿನ ಆಸ್ವಾದನೆಯಾಗಿದೆ. ಮನಸ್ಸಿನ ಅನಿತ್ಯತೆ, ದುಃಖ, ವಿಪರಿಣಾಮ ಧಮ್ಮವೇ ಮನಸ್ಸಿನ ಅಪಾಯವಾಗಿದೆ. ಮನೋಸಂಬಂಧಿ ಆಸೆಗಳು ಹಾಗು ರಾಗವೇನಿದೆಯೋ ಅವುಗಳ ನಿಯಂತ್ರಣ ಹಾಗು ದೂರೀಕರಿಸುವಿಕೆಯೇ ಮನಸ್ಸಿನಿಂದ ಬಿಡುಗಡೆಯಾಗಿದೆ.
ಭಿಕ್ಷುಗಳೇ, ಎಲ್ಲಿಯವರೆವಿಗೆ ಆಸ್ವಾದನೆಯನ್ನು ಆಸ್ವಾದನೆಯೆಂದೇ, ಅಪಾಯವನ್ನು ಅಪಾಯವೆಂದೇ ಹಾಗು ಬಿಡುಗಡೆಯನ್ನು ಬಿಡುಗಡೆಯೆಂದೇ ಈ ಆರು ಆಯತನ (ಇಂದ್ರೀಯ) ಗಳಲ್ಲಿ ನೇರವಾದ ಜ್ಞಾನವು ಸಾಕ್ಷಾತ್ಕರಿತವಾಗಿಲ್ಲವೋ ಅಲ್ಲಿಯವರೆಗೆ ದೇವತೆಗಳ ಸಹಿತ ಮಾರ, ಬ್ರಹ್ಮ, ಸಮಣ ಬ್ರಾಹ್ಮಣರಿಗೂ ಸಿಗದ ಸಮ್ಯಕ್ ಸಂಬೋಧಿಯು ನನಗೆ ಸಿಕ್ಕಿದೆ ಎಂದು ನಾನು ಘೋಷಿಸಲಿಲ್ಲ. ಆದರೆ ಯಾವಾಗ ಆಸ್ವಾದನೆಯನ್ನು ಅಸ್ವಾದನೆಯೆಂದೇ, ಅಪಾಯಗಳನ್ನು ಅಪಾಯವೆಂದೇ ಹಾಗು ಬಿಡುಗಡೆಯನ್ನು ಬಿಡುಗಡೆಯೆಂದೇ ಈ ಆರು ಇಂದ್ರೀಯಗಳ ನೆಲೆಯಲ್ಲಿ ಸ್ಪರ್ಶಜ್ಞಾನವು ಸಿಕ್ಕಿತೊ, ಆಗ ನಾನು ದೇವತೆಗಳ ಸಹಿತ ಮಾರ, ಬ್ರಹ್ಮ ಸಮಣ ಬ್ರಾಹ್ಮಣರಿಗೆ ಸಿಗದ ಸಮ್ಯಕ್ ಸಂಬೋಧಿಯು ನನಗೆ ಸಿಕ್ಕಿದೆ ಎಂದು ನಿರ್ಧರಿಸಿದೆನು. ಆಗ ನನ್ನಲ್ಲಿ ಜ್ಞಾನ ಹಾಗು ಪ್ರಜ್ಞಾ ಉದಯಿಸಿತು. ಚಿತ್ತವಿಮುಕ್ತಿಯು ಇನ್ನಷ್ಟು ಸ್ಥಿರವಾಯಿತು. ಇದೇ ನನ್ನ ಕೊನೆಯ ಜನ್ಮ, ಮತ್ತೆ ನಾನು ಜನ್ಮ ತಾಳಲಾರೆ.

35.2.2. ದುತಿಯ ಪುಬ್ಬೆಸಮ್ಬೋದ ಸುತ್ತಂ
14. ಭಿಕ್ಷುಗಳೇ, ಹಿಂದೆ ನಾನು ಬೋಧಿಸತ್ವನಾಗಿ ಸಂಬೋಧಿಯ ಹುಡುಕಾಟದಲ್ಲಿದ್ದಾಗ ನನ್ನಲ್ಲಿ ಈ ಪ್ರಶ್ನೆಗಳು ಮೂಡಿದವು? ಯಾವುದು ರೂಪಗಳ ಆಸ್ವಾದನೆ, ರೂಪಗಳ ಅಪಾಯ ಯಾವುದು ಮತ್ತು ರೂಪಗಳಿಂದ ಬಿಡುಗಡೆ ಹೇಗೆ? ಹಾಗೆಯೇ ಯಾವುದು ಶಬ್ದಗಳ... ವಾಸನೆಗಳ (ಗಂಧಗಳ)... ರುಚಿಗಳ... ಶಾರೀರಿಕ ಸ್ಪರ್ಶಗಳ ಮತ್ತು ಆಸ್ವಾದವು... ಹಾಗೆಯೇ ಯಾವುದು ಶಬ್ದಗಳ... ವಾಸನೆಗಳ... ರಸಗಳ... ಶಾರೀರಿಕ ಸ್ಪರ್ಶಗಳ... ಧಮ್ಮಗಳ ಅಪಾಯವು ಮತ್ತು ಶಬ್ದಗಳಿಂದ... ಗಂಧಗಳಿಂದ... ರಸಗಳಿಂದ... ಶಾರೀರಿಕ ಸ್ಪರ್ಶಗಳಿಂದ... ಮಾನಸಿಕ ವಿಷಯ ವಸ್ತುಗಳಿಂದ ಬಿಡುಗಡೆ ಹೇಗೆ? ನಂತರ ಭಿಕ್ಷುಗಳೇ, ನನ್ನಲ್ಲಿ ಹೀಗೆ ಉತ್ತರವು ದೊರೆಯಿತು. ಏನೆಂದರೆ, ಯಾವುದೆಲ್ಲಾ ಸುಖವು ಹಾಗು ಸೋಮನಸ್ಸು ರೂಪಗಳಿಂದ ದೊರೆಯುವುದೋ, ಅದೇ ಅದರ ಆಸ್ವಾದನೆಯಾಗಿದೆ. ಹಾಗೆಯೇ ಈ ರೂಪಗಳು ಅನಿತ್ಯಕರವಾಗಿವೆ, ದುಃಖಕರವಾಗಿವೆ ಹಾಗು ವಿಪರಿಣಾಮ ಧಮ್ಮದಿಂದ ಕೂಡಿವೆ. ಇವೇ ಅವುಗಳ ಅಪಾಯವಾಗಿವೆ. ಈ ರೂಪಗಳ ಕುರಿತು ಆಸೆ ಹಾಗು ರಾಗಗಳನ್ನು ನಿಯಂತ್ರಿಸುವುದು ಹಾಗು ದೂರೀಕರಿಸುವುದೇ ರೂಪಗಳಿಂದ ಬಿಡುಗಡೆಯಾಗಿದೆ. ಇದೇರೀತಿಯಾಗಿ ಶಬ್ದಗಳು... ಗಂಧಗಳು... ರಸಗಳು... ಶಾರೀರಿಕ ಸ್ಪರ್ಶಗಳು... ಬಿಡುಗಡೆಯಾಗಿದೆ. ಯಾವುದೆಲ್ಲಾ ಧಮ್ಮ (ಮಾನಸಿಕ ವಿಷಯ ವಸ್ತು/ವಿಚಾರ/ಕಲ್ಪನೆ) ದಿಂದ ಸುಖವು ಹಾಗು ಸೋಮನಸ್ಸು ಉಂಟಾಗುವುದೋ ಅದೇ ಅದರ ಆಸ್ವಾದನೆಯಾಗಿದೆ. ಧಮ್ಮಗಳು (ವಿಚಾರ/ಕಲ್ಪನೆ/ಮಾನಸಿಕ ವಿಷಯವನ್ನು) ಅನಿತ್ಯಕರವಾಗಿವೆ, ದುಃಖಕರವಾಗಿವೆ ಹಾಗು ವಿಪರಿಣಾಮ ಧಮ್ಮವನ್ನು ಹೊಂದಿವೆ, ಇವೇ ಧಮ್ಮಗಳಲ್ಲಿನ ಅಪಾಯವಾಗಿದೆ. ಈ ಧಮ್ಮಗಳನ್ನು ನಿಯಂತ್ರಿಸುವುದು ಹಾಗು ದೂರೀಕರಿಸುವುದೇ ಧಮ್ಮಗಳಿಂದ ಬಿಡುಗಡೆಯಾಗಿದೆ.
ಭಿಕ್ಷುಗಳೇ, ಎಲ್ಲಿಯವರೆಗೆ ಆರು ಇಂದ್ರೀಯಗಳ ಆಸ್ವಾದನೆ, ಅಪಾಯ ಹಾಗು ಬಿಡುಗಡೆಯನ್ನು ಸ್ಪಷ್ಟವಾಗಿ ಅರಿತಿರಲಿಲ್ಲವೋ ಅಲ್ಲಿಯವರೆಗೆ ನಾನು ದೇವತೆಗಳು, ಮಾರ, ಬ್ರಹ್ಮರು ಹಾಗು ಸಮಣ ಬ್ರಾಹ್ಮಣರು ಪಡೆಯದ ಸಮ್ಯಕ್ ಸಂಬೋಧಿಯನ್ನು ಪಡೆದಿದ್ದೇನೆ ಎಂದು ಘೋಷಿಸಿಲ್ಲ. ಆದರೆ ಯಾವಾಗ ನಾನು ನೇರವಾಗಿ ಇವೆಲ್ಲವನ್ನು ಯಥಾಭೂತವಾಗಿ ದಶರ್ಿಸಿದೆನೋ ಆಗ ದೇವತೆಗಳ ಸಹಿತ, ಮಾರ, ಬ್ರಹ್ಮರು, ಸಮಣ ಬ್ರಾಹ್ಮಣರು ಪಡೆಯದ ಸಮ್ಯಕ್ ಸಂಬೋಧಿಯನ್ನು ಪಡೆದಿದ್ದೇನೆ ಎಂದು ಘೋಷಿಸಿದೆನು. ಜ್ಞಾನ ಹಾಗು ದರ್ಶನಗಳು ಉದಯಿಸಿದವು. ಅಚಲವೂ ನನ್ನ ವಿಮುಕ್ತಿ, ಇದೇ ನನ್ನ ಅಂತಿಮ ಜನ್ಮ, ಇನ್ನೆಂದೂ ಪುನರ್ಜನ್ಮವಿಲ್ಲ.

