Friday 8 June 2018

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ)


1. ಖೇಮಾ ಸುತ್ತ

410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ವಿಹರಿಸುತ್ತಿದ್ದರು. ಆ ಸಂದರ್ಭದಲ್ಲಿ ಭಿಕ್ಷುಣಿ ಖೇಮಾಳು ಕೋಸಲದಲ್ಲಿ ಸಂಚರಿಸುತ್ತಾ, ಶ್ರಾವಸ್ತಿ ಹಾಗು ಸಾಕೇತದ ಮಧ್ಯದಲ್ಲಿನ ತೋರಣವತ್ಥುವಿನಲ್ಲಿ ಉಳಿದಳು. ಅದೇ ಸಮಯದಲ್ಲಿ ಕೋಸಲದ ರಾಜನಾದ ಪಸೇನದಿಯು ಸಾಕೇತದಿಂದ ಶ್ರಾವಸ್ತಿಯ ಕಡೆಗೆ ಹೊರಟಿದ್ದನು. ಆದರೆ ಈ ನಡುವೆ ಆತನು ಸಹಾ ತೋರಣವತ್ಥುವಿನಲ್ಲಿ ಒಂದು ರಾತ್ರಿ ಕಳೆಯಲು ಉಳಿದನು. ಆಗ ರಾಜ ಪಸೇನದಿಯು ತನ್ನ ಮನುಷ್ಯರಿಗೆ ಹೀಗೆ ಹೇಳಿದನು: ಸುಜನರೇ, ಈ ತೋರಣವತ್ಥುವಿನಲ್ಲಿ ನಾನು ಇಂದು ಇಲ್ಲಿ ಭೇಟಿ ಮಾಡಲು ಸಮರ್ಥರಾದ ಸಮಣ ಅಥವಾ ಬ್ರಾಹ್ಮಣರಿದ್ದಾರೆಯೇ, ಅವರನ್ನು ಹುಡುಕಿ ತನ್ನಿ.
ಆಯಿತು ದೇವಾ ಎಂದು ನುಡಿದು ಆತನು ರಾಜ ಪಸೇನದಿಯು ಮಾತನಾಡಲು ಅರ್ಹನಾಗಿದ್ದಂತಹ ಯಾವ ಸಮಣ ಬ್ರಾಹ್ಮಣರು ಆತನಿಗೆ ಹುಡುಕಿದರೂ ಸಿಗಲಿಲ್ಲ. ಆದರೆ ಆತನಿಗೆ ಭಿಕ್ಖುಣಿ ಖೇಮಾಳು ತೋರಣವತ್ಥುವಿನಲ್ಲಿ ಕಂಡು, ಈ ವಿಷಯವನ್ನು ಆತನು ರಾಜ ಪಸೇನದಿಗೆ ಬಂದು ಹೀಗೆ ವಿನಂತಿಸಿಕೊಂಡನು: ದೇವಾ, ಈ ತೋರಣವತ್ಥುವಿನಲ್ಲಿ ತಾವು ಭೇಟಿ ಮಾಡತಕ್ಕಂತಹ ಯಾವ ಸಮಣರಾಗಲಿ ಅಥವಾ ಬ್ರಾಹ್ಮಣರಾಗಲಿ ನನಗೆ ಸಿಗಲಿಲ್ಲ. ಆದರೆ ದೇವಾ ಸಮೀಪದಲ್ಲೇ ಖೇಮಾ ಎಂಬ ತೇಜಸ್ವಿ ಭಿಕ್ಖುಣಿಯೊಬ್ಬಳು ಇದ್ದಾಳೆ. ಆಕೆಯು ಅರಹಂತರು, ಸಮ್ಮಾಸಂಬುದ್ಧರೂ ಆದ ಭಗವಾನರ ಶಿಷ್ಯೆಯಾಗಿರುವಳು. ಆಕೆಯ ಬಗ್ಗೆ ಈ ಬಗೆಯ ಖ್ಯಾತಿ ಹರಡಿದೆ: ಆಕೆಯು ಪ್ರಾಜ್ಞಳು, ಸಮರ್ಥಳು, ಬುದ್ಧಿಶಾಲಿ, ಪಂಡಿತಳು, ವಾಗ್ಮಿ, ಮೇಧಾವಿಯು ಹಾಗು ವಾಚಾಳು, ಕುಶಲಳು ಆಗಿದ್ದಾಳೆ. ಹೀಗಾಗಿ ದೇವಾ, ಖಂಡಿತವಾಗಿ ನೀವು ಆಕೆಯನ್ನೇ ಭೇಟಿಮಾಡಿರಿ.
ಆಗ ರಾಜ ಪಸೇನದಿಯು ಭಿಕ್ಖುಣಿ ಖೇಮಾಳ ಬಳಿಗೆ ಬಂದನು. ಆಕೆಗೆ ವಂದಿಸಿ, ಗೌರವದಿಂದ ಒಂದೆಡೆ ಕುಳಿತನು ಹಾಗು ಆಕೆಯೊಂದಿಗೆ ಹೀಗೆಂದನು: ಆರ್ಯೆ, ತಥಾಗತರು ಮರಣದ ನಂತರ ಇರುತ್ತಾರೆಯೇ? ಮಹಾರಾಜ, ಭಗವಾನರು, ತಥಾಗತರು ಮರಣದ ನಂತರ ಇರುವರು ಎಂದು ಘೋಷಿಸಿಲ್ಲ. ಹಾಗಾದರೆ ಆರ್ಯೆ, ತಥಾಗತರು ಮರಣದ ನಂತರ ಇರುವುದಿಲ್ಲವೆ? ಮಹಾರಾಜ, ಭಗವಾನರು, ತಥಾಗತರು ಮರಣದ ನಂತರ ಇರುವುದಿಲ್ಲ ಎಂದೂ ಘೋಷಿಸಿಲ್ಲ. ಹಾಗಾದರೆ ಇದು ಹೇಗೆ ಆರ್ಯೆ, ತಥಾಗತರು ಇರುವರು ಹಾಗು ಇರುವುದಿಲ್ಲ ಎರಡೂ ಸಾಧ್ಯವೇ? ಮಹಾರಾಜ, ಭಗವಾನರು, ತಥಾಗತರು ಮರಣದ ನಂತರ ಇರುತ್ತಾರೆ ಹಾಗು ಇರುವುದಿಲ್ಲ ಈ ಎರಡೂ ಸಾಧ್ಯವೆಂದು ಘೋಷಿಸಿಲ್ಲ. ಆರ್ಯೆ, ಹಾಗಾದರೆ ಮರಣದ ನಂತರ ತಥಾಗತರು ಇರುತ್ತಾರೆ ಎಂಬುದಿಲ್ಲ ಹಾಗೆಯೇ ಇಲ್ಲದೇ ಹೋಗುತ್ತಾರೆ ಎಂಬುದು ಇಲ್ಲವೇ? ಮಹಾರಾಜ, ಭಗವಾನರು ತಥಾಗತರು ಮರಣದ ನಂತರ ಇರುತ್ತಾರೆ ಎಂಬುದು ಇಲ್ಲ, ಇರುವುದಿಲ್ಲ ಎಂಬುದಿ ಇಲ್ಲ ಎಂದು ಸಹಾ ಘೋಷಿಸಿಲ್ಲ.
ಇದು ಹೇಗೆ ಆರ್ಯೆ, ಯಾವಾಗ ತಥಾಗತ ಮರಣದ ನಂತರ ಇರುತ್ತಾರೆಯೇ ಎಂದು ಕೇಳಿದಾಗ, ಭಗವಾನರು ಹಾಗೆ ಘೋಷಿಸಿಲ್ಲ ಎಂದಿರಿ, ಆರ್ಯೆ ತಥಾಗತರು ಮರಣದ ನಂತರ ಇರುವುದಿಲ್ಲವೆ ಎಂದು ಕೇಳಿದಾಗ ಭಗವಾನರೂ ಹಾಗೆಯೂ ಘೋಷಿಸಿಲ್ಲವೆಂದಿರಿ. ಆಗ ನಾವು ತಥಾಗತರು ಮರಣದ ನಂತರ ಇರುತ್ತಾರೆ, ಇರುವುದಿಲ್ಲ ಈ ಎರಡೂ ಸಾಧ್ಯತೆ ಇರುವುದೇ ಎಂದು ಪ್ರಶ್ನಿಸಿದಾಗಲೂ ನೀವು ಭಗವಾನರು ಹಾಗೆ ಘೋಷಿಸಿಲ್ಲ ಎಂದು ನುಡಿದಿರಿ. ಕೊನೆಗೆ ತಥಾಗತರು ಮರಣದ ನಂತರ ಇರುತ್ತಾರೆ ಎಂದೂ ಇಲ್ಲ, ಇರುವುದಿಲ್ಲ ಎಂದೂ ಇಲ್ಲವೆ ಎಂದು ಪ್ರಶ್ನಿಸಿದಾಗ, ಭಗವಾನರು ಹೀಗೂ ಘೋಷಿಸಿಲ್ಲ ಎಂದಿರಿ. ಈಗ ಏನು ಆರ್ಯೆ, ಯಾವ ಕಾರಣದಿಂದಾಗಿ, ಯಾವ ಉದ್ದೇಶದಿಂದಾಗಿ ಭಗವಾನರು ಹಾಗೆ ನುಡಿದಿಲ್ಲ? ಏತಕ್ಕಾಗಿ ಭಗವಾನರು ನುಡಿದಿಲ್ಲ?
ಸರಿ ಮಹಾರಾಜರೇ, ನಾನು ಈ ವಿಷಯಕ್ಕೆ ಸಂಬಂಧಿಸಿದಂತೆಯೇ ಪ್ರಶ್ನಿಸುವೆನು, ನಿಮಗೆ ಸಮಂಜಸವೆನಿಸಿದಂತೆ ಉತ್ತರಿಸಿರಿ. ನಿಮ್ಮಲ್ಲಿ ಲೆಕ್ಕಿಗನು ಅಥವಾ ಗಣಿತಜ್ಞನು ಅಥವಾ ಗಣಕಶಾಸ್ತ್ರಜ್ಞನು ಇರಬೇಕಲ್ಲವೇ? ಆತನು ಗಂಗಾತೀರದ ಮರಳನ್ನು ಹೀಗೆ ಲೆಕ್ಕಹಾಕಬಲ್ಲನೇ? ಹೇಗೆಂದರೆ ಇಲ್ಲಿ ಬಹಳಷ್ಟು ಮರಳು ಕಣಗಳಿವೆ ಅಥವಾ ಲಕ್ಷಕ್ಕಿಂತಲೂ ಹೆಚ್ಚಿನ ಮರಳಲು ಕಣಗಳಿವೆ. ಇಲ್ಲ ಆರ್ಯೆ, ಏಕೆಂದರೆ (ಸಮುದ್ರವು ಮಹಾನದಿಯು ಮಹಾ ಆಳವಾದುದು, ಅಳತೆಗೆ ಮೀರಿದ್ದು, ಅಳೆಯಲು ದುಷ್ಕರವಾದದ್ದು. ಅದೇರೀತಿಯಾಗಿ ಮಹಾರಾಜ, ತಥಾಗತರ ಬಗ್ಗೆ ವಿವರಿಸಲು ದುಷ್ಕರವಾಗಿದೆ. ಹೇಗೆಂದರೆ ಯಾವುದರಿಂದ ತಥಾಗತರನ್ನು ನಾನು ಎಣಿಸುತ್ತೇನೆಯೋ ಅವೆಲ್ಲವೂ ತಾಳೆಯ ಮರದ ಬುಡದಂತೆ ಅವರಿಂದ ಕತ್ತರಿಸಲ್ಪಟ್ಟಿದೆ. ಭವಿಷ್ಯದಲ್ಲಿ ಉದಯಿಸದಂತೆ ಮಾಡಲ್ಪಟ್ಟಿದೆ. ತಥಾಗತರನ್ನು ಯಾವ ಭೌತಿಕ ರೂಪದಿಂದ ಅಳೆಯುತ್ತಾರೋ, ಆ ಭೌತಿಕ ರೂಪವೂ ತಾಳೆಯ ಮರದ ಬುಡದಂತೆ ಕತ್ತರಿಸಿಹಾಕಿದ್ದಾರೆ. ತಥಾಗತರು ಮಹಾ ಸಮುದ್ರದ ರೀತಿಯಲ್ಲಿ ಆಳವಾದವರು, ಅಳೆಯಲಾಗದವರು. ಆದ್ದರಿಂದಾಗಿ ತಥಾಗತರು ಮರಣದ ನಂತರ ಇರುವರು ಎಂಬುದು ಅನ್ವಯವಾಗುವುದಿಲ್ಲ. ಹಾಗೆಯೇ ತಥಾಗತರು ಮರಣದ ನಂತರ ಇರುವುದಿಲ್ಲ ಎಂಬುದು ಅನ್ವಯವಾಗುವುದಿಲ್ಲ. ಹಾಗೆಯೇ ತಥಾಗತರು ಮರಣದ ನಂತರ ಇರುವರು ಹೌದು, ಇಲ್ಲ ಎಂಬುದು ಹೌದು ಎಂಬುದು ಅನ್ವಯವಾಗುವುದಿಲ್ಲ. ಹಾಗೆಯೇ ತಥಾಗತರು ಮರಣದ ನಂತರ ಇರುತ್ತಾರೆ ಎಂಬುದಿಲ್ಲ, ಇರುವುದಿಲ್ಲ ಎಂಬುದಿಲ್ಲ ಎಂದು ಅನ್ವಯವಾಗುವುದಿಲ್ಲ.
ಯಾವ ವೇದನೆಗಳಿಂದ ತಥಾಗತರನ್ನು ಗುರುತಿಸುತ್ತೇವೆಯೋ... ಯಾವ ಸನ್ಯಾ (ಗ್ರಹಿಕೆಗಳಿಂದ) ತಥಾಗತರನ್ನು ಗುರುತಿಸುತ್ತೇವೆಯೋ... ಯಾವ ಸಂಖಾರಗಳಿಂದ ತಥಾಗತರನ್ನು ಗುರುತಿಸುತ್ತೇವೆಯೋ... ಯಾವ ವಿಞ್ಞಾನಗಳಿಂದ ತಥಾಗತರನ್ನು ಗುರುತಿಸುತ್ತೇವೆಯೋ ಅವೆಲ್ಲವೂ ತಥಾಗತರಿಂದ ತೊರೆದುಹಾಕಲ್ಪಟ್ಟಿದೆ, ಕತ್ತರಿಸಲ್ಪಟ್ಟಿದೆ. ಹೇಗೆಂದರೆ ತಾಳೆಯ ಬುಡದಂತೆ, ಹೀಗಾಗಿ ಭವಿಷ್ಯದಲ್ಲಿ ಉದಯವಾಗುವ ಸಂದರ್ಭವೇ ಇಲ್ಲ. ತಥಾಗತರು ಓ ಮಹಾರಾಜ, ಯಾವ ವಿಞ್ಞಾನದಿಂದ ನಾವು ಪರಿಗಣಿಸುತ್ತೇವೆಯೋ, ಅವೆಲ್ಲದರಿಂದ ಅವರು ಮುಕ್ತರಾಗಿದ್ದಾರೆ. ಅವರು ಅಳೆಯಲಾಗದವರು. ಮಹಾಸಮುದ್ರದಂತೆ ಅಳೆಯಲು ಕಠಿಣವಾದವರು. ಹೀಗಾಗಿ ತಥಾಗತರು ಮರಣದ ನಂತರ ಇರುತ್ತಾರೆ ಎಂಬುದು ಅನ್ವಯವಾಗುವುದಿಲ್ಲ; ತಥಾಗತರು ಮರಣದ ನಂತರ ಇರುವುದಿಲ್ಲ ಎಂಬುದು ಅನ್ವಯವಾಗುವುದಿಲ್ಲ. ಹಾಗೆಯೇ ತಥಾಗತರು ಮರಣದ ನಂತರ ಇರುತ್ತಾರೆ ಹಾಗು ಇರುವುದಿಲ್ಲ ಎಂಬುದು ಅನ್ವಯವಾಗುವುದಿಲ್ಲ. ಹಾಗೆಯೇ ತಥಾಗತರು ಮರಣದ ನಂತರ ಇರುತ್ತಾರೆ ಎಂಬುದು ಇಲ್ಲ, ಇರುವುದಿಲ್ಲ ಎಂಬುವುದು ಇಲ್ಲ, ಎನ್ನುವುದು ಅನ್ವಯವಾಗುವುದಿಲ್ಲ. ಹೀಗೆ ಖೇಮಾ ಭಿಕ್ಖುಣಿಯು ಉತ್ತರಿಸಿದಾಗ, ರಾಜ ಪಸೇನದಿಯು ಆನಂದಪಟ್ಟರು. ಅತ್ಯಂತ ಆಹ್ಲಾದತೆಯನ್ನು ಅನುಭವಿಸಿದವರಾಗಿ ಆಕೆಗೆ ಗೌರವಿಸಿ, ವಂದಿಸಿ ಅಲ್ಲಿಂದ ಎದ್ದು ಆಕೆಯ ಬಲಭಾಗದಿಂದ ತಿರುಗಿ ಹೊರಟನು.
ನಂತರ ರಾಜ ಪಸೇನದಿಯು ಇನ್ನೊಂದು ಸಂದರ್ಭದಲ್ಲಿ ಭಗವಾನರ ಬಳಿಗೆ ಬಂದನು. ಭಗವಾನರಿಗೆ ಗೌರವಪೂರ್ವಕವಾಗಿ ವಂದಿಸಿ ಒಂದೆಡೆ ಕುಳಿತನು. ನಂತರ ಹೀಗೆ ಭಗವಾನರೊಂದಿಗೆ ಸಂಭಾಷಣೆ ಆರಂಭಿಸಿದನು. ಭಂತೆ, ತಥಾಗತರು ಮರಣದ ತರುವಾಯ ಇರುವರೇ? ಮಹಾರಾಜ, ತಥಾಗತರು ಮರಣದ ತರುವಾಯ ಇರುವರೆಂದು ನಾನು ಘೋಷಿಸಿಲ್ಲ..... ಮಹಾರಾಜ, ತಥಾಗತರು ಮರಣದ ತರುವಾಯ ಇರುತ್ತಾರೆ ಎಂದೂ ಇಲ್ಲ, ಇರುವುದಿಲ್ಲ ಎಂದೂ ಇಲ್ಲ ಎಂದು ನಾನು ಘೋಷಿಸಿಲ್ಲ. ಇದು ಹೇಗೆ ಭಂತೆ, ಯಾವಾಗ ನಾನು ತಥಾಗತರು ಮರಣದ ತರುವಾಯ ಇರುವರೇ ಎಂದು ಕೇಳಿದಾಗ.... ಮಹಾರಾಜ ನಾನು ಹಾಗೆ ಘೋಷಿಸಿಲ್ಲ ಎಂದು ನುಡಿದಿರಿ, ಈಗ ಭಂತೆ ಯಾವ ಕಾರಣಕ್ಕಾಗಿ, ಯಾವ ಉದ್ದೇಶದಿಂದ, ಏತಕ್ಕಾಗಿ ಭಗವಾನರು ಇದನ್ನು ಘೋಷಿಸಿಲ್ಲ?
ಹಾಗಾದರೆ ಮಹಾರಾಜ, ಇದಕ್ಕೆ ಸಂಬಂಧಿಸಿದಂತೆ ಪ್ರಶ್ನಿಸುವೆನು, ನಿನಗೆ ಸರಿ ಎನಿಸಿದಂತೆ ಉತ್ತರಿಸು. ಮಹಾರಾಜ, ನಿನ್ನಲ್ಲಿ ಲೆಕ್ಕಿಗನು ಅಥವಾ ಗಣಿತಜ್ಞನು ಇರಬೇಕಲ್ಲವೆ? (ಎಲ್ಲಾ ಹಿಂದಿನಂತೆಯೇ....) ಮಹಾರಾಜ, ತಥಾಗತರು ಅರಿವಿನಿಂದ ಅಳೆಯಬಹುದಾದ ಎಲ್ಲಾ ಬಗೆಯ ಪ್ರಮಾಣಗಳಿಂದ ಮುಕ್ತರಾಗಿದ್ದಾರೆ. ಅವರು ಆಳವಾದವರು, ಅಳತೆಗೆ ನಿಲುಕದವರು, ಸಮುದ್ರದಂತೆ ಅಳೆಯಲು ಕ್ಲಿಷ್ಟರಾಗಿರುವವರು. ಹೀಗಾಗಿ ತಥಾಗತರು ಮರಣದ ನಂತರ ಇರುತ್ತಾರೆ ಎಂಬುದು ಅನ್ವಯವಾಗುವುದಿಲ್ಲ. ಅದೇರೀತಿ ಮರಣದ ನಂತರ ಇರುವುದಿಲ್ಲ ಎಂಬುದು ಅನ್ವಯವಾಗುವುದಿಲ್ಲ.
ಆಶ್ಚರ್ಯಕರ ಭಂತೆ, ಅದ್ಭುತ ಭಂತೆ! ಅರ್ಥವಾಗಲಿ, ವರ್ಣನೆಯಾಗಲಿ, ವ್ಯಂಜನವಾಗಲಿ ಹೇಗೆ ಗುರುವು ಅದ್ಭುತಶಾಲಿಯೋ, ಹಾಗೆಯೇ ಶಿಷ್ಯೆಯೂ ಸಹಾ ಪ್ರತಿಭಾಶಾಲಿಯಾಗಿರುವಳು. ನಮ್ಮಿಬ್ಬರ ಬೋಧನೆಯಲ್ಲಿ ಏಕಸಾಮ್ಯತೆಯಿದೆ, ವಿರೋಧವಿಲ್ಲ. ಇದೇ ಅಗ್ರವಾದ ವಿಷಯವಾಗಿದೆ. ಒಂದು ಸಂದರ್ಭದಲ್ಲಿ ಭಂತೆ, ನಾನು ಭಿಕ್ಖುಣಿ ಖೇಮಾಳ ಬಳಿಗೆ ಹೋಗಿ ಇದೇ ವಿಷಯವಾಗಿ ಪ್ರಶ್ನಿಸಿದ್ದೆನು. ಆ ಮಹಾ ಆರ್ಯೆಯು ಭಗವಾನರ ರೀತಿಯಲ್ಲಿಯೇ ಅರ್ಥಗಭರ್ಿತವಾಗಿ ಅದೇರೀತಿಯ ವರ್ಣನೆಯಿಂದಾಗಿ, ವ್ಯಂಜನಗಳಿಂದಾಗಿ ವಿವರಿಸಿದಳು. ಇದು ನಿಜಕ್ಕೂ ಆಶ್ಚರ್ಯಕರವಾಗಿದೆ, ಅದ್ಭುತವಾಗಿದೆ. ಭಂತೆ, ಇಬ್ಬರಲ್ಲೂ ಏಕಸಾಮ್ಯತೆಯಿದೆ, ವಿರೋಧಾಭಾಸವಿಲ್ಲ. ಇದೇ ಅಗ್ರ ವಿಷಯವಾಗಿದೆ. ಪೂಜ್ಯ ಭಂತೆ, ನಾವು ಹೋಗಬೇಕಾಗಿದೆ, ಬಹಳ ಕಾರ್ಯಗಳಿವೆ. ಮಹಾರಾಜ, ಹಾಗಾದರೆ ನಿನಗೆ ಸರಿ ಎನಿಸಿದಂತೆ ಹೊರಡುವಂತಾಗು. ಆಗ ಪಸೇನದಿಯು ಆನಂದದಿಂದ, ಆಹ್ಲಾದತೆಯಿಂದ ಕೂಡಿದವನಾಗಿ, ಆಸನದಿಂದೆದ್ದು, ಭಗವಾನರಿಗೆ ಗೌರವಪೂರ್ವಕವಾಗಿ ವಂದಿಸಿ, ಬಲಗಡೆಯಿಂದ ಪ್ರದಕ್ಷಿಸಿ ಅಲ್ಲಿಂದ ಹೊರಟನು.


