Saturday 2 June 2018

Samyutta nikaya 36.3 3. ಅಟ್ಠಸತ ಪರಿಯಾಯ ವಗ್ಗೋ

3. ಅಟ್ಠಸತ ಪರಿಯಾಯ ವಗ್ಗೋ


36.3.1 ಸೀವಕ ಸುತ್ತಂ

269. ಒಮ್ಮೆ ಭಗವಾನರು ರಾಜಗೃಹದ ವೇಳುವನದಲ್ಲಿನ ಅಳಿಲು ಧಾಮದಲ್ಲಿ ವಿಹರಿಸುತ್ತಿದ್ದರು. ಆಗ ಪರಿವ್ರಾಜಕನಾದ ಮೊಲಿಯ ಸೀವಕ ಭಗವಾನರು ಇದ್ದಲ್ಲಿಗೆ ಬಂದನು ಹಾಗು ಅವರೊಂದಿಗೆ ಕುಶಲ ಕ್ಷೇಮಗಳನ್ನು ವಿಚಾರಿಸಿ ಒಂದೆಡೆ ಕುಳಿತನು. ನಂತರ ಭಗವಾನರೊಂದಿಗೆ ಹೀಗೆ ಹೇಳಿದನು: ಗುರುಗಳಾದ ಗೋತಮರೇ, ಕೆಲವು ಸಮಣ ಬ್ರಾಹ್ಮಣರಿದ್ದಾರೆ, ಅವರು ಇಂತಹ ದೃಷ್ಟಿಯನ್ನು ಹೊಂದಿದ್ದಾರೆ. ಅದೆಂದರೆ, ಯಾವುದೆಲ್ಲವೂ ವ್ಯಕ್ತಿಯು ಅನುಭವಿಸುತ್ತಾನೋ ಅದು ಪ್ರಿಯವಾಗಿರಲಿ, ಅಪ್ರಿಯವಾಗಿರಲಿ ಅಥವಾ ತಟಸ್ಥವಾಗಿರಲಿ ಅದೆಲ್ಲವೂ ಹಿಂದಿನದ (ಜನ್ಮ) ರಿಂದಾಗಿ ಮಾಡಲ್ಪಟ್ಟ ಪರಿಣಾಮವಾಗಿದೆ. ಇದರ ಬಗ್ಗೆ ಸಮಣ ಗೋತಮ ಏನನ್ನು ಹೇಳುತ್ತಾರೆ?
ಸೀವಕ ಕೆಲವು ವೇದನೆಗಳಿರುವುವು, ಅವು ಪಿತ್ತದ ಅವ್ಯವಸ್ಥೆಯಿಂದಾಗಿ ಆಗಿರುವುದು. ಇದನ್ನು ಒಬ್ಬನು ತಾನಾಗಿಯೇ ಅರಿತಿರುವನು ಮತ್ತು ಅದೇ ಲೋಕದಲ್ಲಿ ನಿಜವೆಂದು ತಿಳಿಯುತ್ತಾನೆ. ಈಗ ಯಾವ ಸಮಣ ಬ್ರಾಹ್ಮಣರು ಇಂತಹ ಸಿದ್ಧಾಂತವನ್ನು ಹಿಡಿದಿರುವರೋ, ಯಾವುದೆಲ್ಲಾ ವ್ಯಕ್ತಿಯು ಅನುಭವಿಸುತ್ತಾನೋ, ಅದು ದುಃಖವೇದನೆಯಾಗಲಿ, ಸುಖವೇದನೆಯಾಗಲಿ ಅಥವಾ ದುಃಖವಲ್ಲದ-ಸುಖವೂ ಅಲ್ಲದ ವೇದನೆಯೇ ಆಗಿರಲಿ. ಅವೆಲ್ಲಾ ಹಿಂದೆ ಮಾಡಲ್ಪಟ್ಟ ಕಾರಣದಿಂದಾಗಿ ಆಗುತ್ತಿವೆ. ಅವರು