35.2.3. ಪಠಮ ಆಸ್ವಾದ ಪರಿಯೇಸನ ಸುತ್ತಂ
15. ಭಿಕ್ಷುಗಳೇ, ಚಕ್ಷುವಿನ ಆಸ್ವಾದನೆಯಲ್ಲಿ ನಾನು ಬಹುದೂರ ಚಲಿಸಿದ್ದೇನೆ ಹಾಗು ಆಸ್ವಾದಿಸಿದ್ದೇನೆ. ಯಾವುದೆಲ್ಲಾ ಚಕ್ಷುವಿನ ಆಸ್ವಾದನೆಗಳೊ ಅವೆಲ್ಲವನ್ನು ನಾನು ಸಂಶೋಧಿಸಿದ್ದೇನೆ. ಚಕ್ಷುವಿನ ಅಪಾಯಗಳ ಅರಿಯುವಿಕೆಯಲ್ಲಿ ನಾನು ಬಹುದೂರ ಚಲಿಸಿದ್ದೇನೆ. ಚಕ್ಷುವಿನಿಂದ ಏನೆಲ್ಲಾ ಅಪಾಯಗಳಿವೆಯೋ ಅವೆಲ್ಲವನ್ನು ಅನ್ವೇಷಿಸಿರುವೆನು. ಚಕ್ಷುವಿನಿಂದ ವಿಕಸಿಸಬಲ್ಲಂತಹ ಅಪಾಯವೆಲ್ಲಾ ಎಷ್ಟು ದೂರ ಸಾಗಬಲ್ಲದೋ ಅವೆಲ್ಲವನ್ನು ಸ್ಪಷ್ಟವಾಗಿ ಪ್ರಜ್ಞಾಪೂರ್ವಕವಾಗಿ ಕಂಡಿದ್ದೇನೆ. ಹಾಗೆಯೇ ಭಿಕ್ಷುಗಳೇ, ಚಕ್ಷುವಿನಿಂದ ಬಿಡುಗಡೆಯ ಹಾದಿಯಲ್ಲಿ ಅನ್ವೇಷಿಸುತ್ತಾ ಅತ್ಯಂತ ದೂರ ಚಲಿಸಿದ್ದೇನೆ. ಚಕ್ಷುವಿನಿಂದ ಏನೆಲ್ಲಾ ರೀತಿ ಬಿಡುಗಡೆ ಹೊಂದಬಹುದೋ ಅವೆಲ್ಲವನ್ನು ಅನ್ವೇಷಿಸಿದ್ದೇನೆ. ಚಕ್ಷುವಿನಿಂದ ಬಿಡುಗಡೆ ಹೊಂದುವುದನ್ನು ಪ್ರಜ್ಞಾಪೂರ್ವಕವಾಗಿ ಸ್ಪಷ್ಟವಾಗಿ ಅರಿತಿದ್ದೇನೆ. ಭಿಕ್ಷುಗಳೇ, ಅದೇರೀತಿ ಕಿವಿ... ಮೂಗು... ನಾಲಿಗೆ... ಕಾಯ... ಮನಸ್ಸಿನ ಆಸ್ವಾದನೆಯಲ್ಲಿ ಬಹುದೂರ ಚಲಿಸಿದ್ದೇನೆ.... ಮನಸ್ಸಿನ ಅಪಾಯಗಳ ಅರಿಯುವಿಕೆಯಲ್ಲಿ... ಮನಸ್ಸಿನ ಬಿಡುಗಡೆ ಹಾದಿಯಲ್ಲಿ ಅನ್ವೇಷಿಸುತ್ತಾ ಅತ್ಯಂತ ಆಳವಾಗಿ (ದೂರವಾಗಿ) ಅನ್ವೇಷಿಸಿದ್ದೇನೆ. ಮನಸ್ಸಿನಿಂದ ಯಾವೆಲ್ಲಾ ರೀತಿಯಲ್ಲಿ ಬಿಡುಗಡೆ ಹೊಂದಬಹುದೋ ಅವೆಲ್ಲವನ್ನು ಅನ್ವೇಷಿಸಿದ್ದೇನೆ. ಮನಸ್ಸಿನಿಂದ ಬಿಡುಗಡೆ ಹೊಂದುವುದನ್ನು ಪ್ರಜ್ಞಾಪೂರ್ವಕವಾಗಿ ಸ್ಪಷ್ಟವಾಗಿ ಅರಿತಿದ್ದೇನೆ.
ಭಿಕ್ಷುಗಳೇ, ಎಲ್ಲಿಯವರೆಗೆ ಇಂದ್ರೀಯಗಳ ಆಸ್ವಾದನೆಯನ್ನು ಆಸ್ವಾದನೆಯೆಂದು ಅವುಗಳ ಅಪಾಯವನ್ನು ಅಪಾಯವೆಂದು, ಅವುಗಳ ಬಿಡುಗಡೆಯನ್ನು ಬಿಡುಗಡೆಯೆಂದು ಸ್ಪಷ್ಟವಾಗಿ, ನೇರವಾಗಿ, ಅರಿತಿರಲಿಲ್ಲವೋ ಅಲ್ಲಿಯವರೆಗೆ ದೇವತೆಗೆಳ, ಮಾರರ, ಬ್ರಹ್ಮರ, ಸಮಣ ಬ್ರಾಹ್ಮಣರ ಈ ಲೋಕಗಳಲ್ಲಿ ಅನುತ್ತರವಾದ ಸಮ್ಯಕ್ ಸಂಬೋಧಿಯನ್ನು ಪಡೆದಿರುವೆನೆಂದು ನಾನು ಘೋಷಿಸಲಿಲ್ಲ. ಆದರೆ ಯಾವಾಗ ಇಂದ್ರೀಯಗಳ ಆಸ್ವಾದನೆ... ಅಪಾಯಗಳು... ಬಿಡುಗಡೆ... ಸ್ಪಷ್ಟವಾಗಿ, ನೇರವಾಗಿ ದೇವತೆಗಳ... ಬ್ರಾಹ್ಮಣರ ಈ ಲೋಕಗಳಲ್ಲಿ ಅನುತ್ತರವಾದ ಸಮ್ಯಕ್ ಸಂಬೋಧಿ ಪಡೆದಿರುವೆನೆಂದು ಘೋಷಿಸಿದೆನು. ನನ್ನಲ್ಲಿ ಜ್ಞಾನವೂ ಹಾಗು ದರ್ಶನವೂ ಉದಯಿಸಿತು: ಅಚಲವೂ ನನ್ನ ವಿಮುಕ್ತಿ, ಇದೇ ನನ್ನ ಅಂತಿಮ ಜನ್ಮ, ಮುಂದೆ ನನಗೆ ಪುನರ್ಜನ್ಮವಿಲ್ಲ.