2. ಅನುರಾದ ಸುತ್ತ 
411. ಒಮ್ಮೆ ಭಗವಾನರು ವೈಶಾಲಿಯ ಮಹಾವನದಲ್ಲಿರುವ ಕೂಟಾಗಾರ ಸಾಲಯದಲ್ಲಿ (ದೊಡ್ಡ ಸಭಾಂಗಣದಲ್ಲಿ) ವಾಸಿಸುತ್ತಿದ್ದರು. ಅದೇ ಸಮಯದಲ್ಲಿ ಆಯುಷ್ಮಂತ ಅನುರಾದರವರು ಭಗವಾನರಿಂದ ದೂರವಲ್ಲದ ಅರಣ್ಯ ಕುಟೀರದಲ್ಲಿ ವಿಹರಿಸುತ್ತಿದ್ದನು. ಆಗ ಬಹುಸಂಖ್ಯಾತ ಪರಿವ್ರಾಜಕ ತೀರ್ಥಂಕರು ಪೂಜ್ಯ ಅನುರುದ್ದರ ಬಳಿಗೆ ಹೋಗಿ ಅವರಲ್ಲಿ ಕುಶಲ ಕ್ಷೇಮಗಳನ್ನು ವಿನಿಮಯ ಮಾಡಿಕೊಂಡರು. ನಂತರ ಒಂದೆಡೆ ಕುಳಿತರು. ಆಗ ಅವರು ಪೂಜ್ಯ ಅನುರುದ್ದರೊಡನೆ ಹೀಗೆ ಕೇಳಿದರು: ಆಯುಷ್ಮಂತ ಅನುರುದ್ದ, ತಥಾಗತರು ಉತ್ತಮ ಪುರುಷರಾಗಿದ್ದಾರೆ, ಪರಮಶ್ರೇಷ್ಠ ಪುರುಷರಾಗಿದ್ದಾರೆ, ಪರಮೋತ್ತರವಾದುದನ್ನು ಸಿದ್ಧಿಸಿಕೊಂಡಿದ್ದಾರೆ, ಅಂತಹ ತಥಾಗತರು ಈ ನಾಲ್ಕು ಸ್ಥಿತಿಗಳಲ್ಲಿ ಒಂದನ್ನು ಭವಿಷ್ಯದಲ್ಲಿ ಪಡೆಯಬಹುದೇ? ಅದೆಂದರೆ ತಥಾಗತರು ಮರಣದ ನಂತರ ಇರುವರು, ತಥಾಗತರು ಮರಣದ ನಂತರ ಇರುವುದಿಲ್ಲ, ತಥಾಗತರು ಮರಣದ ನಂತರ ಇರುವರು ಹಾಗು ಇಲ್ಲ ಮತ್ತು ತಥಾಗತರು ಮರಣದ ನಂತರ ಇರುವುದಿಲ್ಲ, ಇಲ್ಲದೆಯೂ ಇಲ್ಲ. ಯಾವಾಗ ಹೀಗೆ ಕೇಳಲಾಯಿತೋ, ಆಗ ಆಯುಷ್ಮಂತ ಅನುರುದ್ದರು ಆ ಪರಿಬ್ಬಾಜಕರಿಗೆ ಹೀಗೆ ಹೇಳಿದರು: ಆಯುಷ್ಮಂತರೇ, ತಥಾಗತರು ಉತ್ತಮ ಪುರುಷರಾಗಿದ್ದಾರೆ, ಪರಮಶ್ರೇಷ್ಠ ಪುರುಷರಾಗಿದ್ದಾರೆ, ಪರಮೋತ್ತರವಾದುದನ್ನು ಸಿದ್ಧಿಸಿಕೊಂಡಿದ್ದಾರೆ. ಅಂತಹ ತಥಾಗತರು ಈ ನಾಲ್ಕು ಸ್ಥಿತಿಗಳಿಗೆ ಅತೀತವಾದುದನ್ನು ಗಳಿಸುವರು. ಯಾವಾಗ ಹೇಗೆ ಆ ಪರಿಭಾಜಕರು ಕೇಳಿದರೋ ಅವರು ಅನುರುದ್ದರೊಂದಿಗೆಯೇ ಅವರ ಬಗ್ಗೆ ಹೀಗೆ ಹೇಳಿದರು: ಈ ಭಿಕ್ಷುವು ಹೊಸತಾಗಿ ಸಂಘಕ್ಕೆ ಸೇರಿದವನಾಗಿರಬೇಕು ಅಥವಾ ಭಿಕ್ಷುತನವೇ ಇನ್ನೂ ಹೊಂದಿಲ್ಲದಿರಬಹುದು ಅಥವಾ ಮುರ್ಖನಾಗಿರಬಹುದು ಅಥವಾ ಅಪಕ್ವ ಅನುಭವಿಯು ಆಗಿರಬಹುದು ಎಂದು ಹೀಗೆ ಆಯುಷ್ಮಂತರ ಬಗ್ಗೆ ಅಸಮಾಧಾನ ಹೊಂದಿ ಅಲ್ಲಿಂದ ಎದ್ದು ಹೊರಟರು.
ಅವರು ಹೊರಟ ಸ್ವಲ್ಪಕಾಲದಲ್ಲಿ ಆಯುಷ್ಮಂತ ಅನುರುದ್ದರಿಗೆ ಹೀಗೆ ಆಲೋಚನೆ ಉಂಟಾಯಿತು: ಒಂದುವೇಲೆ ಪುನಃ ಆ ಪರಿವ್ರಾಜಕರು ನನ್ನನ್ನು ಪ್ರಶ್ನಿಸಿದರೆ ನಾನು ಹೇಗೆ ತಥಾಗತರಂತೆಯೆ, ಸತ್ಯದ ರೀತಿಯಲ್ಲಿಯೇ ಉತ್ತರಿಸಬಹುದು. ಭಗವಾನರಿಗೆ ಅಪಚಾರವಾಗದಂತೆ, ಧಮ್ಮಕ್ಕೆ, ಪರಮಸತ್ಯಕ್ಕೆ ಅಪಚಾರವಾಗದಂತೆ ಹೇಗೆ ನಾನು ಉತ್ತರಿಸಬಹುದು? ಆಗ ನನಗೆ ಯಾರು ಸಹಾ ಟೀಕಿಸಲು ನೆಲೆಸಿಗಬಾರದು ಎಂದು ಯೋಚಿಸುತ್ತ, ಅಲ್ಲಿಂದ ಎದ್ದು ಭಗವಾನರು ಇರುವಲ್ಲಿಗೆ ಹೋಗಿ, ಭಗವಾನರಿಗೆ ಗೌರವದಿಂದ ವಂದಿಸಿ, ಒಂದೆಡೆ ಕುಳಿತನು. ನಂತರ ಭಗವಾನರಲ್ಲಿ ಹೀಗೆ ನಿವೇದಿಸಿಕೊಂಡನು: ಭಗವಾನ್, ನಾನು ತಾವು ವಾಸಿಸುತ್ತಿರುವ ಮಹಾವನಕ್ಕೆ ಅಷ್ಟೇನೂ ದೂರವಿಲ್ಲದ ಸ್ಥಳದಲ್ಲಿ ನೆಲೆಸಿರುವಾಗ ಪರಿವ್ರಾಜಕರ ಗುಂಪೊಂದು ಬಂದು ಹೀಗೆ ಪ್ರಶ್ನಿಸಿದರು: ಆಯುಷ್ಮಂತ ಅನುರುದ್ಧ, ತಥಾಗತರು ಉತ್ತಮ ಪುರುಷರಾಗಿದ್ದಾರೆ... ಆಗ ನಾನು ಹೀಗೆ ಉತ್ತರಿಸಿದೆನು: ಆಯುಷ್ಮಂತರೇ, ತಥಾಗತರು ಉತ್ತಮ ಪುರುಷರಾಗಿರುವರು... ಆಗ ಅವರು... ಹೀಗೆ ನುಡಿದು ಅಲ್ಲಿಂದ ಹೊರಟರು. ಆಗ ನಾನು ಹೀಗೆ ಯೋಚಿಸಿದೆನು: ಒಂದುವೇಳೆ ಪುನಃ ಆ ಪರಿವ್ರಾಜಕರು ಪ್ರಶ್ನಿಸಿದರೆ ಯಾವರೀತಿ ಉತ್ತರಿಸಬೇಕು...
ಅನುರುದ್ದ, ಇದನ್ನು ಹೇಗೆ ತಿಳಿಯುವೆ, ರೂಪವು ನಿತ್ಯವೋ ಅಥವಾ ಅನಿತ್ಯವೋ? ಅನಿತ್ಯ ಭಂತೆ.
ಅಂತಹ ಅನಿತ್ಯವಾದದ್ದು ದುಃಖವನ್ನು ನೀಡುತ್ತದೋ ಅಥವಾ ಸುಖವನ್ನು ನೀಡುತ್ತದೋ? ದುಃಖವನ್ನು ಭಂತೆ.
ಯಾವುದು ಅನಿತ್ಯವೋ, ದುಃಖವನ್ನು ನೀಡುವಂತಹುದೋ ಅಂತಹುದರ ಬಗ್ಗೆ ಹೀಗೆ ತಿಳಿಯುವುದು ಸಮಂಜಸವೋ, ಇದು ನನ್ನದು, ಇದು ನನ್ನ ಆತ್ಮ, ಇದೇ ನಾನು. ಇಲ್ಲ ಭಂತೆ, ಸಮಂಜಸವಲ್ಲ.
ವೇದನೆಯು ನಿತ್ಯವೋ ಅಥವಾ ಅನಿತ್ಯವೋ.... ಸಞ್ಞಾವು.... ಸಂಖಾರವು.... ವಿಞ್ಞಾನವು ನಿತ್ಯವೋ ಅಥವಾ ಅನಿತ್ಯವೋ? ಅನಿತ್ಯ ಭಂತೆ.
ಅಂತಹ ಅನಿತ್ಯವಾದದ್ದು ದುಃಖವನ್ನು ನೀಡುತ್ತದೋ ಅಥವಾ ಸುಖವನ್ನು ನೀಡುತ್ತದೋ? ದುಃಖವನ್ನು ಭಂತೆ.
ಯಾವುದು ಪರಿವರ್ತನಾ ನಿಯಮವನ್ನು ಹೊಂದಿದಂತಹ ಅನಿತ್ಯವೋ, ದುಃಖ ಪರಿಣಾಮ ಬೀರುವಂತಹುದೋ ಅಂತಹುದನ್ನು ಹೀಗೆ ಪರಿಗಣಿಸುವುದು ಸಮಂಜಸವೇ? ಇದು ನನ್ನದು, ಇದು ನನ್ನ ಆತ್ಮ, ಇದೇ ನಾನು ಎಂದು. ಇಲ್ಲ ಭಂತೆ.
ಇದನ್ನು ಹೇಗೆ ತಿಳಿಯುವೆ ಅನುರುದ್ಧ, ರೂಪವೇ (ದೇಹಾಕೃತಿಯೆ) ತಥಾಗತರೇ? ಇಲ್ಲ ಭಂತೆ. ಅಥವಾ ವೇದನೆಗಳನ್ನೇ ತಥಾಗತರೆಂದು ಪರಿಗಣಿಸುವೆಯಾ? ಇಲ್ಲ ಭಂತೆ. ಅಥವಾ ಗ್ರಹಿಕೆಗಳನ್ನೇ... ಸಂಖಾರಗಳನ್ನೇ... ವಿಞ್ಞಾನ (ಅರಿವನ್ನು) ತಥಾಗತರೆಂದು ಪರಿಗಣಿಸುವೆಯಾ? ಇಲ್ಲ ಭಂತೆ.
ಈಗ ಹೇಗೆ ಭಾವಿಸುವೆ ಅನುರುದ್ದ, ತಥಾಗತರನ್ನು ರೂಪ (ದೇಹಾಕೃತಿ) ಹೊಂದಿರುವ ಜೀವಿಯೆಂದು ಭಾವಿಸುವೆಯಾ?... ದೇಹಕ್ಕೆ ಹೊರತಾಗಿರುವ... ಎಂದು ಭಾವಿಸುವೆಯಾ? ತಥಾಗತರು ವೇದನೆ (ಭಾವವೇಶಗಳು) ಹೊಂದಿರುವ ಜೀವಿಯೆಂದು ತಿಳಿದಿರುವೆಯಾ... ವೇದನೆಗಳಿಗೆ ಹೊರತಾಗಿರುವ... ಎಂದು ಭಾವಿಸುವೆಯಾ? ಅದೇರೀತಿ ಗ್ರಹಿಕೆ... ಸಂಖಾರ... ವಿಞ್ಞಾನ (ಅರಿವು) ವನ್ನು ಹೊಂದಿರುವ ಜೀವಿಯೆಂದು ಭಾವಿಸುವೆಯಾ?... ಅಥವಾ ಅರಿವಿಗೆ ಹೊರತಾಗಿ ಏನು ಎಂದು ಭಾವಿಸುವೆಯಾ? ಇಲ್ಲ ಭಂತೆ.
ಅನುರುದ್ದ ಯಾವರೀತಿ ತಿಳಿಯುವೆ? ತಥಾಗತರನ್ನು ರೂಪವೆಂದು (ದೇಹಾಕೃತಿ)... ವೇದನಗಳೆಂದು... ಗ್ರಹಿಕೆಗಳೆಂದು... ಸಂಖಾರವೆಂದು... ವಿಞ್ಞಾನವೆಂದು ತಿಳಿಯುವೆಯಾ? ಇಲ್ಲ ಭಂತೆ.
ಹಾಗಾದರೆ ತಥಾಗತರೆಂದರೆ ರೂಪವಿಲ್ಲದ, ವೇದನೆಗಳಿಲ್ಲದ, ಗ್ರಹಿಕೆಗಳಿಲ್ಲದ, ಸಂಖಾರಗಳಿಲ್ಲದ, ವಿಞ್ಞಾನಗಳಿಲ್ಲದ (ಏನೂ ಒಂದು) ಎಂದು ತಿಳಿಯುವೆಯಾ? ಇಲ್ಲ ಭಂತೆ.
ಹಾಗಾದರೆ ಅನುರುದ್ದ, ತಥಾಗತರು ಸತ್ಯವೆಂದು ಅಥವಾ ವಾಸ್ತವವೆಂದು ಈ ವರ್ತಮಾನ ಜೀವಿತದಲ್ಲೇ ಸ್ಪಷ್ಟ ವ್ಯಾಖ್ಯಾನ ನೀಡಲು ಸಾಧ್ಯವಿಲ್ಲದೆ ಇರುವಾಗ, ಈ ಹಿಂದಿನ ನಿರ್ಣಯದಂತೆ ನರ್ಧರಿಸುವುದು ಸಮಂಜಸವೇ? ಹೇಗೆಂದರೆ: ಆಯುಷ್ಮಂತರೇ, ತಥಾಗತರು ಉತ್ತಮ ಪುರುಷರು... ಪರಮಪುರುಷರು... ಪರಮೋತ್ತರವಾದುದನ್ನು ಸಿದ್ಧಿಸಿದವರು, ಅರಹಂತರು ಮರಣದ ನಂತರ ಈ ನಾಲ್ಕು ಸ್ಥಿತಿಗಳಲ್ಲಿ ಒಂದನ್ನು ಪಡೆಯುವರು. ಅವೆಂದರೆ: ತಥಾಗತರು ಇರುತ್ತಾರೆ, ತಥಾಗತರು ಇರುವುದಿಲ್ಲ, ತಥಾಗತರು ಇರುತ್ತಾರೆ ಹಾಗು ಇರುವುದಿಲ್ಲ. ತಥಾಗತರು ಇರುವುದಿಲ್ಲ, ತಥಾಗತರು ಇರುತ್ತಾರೆ ಹಾಗು ಇರುವುದಿಲ್ಲ. ತಥಾಗತರು ಇರುವುದಿಲ್ಲ, ಇಲ್ಲದೆಯೂ ಇರುವುದಿಲ್ಲ.
ಇಲ್ಲ ಭಂತೆ. ಸಾಧು ಸಾಧು ಅನುರಾಧ! ಈ ಹಿಂದೆಯು ಹಾಗು ಈಗಲೂ ನಾನು ಘೋಷಿಸುವುದು ಏನೆಂದರೆ ಕೇವಲ ದುಃಖ ಹಾಗು ದುಃಖದ ನಿರೋಧ.