ತಾವಾಗಿಯೇ ತಿಳಿಯಲ್ಪಟ್ಟಿದ್ದಕ್ಕಿಂತಲೂ ಅತಿಯಾಗಿ ಧಾವಿಸುತ್ತಿದ್ದಾರೆ. ಈ ಲೋಕ ನಿಜವೆಂದು ನಂಬಿದ್ದಕ್ಕಿಂತಲೂ ಅತಿಯಾಗಿ ಧಾವಿಸುತ್ತಿದ್ದಾರೆ. ಆದ್ದರಿಂದಾಗಿ ಈ ಸಮಣ ಬ್ರಾಹ್ಮಣರ ದಿಟ್ಟಿಯನ್ನು ಮಿಥ್ಯವೆಂದು ಹೇಳುತ್ತಿದ್ದೇನೆ.
ಸೀವಕ, ಕೆಲವು ವೇದನೆಗಳು ಕಫದ ಅವ್ಯವಸ್ಥೆಯಿಂದಾಗಿ.... ವಾತದ ಅವ್ಯವಸ್ಥೆಯಿಂದಾಗಿ.... ತ್ರಿದೋಷಗಳ (ವಾತ, ಪಿತ್ತ, ಕಫ) ಅವ್ಯವಸ್ಥೆಯಿಂದಾಗಿ.... ವಾತಾವರಣದ ಬದಲಾವಣೆಯಿಂದಾಗಿ.... ಅಲಕ್ಷತನದ ವರ್ತನೆಯಿಂದಾಗಿ.... ಆಕ್ರಮಣದ ಕಾರಣದಿಂದಾಗಿ.... ಕಮ್ಮವಿಪಾಕದಿಂದಾಗಿ... ಕಮ್ಮದಿಂದಾಗಿ ಆಗುತ್ತವೆ. ತಾನಾಗಿಯೇ ಅರಿತಿರುವುದರಿಂದಾಗಿ, ಅದನ್ನೇ ನಿಜವೆಂದು ಸಮಣ ಬ್ರಾಹ್ಮಣರು ನುಡಿಯುತ್ತಾರೆ. ಹೀಗಾಗಿ ವ್ಯಕ್ತಿಯೊಬ್ಬನು ತಾನು ಅನುಭವಿಸುವ ಸುಖವೇದನೆಯಾಗಲಿ, ದುಃಖವೇದನೆಯಾಗಲಿ, ತಟಸ್ಥವೇದನೆಯಾಗಲಿ ಅವೆಲ್ಲವೂ ಹಿಂದಿನ ಕಾರಣದಿಂದಾಗಿ ಆಗಿವೆ ಎಂಬುದು ಅತಿರೇಕವಾಗಿದೆ. ಅವರ ಈ ದೃಷ್ಟಿಕೋನವು ಮಿಥ್ಯವೆಂದು ನಾನು ಹೇಳುತ್ತೇನೆ.
ಇದನ್ನು ಆಲಿಸಿದಂತಹ ಪರಿವ್ರಾಜಕ ಮೊಲಿಸೀವಕನು ಭಗವಾನರಿಗೆ ಹೀಗೆ ನುಡಿದನು: ಭವ್ಯವಾಗಿದೆ ಭಂತೆ, ಶೋಭಾಯಮಾನವಾಗಿದೆ ಗೋತಮರೇ.... ಇಂದಿನಿಂದ ನನ್ನನ್ನು ಜೀವನಪರ್ಯಂತ ತಮ್ಮ ಶಿಷ್ಯನೆಂದು ಸ್ವೀಕರಿಸಲಿ.
ಪಿತ್ತ, ವಾತ ಮತ್ತು ಕಫಗಳ ಅವ್ಯವಸ್ಥೆ
ವಾತಾವರಣ, ನಿರ್ಲಕ್ಷ, ಆಕ್ರಮಣ
ಮತ್ತು ಎಂಟನೆಯದಾದ ಕರ್ಮ ವಿಪಾಕವು
ವೇದನೆಗಳ ಉದಯಕ್ಕೆ ಕಾರಣವಾಗಿದೆ.