35.2.4. ದುತಿಯಾ ಆಸ್ವಾದ ಪರಿಯೇಸನ ಸುತ್ತಂ
16. ಭಿಕ್ಷುಗಳೇ, ನಾನು ರೂಪಗಳ ಆಸ್ವಾದನೆಯ ಅನ್ವೇಷಣೆಯಲ್ಲಿ ಹೊರಟಿದ್ದೆನು. ಅವನ್ನು ಪ್ರಜ್ಞಾಪೂರ್ವಕವಾಗಿ ಆಸ್ವಾದನೆಯೆಂದೇ ಅರಿತೆನು. ಹಾಗೆಯೇ ರೂಪಗಳ ಅಪಾಯದ ಅನ್ವೇಷಣೆಯನ್ನು ಮಾಡಿದೆನು. ಅವನ್ನು ಸಹಾ ಪ್ರಜ್ಞಾಪೂರ್ವಕವಾಗಿ ಯಥಾಭೂತವಾಗಿ ಅರಿತೆನು. ನಂತರ ಭಿಕ್ಷುಗಳೇ, ನಾನು ರೂಪಗಳಿಂದ ಬಿಡುಗಡೆ ಹೇಗೆಂದು ಸಹಾ ಅನ್ವೇಷಿಸಿದೆನು. ಅವನ್ನು ಸಹಾ ಪ್ರಜ್ಞಾಪೂರ್ವಕವಾಗಿ ಸಂಶೋಧಿಸಿದೆನು. ಹಾಗೆಯೇ ಭಿಕ್ಷುಗಳೇ, ನಾನು ಶಬ್ದಗಳ... ವಾಸನೆಗಳ... ರಸಗಳ... ಸ್ಪರ್ಶಗಳ... ಧಮ್ಮಗಳ (ಮಾನಸಿಕ ವಿಷಯ ವಸ್ತು/ವಿಚಾರ/ಕಲ್ಪನೆ) ಆಸ್ವಾದನೆಯ ಅನ್ವೇಷಣೆಯಲ್ಲೂ ಹೊರಟಿದ್ದೆನು. ಅವನ್ನು ಪ್ರಜ್ಞಾಪೂರ್ವಕವಾಗಿ ಆಸ್ವಾದನೆಯೆಂದು ಅರಿತೆನು. ಹಾಗೆಯೇ ಧಮ್ಮಗಳ ಅಪಾಯದ ಅನ್ವೇಷಣೆಯನ್ನು ಮಾಡಿದೆನು. ಅವನ್ನು ಸಹಾ ಪ್ರಜ್ಞಾಪೂರ್ವಕವಾಗಿ ಯಥಾಭೂತವಾಗಿ ಅರಿತೆನು. ನಂತರ ಭಿಕ್ಷುಗಳೇ ನಾನು ಧಮ್ಮಗಳಿಂದ ಬಿಡುಗಡೆ ಹೇಗೆಂದು ಸಹಾ ಅನ್ವೇಷಿಸಿದೆನು. ಅವನ್ನು ಸಹಾ ಪ್ರಜ್ಞಾಪೂರ್ವಕವಾಗಿ ಸಂಶೋಧಿಸಿದೆನು.
ಭಿಕ್ಷುಗಳೇ, ಎಲ್ಲಿಯವರೆಗೆ ನಾನು ಈ ಆರು ಇಂದ್ರಿಯ ವಿಷಯ ವಸ್ತುಗಳ ಆಸ್ವಾದನೆಯನ್ನು... ಅಪಾಯಗಳನ್ನು... ಬಿಡುಗಡೆಗಳನ್ನು ಅರಿತಿಲ್ಲವೋ, ಅಲ್ಲಿಯವರೆಗೆ ನಾನು ದೇವತೆಗಳ, ಮಾರರ, ಬ್ರಹ್ಮರ, ಸಮಣ ಬ್ರಾಹ್ಮಣರ ಈ ಲೋಕದಲ್ಲಿ ಸಮ್ಯಕ್ ಸಂಭೋಧಿಯನ್ನು ಪಡೆದಿರುವೆನೆಂದು ಘೋಷಿಸಲಿಲ್ಲ. ಆದರೆ ಯಾವಾಗ ಈ ಆರು ಇಂದ್ರಿಯ ವಿಷಯ ವಸ್ತುಗಳ ಆಸ್ವಾದನೆಯನ್ನು... ಅಪಾಯಗಳನ್ನು... ಬಿಡುಗಡೆಗಳನ್ನು ಅರಿತೆನೋ ಆಗ ನಾನು ಸಮಣ ಬ್ರಾಹ್ಮಣರ ಈ ಲೋಕದಲ್ಲಿ ಸಮ್ಯಕ್ ಸಂಭೋದಿಯನ್ನು ಪಡೆದಿರುವೆನೆಂದು ಘೋಷಿಸಿದೆನು. ನನ್ನಲ್ಲಿ ಜ್ಞಾನವೂ ಹಾಗು ದರ್ಶನವೂ ಉದಯಿಸಿತು. ಅಚಲವೂ ನನ್ನ ವಿಮುಕ್ತಿ, ಇದೇ ನನ್ನ ಅಂತಿಮ ಜನ್ಮ, ಮುಂದೆ ನನಗೆ ಪುನರ್ಜನ್ಮವಿಲ್ಲ.