3. ಪಠಮ ಸಾರಿಪುತ್ರ ಕೋಟ್ಠಕ ಸುತ್ತಂ

412. ಒಮ್ಮೆ ಪೂಜ್ಯ ಸಾರಿಪುತ್ತರು ಮತ್ತು ಪೂಜ್ಯ ಮಹಾಕೊಟ್ಠಿಕರು ಇಸಿಪಟ್ಟಣದ ಸಮೀಪದ ವಾರಾಣಾಸಿಯಲ್ಲಿ ವಿಹರಿಸುತ್ತಿದ್ದರು. ಆಗ ಸಂಜೆಯಲ್ಲಿ ಪೂಜ್ಯ ಮಹಾಕೊಟ್ಠಿಕರು ಏಕಾಂತತೆಯಿಂದ ಹೊರಬಂದು, ಸಾರಿಪುತ್ತರ ಸಮೀಪ ಬಂದರು. ಕುಶಲ ಕ್ಷೇಮಗಳನ್ನು ವಿನಿಮಯ ಮಾಡಿಕೊಂಡರು. ನಂತರ ಮಹಾಕೋಟ್ಠಿಕರು ಒಂದೆಡೆ ಕುಳಿತು ಹೀಗೆ ಹೇಳಿದರು:
ಇದು ಹೇಗೆ ಆಯುಷ್ಮಂತ ಸಾರಿಪುತ್ತ, ತಥಾಗತರು ಮರಣದ ನಂತರ ಇರುವರೇ? ಆಯುಷ್ಮಂತನೆ, ತಥಾಗತರು ಮರಣದ ನಂತರ ಇರುವರೆಂದು ಘೋಷಿಸಿಲ್ಲ. (ಈ ಹಿಂದಿನ ಸುತ್ತಗಳಂತೆ ಸಂಭಾಷಣೆ)... ಮಿತ್ರನೇ, ತಥಾಗತರು ಮರಣದ ನಂತರ ಇರುವುದಿಲ್ಲ, ಇಲ್ಲದೆಯೂ ಹೋಗುವುದಿಲ್ಲ... ಎಂದು ಘೋಷಿಸಿಲ್ಲ.
ಹೇಗೆ ಆಯುಷ್ಮಂತನೇ, ಯಾವಾಗ ನಾನು ತಥಾಗತರು ಮರಣದ ನಂತರ... ಘೋಷಿಸಿಲ್ಲ ಎಂದು ಹೇಳುವಿರಿ.
ಆಯುಷ್ಮಂತನೇ (ಈಗ ವಿವರವಾಗಿ ಚಚರ್ಿಸೋಣ) ತಥಾಗತರು ಮರಣದ ನಂತರ ಇರುತ್ತಾರೆ ಎಂದರೆ ಅದು ದೇಹಾಕೃತಿಗೆ (ರೂಪಕ್ಕೆ) ಒಳಗೊಳ್ಳುವಿಕೆಯಾಗುವುದು. ಅದೇರೀತಿ ತಥಾಗತರು ಮರಣದ ನಂತರ ಇಲ್ಲ ಎಂದರೆ ಇದು ಸಹಾ ರೂಪಕ್ಕೆ ಒಳಗೊಳ್ಳವಿಕೆಯಾಗುವುದು. ಹಾಗೆಯೇ ತಥಾಗತರು... ರೂಪಕ್ಕೆ ಒಳಗೊಳ್ಳುವಿಕೆಯಾಗುವುದು.
ಹಾಗೆಯೇ ತಥಾಗತರು ಮರಣದ ನಂತರ ಇರುವರು ಎಂಬುದು ವೇದನೆಗಳಿಗೆ ಒಳಗೊಳ್ಳುವಿಕೆಯಾಗುವುದು... ಸಞ್ಞಾ (ಗ್ರಹಿಕೆಗಳಿಗೆ) ಒಳಗೊಳ್ಳುವಿಕೆಯಾಗುವುದು... ಸಂಖಾರಗಳಿಗೆ ಒಳಗೊಳ್ಳುವಿಕೆಯಾಗುವುದು... ವಿಞ್ಞಾನ (ಅರಿವಿನ)ಕ್ಕೆ ಒಳಗಾಗುವಿಕೆ ಆಗುವುದು. ಹಾಗೆಯೇ ತಥಾಗತರು ಮರಣದ ನಂತರ ಇರುವುದಿಲ್ಲ. ಇದು ವಿಞ್ಞಾನಕ್ಕೆ ಒಳಗೊಳ್ಳುವಿಕೆಯಾಗುವುದು. ತಥಾಗತರು ಮರಣದ ನಂತರ ಇರುತ್ತಾರೆ ಹಾಗು ಇಲ್ಲ, ಇದು ವಿಞ್ಞಾನದ ಒಳಗೊಳ್ಳುವಿಕೆಯಾಗುವುದು; ತಥಾಗತರು ಇರುವುದಿಲ್ಲ ಹಾಗೇ ಇಲ್ಲದೆಯೂ ಇಲ್ಲ. ಇದು ವಿಞ್ಞಾನದ ಒಳಗೊಳ್ಳುವಿಕೆಯಾಗುವುದು. ಆದ್ದರಿಂದಾಗಿ ಆಯುಷ್ಮಂತನೇ, ಇದೇ ಕಾರಣಕ್ಕಾಗಿ ಹಾಗು ಇದೇ ಉದ್ದೇಶಕ್ಕಾಗಿ ತಥಾಗತರಿಂದ ಇದು ಹೀಗೆ ಘೋಷಿತವಾಗಿಲ್ಲ.