36.3.2 ಅಟ್ಠಸತ ಸುತ್ತಂ

270. ಭಿಕ್ಷುಗಳೇ, ನಾನು 108 ವೇದನೆಗಳ ಧಮ್ಮವನ್ನು ಉಪದೇಶಿಸುತ್ತಿದ್ದೇನೆ, ಆಲಿಸಿರಿ, ಭಿಕ್ಷುಗಳೇ, 108ರ ಧಮ್ಮಪರಿಯಾಯವೆಂದರೇನು? ಭಿಕ್ಷುಗಳೇ, ಇಲ್ಲಿ ನಾನು ಎರಡು ಬಗೆಯ ವೇದನೆಗಳನ್ನು ಒಂದು ವಗರ್ಿಕರಣದಲ್ಲಿ ವಿವರಿಸಿದ್ದೇನೆ. ನಾನು ಮೂರುಬಗೆಯ ವೇದನೆಗಳನ್ನು ಇನ್ನೊಂದು ವಗರ್ಿಕರಣದಲ್ಲಿ ವಿವರಿಸಿದ್ದೇನೆ. ನಾನು ಐದು ಬಗೆಯ ವೇದನೆಗಳನ್ನು... ಆರು ಬಗೆಯ ವೇದನೆಗಳನ್ನು.... ಹದಿನೆಂಟು ಬಗೆಯ.... ಮೂವತ್ತಾರು ಬಗೆಯ.... 108 ಬಗೆಯ ವೇದನೆಗಳನ್ನು ಇನ್ನೊಂದು ಬಗೆಯ ವಗರ್ಿಕರಣದಲ್ಲಿ ವಿವರಿಸಿದ್ದೇನೆ. ಮತ್ತೆ ಯಾವುದು ಭಿಕ್ಷುಗಳೇ ಎರಡು ವಿಧದ ವೇದನೆಗಳು? ಒಂದು ಶಾರೀರಿಕ ವೇದನೆ ಮತ್ತು ಇನ್ನೊಂದು ಮಾನಸಿಕ ವೇದನೆ. ಮತ್ತೆ ಯಾವುದು ಭಿಕ್ಷುಗಳೇ ಮೂರು ವಿಧದ ವೇದನೆಗಳು? ಸುಖವೇದನೆ, ದುಃಖವೇದನೆ ಮತ್ತು ಸುಖವೂ ಅಲ್ಲದ ದುಃಖವೂ ಅಲ್ಲದ ವೇದನೆ. ಮತ್ತೆ ಯಾವುದು ಭಿಕ್ಷುಗಳೇ ಐದು ವಿಧದ ವೇದನೆಗಳು? ಸುಖೀಂದ್ರಿಯ, ದುಕ್ಖೀಂದ್ರಿಯ,  ಸೋಮಸ್ಸಿಂದ್ರೀಯ (ಆನಂದ), ದೋಮನಸ್ಸಿಂದ್ರೀಯ (ಶೋಕ) ಮತ್ತು ಉಪೇಕ್ಷಿಂದ್ರೀಯ. ಮತ್ತೆ ಯಾವುದು ಭಿಕ್ಷುಗಳೇ ಆರು ಬಗೆಯ ವೇದನೆಗಳು? ಚಕ್ಷುವಿನಿಂದ ಉದಯಿಸಿದ ವೇದನೆ, ಕಿವಿಯಿಂದ ಉದಯಿಸಿದ ವೇದನೆ, ನಾಸಿಕದಿಂದ ಉದಯಿಸಿದ ವೇದನೆ, ನಾಲಿಗೆಯಿಂದ ಉದಯಿಸಿದ ವೇದನೆ, ಕಾಯದಿಂದ ಉದಯಿಸಿದ ವೇದನೆ, ಮನಸ್ಸಿನಿಂದ ಉದಯಿಸಿದ ವೇದನೆ. ಮತ್ತೆ ಭಿಕ್ಷುಗಳೇ, ಯಾವುವು ಮೂವತ್ತಾರು ಬಗೆಯ ವೇದನೆಗಳು? ಇಲ್ಲಿ ಗೃಹಸ್ಥರ (ಪ್ರಾಪಂಚಿಕರ/ಇಂದ್ರೀಯ ಸುಖಗಳು) ಸೋಮನಸ್ಸಿನ ಆರು ವೇದನೆಗಳು, ಆರು ವಿಧದ ತ್ಯಾಗದ (ನೇಕ್ಖಮ್ಮ) ಸೋಮನಸ್ಸಿನ ವೇದನೆಗಳು, ಗೃಹಸ್ಥರ ದೋಮನಸ್ಸಿನ ಆರು ವೇದನೆಗಳು, ಆರುವಿಧದ ದೋಮನಸ್ಸಿನ ನೇಕ್ಖಮ್ಮದ ವೇದನೆಗಳು, ಗೃಹಸ್ಥರ ಆರು ವಿಧದ ಉಪೇಕ್ಷಾ ವೇದನೆಗಳು, ತ್ಯಾಗದಿಂದ ಉದಯಿಸುವ ಆರು ವಿಧದ ಉಪೇಕ್ಷಾ ವೇದನೆಗಳು ಇವು ಮೂವತ್ತಾರು ಬಗೆಯ ವೇದನೆಗಳಾಗಿವೆ. ಮತ್ತೆ ಭಿಕ್ಷುಗಳೇ ಯವುವು 108 ವಿಧದ ವೇದನೆಗಳು? ಮೇಲಿನ 36 ವೇದನೆಗಳನ್ನು ಭೂತಕಾಲದವು, ಮೇಲಿನ 36 ವೇದನೆಗಳನ್ನು ಭವಿಷ್ಯಕಾಲದವು ಮತ್ತು ಈಗಿನ 36 ವೇದನೆಗಳು. ಹೀಗೆ ಒಟ್ಟು 108 ವೇದನೆಗಳಿ ಇವೆ. ಇವೇ ಭಿಕ್ಷುಗಳೇ, 108 ವೇದನೆಗಳ ವಿವರಣೆಗಳಾಗಿವೆ.