35.2.5. ಪಠಮಸೋಚೇ ಆಸ್ವಾದ ಸುತ್ತಂ :
17. ಭಿಕ್ಷುಗಳೇ, ಚಕ್ಷುವಿನಲ್ಲಿ (ಕಣ್ಣಿನಲ್ಲಿ) ಆಸ್ವಾದ ಸಿಗದಿದ್ದರೆ ಜೀವಿಗಳು ಅದರತ್ತ ಅಂಟಿಕೊಳ್ಳುತ್ತಿರಲಿಲ್ಲ. ಆದರೆ ಚಕ್ಷುವಿನಲ್ಲಿ ಆಸ್ವಾದನೆ ಸಿಗುತ್ತಿರುವುದರಿಂದಾಗಿ ಜೀವಿಗಳೂ ಅದರತ್ತ ಅಂಟಿಕೊಳ್ಳುತ್ತಿರುವರು. ಚಕ್ಷುವಿನಿಂದ ಅಪಾಯವಾಗಿರದಿದ್ದರೆ ಜೀವಿಗಳು  ಅದರಿಂದ ವಿಮುಖರಾಗುತ್ತಿರಲಿಲ್ಲ. ಆದರೆ ಚಕ್ಷುವಿನಿಂದ ಅಪಾಯ ಇರುವುದರಿಂದಾಗಿ ಜೀವಿಗಳು ಅದರಿಂದ ವಿಮುಖರಾಗುತ್ತಾರೆ. ಚಕ್ಷುವಿನಿಂದ ಬಿಡುಗಡೆಯಿಲ್ಲದಿದ್ದರೆ ಜೀವಿಗಳಲು ಬಿಡುಗಡೆ ಹೊಂದಲು ಸಾಧ್ಯವೇ ಆಗುತ್ತಿರಲಿಲ್ಲ. ಆದರೆ ಚಕ್ಷುವಿನಿಂದ ಬಿಡುಗಡೆ ಸಾಧ್ಯವಿರುವುದರಿಂದಾಗಿ ಜೀವಿಗಳು ಚಕ್ಷುವಿನಿಂದ ಬಿಡುಗಡೆ ಹೊಂದುತ್ತಾರೆ. ಭಿಕ್ಷುಗಳೇ ಕಿವಿಯಲ್ಲಿ ಆಸ್ವಾದ ಸಿಗದಿದ್ದರೆ... ಮೂಗಿನಲ್ಲಿ... ನಾಲಿಗೆಯಲ್ಲಿ... ದೇಹದಲ್ಲಿ... ಮನಸ್ಸಿನಲ್ಲಿ ಆಸ್ವಾದನೆ ಸಿಗುತ್ತಿರುವುದರಿಂದಾಗಿ ಜೀವಿಗಳು ಅದರತ್ತ ಅಂಟಿಕೊಳ್ಳುವವು. ಮನಸ್ಸಿನಿಂದ ಅಪಾಯವಾಗದಿದ್ದರೆ ಜೀವಿಗಳು ವಿಮುಖರಾಗುತ್ತಿರಲಿಲ್ಲ. ಆದರೆ ಮನಸ್ಸಿನಿಂದ ಅಪಾಯ ಇರುವುದರಿಂದಾಗಿ ಜೀವಿಗಳು ಮನಸ್ಸಿನಿಂದ ವಿಮುಖರಾಗುವವು. ಮನಸ್ಸಿನಿಂದ ಬಿಡುಗಡೆಯಿಲ್ಲದಿದ್ದರೆ ಜೀವಿಗಳು ಬಿಡುಗಡೆ ಹೊಂದು ಸಾಧ್ಯವೇ ಆಗುತ್ತಿರಲಿಲ್ಲ. ಆದರೆ ಮನಸ್ಸಿನಿಂದ ಬಿಡುಗಡೆ ಇರುವುದರಿಂದಾಗಿ ಜೀವಿಗಳು ಬಿಡುಗಡೆ ಹೊಂದುತ್ತವೆ.
ಭಿಕ್ಷುಗಳೇ, ಎಲ್ಲಿಯವರೆಗೆ ಜೀವಿಗಳು ಆರು ಇಂದ್ರೀಯಗಳ ಬಗ್ಗೆ ಯಥಾಭೂತವಾಗಿ ಅವುಗಳ ಅಸ್ವಾದತೆಯನ್ನು ಅಪಾಯವನ್ನು ಹಾಗು ಅವುಗಳ ಬಿಡುಗಡೆಯನ್ನು ಅರಿಯುವುದಿಲ್ಲವೋ, ಅಲ್ಲಿಯವರೆಗೆ ದೇವ, ಮಾರ, ಬ್ರಹ್ಮ ಹಾಗು ಸಮಣ ಬ್ರಾಹ್ಮಣರು ಈ ಲೋಕದಿಂದ ಬಿಡುಗಡೆ ಹೊಂದಲು ಸಾಧ್ಯವೇ ಇಲ್ಲ. ಆದರೆ ಯಾವಾಗ ಈ ಆರು ಇಂದ್ರೀಯಗಳ ಬಗ್ಗೆ ಯಥಾಭೂತವಾಗ ಅವುಗಳ ಆಸ್ವಾದನೆಯನ್ನು, ಅಪಾಯವನ್ನು ಹಾಗು ಬಿಡುಗಡೆಯನ್ನು ಅರಿತಾಗ ಅವೆಲ್ಲಾ ಜೀವಿಗಳು ಈ ಇಂದ್ರೀಯ ಆಧಾರಗಳಿಂದ ವಿಮುಖವಾಗಿ ವಿಮುಕ್ತರಾಗುವರು.

35.2.6. ದುತಿಯಸೋಚೇ ಆಸ್ವಾದ ಸುತ್ತಂ :
18. ಭಿಕ್ಷುಗಳೇ, ರೂಪಗಳಲ್ಲಿ ಆಸ್ವಾದವಿಲ್ಲದಿದ್ದರೆ, ಜೀವಿಗಳು ಅವುಗಳಲ್ಲಿ ಅಂಟಿಕೊಳ್ಳುತ್ತಿರಲಿಲ್ಲ. ರೂಪಗಳಲ್ಲಿ ಆಸ್ವಾದತೆ ಇರುವುದರಿಂದಲೇ ಜೀವಿಗಳು ಅವುಗಳಲ್ಲಿ ಅಂಟುತ್ತವೆ. ಭಿಕ್ಷುಗಳೇ, ರೂಪಗಳಲ್ಲಿ ಅಪಾಯವಿಲ್ಲದಿದ್ದರೆ, ಜೀವಿಗಳು ಅವುಗಳಿಂದ ವಿಮುವಾಗುತ್ತಿರಲಿಲ್ಲ. ಆದರೆ ರೂಪಗಳು ಅಪಾಯದಲ್ಲಿರುವುದರಿಂದಲೇ ಜೀವಿಗಳ ಅವುಗಳಿಂದ ವಿಮುಖವಾಗುತ್ತವೆ. ಭಿಕ್ಷುಗಳೇ, ರೂಪಗಳಿಂದ ವಿಮುಕ್ತಿ ಸಾಧ್ಯವಾಗಗಿದ್ದರೆ, ಜೀವಿಗಳು