4. ದುತಿಯ ಸಾರಿಪುತ್ತ ಕೋಟ್ಠಕ ಸುತ್ತಂ

413. (ಪೀಠಿಕೆಯು ಈ ಹಿಂದಿನ ಸುತ್ತದಂತೆಯೇ). ಆಯುಷ್ಮಂತರೇ, ಯಾವ ಕಾರಣದಿಂದಾಗಿ, ಯಾವ ಉದ್ದೇಶದಿಂದಾಗಿ, ಭಗವಾನರಿಂದ ಇವು ಘೋಷಿಸಲ್ಪಟ್ಟಿಲ್ಲ? ಆಯುಷ್ಮಂತನೇ, ಯಾರು ರೂಪವನ್ನು (ದೇಹಾಕೃತಿಯನ್ನು) ಅದು ಹೇಗಿದೆಯೋ ಹಾಗೆ ಅರಿತಿಲ್ಲವೋ, ಅಂತಹವನು ಅದರ ಮೂಲವನ್ನು ಅರಿಯಲಾರನು. ಅಂತಹವನಿಗೆ ರೂಪದ ನಿರೋಧವು ತಿಳಿಯಲಾರದು. ರೂಪದ ನಿರೋಧಗಾಮಿ ಮಾರ್ಗವನ್ನು ಅರಿಯಲಾರನು. ಅಂತಹವನು ಹೀಗೆ ಯೋಚಿಸುತ್ತಾನೆ: ತಥಾಗತರು ಮರಣದ ಇರುತ್ತಾರೆ ಅಥವಾ ತಥಾಗತರು ಮರಣದ ನಂತರ ಇರುವುದಿಲ್ಲ ಅಥವಾ ಮರಣದ ನಂತರ ಇರುತ್ತಾರೆ ಹಾಗು ಇಲ್ಲ. ಅಥವಾ ತಥಾಗತರು ಮರಣದ ನಂತರ ಇರುವುದಿಲ್ಲ ಹಾಗೆ ಇಲ್ಲದೆಯೂ ಇಲ್ಲ. ಹಾಗೆಯೇ ಯಾರು ವೇದನೆಗಳನ್ನು ಅವು ಹೇಗಿವೆಯೋ ಹಾಗೆ ಅರಿಯಲಾರನೋ... ಗ್ರಹಿಕೆಗಳನ್ನು ಅವು ಇರುವಂತೆ ಅರಿಯಲಾರನೋ... ಸಂಖಾರಗಳನ್ನು ಅವು ಇರುವಂತೆಯೇ ಅರಿಯಲಾರನೋ... ವಿಞ್ಞಾನಗಳನ್ನು ಅವು ಇರುವಂತೆಯೇ ಅರಿಯಲಾರನೋ. ಅಂತಹವನಿಗೆ ಇವುಗಳ (ವೇದನೆ/ಗ್ರಹಿಕೆ/ಸಂಖಾರ/ವಿಞ್ಞಾನ) ಉದಯಿಸುವಿಕೆ, ಮೂಲ ಮತ್ತು ಕಾರಣಗಳು ತಿಳಿಯಲಾರವು. ಹಾಗೆಯೇ ಅವುಗಳ ನಿರೋಧವು ತಿಳಿಯಲಾರರು. ಹಾಗೆಯೇ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗವನ್ನು ಅರಿಯಲಾರರು. ಅಂತಹವರು ಮಾತ್ರತಥಾಗತರು ಮರಣದ ನಂತರ ಇರುತ್ತಾರೆ/ಇರುವುದಿಲ್ಲ/ಇರುತ್ತಾರೆ ಹಾಗು ಇಲ್ಲ/ಇರುವುದಿಲ್ಲ ಇಲ್ಲದೆಯೂ ಇಲ್ಲ ಎಂದೆಲ್ಲಾ ಯೋಚಿಸುತ್ತಾರೆ.
ಆದರೆ ಆಯುಷ್ಮಂತನೇ, ಯಾರು ರೂಪವನ್ನು ಅದು ಹೇಗಿದೆಯೋ ಅರಿಯುವಂತಹವನು... ವೇದನೆಗಳನ್ನು... ಗ್ರಹಿಕೆಗಳನ್ನು... ಸಂಖಾರಗಳನ್ನು... ವಿಞ್ಞಾನಗಳನ್ನು ಅವು ಹೇಗಿವೆಯೋ ಹಾಗಿ ಅರಿಯಬಲ್ಲವನಿಗೆ ಅವುಗಳ ಉದಯ ಕಾಣಬರುವುದು (ತಿಳಿಯುವುದು). ಹಾಗೆಯೇ ಅವುಗಳ ನಿರೋಧವು ತಿಳಿಯುವುದು. ಹಾಗೆಯೇ ನಿರೋಧಗಾಮಿ ಮಾರ್ಗವು ಗೊತ್ತಾಗುವುದು. ಅಂತಹವನು ಹೀಗೆ ಯೋಚಿಸಲಾರ. ಹೇಗೆಂದರೆ: ತಥಾಗತರು ಮರಣದ ನಂತರ ಇರುತ್ತಾರೆ/ಇಲ್ಲ/ಇರುತ್ತಾರೆ ಮತ್ತು ಇಲ್ಲ/ಇರುವುದಿಲ್ಲ ಹಾಗು ಇಲ್ಲದೆಯೂ ಇಲ್ಲ. ಇದೇ ಕಾರಣಕ್ಕಾಗಿ ಹಾಗು ಇದೇ ಉದ್ದೇಶಕ್ಕಾಗಿ ತಥಾಗತರು ಇವನ್ನು ಹೀಗೆ ಘೋಷಿಸಿಲ್ಲ.


5. ತತೀಯ ಸಾರಿಪುತ್ತ ಕೋಟ್ಠಕ ಸುತ್ತಂ

414. ಪೀಠಿಕೆ ಹಿಂದಿನಂತೆಯೇ... ಆಯುಷ್ಮಂತನೇ, ಯಾವ ಕಾರಣಕ್ಕಾಗಿ ಮತ್ತು ಯಾವ ಉದ್ದೇಶಕ್ಕಾಗಿ ತಥಾಗತರಿಂದ ಇದು ಘೋಷಿತವಾಗಿಲ್ಲ. ಆಯುಷ್ಮಂತನೇ, ಯಾರಲ್ಲಿ ರೂಪದ ಬಗ್ಗೆ ವಿರಾಗವಿಲ್ಲವೋ, ರೂಪದ ಬಗ್ಗೆ ಆಸೆರಹಿತತೆ ಉಂಟಾಗಿಲ್ಲವೋ, ರೂಪದ ಬಗ್ಗೆ ಪ್ರೇಮರಹಿತತೆ ಉಂಟಾಗಿಲ್ಲವೋ, ರೂಪದ ಬಗ್ಗೆ ಪಿಪಾಸತೆ ನಾಶವಾಗಿಲ್ಲವೋ, ರೂಪದ ಬಗ್ಗೆ ಭಾವೋದ್ರೇಕಗಳು ರಹಿತವಾಗಿಲ್ಲವೋ, ರೂಪದ ಬಗ್ಗೆ ತಣ್ಹಾವು ನಾಶವಾಗಿಲ್ಲವೋ ಅಂತಹವರು ಮಾತ್ರ ತಥಾಗತರು ಮರಣದ ನಂತರ ಇರುತ್ತಾರೆ / ಇರುವುದಿಲ್ಲ / ಇರುತ್ತಾರೆ ಮತ್ತು ಇಲ್ಲ / ಇರುವುದಿಲ್ಲ ಮತ್ತು ಇಲ್ಲದೆಯೂ ಇಲ್ಲ ಎಂದೆಲ್ಲಾ ಯೋಚಿಸುತ್ತಾರೆ. ಹಾಗೆಯೇ ಆಯುಷ್ಮಂತನೇ, ಯಾರಲ್ಲಿ ವೇದನೆಗಳ ಬಗ್ಗೆ ವಿರಾಗವಿಲ್ಲವೋ... ಯಾರಲ್ಲಿ ಗ್ರಹಿಕೆಗಳ ಬಗ್ಗೆ ವಿರಾಗವಿಲ್ಲವೋ... ಯಾರಲ್ಲಿ ಸಂಖಾರಗಳ ಬಗ್ಗೆ ವಿರಾಗವಿಲ್ಲವೋ... ಯಾರಲ್ಲಿ ವಿಞ್ಞಾನದ (ಅರಿವಿನ) ಬಗ್ಗೆ ವಿರಾಗವಿಲ್ಲವೋ, ವಿಞ್ಞಾನದ ಬಗ್ಗೆ ಆಸೆರಹಿತತೆಯಿಲ್ಲವೋ, ವಿಞ್ಞಾನದ ಬಗ್ಗೆ ಪ್ರೇಮರಹಿತತೆಯಿಲ್ಲವೋ ವಿಞ್ಞಾನದ ಬಗ್ಗೆ ಪಿಪಾಸತೆ ನಾಶವಾಗಿಲ್ಲವೋ, ವಿಞ್ಞಾನದ ಬಗ್ಗೆ ಭಾವೋದ್ರೇಕಗಳು ಬರಿದಾಗಿಲ್ಲವೋ ವಿಞ್ಞಾನದ ಬಗ್ಗೆ ತಣ್ಹಾವು ನಾಶವಾಗಿಲ್ಲವೋ ಅಂತಹವರು ಮಾತ್ರ ತಥಾಗತರು ಮರಣದ ನಂತರ ಇರುತ್ತಾರೆ / ಇರುವುದಿಲ್ಲ / ಇರುತ್ತಾರೆ ಮತ್ತು ಇಲ್ಲ / ಇರುವುದಿಲ್ಲ ಮತ್ತು ಇಲ್ಲದೆಯೂ ಇಲ್ಲ ಎಂದೆಲ್ಲಾ ಯೋಚಿಸುತ್ತಾರೆ.
ಆದರೆ ಮಿತ್ರನೇ, ಯಾರು ರೂಪದಲ್ಲಿ ವಿರಾಗಭಾವನೆ ಹೊಂದಿರುವವನೋ... ವೇದನೆಗಳಲ್ಲಿ ವಿರಾಗಭಾವನೆ ಹೊಂದಿರುವವನೋ... ಸಞ್ಞಾ(ಸನ್ಯ/ಗ್ರಹಿಕೆ) ಗಳಲ್ಲಿ ವಿರಾಗಿಯೋ... ಸಂಖಾರಗಳಲ್ಲಿ ವಿರಾಗಭಾವನೆ ಹೊಂದಿರುವವನೋ... ವಿಞ್ಞಾನದಲ್ಲಿ ರಾಗರಹಿತನೋ, ಆಸೆರಹಿತನೋ, ಪ್ರೇಮರಹಿತನೋ, ಪಿಪಾಸೆರಹಿತನೋ, ಭಾವಾವೇಶರಹಿತನೋ, ತೃಷ್ಣಾರಹಿತನೋ, ಅಂತಹವನು ತಥಾಗರು ಮರಣದ ನಂತರ ಇರುತ್ತಾರೆ ಎಂದು ಯೋಚಿಸುವುದಿಲ್ಲ. ತಥಾಗತರು ಮರಣದ ನಂತರ ಇರುವುದಿಲ್ಲವೆಂದು ಯೋಚಿಸುವುದಿಲ್ಲ. ತಥಾಗತರು ಇರುತ್ತಾರೆ ಮತ್ತು ಇಲ್ಲ ಎಂದೂ ಯೋಚಿಸಲಾರ, ತಥಾಗತರು ಇರುವುದಿಲ್ಲ ಮತ್ತು ಇಲ್ಲದೆಯೂ ಇಲ್ಲವೆಂದು ಯೋಚಿಸಲಾರನು. ಇದೇ ಕಾರಣಕ್ಕಾಗಿ ಮಿತ್ರನೇ, ತಥಾಗತರು ಇವನ್ನು ಘೋಷಿಸಿಲ್ಲ.