36.3.3 ಅಞ್ಞತರ ಭಿಕ್ಖು ಸುತ್ತ

271. ಆಗ ಒಬ್ಬ ಭಿಕ್ಷುವು ಭಗವಾನರ ಬಳಿಗೆ ಬಂದನು. ವಂದಿಸಿ ಒಂದೆಡೆ ಕುಳಿತನು. ನಂತರ ಹೀಗೆ ಕೇಳಿದನು: ಭಂತೆ, ವೇದನೆಗಳೆಂದರೇನು? ವೇದನೆಗಳ ಉದಯವೆಂದರೇನು? ವೇದನೆಗಳ ಉದಯದ ಹಾದಿ ಹೇಗೆ? ವೇದನೆಗಳ ನಿರೋಧ ಹೇಗೆ? ವೇದನೆಗಳ ನಿರೋಧಕ್ಕಿರುವ ಮಾರ್ಗ ಯಾವುದು? ವೇದನೆಗಳ ಆಸ್ವಾದನೆ ಎಂದರೇನು? ವೇದನೆಗಳ ಅಪಾಯ ಹೇಗೆ? ವೇದನೆಗಳಿಂದ ಬಿಡುಗಡೆ ಹೇಗೆ?
ಇಲ್ಲಿ ಮೂರು ಬಗೆಯ ವೇದನೆಗಳಿವೆ ಭಿಕ್ಷುಗಳೇ. ಸುಖವೇದನೆ, ದುಃಖವೇದನೆ ಮತ್ತು ದುಃಖ-ಸುಖಗಳಿಲ್ಲದ ವೇದನೆ. ಇವನ್ನೇ ವೇದನೆಗಳು ಎನ್ನುತ್ತಾರೆ. ಸ್ಪರ್ಶಗಳ ಉದಯದಿಂದ ವೇದನೆಗಳ ಉದಯವಾಗುತ್ತದೆ. ತೃಷ್ಣೆಯೇ ವೇದನೆಗಳಿಗೆ ಕೊಂಡೊಯ್ಯುವ ಮಾರ್ಗವಾಗಿದೆ. ಸ್ಪರ್ಶದ ನಿರೋಧವೇ ವೇದನೆಗಳ ನಿರೋಧವಾಗಿದೆ. ಅಷ್ಠಾಂಗಿಕ ಮಾರ್ಗವೇ ವೇದನೆಗಳ ನಿರೋಧಕ್ಕಿರುವ ಮಾರ್ಗವಾಗಿದೆ. ಅವೆಂದರೆ: ಸಮ್ಯಕ್ದೃಷ್ಟಿಕೋನ.... ಸಮ್ಮಾಕ್ಸಮಾಧಿ.
ವೇದನೆಗಳಲ್ಲಿ ಅವಲಂಬಿಸುವಿಕೆಯೇ ವೇದನೆಗಳ ಆಸ್ವಾದನೆ. ವೇದನೆಗಳು ಅನಿತ್ಯಕರ, ದುಃಖಕರ ಮತ್ತು ಪರಿವರ್ತನೀಯವಾಗಿದೆ. ಇದೇ ವೇದನೆಗಳ ಅಪಾಯವಾಗಿದೆ. ವೇದನೆಗಳ ಆಸೆ ಮತ್ತು ರಾಗದ ತ್ಯಾಗವೇ ವೇದನೆಗಳಿಂದ ಬಿಡುಗಡೆಯಾಗಿದೆ.


36.3.4 ಪುಬ್ಬ ಸುತ್ತಂ (ಪೂರ್ವ ಸುತ್ತ)