ರೂಪಗಳಿಂದ ಬಿಡುಗಡೆ ಹೊಂದಲು ಸಾಧ್ಯವಾಗುತ್ತಿರಲಿಲ್ಲ. ಆದರೆ ರೂಪಗಳಿಂದ ವಿಮುಕ್ತಿ ಹೊಂದಲು ಸಾಧ್ಯವಿರುವುದರಿಂದಲೇ ಜೀವಿಗಳು ಅವುಗಳಿಂದ ವಿಮುಕ್ತಿ ಹೊಂದುತ್ತವೆ. ಭಿಕ್ಷುಗಳೇ, ಶಬ್ದಗಳಲ್ಲಿ.... ವಾಸನೆಗಳಲ್ಲಿ.... ರಸಗಳಲ್ಲಿ.... ಶಾರೀರವುಳ್ಳವುಗಳಲ್ಲಿ... ಧಮ್ಮಗಳಲ್ಲಿ ಆಸ್ವಾದವಿರುವುದರಿಂದಲೇ ಜೀವಿಗಳು ಅವುಗಳಲ್ಲಿ ಅಂಟುತ್ತವೆ. ಧಮ್ಮಗಳಲ್ಲಿ ಅಪಾಯವಿಲ್ಲದೆ ಹೋಗಿದ್ದರೆ, ಜೀವಿಗಳು ಅವುಗಳಿಂದ ವಿಮುಖರಾಗುತ್ತಿರಲಿಲ್ಲ. ಆದರೆ ಭಿಕ್ಷುಗಳೇ, ಧಮ್ಮಗಳಲ್ಲಿ ಅಪಾಯವಿರುವುದರಿಂದ ಜೀವಿಗಳು ಧಮ್ಮಗಳಿಂದ (ಮಾನಸಿಕ ವಿಷಯ ವಸ್ತು) ವಿಮುಖವಾಗುತ್ತವೆ. ಭಿಕ್ಷುಗಳೇ, ಧಮ್ಮಗಳಿಂದ ಬಿಡುಗಡೆಯಿಲ್ಲದೆ ಹೋಗಿದ್ದರೆ, ಜೀವಿಗಳು ಧಮ್ಮಗಳಿಂದ ಮುಕ್ತಿಯೇ ಹೊಂದುತ್ತಿರಲಿಲ್ಲ. ಆದರೆ ಧಮ್ಮಗಳಿಂದ ಬಿಡುಗಡೆಯು ಸಾಧ್ಯವಿರುವುದರಿಂದಾಗಿಯೇ ಜೀವಿಗಳು ಧಮ್ಮದಿಂದ ಬಿಡುಗಡೆಯನ್ನು ಹೊಂದುತ್ತವೆ.
ಭಿಕ್ಷುಗಳೇ, ಎಲ್ಲಿಯವರೆಗೆ ಈ ಆರು ಇಂದ್ರೀಯ ವಸ್ತುಗಳ ಆಸ್ವಾದನೆ ಅಪಾಯ ಹಾಗು ಬಿಡುಗಡೆಯನ್ನು ಜೀವಿಗಳು ಸ್ಪಷ್ಟವಾಗಿ ಅರಿಯುವುದಿಲ್ಲವೋ ಅಲ್ಲಿಯವರೆಗೆ ಅವರು ಇಂದ್ರೀಯ ಬಯಕೆಗಳನ್ನು ತ್ಯಾಗ ಮಾಡುವ ಇಚ್ಛೆಯನ್ನು ನಿರ್ಧರಿಸುವುದಿಲ್ಲ. ಹೀಗೆ ಅನಿಯಂತ್ರಿತರಾದ, ಕಳಚಲ್ಪಡದ ದೇವತೆಗಳಾಗಲಿ, ಮಾರರಾಗಲಿ, ಬ್ರಹ್ಮರಾಗಲಿ, ಸಮಣ ಬ್ರಾಹ್ಮಣರ ಸಹಿತ ಮಾನವರಾಗಲಿ ಬಿಡುಗಡೆಯಾಗಲಾರರು. ಆದರೆ ಯಾವಾಗ ಈ ಆರು ಇಂದ್ರೀಯ ವಸ್ತುಗಳು ಆಸ್ವಾದನೆ, ಅಪಾಯ ಹಾಗು ಬಿಡುಗಡೆಯನ್ನು ಜೀವಿಗಳನ್ನು ಸ್ಪಷ್ಟವಾಗಿ ಅರಿತಾಗ ಅವು ಇಂದ್ರೀಯ ಬಯಕೆಗಳು ತ್ಯಾಗ ಮಾಡುವ ಇಚ್ಛೆಯನ್ನು ನಿರ್ಧರಿಸುತ್ತಾರೆ. ಹೀಗೆ ನಿಂತಂತ್ರಿತರಾಗುವ ದೇವತೆಗಳಾಗಲಿ, ಮಾರರಾಗಲಿ, ಬ್ರಹ್ಮರಾಗಲಿ, ಸಮಣ ಬ್ರಾಹ್ಮಣರ ಸಹಿತ ಮಾನವರು ಬಿಡುಗಡೆ ಹೊಂದುವರು. ಹೀಗೆ ಅವೆಲ್ಲಾ ಜೀವಿಗಳು ಇಂದ್ರೀಯ ಆಧಾರಗಳಿಂದ ವಿಮುಖರಾಗಿ ವಿಮುಕ್ತರಾಗುವರು.

35.2.7. ಪಠಮಾಭಿನನ್ದ ಸುತ್ತಂ
19. ಭಿಕ್ಷುಗಳೇ, ಯಾರು ಚಕ್ಷುವಿನಲ್ಲಿ ಆನಂದ ಹುಡುಕುತ್ತಿರುವನೋ ಆತನು ದುಃಖಗಳಲ್ಲಿ ಆನಂದ ಹುಡುಕುತ್ತಿರುವನು. ಯಾರು ದುಃಖಗಳಲ್ಲಿ ಆನ್ಲಂದ ಹುಡುಕುವನೋ, ನಾನು ಹೇಳುತ್ತಿದೇನೆ ಅಂತಹವನು ದುಃಖಗಳಿಂದ ಮುಕ್ತನಾಗಲಾರ. ಭಿಕ್ಷುಗಳೇ, ಯಾರು ಕಿವಿಯಲ್ಲಿ... ಮೂಗಿನಲ್ಲಿ... ನಾಲಿಗೆಯಲ್ಲಿ... ದೇಹದಲ್ಲಿ... ಮನಸ್ಸಿನಲ್ಲಿ ಆನಂದ ಹುಡುಕುತ್ತಿರುವನೋ ಆತನು ದುಃಖಗಳಲ್ಲಿ ಆನಂದ ಹುಡುಕುತ್ತಿರುವನು. ಯಾರು ದುಃಖಗಳಲ್ಲಿ ಆನಂದ ಹುಡುಕುವರೋ ನಾನು ಹೇಳುತ್ತಿದ್ದೇನೆ, ಅಂತಹವರು ಎಂದಿಗೂ ದುಃಖಗಳಿಂದ ಮುಕ್ತನಾಗಲಾರನು.