6. ಚತುತ್ಥ ಸಾರಿಪುತ್ತ ಕೋಟ್ಠಿಕ ಸುತ್ತ

415. ಒಮ್ಮೆ ಪೂಜ್ಯ ಸಾರಿಪುತ್ತರು ಹಾಗು ಪೂಜ್ಯ ಕೋಟ್ಠಕರು ವಾರಾಣಾಸಿಯ ಇಸಿಪತ್ತನದಲ್ಲಿ ವಾಸಿಸುತ್ತಿರುವಾಗ, ಒಂದು ಸಂಜೆ ಸಾರಿಪುತ್ತರು ಏಕಾಂತತೆಯಿಂದ ಹೊರಬಂದು ಪುಣಕೊಟನರ ಬಳಿಗೆ ಬಂದರು. ಇಬ್ಬರೂ ಪರಸ್ಪರ ಕುಶಲ ಕ್ಷೇಮಗಳನ್ನು ಹಂಚಿಕೊಂಡರು. ನಂತರ (ಕಥೆಯ ಪೀಠಿಕೆ ಮತ್ತು ವಿವರ ಹಿಂದಿನ ಘಟನೆಗಳಂತೆಯೇ...)
ಇದೇ ಕಾರಣಕ್ಕಾಗಿ ಆಯುಷ್ಮಂತನೇ, ತಥಾಗತರು ಇವನ್ನು ಘೋಷಿಸಿಲ್ಲ.
ಮಿತ್ರನೇ, ಯಾರು ರೂಪಗಳಲ್ಲಿ ಆನಂದಿಸುತ್ತಾನೋ, ಯಾರು ರೂಪಗಳಲ್ಲಿ ಆನಂದ ತೆಗೆದುಕೊಳ್ಳುತ್ತಾನೋ, ರೂಪಗಳಲ್ಲಿ ಸುಖಿಸುತ್ತಾನೋ ಹಾಗು ಯಾರಿಗೆ ರೂಪ ನಿರೋಧವೋ ತಿಳಿಯದು. ಅಂತಹವರು ಮಾತ್ರ. ಹೀಗೆ ಯೋಚಿಸುತ್ತಾರೆ: ಹೇಗೆಂದರೆ ತಥಾಗತರು ಮರಣದ ನಂತರ ಇರುತ್ತಾರೆ/ಇರುವುದಿಲ್ಲ/ಇರುತ್ತಾರೆ ಮತ್ತು ಇಲ್ಲ/ಇರುವುದಿಲ್ಲ ಮತ್ತು ಇಲ್ಲದೆಯೂ ಇಲ್ಲ. ಆದರೆ ಮಿತ್ರನೇ, ಯಾರು ರೂಪಗಳಲ್ಲಿ ಆನಂದಿಸುವುದಿಲ್ಲವೋ, ಹಾಗೆಯೇ. ವೇದನೆಗಳಲ್ಲಿ ಆನಂದಿಸುವುದಿಲ್ಲವೋ... ಗ್ರಹಿಕೆಗಳಲ್ಲಿ ಆನಂದಿಸುವುದಿಲ್ಲವೋ... ಸಂಖಾರಗಳಲ್ಲಿ ಆನಂದಿಸುವುದಿಲ್ಲವೋ... ವಿಞ್ಞಾನಗಳಲ್ಲಿ ಆನಂದಿಸುವುದಿಲ್ಲವೋ... ಅಂತಹವರು ವಿಞ್ಞಾನದಲ್ಲಿ ಆನಂದ ತೆಗೆದುಕೊಳ್ಳುವುದಿಲ್ಲ, ವಿಞ್ಞಾನದಲ್ಲಿ ಸುಖಿಸುವುದಿಲ್ಲ. ಅಂತಹವರು ವಿಞ್ಞಾನದ ನಿರೋಧವನ್ನು ಅದು ಹೇಗಿದೆಯೋ ಹಾಗೆಯೇ ಅರಿಯುತ್ತಾರೆ. ಅಂತಹವರು ತಥಾಗತರು ಮರಣದ ನಂತರ ಇರುತ್ತಾರೆ/ಇಲ್ಲ/ಇರುತ್ತಾರೆ ಮತ್ತು ಇಲ್ಲ/ಇರುವುದಿಲ್ಲ ಮತ್ತು ಇಲ್ಲದೆಯೂ ಇಲ್ಲ ಎಂದು ಯೋಚಿಸಲಾರರು. ಇದೇ ಕಾರಣಕ್ಕಾಗಿ ಮಿತ್ರನೇ, ತಥಾಗತರು ಮರಣದ ನಂತರದ ಸ್ಥಿತಿಗಳನ್ನು ಘೋಷಿಸಿಲ್ಲ.
ಆದರೆ ಆಯುಷ್ಮಂತನೇ, ಭಗವಾನರು ಏತಕ್ಕಾಗಿ ಘೋಷಿಸಿಲ್ಲ ಎಂಬುದಕ್ಕೆ ಪರ್ಯಾಯ ವಿಧದ ವಿವರಣೆಯಿದೆಯೇ? ಇದೆ ಆಯುಷ್ಮಂತನೇ, ಯಾರು ಭವದಲ್ಲಿ (ಅಸ್ತಿತ್ವದಲ್ಲಿ) ಆನಂದಿಸುವನೋ, ಭವದಲ್ಲಿ ಆನಂದ ತೆಗೆದುಕೊಳ್ಳುತ್ತಾನೋ, ಭವದಲ್ಲಿ ಸುಖಿಸುತ್ತಾನೋ ಮತ್ತು ಯಾರು ಭವದ ನಿರೋಧ ನೋಡಿಲ್ಲವೋ ಅಥವಾ ತಿಳಿದಿಲ್ಲವೋ ಅಂತಹವನು ಹೀಗೆ ಯೋಚಿಸುತ್ತಾನೆ: ತಥಾಗತರು ಮರಣದ ನಂತರ ಇರುತ್ತಾರೆ/ಇಲ್ಲ/ಇರುತ್ತಾರೆ ಮತ್ತು ಇಲ್ಲ/ಇರುವುದಿಲ್ಲ ಮತ್ತು ಇಲ್ಲದೆಯೂ ಇಲ್ಲ. ಆದರೆ ಮಿತ್ರನೇ, ಯಾರು ಭವದಲ್ಲಿ ಸಂತಸಪಡುವುದಿಲ್ಲವೋ ಮತ್ತು ಯಾರು ಭವದ ನಿರೋಧ ಅದು ಹೇಗಿದೆಯೋ ಹಾಗೆಯೇ ಅರಿತಿರುವವನೋ ಅಂತಹವನು ಹೀಗೆ ಯೋಚಿಸುವುದಿಲ್ಲ. ತಥಾಗತರು ಮರಣದ ನಂತರ ಇರುತ್ತಾರೆ/ಇಲ್ಲ/ಇರುತ್ತಾರೆ ಮತ್ತು ಇಲ್ಲ/ಇರುವುದಿಲ್ಲ ಮತ್ತು ಇಲ್ಲದೆಯೂ ಇಲ್ಲ. ಇದೇ ಕಾರಣಕ್ಕಾಗಿ ಆಯುಷ್ಮಂತನೇ, ಭಗವಾನರು ಇದನ್ನು ಹೀಗೆ ಘೋಷಿಸಿಲ್ಲ.
ಆದರೆ ಆಯುಷ್ಮಂತನೇ, ಏತಕ್ಕಾಗಿ ಭಗವಾನರು ಇದನ್ನು ಹೀಗೆ ಘೋಷಿಸಿಲ್ಲ ಎನ್ನುವುದಕ್ಕಾಗಿ ವಿವರಿಸಲು ಪರ್ಯಾಯ ವಿಧಾನವಿದೆಯೇ? ಇದೆ ಆಯುಷ್ಮಂತನೇ, ಯಾರು ಅಂಟುವಿಕೆಯಲ್ಲಿ ಆನಂದಿಸುತ್ತಾನೋ, ಅಂಟುವಿಕೆಯಲ್ಲಿ ಆನಂದ ತೆಗೆದುಕೊಳ್ಳುತ್ತಾನೋ, ಅಂಟುವಿಕೆಯಲ್ಲಿಯೇ ಸಂತಸಪಡುತ್ತಾನೋ ಮತ್ತು ಯಾರಿಗೆ ಅಂಟುವಿಕೆಯ ನಿರೋಧ ತಿಳಿದಿಲ್ಲವೋ ಹಾಗು ಕಂಡಿಲ್ಲವೋ ಅಂತಹವರು ಮಾತ್ರ ತಥಾಗತರು ಮರಣದ ನಂತರ ಇರುತ್ತಾರೆ/ಇಲ್ಲ/ಇರುತ್ತಾರೆ ಮತ್ತು ಇಲ್ಲ/ಇರುವುದಿಲ್ಲ ಮತ್ತು ಇಲ್ಲದೆಯೂ ಇಲ್ಲ ಎಂದು ಯೋಚಿಸುತ್ತಾರೆ. ಆದರೆ ಆಯುಷ್ಮಂತನೇ, ಯಾರು ಅಂಟುವಿಕೆಯಲ್ಲಿ ಆನಂದಿಸುವುದಿಲ್ಲವೋ, ಅಂಟುವಿಕೆಯಲ್ಲಿ ಆನಂದ ತೆಗೆದುಕೊಳ್ಳುವುದಿಲ್ಲವೋ, ಅಂಟುವಿಕೆಯಲ್ಲಿ ಸಂತಸ ತಾಳುವುದಿಲ್ಲವೋ ಹಾಗು ಯಾರು ಉಪಾದಾನದ (ಅಂಟುವಿಕೆಯ) ನಿರೋಧ ಕಂಡಿರುವರೋ ಹಾಗು ತಿಳಿದಿರುವರೋ ಅಂತಹವರು ಮಾತ್ರ ತಥಾಗತರು ಮರಣದ ನಂತರ ಇರುತ್ತಾರೆ/ಇಲ್ಲ/ಇರುತ್ತಾರೆ ಮತ್ತು ಇಲ್ಲ/ಇರುವುದಿಲ್ಲ ಮತ್ತು ಇಲ್ಲದೆಯೂ ಇಲ್ಲ ಎಂದು ಹೀಗೆ ಯೋಚಿಸಲಾರರು. ಇದೇ ಕಾರಣಕ್ಕಾಗಿ ಆಯುಷ್ಮಂತನೇ ಭಗವಾನರು ಇದನ್ನು ಘೋಷಿಸಿಲ್ಲ.
ಆದರೆ ಮಿತ್ರನೇ, ಏತಕ್ಕಾಗಿ ಭಗವಾನರು ಹೀಗೆ ಇದನ್ನು ಘೋಷಿಸಿಲ್ಲ ಎನ್ನುವುದಕ್ಕಾಗಿ ವಿವರಿಸಲು ಪರ್ಯಾಯ ವಿಧಾನವಿದೆಯೇ? ಇದೆ ಆಯುಷ್ಮಂತನೇ, ಯಾರು ತೃಷ್ಣೆಯಲ್ಲಿ ಆನಂದಿಸುವುದಿಲ್ಲವೋ, ಯಾರು ತೃಷ್ಣೆಯಲ್ಲಿ ಆನಂದ ತೆಗೆದುಕೊಳ್ಳುವುದಿಲ್ಲವೋ, ತೃಷ್ಣೆಯಲ್ಲಿ ಸಂತಸ ತಾಳುವುದಿಲ್ಲವೋ ಮತ್ತು ಯಾರಿಗೆ ತೃಷ್ಣಾ ನಿರೋಧ ತಿಳಿದಿಲ್ಲವೋ ಹಾಗು ಕಂಡಿಲ್ಲವೋ ಅಂತಹವರು ಮಾತ್ರ ತಥಾಗತರು ಮರಣದ ನಂತರ ಇರುತ್ತಾರೆ/ಇಲ್ಲ/ಇರುತ್ತಾರೆ ಮತ್ತು ಇಲ್ಲ/ಇರುವುದಿಲ್ಲ ಮತ್ತು ಇಲ್ಲದೆಯೂ ಇಲ್ಲ ಎಂದು ಯೋಚಿಸುತ್ತಾರೆ. ಆದರೆ ಮಿತ್ರನೇ, ಯಾರು ತೃಷ್ಣೆಯಲ್ಲಿ ಆನಂದ ತೆಗೆದುಕೊಳ್ಳುವುದಿಲ್ಲವೋ, ತೃಷ್ಣೆಯಲ್ಲಿ ಸಂತಸ ತಾಳುವುದಿಲ್ಲವೋ ಮತ್ತು ಯಾರಿಗೆ ತೃಷ್ಣೆ ನಿರೋಧ ತಿಳಿದಿದೆಯೋ ಆ ಸ್ಥಿತಿಯನ್ನು ಕಂಡಿರುವರೋ ಅವರು ಮಾತ್ರ ಹೀಗೆ ಯೋಚಿಸಲಾರರು. ಹೇಗೆಂದರೆ: ತಥಾಗತರು ಮರಣದ ನಂತರ ಇರುತ್ತಾರೆ/ಇಲ್ಲ/ಇರುತ್ತಾರೆ ಮತ್ತು ಇಲ್ಲ/ಇರುವುದಿಲ್ಲ ಮತ್ತು ಇಲ್ಲದೆಯೂ ಇಲ್ಲ. ಇದೇ ಕಾರಣಕ್ಕಾಗಿ ಆಯುಷ್ಮಂತರೇ, ತಥಾಗತರ ಇವನ್ನು ಹೀಗೆ ಘೋಷಿಸಿಲ್ಲ.
ಆದರೆ ಮಿತ್ರನೇ, ಭಗವಾನರು ಏತಕ್ಕಾಗಿ ಘೋಷಿಸಿಲ್ಲ ಎಂಬುದನ್ನು ವಿವರಿಸಲು ಪರ್ಯಾಯ ವಿಧಾನವಿದೆಯೇ? ಇಲ್ಲ, ಈಗ ಆಯುಷ್ಮಂತ ಸಾರಿಪುತ್ತರೇ, ಇದಕ್ಕಿಂತಲೂ ಹೆಚ್ಚಿನದಾದ ವಿವರಣೆಯನ್ನು ಏತಕ್ಕಾಗಿ ಇಚ್ಛಿಸುವಿರಿ? ಆಯುಷ್ಮಂತ ಸಾರಿಪುತ್ತರೇ, ಯಾವಾಗ ಭಿಕ್ಷುವು ತಣ್ಹಾ ಕ್ಷಯದಿಂದ ವಿಮುಕ್ತನಾಗುವನೋ ಅಂತಹವನಿಗೆ ವಿವರಿಸಲು ಸುತ್ತಗಳಿರುವುದಿಲ್ಲ (ಪ್ರಮೇಯವಿರುವುದಿಲ್ಲ.)