272. ಭಿಕ್ಷುಗಳೇ, ಸಮ್ಮಾಸಂಬೋಧಿಯ ಪ್ರಾಪ್ತಿಗಿಂತ ಹಿಂದೆ ನಾನಿನ್ನು ಬೋಧಿಸತ್ವನಾಗಿದ್ದಾಗ, ಪೂರ್ಣವಾಗಿ ಜ್ಞಾನೋದಯ ಪಡೆಯದೆ ಇದ್ದಾಗ ನನ್ನಲ್ಲಿ ಹೀಗೆ ತರ್ಕವು ಉದಯಿಸಿತು. ಯಾವುದು ವೇದನೆ? ವೇದನೆಗಳ ಉದಯವು ಹೇಗೆ? ವೇದನೆಗಳ ಉದಯಕ್ಕೆ ಹಾದಿ ಹೇಗೆ? ವೇದನೆಗಳ ನಿರೋಧ ಹೇಗೆ? ವೇದನೆಗಳ ನಿರೋಧಕ್ಕಿರುವ ಮಾರ್ಗ ಯಾವುದು? ವೇದನೆಗಳ ಆಸ್ವಾದನೆ ಹೇಗೆ? ವೇದನೆಗಳ ಅಪಾಯವೇನು? ವೇದನೆಗಳಿಂದ ಬಿಡುಗಡೆ ಹೇಗೆ? ಆಗ ಭಿಕ್ಷುಗಳೇ ನನ್ನಲ್ಲಿ ಹೀಗೆ ಉಂಟಾಯಿತು: ಇಲ್ಲಿ ಮೂರು ಬಗೆಯ ವೇದನೆಗಳಿವೆ ಭಿಕ್ಷುಗಳೇ. ಸುಖವೇದನೆ, ದುಃಖವೇದನೆ ಮತ್ತು ದುಃಖ-ಸುಖಗಳಿಲ್ಲದ ವೇದನೆ. ಇವನ್ನೇ ವೇದನೆಗಳು ಎನ್ನುತ್ತಾರೆ. ಸ್ಪರ್ಶಗಳ ಉದಯದಿಂದ ವೇದನೆಗಳ ಉದಯವಾಗುತ್ತದೆ. ತೃಷ್ಣೆಯೇ ವೇದನೆಗಳಿಗೆ ಕೊಂಡೊಯ್ಯುವ ಮಾರ್ಗವಾಗಿದೆ. ಸ್ಪರ್ಶದ ನಿರೋಧವೇ ವೇದನೆಗಳ ನಿರೋಧವಾಗಿದೆ. ಅಷ್ಠಾಂಗಿಕ ಮಾರ್ಗವೇ ವೇದನೆಗಳ ನಿರೋಧಕ್ಕಿರುವ ಮಾರ್ಗವಾಗಿದೆ. ಅವೆಂದರೆ: ಸಮ್ಯಕ್ದೃಷ್ಟಿಕೋನ.... ಸಮ್ಮಾಕ್ಸಮಾಧಿ.
ವೇದನೆಗಳಲ್ಲಿ ಅವಲಂಬಿಸುವಿಕೆಯೇ ವೇದನೆಗಳ ಆಸ್ವಾದನೆ. ವೇದನೆಗಳು ಅನಿತ್ಯಕರ, ದುಃಖಕರ ಮತ್ತು ಪರಿವರ್ತನೀಯವಾಗಿದೆ. ಇದೇ ವೇದನೆಗಳ ಅಪಾಯವಾಗಿದೆ. ವೇದನೆಗಳ ಆಸೆ ಮತ್ತು ರಾಗದ ತ್ಯಾಗವೇ ವೇದನೆಗಳಿಂದ ಬಿಡುಗಡೆಯಾಗಿದೆ.


36.3.5 ಞಾಣ ಸುತ್ತಂ (ಜ್ಞಾನ ಸುತ್ತ)

273. ಇವೇ ವೇದನೆಗಳೆಂದು ಹೀಗೆ ಭಿಕ್ಷುಗಳೇ, ಹಿಂದೆ ಕೇಳದಿದ್ದಂತಹ ಧಮ್ಮಚಕ್ಷು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು.... ವಿದ್ಯಾವು.... ಬೆಳಕು (ಅಲೋಕ) ಉದಯಿಸಿತು.
ಇವೇ ವೇದನೆಗಳ ಉದಯ. ಹೀಗೆ ಭಿಕ್ಷುಗಳೇ, ಹಿಂದೆ ಕೇಳದಿದ್ದಂತಹ ಧಮ್ಮಚಕ್ಷು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು.... ವಿದ್ಯಾವು.... ಬೆಳಕು (ಅಲೋಕ) ಉದಯಿಸಿತು.
ಇವೇ ವೇದನೆಗಳ ಉದಯಕ್ಕೆ ಕೊಂಡೊಯ್ಯುವ ಮಾರ್ಗ. ಹೀಗೆ ಭಿಕ್ಷುಗಳೇ, ಹಿಂದೆ ಕೇಳದಿದ್ದಂತಹ ಧಮ್ಮಚಕ್ಷು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು.... ವಿದ್ಯಾವು.... ಬೆಳಕು (ಅಲೋಕ) ಉದಯಿಸಿತು.
ಇವೇ ವೇದನೆಗಳ ನಿರೋಧ. ಹೀಗೆ ಭಿಕ್ಷುಗಳೇ, ಹಿಂದೆ ಕೇಳದಿದ್ದಂತಹ ಧಮ್ಮಚಕ್ಷು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು.... ವಿದ್ಯಾವು.... ಬೆಳಕು (ಅಲೋಕ) ಉದಯಿಸಿತು.
ಇವೇ ವೇದನೆಗಳ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗ. ಹೀಗೆ ಭಿಕ್ಷುಗಳೇ, ಹಿಂದೆ ಕೇಳದಿದ್ದಂತಹ ಧಮ್ಮಚಕ್ಷು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು.... ವಿದ್ಯಾವು.... ಬೆಳಕು (ಅಲೋಕ) ಉದಯಿಸಿತು.
ಇವೇ ವೇದನೆಗಳ ಆಸ್ವಾದನೆ. ಹೀಗೆ ಭಿಕ್ಷುಗಳೇ, ಹಿಂದೆ ಕೇಳದಿದ್ದಂತಹ ಧಮ್ಮಚಕ್ಷು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು.... ವಿದ್ಯಾವು.... ಬೆಳಕು (ಅಲೋಕ) ಉದಯಿಸಿತು.
ಇವೇ ವೇದನೆಗಳ ಅಪಾಯ. ಹೀಗೆ ಭಿಕ್ಷುಗಳೇ, ಹಿಂದೆ ಕೇಳದಿದ್ದಂತಹ ಧಮ್ಮಚಕ್ಷು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು.... ವಿದ್ಯಾವು.... ಬೆಳಕು (ಅಲೋಕ) ಉದಯಿಸಿತು.
ಇವೇ ವೇದನೆಗಳ ಬಿಡುಗಡೆ. ಹೀಗೆ ಭಿಕ್ಷುಗಳೇ, ಹಿಂದೆ ಕೇಳದಿದ್ದಂತಹ ಧಮ್ಮಚಕ್ಷು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು.... ವಿದ್ಯಾವು.... ಬೆಳಕು (ಅಲೋಕ) ಉದಯಿಸಿತು.