ಭಿಕ್ಷುಗಳೇ, ಇಲ್ಲಿ ಒಬ್ಬನು ಚಕ್ಷುವಿನಲ್ಲಿ ಆನಂದಿಸಲಾರ. ಹೀಗಾಗಿ ಆತನು ದುಃಖದಲ್ಲಿ ಆನಂದಿಸುತ್ತಿಲ್ಲ. ಭಿಕ್ಷುಗಳೇ, ಯಾರು ದುಃಖಗಳಲ್ಲಿ ಆನಂದಿಸಲಾರನೋ, ನಾನು ಹೇಳುತ್ತಿದ್ದೇನೆ, ಖಂಡಿತವಾಗಿಯೂ ಆತನು ದುಃಖಗಳಿಂದ ಮುಕ್ತನಾಗುತ್ತಾನೆ. ಭಿಕ್ಷುಗಳೇ, ಇಲ್ಲಿ ಒಬ್ಬನು ಕಿವಿಯಲ್ಲಿ... ಮೂಗಿನಲ್ಲಿ... ನಾಲಿಗೆಯಲ್ಲಿ... ದೇಹದಲ್ಲಿ... ಮನಸ್ಸಿನಲ್ಲಿ ಅನಂದಿಸಲಾರನು. ಭಿಕ್ಷುಗಳೇ, ಯಾರು ಮನಸ್ಸಿನಲ್ಲಿ ಆನಂದಿಸಲಾರನೋ ನಾನು ಹೇಳುತ್ತಿದ್ದೇನೆ, ಖಂಡಿತವಾಗಿಯೂ ಆತನು ದುಃಖಗಳಿಂದ ಮುಕ್ತನಾಗುತ್ತಾನೆ.

35.2.8. ದುತಿಯಾಭಿನನ್ದ ಸುತ್ತಂ
20. ಭಿಕ್ಷುಗಳೇ, ಯಾರು ರೂಪಗಳಲ್ಲಿ ಆನಂದಿಸುತ್ತಾರೋ ಅವರು (ವಾಸ್ತವವಾಗಿ) ದುಃಖಗಳಲ್ಲಿ ಆನಂದಿಸುತ್ತಿದ್ದಾರೆ, ಭಿಕ್ಷುಗಳೇ, ಯಾರಾದರೂ ದುಃಖಗಳಲ್ಲಿ ಆನಂದಿಸುತ್ತಿದ್ದರೆ ನಾನು ಹೇಳುತ್ತಿದ್ದೇನೆ, ಆತನು ದುಃಖಗಳಿಂದ ಮುಕ್ತನಾಗಲಾರನು. ಭಿಕ್ಷುಗಳೇ, ಯಾರು ಶಬ್ದಗಳಲ್ಲಿ... ವಾಸನೆಗಳಲ್ಲಿ... ರಸಗಳಲ್ಲಿ... ಶಾರೀರಿಕ ಸ್ಪರ್ಶಗಳಲ್ಲಿ... ಮಾನಸಿಕ ವಿಷಯವಸ್ತುಗಳಲ್ಲಿ ಆನಂದಿಸುತ್ತಾನೋ ಆತನು (ವಾಸ್ತವವಾಗಿ) ದುಃಖಗಳಲ್ಲಿ ಆನಂದಿಸುತ್ತಿದ್ದಾನೆ. ಭಿಕ್ಷುಗಳೇ, ಯಾರಾದರೂ ದುಃಖಗಳಲ್ಲಿ ಆನಂದಿಸುತ್ತಿದ್ದರೆ, ನಾನು ಹೇಳುತ್ತಿದ್ದೇನೆ, ಆತನು ದುಃಖಗಳಿಂದ ಮುಕ್ತನಾಗಲಾರನು.ಭಿಕ್ಷುಗಳೇ, ಯಾರು ರೂಪಗಳಲ್ಲಿ ಆನಂದಿಸುವುದಿಲ್ಲವೋ ಅವರು ದುಃಖಗಳಲ್ಲಿ ಆನಂದಿಸಲಾರರು. ಭಿಕ್ಷುಗಳೇ, ಯಾರು ರೂಪಗಳಲ್ಲಿ ಆನಂದಿಸಲಾರರೋ, ನಾನು ಹೇಳುತ್ತಿದ್ದೇನೆ, ಆತನು ದುಃಖಗಳಿಂದ ಮುಕ್ತನಾಗುವನು. ಭಿಕ್ಷುಗಳೇ, ಯಾರು ಶಬ್ದಗಳಲ್ಲಿ... ವಾಸನೆಗಳಲ್ಲಿ... ರಸಸ್ರಾವಗಳಲ್ಲಿ... ಶಾರೀರಿಕ ಸ್ಪರ್ಶಗಳಲ್ಲಿ... ಮಾನಸಿಕ ವಿಷಯವಸ್ತುಗಳಲ್ಲಿ ಆನಂದಿಸುವುದಿಲ್ಲವೋ ಆತನು ದುಃಖಗಳಲ್ಲಿ ಆನಂದಿಸಲಾರನು. ಅಂತಹವನು ಖಂಡಿತವಾಗಿಯೂ ಎಲ್ಲಾ ದುಃಖಗಳಿಂದ ಮುಕ್ತನಾಗುವನು.