7. ಮೊಗ್ಗಲ್ಲಾನ ಸುತ್ತ

416. ನಂತರ ಪರಿವ್ರಾಜಕ ವಚ್ಚಗೊತ್ತನು (ಗೊತ್ತ) ಪೂಜ್ಯ ಮೊಗ್ಗಲ್ಲಾನರ ಬಳಿಗೆ ಬಂದನು ಹಾಗು ಕುಶಲ ಕ್ಷೇಮಗಳ ವಿನಿಯಮ ಮಾಡಿಕೊಂಡನು. ನಂತರ ಒಂದಡೆ ಕುಳಿತು ಹೀಗೆ ಮಹಾಮೊಗ್ಗಲಾನರ ಬಳಿಯಲ್ಲಿ ಪ್ರಶ್ನಿಸಿದನು:
ಮಹಾ ಮೊಗ್ಗಲ್ಲಾನರೇ, ಇದು ಹೇಗೆ ಈ ಲೋಕವೂ ಶಾಶ್ವತವೇ? ವಚ್ಚ, ಭಗವಾನರು ಈ ಲೋಕವನ್ನು ಶಾಶ್ವತವೆಂದು ಘೋಷಿಸಿಲ್ಲ. ಹಾಗಾದರೆ ಮಹಾಮೊಗ್ಗಲಾನರೇ, ಈ ಲೋಕವು ಅಶಾಶ್ವತವೇ? ವಚ್ಚ, ಭಗವಾನರು ಈ ಲೋಕವನ್ನು ಅಶಾಶ್ವತವೆಂದು ಘೋಷಿಸಿಲ್ಲ. ಹಾಗಾದರೆ ಪೂಜ್ಯ ಮಹಾಮೊಗ್ಗಲಾನರೇ, ಈ ಲೋಕಕ್ಕೆ (ಅಂತ್ಯವಿದೆಯೇ) ಸೀಮಿತವಿದೆಯೇ? ವಚ್ಚ, ಭಗವಾನರು ಈ ಲೋಕವು ಸೀಮಿತವಾಗಿದೆ ಎಂದೂ ಘೋಷಿಸಿಲ್ಲ. ಹಾಗಾದರೆ ಪೂಜ್ಯ ಮಹಾಮೊಗ್ಗಲಾನರೇ, ಈ ಲೋಕವೂ ಅನಂತವೇ? ವಚ್ಚ, ಭಗವಾನರು ಈ ಲೋಕವನ್ನು ಅನಂತವೆಂದೂ ಘೋಷಿಸಿಲ್ಲ. ಸರಿ ಮಹಾಮೊಗ್ಗಲಾನರೇ, ಜೀವ (ಆತ್ಮ) ಹಾಗು ಶರೀರವೂ ಒಂದೆಯೇ? ವಚ್ಚ, ಭಗವಾನರು ಜೀವ ಹಾಗು ಶರೀರ ಒಂದೇ ಎಂದೂ ಘೋಷಿಸಿಲ್ಲ. ಸರಿ ಮಹಾಮೊಗ್ಗಲ್ಲಾನರೇ, ಹಾಗಾದರೆ ಜೀವ ಮತ್ತು ಶರೀರ ಬೇರೆ ಬೇರೆಯೇ? ವಚ್ಚ, ಭಗವಾನರು ಜೀವ ಹಾಗು ಶರೀರವು ಬೇರೆ ಬೇರೆ ಎಂದು ಘೋಷಿಸಿಲ್ಲ. ಸರಿ, ಮೊಗ್ಗಲಾನರೇ, ತಥಾಗತರು ಮರಣದ ನಂತರ ಇರುವರೇ? ವಚ್ಚ, ಭಗವಾನರು ಮರಣದ ನಂತರ ತಥಾಗತರು ಇರುವರೆಂದು ಘೋಷಿಸಿಲ್ಲ. ಸರಿ ಮಹಾಮೊಗ್ಗಲಾನರೇ, ತಥಾಗತರು ಮರಣದ ನಂತರ ಇರುವುದಿಲ್ಲವೇ? ವಚ್ಚ, ತಥಾಗತರು ಮರಣದ ನಂತರ ಇರುವುದಿಲ್ಲವೆಂದು ಸಹಾ ಘೋಷಿಸಿಲ್ಲ. ಸರಿ ಮೊಗ್ಗಲಾನರೇ, ತಥಾಗತರು ಮರಣದ ನಂತರ ಇರುತ್ತಾರೆ ಹಾಗು ಇರುತ್ತಾರೆ ಮತ್ತು ಇರುವುದಿಲ್ಲ ಇದು ಸತ್ಯವೇ? ವಚ್ಚ, ಭಗವಾನರು ಮರಣದ ನಂತರ ಇರುತ್ತಾರೆ ಹಾಗು ಇರುವುದಿಲ್ಲವೆಂದು ಸಹಾ ಘೋಷಿಸಿಲ್ಲ. ಸರಿ ಮೊಗ್ಗಲಾನರೇ, ತಥಾಗತರು ಮರಣದ ನಂತರ ಇರುವುದಿಲ್ಲ ಮತ್ತು ಇಲ್ಲದೆಯೂ ಹೋಗುವುದಿಲ್ಲ ಎಂಬುದು ಸರಿಯೇ? ವಚ್ಚ, ತಥಾಗತರು ಮರಣದ ನಂತರ ಇರುವುದಿಲ್ಲ, ಇಲ್ಲದೆಯೂ ಹೋಗುವುದಿಲ್ಲ ಎಂದು ಸಹಾ ಘೋಷಿಸಿಲ್ಲ.
ಮತ್ತೆ ಮಹಾಮೊಗ್ಗಲಾನರೇ, ಯಾವ ಕಾರಣದಿಂದಾಗಿ ಹಾಗು ಯಾವ ಉದ್ದೇಶದಿಂದಾಗಿ ಯಾವಾಗ ಪರಪಂಗಡದವರು ಕೇಳಿದ ಪ್ರಶ್ನೆಗಳಿಗೆ ಉದಾಹರಿಸುವುದಾದರೆ, ಲೋಕವು ಶಾಶ್ವತ ಅಥವಾ ಅಶಾಶ್ವತ ಅಥವಾ ಅಂತ ಅಥವಾ ಅನಂತವೆಂದೂ ಅಥವಾ ಜೀವ ಶರೀರವೊಂದೇ ಅಥವಾ ಬೇರೆ ಬೇರೆ ಅಥವಾ ತಥಾಗತರು ಮರಣದ ನಂತರ ಇರುತ್ತಾರೆ/ಇರುವುದಿಲ್ಲ/ಇರುತ್ತಾರೆ ಮತ್ತು ಇರುವುದಿಲ್ಲ/ಇರುವುದಿಲ್ಲ ಇಲ್ಲದೇಯೂ ಇಲ್ಲ ಇಂತಹ ಪ್ರಶ್ನೆಗಳಿಗೆ ಏತಕ್ಕಾಗಿ ಸಮಣ ಗೋತಮರು ಉತ್ತರಿಸುತ್ತಿಲ್ಲ. ಯಾವ ಕಾರಣದಿಂದಾಗಿ ಯಾವ ಉದ್ದೇಶದಿಂದಾಗಿ ಹೀಗೆ ಅಘೋಷಿತವಾಗಿದ್ದಾರೆ?
ವಚ್ಚ, ಬುದ್ಧರ ಹೊರತು ಪರ ಪಂಗಡದವರ ಕಣ್ಣಿಗೆ ಹೀಗೆ ಅಭಿಪ್ರಾಯರಾಗುತ್ತಾರೆ. ಇದು ನನ್ನದು, ಇದೇ ನಾನು ಮತ್ತು ಇದೇ ನನ್ನ ಆತ್ಮ. ಹಾಗೆಯೇ ಕಿವಿಗೆ... ನಾಲಿಗೆಗೆ... ಮೂಗಿಗೆ... ಶರೀರಕ್ಕೆ... ಮನಸ್ಸಿಗೆ ಇದು ನನ್ನದು, ಇದೇ ನಾನು ಮತ್ತು ಇದೇ ನನ್ನ ಆತ್ಮವೆಂದು ಪರಿಗಣಿಸುತ್ತಾರೆ. ಆದ್ದರಿಂದಲೇ ಅನ್ಯ ಪಂಗಡದವರು ಈ ಬಗೆಯ ಪ್ರಶ್ನೆಗಳನ್ನು ಕೇಳುತ್ತಾರೆ... ಆದರೆ ವಚ್ಚ, ಯಾವಾಗ ತಥಾಗತರು ಅರಹಂತರು ಹಾಗು ಸಮ್ಮಾಸಂಬುದ್ಧರು ಕಣ್ಣಿನ ಬಗ್ಗೆ ಕಿವಿಗೆ ಮನಸ್ಸಿನ ಬಗ್ಗೆ ಅಭಿಪ್ರಾಯ ತಾಳುತ್ತಾರೆ. ಹೇಗೆಂದರೆ, ಇದು ನಾನಲ್ಲ, ಇದು ನನ್ನದಲ್ಲ ಹಾಗು ಇದು ನನ್ನ ಆತ್ಮವಲ್ಲ. ಆದ್ದರಿಂದಲೇ ತಥಾಗತರಿಗೆ ಈ ಬಗೆಯ ಪ್ರಶ್ನೆಗಳನ್ನು ಕೇಳಿದಾಗ ಅವರು ಉತ್ತರಿಸಲಾರರು.
ಆಗ ಪರಿವ್ರಾಜಕ ವಚ್ಚಗೊತ್ತನು ತನ್ನ ಆಸನದಿಂದೆದ್ದು ಅಲ್ಲಿಂದ ಹೊರಟು ಭಗವಾನರ ಬಳಿಗೆ ಬಂದನು. ಅಲ್ಲಿ ಪರಸ್ಪರ ಕುಶಲ ಕ್ಷೇಮ ವಿನಿಮಯ ಮಾಡಿಕೊಂಡು ಭಗವಾನರೊಂದಿಗೆ ಹೀಗೆ ಕೇಳಿದನು: ಇದು ಹೇಗೆ ಗೋತಮರೇ, ಈ ಲೋಕವು ಶಾಶ್ವತವೇ? (ಇಲ್ಲಿ ಬರುವ ಸಂಭಾಷಣೆಯೆಲ್ಲವೂ ಮೊಗ್ಗಲಾನ ಹಾಗು ವಚ್ಚರೊಂದಿಗೆ ನಡೆದ ಸಂಭಾಷಣೆಯಂತೆಯೇ ಇರುತ್ತದೆ).
ವಚ್ಚ, ನಾನು ತಥಾಗತರು ಇರುವುದಿಲ್ಲ ಹಾಗೆಯೇ ಇಲ್ಲದೆಯೂ ಇಲ್ಲ ಎಂದು ಘೋಷಿಸಲಾರೆನು. ಏತಕ್ಕಾಗಿ ಗೋತಮಶಾಸ್ತ್ರರೇ, ಯಾವ ಕಾರಣಕ್ಕಾಗಿ ಹಾಗು ಯಾವ ಉದ್ದೇಶಕ್ಕಾಗಿ, ಯಾವಾಗ ಪರಪಂಗಡದವರು ಕೇಳಿದ ಪ್ರಶ್ನೆಗಳಿಗೆ ತಾವು ಉತ್ತರಿಸುವುದಿಲ್ಲ. ಉದಾಹರಿಸುವುದಾದರೆ ಈ ಲೋಕವು ಶಾಶ್ವತವೇ / ಅಶಾಶ್ವತವೇ? ಇತ್ಯಾದಿ... ವಚ್ಚ, ಪರಪಂಗಡದವರು ಕಣ್ಣನ್ನು... ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು... ಮನಸ್ಸನ್ನು... ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮವೆಂದು ಪರಿಗಣಿಸುತ್ತಾರೆ. ಆದ್ದರಿಂದಲೇ ಅವರಲ್ಲಿ ಅಂತಹ ಪ್ರಶ್ನೆಗಳಿರುತ್ತದೆ. ಹಾಗೆಯೇ ಅಂತಹುದು ಉತ್ತರಗಳು ಅವರಲ್ಲಿರುತ್ತದೆ. ಉದಾಹರಿಸುವುದಾದರೆ, ಈ ಲೋಕವು ಶಾಶ್ವತ, ಈ ಲೋಕವು ಅಶಾಶ್ವತ ಇತ್ಯಾದಿ. ಆದರೆ ವಚ್ಚ ತಥಾಗತರು ಸಮ್ಮಾಸಂಬುದ್ದರು ಅರಹಂತರಾಗಿರುವ ಅವರು ಕಣ್ಣನ್ನು... ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು... ಮನಸ್ಸನ್ನು... ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪರಿಗಣಿಸುತ್ತಾರೆ. ಆದ್ದರಿಂದಲೇ ತಥಾಗತರಲ್ಲಿ ಅಂತಹ ಪ್ರಶ್ನೆಗಳಾಗಲಿ ಅಥವಾ ಅಂತಹ ಉತ್ತರಗಳಾಗಿ ಉದಯಿಸುವುದಿಲ್ಲ.
ಆಶ್ಚರ್ಯಕರ ಗೋತಮ ಶಾಸ್ತ್ರರೇ, ಅದ್ಭುತಮಯ ಗೋತಮರೇ, ತಮ್ಮ ಶಿಷ್ಯನ ಹಾಗು ತಮ್ಮ ಹೇಳಿಕೆಯಲ್ಲಿ ಅರ್ಥದಲ್ಲಿಯಾಗಲಿ, ವ್ಯಂಜನದಲ್ಲಿಯಾಗಲಿ, ವಾಕ್ಯರಚನೆಯಲ್ಲಾಗಲಿ ಸ್ವಲ್ಪವೂ ವ್ಯತ್ಯಾಸವಿಲ್ಲ. ಹೇಗೆ ಅದ್ಭುತವಾದ ಗುರುವೋ ಹಾಗೆಯೇ ಪರಮಕುಶಲಿ ಶಿಷ್ಯನೂ ಸಹಾ. ತಮ್ಮಿಬ್ಬರಲ್ಲಿ ಯಾವುದೇ ಬೇಧವಿಲ್ಲದೆ ಒಂದೇರೀತಿಯಲ್ಲಿಯೇ ನುಡಿದಿದ್ದೀರಿ. ಈಗ ತಾನೇ ಗೋತಮರೆ, ನಾನು ಸಮಣ ಮಹಾಮೊಗ್ಗಲಾನರಲ್ಲಿಗೆ ಹೋಗಿದ್ದೆನು. ಅವರಲ್ಲಿಯೂ ಇದೇ ಪ್ರಶ್ನೆಗಳನ್ನು ಕೇಳಿದಾಗ ಅವರು ತಮ್ಮಂತೆಯೇ ಅಕ್ಷರ, ವಾಕ್ಯ, ಅರ್ಥ ವ್ಯತ್ಯಾಸವಿಲ್ಲದೆ ಇದೇ ರೀತಿಯಲ್ಲಿಯೇ ಉತ್ತರಿಸಿದ್ದರು. ಇದು ಆಶ್ಚರ್ಯಕರ, ಅದ್ಭುತಮಯ. ಹೇಗೆ ಅದ್ಭುತವಾದ ಶಾಸ್ತ್ರರೋ ಹಾಗೆಯೇ ಕುಶಲಿಯಾದ ಶಿಷ್ಯನೂ ಸಹಾ ಇದ್ದಾನೆ. ಯಾವುದೇ ರೀತಿಯಲ್ಲಿಯೂ ವಿರೋದಾಭಾಸವಿಲ್ಲದೆ ತಮ್ಮಂತೆಯೇ ತದ್ರೂಪಿಯಾಗಿ ಉತ್ತರಿಸಿದ್ದರು. ನಂತರ ವಚ್ಚನು ಅಲ್ಲಿಂದ ಹೊರಟನು.