36.3.6 ಸಂಭಹುಲ ಭಿಕ್ಷು ಸುತ್ತ

274. ಆಗ ಭಗವಾನರು ರಾಜಗೃಹದ ವೇಳುವನದಲ್ಲಿದ್ದರು. ಆಗ ಹಲವಾರು ಭಿಕ್ಷುಗಳು ಭಗವಾನರಲ್ಲಿಗೆ ಬಂದು ವಂದಿಸಿ ಒಂದೆಡೆ ಕುಳಿತರು. ಹಾಗೆ ಕುಳಿತಂತಹ ಭಿಕ್ಷುಗಳು ಭಗವಾನರಲ್ಲಿ ಹೀಗೆ ಪ್ರಶ್ನಿಸಿದರು: ಭಂತೆ, ವೇದನೆಗಳೆಂದರೇನು? ವೇದನೆಗಳ ಉದಯವೆಂದರೇನು? ವೇದನೆಗಳ ಉದಯದ ಹಾದಿ ಹೇಗೆ? ವೇದನೆಗಳ ನಿರೋಧ ಹೇಗೆ? ವೇದನೆಗಳ ನಿರೋಧಕ್ಕಿರುವ ಮಾರ್ಗ ಯಾವುದು? ವೇದನೆಗಳ ಆಸ್ವಾದನೆ ಎಂದರೇನು? ವೇದನೆಗಳ ಅಪಾಯ ಹೇಗೆ? ವೇದನೆಗಳಿಂದ ಬಿಡುಗಡೆ ಹೇಗೆ?
ಇಲ್ಲಿ ಮೂರು ಬಗೆಯ ವೇದನೆಗಳಿವೆ ಭಿಕ್ಷುಗಳೇ. ಸುಖವೇದನೆ, ದುಃಖವೇದನೆ ಮತ್ತು ದುಃಖ-ಸುಖಗಳಿಲ್ಲದ ವೇದನೆ. ಇವನ್ನೇ ವೇದನೆಗಳು ಎನ್ನುತ್ತಾರೆ. ಸ್ಪರ್ಶಗಳ ಉದಯದಿಂದ ವೇದನೆಗಳ ಉದಯವಾಗುತ್ತದೆ. ತೃಷ್ಣೆಯೇ ವೇದನೆಗಳಿಗೆ ಕೊಂಡೊಯ್ಯುವ ಮಾರ್ಗವಾಗಿದೆ. ಸ್ಪರ್ಶದ ನಿರೋಧವೇ ವೇದನೆಗಳ ನಿರೋಧವಾಗಿದೆ. ಅಷ್ಠಾಂಗಿಕ ಮಾರ್ಗವೇ ವೇದನೆಗಳ ನಿರೋಧಕ್ಕಿರುವ ಮಾರ್ಗವಾಗಿದೆ. ಅವೆಂದರೆ: ಸಮ್ಯಕ್ದೃಷ್ಟಿಕೋನ.... ಸಮ್ಮಾಕ್ಸಮಾಧಿ.
ವೇದನೆಗಳಲ್ಲಿ ಅವಲಂಬಿಸುವಿಕೆಯೇ ವೇದನೆಗಳ ಆಸ್ವಾದನೆ. ವೇದನೆಗಳು ಅನಿತ್ಯಕರ, ದುಃಖಕರ ಮತ್ತು ಪರಿವರ್ತನೀಯವಾಗಿದೆ. ಇದೇ ವೇದನೆಗಳ ಅಪಾಯವಾಗಿದೆ. ವೇದನೆಗಳ ಆಸೆ ಮತ್ತು ರಾಗದ ತ್ಯಾಗವೇ ವೇದನೆಗಳಿಂದ ಬಿಡುಗಡೆಯಾಗಿದೆ.