35.2.9. ಪಠಮದುಕ್ಖುಪ್ಪಾದ ಸುತ್ತಂ (ಪ್ರಥಮ ದುಃಖ ಉತ್ಪಾದ ಸುತ್ತ)
21. ಭಿಕ್ಷುಗಳೇ, ಚಕ್ಷುವಿನ ಉದಯ, ಸ್ಥಿತಿ, ಬೆಳವಣಿಗೆ ಹಾಗು ವ್ಯಕ್ತತೆಯು ದುಃಖದ ಉತ್ಪಾದನೆಯಾಗಿದೆ. ರೋಗದ ಮುಂದುವರಿಕೆಯಾಗಿದೆ. ಹಾಗು ಮುಪ್ಪು ಮರಣಗಳ ಸ್ಥಾಪನೆಯಾಗಿದೆ. ಕಿವಿಯ ಉದಯ... ಮೂಗಿನ... ನಾಲಿಗೆಯ... ದೇಹದ... ಮನಸ್ಸಿನ ಉದಯ, ಸ್ಥಿತಿ, ಬೆಳವಣಿಗೆ ಹಾಗು ಮುಕ್ತತೆಯ ದುಃಖ ಉತ್ಪಾದನೆಯಾಗಿದೆ. ರೋಗದ ಮುಂದುವರಿಕೆಯಾಗಿದೆ. ಮುಪ್ಪು-ಮರಣಗಳ ಸ್ಥಾಪನೆಯಾಗಿದೆ.
ಭಿಕ್ಷುಗಳೇ ಯಾರ ಚಕ್ಷುವು ನಿರೋಧಕ್ಕೆ ಒಳಪಟ್ಟಿದೆಯೋ, ಸಮಾಧಾನಗೊಂಡಿದೆಯೋ ಮತ್ತು ಮರೆಯಾಗಿದೆಯೋ, ಅಂತಹವರ ದುಃಖಶೇಷವೂ ಸಹಾ ನಿರೋಧಗೊಂಡಿರುವುದು. ರೋಗವು ಉಪಶಮನವಾಗಿರುವುದು, ಅವರು ಜರಾಮರಣಗಳಿಂದಲೂ ಪಾರಾಗಿರುವರು. ಅದೇರೀತಿಯಾಗಿ ಯಾರು ಕಿವಿಯು.... ಜಿಹ್ವಾವು... ಮೂಗು... ದೇಹವೂ... ಮನಸ್ಸು ನಿರೋಧಕ್ಕೆ ಒಳಪಟ್ಟಿದೆಯೋ ಸಮಾಧಾನಗೊಂಡಿದೆಯೋ ಮತ್ತು ಮರೆಯಾಗಿದೆಯೋ, ಅಂತಹವರ ದುಃಖಶೇಷವೂ ಸಹಾ ನಿರೋಧಗೊಂಡಿರುವುದು. ರೋಗವೂ ಉಪಶಮನವಾಗಿರುವುದು. ಅವರು ಜರಾಮರಣಗಳಿಂದಲೂ ಪಾರಾಗಿರುವರು.

35.2.10. ದುತಿಯ ದುಕ್ಖುಪ್ಪಾದ ಸುತ್ತಂ (ದ್ವಿತೀಯ ದುಃಖ ಉತ್ಪಾದ ಸುತ್ತ)
22. ಭಿಕ್ಷುಗಳೇ, ರೂಪಗಳ ಉದಯ, ಸ್ಥಿತಿ, ಬೆಳವಣಿಗೆ ಹಾಗು ವ್ಯಕ್ತತೆಯು ದುಃಖದ ಉತ್ಪಾದನೆಯಾಗಿದೆ. ರೋಗದ ಮುಂದುವರಿಕೆಯಾಗಿದೆ ಹಾಗು ಮುಪ್ಪು-ಮರಣಗಳ ಸ್ಥಾಪನೆಯಾಗಿದೆ. ಶಬ್ದಗಳ ಉದಯ... ಗಂಧಗಳ ಉದಯ... ರಸಗಳ ಉದಯ... ಸ್ಪರ್ಶಗಳ ಉದಯ... ಧಮ್ಮಗಳ ಉದಯ... ಸ್ಥಿತಿ, ಬೆಳವಣಿಗೆ ಹಾಗು ವ್ಯಕ್ತತೆಯು ದುಃಖದ ಉತ್ಪಾದನೆಯಾಗಿದೆ, ರೋಗದ ಮುಂದುವರಿಕೆಯಾಗಿದೆ, ಮುಪ್ಪು-ಮರಣಗಳ ಸ್ಥಾಪನೆಯಾಗಿದೆ.
ಭಿಕ್ಷುಗಳೇ, ಯಾರು ರೂಪಗಳನ್ನು ನಿರೋಧಕ್ಕೆ ಒಳಪಡಿಸಿರುವೋ, ಸಮಾಧಾನಪಡಿಸಿರುವೋ ಮತ್ತು ಮರೆಯಾಗಿಸಿರುವರೋ, ಅಂತಹವರ ದುಃಖಶೇಷವೂ ಸಹಾ ನಿರೋಧಕ್ಕೆ ಒಳಪಟ್ಟಿರುತ್ತದೆ. ರೋಗವೂ ಉಪಶಮಗೊಂಡಿರುತ್ತದೆ. ಅವರು ಜರಾಮರಣಗಳಿಂದ ಪಾರಾಗಿರುತ್ತಾರೆ. ಅದೇರೀತಿಯಾಗಿ ಯಾರು ಶಬ್ದಗಳನ್ನು... ವಾಸನೆಗಳನ್ನು... ರಸಗಳನ್ನು... ಶಾರೀರಿಕ ಸ್ಪರ್ಶಗಳನ್ನು ಹಾಗು ಮಾನಸಿಕ ವಿಷಯವಸ್ತು (ಧಮ್ಮ)ಗಳನ್ನು ನಿರೋಧಕ್ಕೆ ಒಳಪಡಿಸಿರುವರೋ, ಸಮಾಧಾನಪಡಿಸಿರುವೋ, ಮರೆಮಾಡಿರುವರೋ ಅಂತಹವರ ದುಃಖಶೇಷವು ಸಹಾ ನಿರೋಧವಾಗಿರುತ್ತದೆ. ರೋಗವು ಉಪಶಮನಗೊಂಡಿರುತ್ತದೆ. ಅವರು ಜರಾಮರಣಗಳಿಂದಲೂ ಪಾರಾಗುವರು 

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...