8. ವಚ್ಚಗೊತ್ತ ಸುತ್ತ

417. ನಂತರ ಒಮ್ಮೆ ಪರಿವ್ರಾಜಕ ವಚ್ಚಗೊತ್ತನು ಭಗವಾನರ ಬಳಿಗೆ ಸಮೀಪಿಸಿದನು. ಅವರಲ್ಲಿ ಕುಶಲ ಕ್ಷೇಮಗಳ ವಿನಿಮಯ ಮಾಡಿದನು. ನಂತರ ಗೌರವದಿಂದ ವಂದಿಸಿ, ಒಂದೆಡೆ ಕುಳಿತನು ಹಾಗು ಹೀಗೆ ಪ್ರಶ್ನಿಸಿದನು: ಇದು ಹೇಗೆ ಗೋತಮರೇ, ಈ ಲೋಕವು ಶಾಶ್ವತವೇ?... (ಹಿಂದಿನಂತೆಯೇ ಪ್ರಶ್ನೆಗಳು ಹಾಗು ಉತ್ತರಗಳು).
ಯಾವ ಕಾರಣಕ್ಕಾಗಿ ಗೋತಮರೇ, ಹಾಗು ಯಾವ ಉದ್ದೇಶಕ್ಕಾಗಿ ಪರಪಂಗಡದವರು ತಮ್ಮಲ್ಲಿ ಹೀಗೆ ಪ್ರಶ್ನಿಸಿದಾಗ ಲೋಕವು ಶಾಶ್ವತವೇ, ಅಶಾಶ್ವತವೇ... ತಥಾಗತರು ಮರಣದ ನಂತರ ಇರುವುದಿಲ್ಲ ಹಾಗು ಇಲ್ಲದೆಯೂ ಇಲ್ಲ... ಇದು ಮಾತ್ರ ಸತ್ಯವೇ? ತಾವು ಇವಕ್ಕೆಲ್ಲ ಉತ್ತರವನ್ನು ಏತಕ್ಕಾಗಿ ನೀಡುವುದಿಲ್ಲ.
ವಚ್ಚ, ಪರಪಂಗಡದವರು ರೂಪವನ್ನು (ದೇಹಾಕೃತಿಯನ್ನು) ನಾನು ಎಂದು ಪರಿಗಣಿಸುತ್ತಾರೆ ಅಥವಾ ರೂಪವು ನನಗೆ (ಆತ್ಮಕ್ಕೆ) ಸೇರಿದ್ದು ಎಂದು ಪರಿಗಣಿಸುತ್ತಾರೆ. ಅಥವಾ ಆತ್ಮದಲ್ಲಿ ರೂಪವಿದೆ (ದೇಹವಿದೆ) ಅಥವಾ ದೇಹದಲ್ಲಿ (ರೂಪ) ಆತ್ಮವಿದೆ ಎಂದು ಪರಿಗಣಿಸುವರು. ಹಾಗೆಯೇ ಅವರು ವೇದನೆಗಳನ್ನು ತಾನು (ಆತ್ಮ) ಎಂದು... ಗ್ರಹಿಕೆಗಳನ್ನು ತಾನು (ಆತ್ಮ) ಎಂದು... ಸಂಖಾರಗಳನ್ನು ಆತ್ಮವೆಂದು... ವಿಜ್ಞಾ (ಅರಿವು) ತಾನು ಎಂದು ಅಥವಾ ತಾನು ವಿಜ್ಞಾನದಲ್ಲಿ ತಾನು ಇರುವುದೆಂದು ಪರಿಗಣಿಸುತ್ತಾರೆ. ಹೀಗೆ ಅವರು ಪರಿಗಣಿಸುವದರಿಂದಲೇ ಈ ಬಗೆಯ ಪ್ರಶ್ನೆಗಳನ್ನು ಕೇಳುತ್ತಾರೆ. ಹೇಗೆಂದರೆ, ಲೋಕವು ಶಾಶ್ವತ... ಅಶಶ್ವಾತವೆ... ತಥಾಗತರು ಮರಣದ ನಂತರ ಇರುವುದಿಲ್ಲವೇ ಅಥವಾ ಇಲ್ಲದೆಯೂ ಇಲ್ಲವೇ...? ಆದರೆ ವಚ್ಚ, ತಥಾಗತರು ಅರಹಂತರು, ಸಮ್ಮಾಸಂಬುದ್ಧರು ರೂಪವನ್ನಾಗಲಿ... ವೇದನೆಯನ್ನಾಗಲಿ... ಗ್ರಹಿಕೆಗಳನ್ನಾಗಲಿ... ಸಂಖಾರಗಳನ್ನು... ವಿಞ್ಞಾನಗಳನ್ನು ತಾನು ಎಂದು ಪರಿಗಣಿಸುವುದಿಲ್ಲ. ಅಥವಾ ವಿಞ್ಞಾನವು ತಾನು ಎಂಬುದಕ್ಕೆ ಸೇರಿದ್ದು ಎಂದು ಪರಿಗಣಿಸುವುದಿಲ್ಲ ಅಥವಾ ವಿಞ್ಞಾನದಲ್ಲಿ ಆತ್ಮವಿದೆ ಎಂತಲೂ ಅಥವಾ ಆತ್ಮದಲ್ಲಿ ವಿಞ್ಞಾನವಿದೆ ಎಂತಲೂ ಪರಿಗಣಿಸುವುದಿಲ್ಲ. ಆದ್ದರಿಂದಲೇ ತಥಾಗತರು ಇಂತಹ ಪ್ರಶ್ನೆಗಳನ್ನು ಕೇಳುವುದಿಲ್ಲ ಹಾಗು ಇಂತಹ ಪ್ರಶ್ನೆಗಳಿಗೆ ಉತ್ತರಿಸುವುದೂ ಇಲ್ಲ.
ಆಗ ವಚ್ಚಗೊತ್ತನು ಆಸನದಿಂದೆದ್ದು, ಭಗವಾನರಿಗೆ ವಂದಿಸಿ, ಅಲ್ಲಿಂದ ಎದ್ದು ಮಹಾಮೊಗ್ಗಲಾನರ ಬಳಿಗೆ ಬಂದನು. ಅಲ್ಲಿ ಕುಶಲ ಕ್ಷೇಮ ವಿನಿಮಯ ಮಾಡಿಕೊಂಡನು. ನಂತರ ಹೀಗೆ ಕೇಳಿದನು: ಮೊಗ್ಗಲಾನರೇ, ಲೋಕವು ಶಾಶ್ವತವೇ? (ಮೊಗ್ಗಲಾನರು ಭಗವಂತರಂತೆಯೇ ಯಥಾಭೂತವಾಗಿ ಇರುವಂತೆಯೇ ಉತ್ತರಿಸಿದರು). ವಚ್ಚ, ತಥಾಗತರು ಮರಣದ ನಂತರ ಇರುವುದಿಲ್ಲ, ಇಲ್ಲದೆಯೂ ಇಲ್ಲ ಎಂದು ಘೋಷಿಸಿಲ್ಲ.
ಯಾವ ಕಾರಣಕ್ಕಾಗಿ ಮಹಾಮೊಗ್ಗಲಾನರೇ, ಹಾಗು ಯಾವ ಉದ್ದೇಶಕ್ಕಾಗಿ ಭಗವಾನರು ಇಂತಹ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಉದಾಹರಿಸುವುದಾದರೆ, ಲೋಕವು ಶಾಶ್ವತವೇ... ಅಥವಾ ತಥಾಗತರು ಮರಣದ ನಂತರ ಇರುವುದಿಲ್ಲ ಹಾಗು ಇಲ್ಲದೆಯೂ ಇಲ್ಲ...
ವಚ್ಚ, ಪರಪಂಗಡದ ಪರಿವ್ರಾಜಕರು ದೇಹವನ್ನೇ (ರೂಪ) ಆತ್ಮವೆಂದು (ತಾನು/ನಾನು) ಪರಿಗಣಿಸುತ್ತಾರೆ. ಆತ್ಮವು ದೇಹವನ್ನು ಹೊಂದಿದೆ ಎಂದೂ ಅಥವಾ ವೇದನೆಗಳನ್ನು... ಗ್ರಹಿಕೆಗಳನ್ನು... ಸಂಖಾರಗಳನ್ನು... ವಿಞ್ಞಾನಗಳನ್ನು ತಾನು (ಆತ್ಮ)ವೆಂದು ಪರಿಗಣಿಸುತ್ತಾರೆ ಅಥವಾ ಆತ್ಮವು ವಿಞ್ಞಾನವನ್ನು ಹೊಂದಿದೆ ಎಂದೂ ಅಥವಾ ಆತ್ಮದಲ್ಲಿ ವಿಞ್ಞಾನವಿದೆ ಅಥವಾ ವಿಞ್ಞಾನದಲ್ಲಿ ಆತ್ಮವಿದೆ ಎಂತಲೂ ಭಾವಿಸುತ್ತಾರೆ. ಆದ್ದರಿಂದಲೇ ಪರಪಂಗಡಗಳ ಪರಿವ್ರಾಜಕರು ಇಂತಹ ಪ್ರಶ್ನೆಗಳನ್ನು ಕೇಳುತ್ತಾರೆ. ಹಾಗೆಯೇ ಇಂತಹ ಉತ್ತರಗಳನ್ನು ನೀಡುತ್ತಾರೆ. ಆದರೆ ವಚ್ಚ, ತಥಾಗತರು, ಅರಹಂತರು, ಸಮ್ಮಾಸಂಬುದ್ಧರು ಆದ ಭಗವಾನರು ದೇಹವನ್ನು ತಾನೆಂದಾಗಲಿ, ತನ್ನದೆಂದಾಗಲಿ, ದೇಹದಲ್ಲಿ ಆತ್ಮವಿದೆ ಎಂತಲೋ ಅಥವಾ ಆತ್ಮದಲ್ಲಿ ದೇಹವಿದೆ ಎಂದಲೂ ಎಂದೂ ಪರಿಗಣಿಸುವುದಿಲ್ಲ. ಹಾಗೆಯೇ ವೇದನೆಗಳನ್ನು... ಸಞ್ಞಾಗಳನ್ನು... ಸಂಖಾರಗಳನ್ನು... ವಿಞ್ಞಾನಗಳನ್ನು ತಾನೆಂದು ಪರಿಗಣಿಸುವುದಿಲ್ಲ, ತನ್ನದೆಂದು ಪರಿಗಣಿಸುವುದಿಲ್ಲ ಅಥವಾ ಆತ್ಮದಲ್ಲಿ ವಿಞ್ಞಾನವಿದೆ ಎಂತಲೋ ಅಥವಾ ವಿಞ್ಞಾನದಲ್ಲಿ ಆತ್ಮವಿದೆ ಎಂತಲೂ ಪರಿಗಣಿಸುವುದಿಲ್ಲ. ಆದ್ದರಿಂದಲೇ ತಥಾಗತರು ಅಂತಹ ಪ್ರಶ್ನೆಗಳನ್ನು ಕೇಳುವುದಿಲ್ಲ ಹಾಗೆಯೇ ಅಂತಹ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ.
ಆಶ್ಚರ್ಯಕರ ಮೊಗ್ಗಲಾನರೇ, ಅದ್ಭುತಮಯ ಮೊಗ್ಗಲಾನರೇ. ಹೀಗೆ ಅರ್ಥದಲ್ಲಿಯಾಗಲಿ, ವಾಕ್ಯದಲ್ಲಿಯಾಗಲಿ, ಗುರು ಹಾಗು ಶಿಷ್ಯರಿಬ್ಬರೂ ಸಮಾನವಾಗಿಯೇ ಉತ್ತರಿಸಿದ್ದೀರಿ. ವಿರೋಧಾಭಾಸವಿಲ್ಲದೆಯೇ ಇರುವಿರಿ. ಮುಖ್ಯವಾದ ವಿಷಯವೇನೆಂದರೆ ನಾನು ಈಗತಾನೇ ಭಗವಾನರ ಬಳಿಗೆ ಹೋಗಿದ್ದೆನು. ತಮಗೆ ಪ್ರಶ್ನಿಸಿದಂತೆಯೇ ಅವರಿಗೂ ಇದೇ ಪ್ರಶ್ನೆಗಳನ್ನು ಕೇಳಿದ್ದೆನು. ಭಗವಾನರು ಸಮಂಜಸವಾಗಿ ಉತ್ತರಿಸಿದ್ದರು. ತಾವು ಸಹಾ ಯಥಾವತ್ತಾಗಿ ಸಮಾನ ಅರ್ಥವಾಗಿಯೇ ಸಮಾನ ವಾಕ್ಯ ಪ್ರಯೋಗದಿಂದಲೇ ಉತ್ತರಿಸಿರುವಿರಿ. ಇದು ಆಶ್ಚರ್ಯಕರ ಮೊಗ್ಗಲಾನರೇ ಇದು ಅದ್ಭುತಮಯ... ಅದೇರೀತಿಯಲ್ಲಿಯೇ ಉತ್ತರಿಸಿರುವಿರಿ...


9. ಕುತೂಹಲ ಸಾಲಾಸುತ್ತ (ಚಚರ್ೆಯ ಸಭಾಂಗಣದಲ್ಲಿನ ಸುತ್ತ)