36.3.7 ಪಠಮ ಸಮಣ ಬ್ರಾಹ್ಮಣ ಸುತ್ತಂ

275. ಭಿಕ್ಷುಗಳೇ, ಮೂರು ವೇದನೆಗಳಿವೆ ಯಾವುವು ಮೂರು? ಸುಖವೇದನೆ, ದುಃಖವೇದನೆ, ತಟಸ್ಥವೇದನೆ. ಯಾವ ಸಮಣ ಬ್ರಾಹ್ಮಣರು ವೇದನೆಗಳ ಆಸ್ವಾದನೆ, ಅಪಾಯ, ಬಿಡುಗಡೆ ಅರಿಯಲಾರರೋ ಅವರು ಸಮಣರಲ್ಲಿ ಸಮಣರಲ್ಲ ಹಾಗು ಬ್ರಾಹ್ಮಣರಲ್ಲಿ ಬ್ರಾಹ್ಮಣರೇ ಅಲ್ಲ. (ಅಂದರೆ ಆಧ್ಯಾತ್ಮಿಕರಲ್ಲ). ಏಕೆಂದರೆ ಈ ಸಮಣ ಬ್ರಾಹ್ಮಣರು ಇವನ್ನು ತಮಗೆ ತಾವೇ ನೇರವಾಗಿ ಅರಿಯಲಾಗದೆ, ಪಾಲಿಸಲಾಗದೆ, ಸಾಕ್ಷಾತ್ಕರಿಸಲಾಗದೆ ಇರುವರು. ಆದರೆ ಭಿಕ್ಷುಗಳೇ, ಯಾವ ಸಮಣ ಬ್ರಾಹ್ಮಣರು ಇವನ್ನು ಅವು ಇರುವಂತೆಯೇ ಯಥಾಭೂತವಾಗಿ ಅರ್ಥಮಾಡಿಕೊಂಡಾಗ, ಅವರನ್ನು ನಾನು ಸಮಣ ಬ್ರಾಹ್ಮಣರೆಂದು ಪರಿಗಣಿಸುವೆನು. ಏಕೆಂದರೆ ಈ ಸಮಣ ಬ್ರಾಹ್ಮಣರು ತಮ್ಮಲ್ಲಿ ತಾವೇ ನೇರವಾಗಿ ಅರಿತು, ಪಾಲಿಸಿ, ಸಾಕ್ಷಾತ್ಕಾರ ಪಡೆದು ಸಮಣತ್ವದ ಅಥವಾ ಬ್ರಾಹ್ಮಣತ್ವದ ಗುರಿಯನ್ನು (ಅರಹಂತತ್ವ) ಮುಟ್ಟಿದ್ದಾರೆ.


36.3.8 ದುತಿಯಾ ಸಮಣ ಬ್ರಾಹ್ಮಣ ಸುತ್ತಂ

276. ಭಿಕ್ಷುಗಳೇ, ಯಾವ ಸಮಣ ಬ್ರಾಹ್ಮಣರು ವೇದನೆಗಳ ಉದಯ ಹಾಗು ವ್ಯಯವನ್ನು ಅರಿಯಲಾರರೋ, ಆಸ್ವಾದನೆ, ಅಪಾಯ, ಬಿಡುಗಡೆ ಅರಿಯಲಾರರೋ ಅವರನ್ನು ಸಮಣರಲ್ಲಿ ಸಮಣರೆಂದಾಗಲೀ, ಬ್ರಾಹ್ಮಣರಲ್ಲಿ ಬ್ರಾಹ್ಮಣರೆಂದು ಪರಿಗಣಿಸಲಾರೆನು. ಏಕೆಂದರೆ ಅವರು ಯಥಾಭೂತವಾಗಿ ಅರ್ಥಮಾಡಿಕೊಂಡಿಲ್ಲ, ನೇರ ಸಾಕ್ಷಾತ್ಕಾರ ಮಾಡಿಲ್ಲ. ಅವರು ಸಮತ್ವ ಫಲವಾಗಲಿ ಬ್ರಾಹ್ಮಣತ್ವದ ಗುರಿ ತಲುಪಿಲ್ಲ. ಆದರೆ ಭಿಕ್ಷುಗಳೇ, ಯಾವ ಸಮಣ ಬ್ರಾಹ್ಮಣರು ಇವನ್ನು ಅವು ಇರುವಂತೆಯೇ ಯಥಾಭೂತವಾಗಿ ಅರ್ಥಮಾಡಿಕೊಂಡಾಗ, ಅವರನ್ನು ನಾನು ಸಮಣ ಬ್ರಾಹ್ಮಣರೆಂದು ಪರಿಗಣಿಸುವೆನು. ಏಕೆಂದರೆ ಈ ಸಮಣ ಬ್ರಾಹ್ಮಣರು ತಮ್ಮಲ್ಲಿ ತಾವೇ ನೇರವಾಗಿ ಅರಿತು, ಪಾಲಿಸಿ, ಸಾಕ್ಷಾತ್ಕಾರ ಪಡೆದು ಸಮಣತ್ವದ ಅಥವಾ ಬ್ರಾಹ್ಮಣತ್ವದ ಗುರಿಯನ್ನು (ಅರಹಂತತ್ವ) ಮುಟ್ಟಿದ್ದಾರೆ.