418. ಒಮ್ಮೆ ವಚ್ಚಗೊತ್ತನು ಭಗವಾನರ ಬಳಿಗೆ ಬಂದನು. ಅಲ್ಲಿ ಅವರಿಗೆ ವಂದಿಸಿ ಕುಶಲ ಕ್ಷೇಮಗಳನ್ನು ವಿನಿಮಯ ಮಾಡಿಕೊಂಡನು. ನಂತರ ಒಂದೆಡೆ ಕುಳಿತನು. ನಂತರ ಭಗವಾನರೊಂದಿಗೆ ಹೀಗೆ ಕೇಳಿದನು.
ಭಗವಾನ್ ಗೋತಮರೇ, ಇತ್ತೀಚಿನ ದಿನಗಳಲ್ಲಿ ಅಸಂಖ್ಯಾತ ಸಮಣ ಬ್ರಾಹ್ಮಣರು, ಪರಿವ್ರಾಜಕರು, ನಾನಾತೀರ್ಥಂಕರು, ನಾನಾ ಮತಾವಲಂಬಿಗಳು ಚಚರ್ೆಯ ಸಭಾಂಗಣದಲ್ಲಿ ಕುಳಿತಿರುವಾಗ ಅವರಲ್ಲಿಯೇ ಚಚರ್ೆಯೊಂದು ಉದಯಿಸಿತು. ಈ ಪೂರಣಕಸ್ಸಪ ಸಂಘಕ್ಕೆ ಗುರುವು, ಗಣಗಳಿಗೆ ಗಣಾಚಾರ್ಯನು, ಜ್ಞಾನನು, ಯಶಶ್ವಿ ತೀರ್ಥಂಕರನು, ಬಹುಜನರಿಂದ ಸಾಧು ಎಂದು ಸಮ್ಮತಿ ಗಳಿಸಿರುವವನು ಆಗಿದ್ದಾನೆ. ತನ್ನ ಸತ್ತುಹೋದ ಶಿಷ್ಯರ ಬಗ್ಗೆ ಹೀಗೆ ನಿರ್ಣಯ ಮಾಡುವವನು ಆಗಿದ್ದಾನೆ. ಈತನು ಇಲ್ಲಿ ಹುಟ್ಟಿದ್ದಾನೆ, ಆತನು ಅಲ್ಲಿ ಹುಟ್ಟಿದ್ದಾನೆ ಮತ್ತು ತನ್ನ ಶಿಷ್ಯರಲ್ಲಿ ಉತ್ತಮ ಪುರುಷ ಇದ್ದಿದ್ದಾದರೆ ಆತನು ಏನಾದರೂ ಪ್ರಾಪ್ತಿಮಾಡಿದ್ದರೆ, ಅಂತಹವನು ಗತಿಸಿದ್ದರೆ, ಅಂತಹವನ ಬಗ್ಗೆ ಹೀಗೆ ಆತನ ಪುನರ್ಜನ್ಮವನ್ನು ನಿರ್ಣಯಿಸುತ್ತಾನೆ. ಆತನು ಅಲ್ಲಿ ಜನಿಸಿದ್ದಾನೆ ಮತ್ತು ಈತನು ಇಲ್ಲಿ ಜನ್ಮಿಸಿದ್ದಾನೆ. ಈ ಮಕ್ಖಲಿ ಗೋಸಾಲನು... ಈ ನಿಗಂಠನಾಥಪುತ್ತನು... ಈ ಸಂಜಯ ಬೆಲಟ್ಠಿಪುತ್ತನು... ಈ ಪಕುದಕಚ್ಚಾಯನನು... ಈ ಅಜಿತಕೇಸಕಂಬಳಿಯು... ಆತನು ಅಲ್ಲಿ ಜನಿಸಿದ್ದಾನೆ ಎಂದು ನಿರ್ಣಯಿಸುತ್ತಾರೆ.
ಅದೇರೀತಿಯಲ್ಲಿ ತಾವು ಸಹಾ ಭಗವಾನ್ ಗೋತಮರು ತಮ್ಮ ಪವಿತ್ರ ಸಂಘಕ್ಕೆ ಗುರುವಾಗಿರುವಿರಿ. ನಾನಾ ಗಣಗಳಿಗೆ ತಾವು ಗಣಾಚಾರ್ಯರು ಆಗಿರುವಿರಿ, ಪರಮ ಜ್ಞಾನಿಗಳು, ಯಶಸ್ವಿಗಳು ಆಗಿರುವಿರಿ. ಬಹುಜನರಿಂದ ತಾವೇ ಸಮ್ಯಕ್ ಸಂಬುದ್ಧರೆಂದು ಪರಿಗಣಿಸಲ್ಪಟ್ಟಿರುವಿರಿ. ತಾವು ಸಹಾ ತಮ್ಮ ಶಿಷ್ಯರಲ್ಲಿ ಮರಣಿಸುವವರ ಬಗ್ಗೆ ಈತನು ಇಲ್ಲಿ ಹುಟ್ಟಿದ್ದಾನೆ, ಆತನು ಅಲ್ಲಿ ಅಲ್ಲಿ ಹುಟ್ಟಿದ್ದಾನೆ ಎಂದು ನಿರ್ಣಯಿಸುವವರಾಗಿರುವಿರಿ. ಹಾಗೆಯೇ ಈತನು ತೃಷ್ಣೆಯನ್ನು ಕತ್ತರಿಸಿದ್ದಾನೆ, ಬಂಧಮುಕ್ತನಾಗಿದ್ದಾನೆ, ಅಹಂಕರಕ್ಕೆ ಅತೀತನಗಿ ದುಃಖದ ಅಂತ್ಯ ಮಾಡಿದ್ದಾನೆ ಎಂದು ಹೇಳಬಲ್ಲವರಾಗಿದ್ದೀರಿ. ಆದರೆ ಶಾಸ್ತ ಗೋತಮರೇ, ನನ್ನಲ್ಲಿ ಒಂದು ಸಂಶಯವಿದೆ, ಅದೇನೆಂದರೆ ಸಮಣ ಗೋತಮರು ಧಮ್ಮವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?
ವಚ್ಚ ನೀನು ಸಂಶಯಪಡಬೇಕಾಗುವುದೇ... ವಚ್ಚ ನಿನ್ನಲ್ಲಿ ಸಂಶಯ ಉಂಟಾಗುವುದು ಉಚಿತವಾಗಿಯೇ ಇದೆ. ಸಂಶಯಕ್ಕೆ ಅರ್ಹನಾದ ವಿಷಯದಲ್ಲಿಯೇ ಸಂಶಯನಾಗಿರುವೆ. ವಚ್ಚ, ನಾನು ಇಂಧನಕ್ಕೆ ಅನುಸಾರವಾಗಿ ಜನ್ನವಿದೆಯೋ ಇಲ್ಲವೋ ನಿರ್ಧರಿಸಿರುವೆ. ಯಾರಲ್ಲಿ ಇಂಧನವಿದೆಯೋ ಅವರಿಗೆ ಪುನರ್ಜನ್ಮವಿರುತ್ತದೆ. ಯಾರಲ್ಲಿ ಇಂಧನ ಬರಿದಾಗಿದೆಯೋ ಅವರಿಗೆ ಪುನರ್ಜನ್ಮವಿರುವುದಿಲ್ಲ. ಹೀಗಾಗಿ ನಾನು ಇಂಧನವಿದ್ದರೆ ಜನ್ಮ, ಇಲ್ಲದಿದ್ದರೆ ಇಲ್ಲ ಎಂದು ಘೋಷಿಸುತ್ತೇನೆ.
ಸರಿ ಗೋತಮರೇ, ಒಂದುವೇಳೆ ಪ್ರಬಲ ಗಾಳಿಯಿಂದ ಜ್ವಾಲೆಯು ಆರಿಹೋಗುವುದು. ಇಂತಹ ಸಂದರ್ಭಗಳನ್ನು ಶಾಸ್ತ ಗೋತಮರು ಇಂಧನಕ್ಕೆ ಅನುಸಾರವಾಗಿ ಹೇಗೆ ನಿರ್ಧರಿಸುವರು? ವಚ್ಚ, ಒಂದುವೇಳೆ ಪ್ರಬಲ ಗಾಳಿಯಿಂದಾಗಿ ಜ್ವಾಲೆಯು ಆರಿಹೋದರೆ, ಗಾಳಿಯಿಂದಲೇ ಉರಿದಿದೆ (ಅರಿದೆ) ಎಂದು ಘೋಷಿಸುತ್ತೇನೆ. ಅಂತಹ ಸಂದರ್ಭದಲ್ಲಿ ಗಾಳಿಯೇ ಅದರ ಪುಷ್ಠಿಯಾಗುವುದು (ಇಂಧನವಾಗುವುದು). ಮತ್ತೆ ಶಾಸ್ತ ಗೋತಮರೇ, ಜೀವಿಯೊಂದು ಶರೀರ ಬಿಟ್ಟು ಬೇರೊಂದು ಶರೀರದಲ್ಲಿಯೂ ಜನ್ಮ ತಾಳದಿದ್ದರೆ, ಅಂತಹ ಸಮಯದಲ್ಲಿ ಶಾಸ್ತ ಗೋತಮರು ಯಾವ ರೀತಿಯಲ್ಲಿ ಇಂಧನವನ್ನು ನಿರ್ಧರಿಸುವರು? ವಚ್ಚ, ಜೀವಿಯೊಂದು ಶರೀರವನ್ನು ತ್ಯಜಿಸಿ, ಇನ್ನೊಂದೆಡೆ ಜನ್ಮ ತಾಳದಿದ್ದರೆ ತೃಷ್ಣೆಯಿಂದಾಗಿ ಎಂದು ಪುಷ್ಠಿ ಹೊಂದಿದೆ (ಪ್ರೇತ ಜನ್ಮ) ಎಂದು ಘೋಷಿಸುತ್ತೇನೆ. ಅಂತಹ ಸಂದರ್ಭದಲ್ಲಿಯು ತೃಷ್ಣೆಯೇ ಇಂಧನವಾಗಿರುತ್ತದೆ.


10. ಆನಂದ ಸುತ್ತ

419. ನಂತರ ಪರಿವ್ರಾಜಕ ವಚ್ಚಗೊತ್ತ ಭಗವಾನರ ಬಳಿಗೆ ಬಂದು... ಹೀಗೆ ಪ್ರಶ್ನಿಸಿದನು ಇದು ಈಗ ಹೇಗೆ, ಶಾಸ್ತ ಗೋತಮರೇ, ಆತ್ಮವಿದೆಯೇ? ಯಾವಾಗ ಹೀಗೆ ಕೇಳಿದನೋ, ಆಗ ಭಗವಾನರು ಮೌನ ವಹಿಸಿದರು. ಹಾಗಾದರೆ ಶಾಸ್ತ ಗೋತಮರೇ, ಆತ್ಮವಿಲ್ಲವೇ? ಈ ಎರಡನೆಯ ಪ್ರಶ್ನೆ ಕೇಳಿದಾಗಲು ಭಗವಾನರು ಮೌನ ವಹಿಸಿದರು. ಆಗ ಪರಿವ್ರಾಜಕ ವಚ್ಚಗೊತ್ತನು ಆಸನದಿಂದ ಎದ್ದು ಅಲ್ಲಿಂದ ಹೊರಟು ಹೋದನು.
ಆತನು ಹೋದ ಸ್ವಲ್ಪ ಸಮಯದಲ್ಲೇ ಪೂಜ್ಯ ಆನಂದರು ಭಗವಾನರ ಬಳಿಯಲ್ಲಿ ಹೀಗೆ ಪ್ರಶ್ನಿಸಿದರು: ಏತಕ್ಕಾಗಿ ಭಗವಾನ್, ಪರಿವ್ರಾಜಕ ವಚ್ಚಗೊತ್ತನ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ.

" ಆನಂದ, ನಾನೇನಾದರೂ ವಚ್ಚಗೊತ್ತನ ಆತ್ಮವಿದೆಯೇ? ಎಂಬ ಪ್ರಶ್ನೆಗೆ ಸ್ವಯಂವಿದೆ (ಆತ್ಮವಿದೆ) ಎಂದು ಉತ್ತರಿಸಿದ್ದರೆ, ಆತನು ಶಾಶ್ವತವಾದಿ ಸಮಣ ಬ್ರಾಹ್ಮಣರ (ನಿತ್ಯಶುದ್ದ ಆತ್ಮ) ಸಿದ್ಧಾಂತದೆಡೆಯಲ್ಲಿ ವಾಲಿಬಿಡುತ್ತಿದ್ದನು. ಹಾಗಲ್ಲದೆ ನಾನು ಆತನ ಆತ್ಮವಿಲ್ಲವೆ (ಸ್ವಯಂವಿಲ್ಲ) ಎಂಬ ಪ್ರಶ್ನೆಗೆ ಆತ್ಮವಿಲ್ಲ ಎಂದು ಹೇಳಿದ್ದರೆ ಆತನು ಉಚ್ಛೇದವಾದಿ (ಸಾವಿನ ನಂತರ ಏನೂ ಇಲ್ಲ)ಗಳ ಸಿದ್ಧಾಂತದೆಡೆಯಲ್ಲಿ ವಾಲಿಬಿಡುತ್ತಿದ್ದನು. ಆನಂದ ನಾನು ವಚ್ಚಗೊತ್ತನ ಆತ್ಮವಿದೆಯೇ ಪ್ರಶ್ನೆಗೆ ಆತ್ಮವಿದೆ ಎಂದು ಹೇಳಿದ್ದರೆ ಎಲ್ಲಾ ಧಮ್ಮಗಳು ಅನಾತ್ಮ ಎಂಬ ಪರಮಜ್ಞಾನದ ಉದಯಕ್ಕೆ ಸಹಕಾರಿಯಾಗಿರುತ್ತಿತ್ತೆ. ಇಲ್ಲ ಭಂತೆ. ಅದೇರೀತಿ ವಚ್ಚಗೊತ್ತನ ಆತ್ಮವಿದೆ ಎಂಬ ಪ್ರಶ್ನೆಗೆ ಇಲ್ಲವೆಂದು ಹೇಳಿದ್ದರೆ ಮೊದಲೇ ಗೊಂದಲದಲ್ಲಿ ಮುಳುಗಿದ್ದ ವಚ್ಚಗೊತ್ತನು ಪುನಃ ಮತ್ತಷ್ಟು ಗೊಂದಲಭರಿತನಾಗುತ್ತಿದ್ದನು. ಆಗ ಆತನು ಹೀಗೆ ಯೋಚಿಸುತ್ತಿದ್ದನು: ನನ್ನಲ್ಲಿ ಹಿಂದೆ ಇದ್ದಂತಹ ಸ್ವಯಂ (ಆತ್ಮ) ಈಗಿಲ್ಲ ಎಂದು ಗೊಂದಲವುಳ್ಳವನಾಗುತ್ತಿದ್ದನು".

11. ಸಭಿಯ ಕಚ್ಚಾನ ಸುತ್ತ

420. ಒಮ್ಮೆ ಪೂಜ್ಯ ಸಭಿಯ ಕಚ್ಚಾನರು ನಾತಿಕದಲ್ಲಿನ ಇಟ್ಟಿಕೆಗಳ ವಿಶಾಲಾಂಗಣದಲ್ಲಿ ವಾಸಿಸುತ್ತಿದ್ದನು. ಆಗ ಪರಿವ್ರಾಜಕ ವಚ್ಚಗೊತ್ತನು ಪೂಜ್ಯ ಸಭಿಯರಲ್ಲಿಗೆ ಸಮೀಪಿಸಿ, ಕುಶಲ ಕ್ಷೇಮಗಳನ್ನು ವಿನಿಮಯ ಮಾಡಿಕೊಂಡನು. ನಂತರ ಒಂದೆಡೆ ಕುಳಿತು ಹೀಗೆ ಪ್ರಶ್ನಿಸಿದನು. ಇದು ಹೇಗೆ ಪೂಜ್ಯ ಕಚ್ಚಾನರೇ, ತಥಾಗತರು ಮರಣದ ನಂತರ ಇರುವರೇ? (ಇದಕ್ಕೆ ಉತ್ತರ ಹಿಂದಿನಂತೆಯೇ). ಸರಿ ಪೂಜ್ಯ ಕಚ್ಚಾನರೇ, ಯಾವ ಕಾರಣದಿಂದಾಗಿ ಮತ್ತು ಯಾವ ಸಹಾಯಕಗಳಿಂದಾಗಿ ಭಗವಾನರು ಈ ಪ್ರಶ್ನೆಗೆ ಉತ್ತರಿಸಲಿಲ್ಲ? ವಚ್ಚ, ಯಾವುದೆಲ್ಲ ಕಾರಣದಿಂದ, ಯಾವುದೆಲ್ಲ ಸಹಾಯಕಗಳಿಂದ ಅವರನ್ನು ರೂಪ (ದೇಹ ಹೊಂದಿರುವವರು) ಅಥವಾ ಅರೂಪಿಯೆಂದು (ದೇಹ ಹೊಂದಿಲ್ಲದವರು) ಅಥವಾ ಗ್ರಹಿಕೆ ಇರುವವರು ಅಥವಾ ಗ್ರಹಿಕೆಗೆ ಅತೀತವಾದವರು ಅಥವಾ ಗ್ರಹಿಕೆ ಇಲ್ಲ, ಗ್ರಹಿಕೆ ಇಲ್ಲದೆಯೂ ಇಲ್ಲ (ನೇವಸಞ್ಞಾನಾಸಞ್ಞಾ) ದವರೆಂದು ವಿವಿರಿಸುತ್ತೇವೆಯೋ ಅಂತಹ ಕಾರಣ, ಅಂತಹ ಉದ್ದೇಶವು ಸರ್ವತ್ರವಾಗಿ ಪೂರ್ಣವಾಗಿ ನಿರೋಧವಾಗುತ್ತದೆಯೋ ಆಗ ಅಂಥದ್ದನ್ನು ರೂಪಿಯೆಂದು ಅಥವಾ ಅರೂಪಿಯೆಂದು ಅಥವಾ ಸಂಜ್ಞೆಯುತವೆಂದು ಅಥವಾ ಅಸಂಜ್ಞೆಯೆಂದು ಅಥವಾ (ನೇವಸಞ್ಞಾನಾಸಞ್ಞಾವೆಂದು ಯಾವ ರೀತಿಯಲ್ಲಿ ವ್ಯಾಖ್ಯಾನಿಸುವೆ? ಪೂಜ್ಯ ಕಚ್ಚಾನರೇ, ಪಬ್ಬಜಿತರಾಗಿ ಎಷ್ಟು ಕಾಲದಿಂದ ಇದ್ದೀರಿ? ಹೆಚ್ಚಿಲ್ಲ ಆಯುಷ್ಮಂತ, ಮೂರು ವರ್ಷಗಳಿಂದ. ಯಾರೆಲ್ಲಾ ಇಷ್ಟು ಕಡಿಮೆಯ ಅವಧಿಯಲ್ಲಿ, ಇಷ್ಟೊಂದು ಗಳಿಸಿರುವನೋ ಇದು ನಿಜಕ್ಕೂ ಮಹತ್ತರವೇ. ಇನ್ನು ಪಾರಂವನ್ನು ದಾಟಿರುವವರ ಬಗ್ಗೆ ಹೆಳಬೇಕಾದ್ದೇ ಇಲ್ಲ.


ಅಬ್ಯಾಕತ ಸಂಯುಕ್ತವು ಸಮಾಪ್ತಿಯಾಯಿತು 

No comments:

Post a Comment

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...