36.3.9 ತತಿಯಾ ಸಮಣ ಬ್ರಾಹ್ಮಣ ಸುತ್ತಂ

277. ಭಿಕ್ಷುಗಳೇ, ಯಾವ ಸಮಣ ಬ್ರಾಹ್ಮಣರು ವೇದನೆಗಳ ಉದಯ ಹಾಗು ವ್ಯಯವನ್ನು ಅರಿಯಲಾರರೋ, ಆಸ್ವಾದನೆ, ಅಪಾಯ, ಬಿಡುಗಡೆ ಅರಿಯಲಾರರೋ ಅವರನ್ನು ಸಮಣರಲ್ಲಿ ಸಮಣರೆಂದಾಗಲೀ, ಬ್ರಾಹ್ಮಣರಲ್ಲಿ ಬ್ರಾಹ್ಮಣರೆಂದು ಪರಿಗಣಿಸಲಾರೆನು. ಏಕೆಂದರೆ ಅವರು ಯಥಾಭೂತವಾಗಿ ಅರ್ಥಮಾಡಿಕೊಂಡಿಲ್ಲ, ನೇರ ಸಾಕ್ಷಾತ್ಕಾರ ಮಾಡಿಲ್ಲ. ಅವರು ಸಮತ್ವ ಫಲವಾಗಲಿ ಬ್ರಾಹ್ಮಣತ್ವದ ಗುರಿ ತಲುಪಿಲ್ಲ. ಆದರೆ ಭಿಕ್ಷುಗಳೇ, ಯಾವ ಸಮಣ ಬ್ರಾಹ್ಮಣರು ವೇದನೆಗಳ ಉದಯ ಹಾಗು ನಿರೋಧ ಅರಿತಿರುವರೋ, ನಿರೋಧ ಮಾರ್ಗ ಅರಿತಿರುವರೋ ಅಂತಹವನ್ನು ನಾನು ಸಮಣರಲ್ಲಿ ಸಮಣರು ಬ್ರಾಹ್ಮಣರಲ್ಲಿ ಬ್ರಾಹ್ಮಣರೆಂದು ಪರಿಗಣಿಸುತ್ತೇನೆ. ಏಕೆಂದರೆ..... ಬ್ರಾಹ್ಮಣತ್ವದ ಗುರಿಯನ್ನು ತಲುಪಿದ್ದಾರೆ.



36.3.10 ಸುದ್ದಿಕ ಸುತ್ತಂ

278. ಭಿಕ್ಷುಗಳೇ, ಮೂರು ವಿಧದ ವೇದನೆಗಳಿವೆ, ಯಾವ ಮೂರು? ಸುಖವೇದನೆ, ದುಃಖವೇದನೆ, ಅಸುಖ-ಅದುಃಖ ವೇದನೆ.

36.3.11 ನಿರಾಮಿಸ ಸುತ್ತಂ (ನಿರಾಮಿಷ ಸುತ್ತ)

279. ಭಿಕ್ಷುಗಳೇ, ಆಮಿಷವುಳ್ಳ ಪೀತಿಯದೆ (ಆನಂದವಿದೆ), ಹಾಗೆಯೇ ನಿರಾಮಿಷವುಳ್ಳ ಆನಂದವಿದೆ. ನಿರಾಮಿಷದಲ್ಲೇ ನಿರಾಮಿಷ ಆನಂದವೂ ಇದೆ. ಹಾಗೆಯೇ ಆಮಿಷ ಸುಖವಿದೆ, ನಿರಾಮಿಷ ಸುಖವಿದೆ, ನಿರಾಮಿಶದಲ್ಲೇ ನಿರಾಮಿಷ ಸುಖವಿದೆ. ಆಮಿಷಯುತ ಉಪೇಕ್ಷೆಯಿದೆ, ನಿರಾಮಿಷಯುತವಾದ ಉಪೇಕ್ಷೆಯಿದೆ. ಮತ್ತು ನಿರಾಮಿಷದಲ್ಲೇ ನಿರಾಮಿಷ ಉಪೇಕ್ಷೆಯಿದೆ. ಹಾಗೆಯೇ ಆಮಿಷ ವಿಮುಕ್ತಿಯಿದೆ, ನಿರಾಮಿಷ ವಿಮುಕ್ತಿಯಿದೆ, ನಿರಾಮಿಷದಲ್ಲಿ ನಿರಾಮಿಷ ವಿಮುಕ್ತಿಯಿದೆ. ಮತ್ತೆ ಭಿಕ್ಷುಗಳೇ, ಯಾವುದು ಸಾಮಿಷ ಪ್ರೀತಿ (ಆನಂದ)? ಅವೇ ಪಂಚೇಂದ್ರಿಯಗಳ ಸುಖಭೋಗಗಳು. ಯಾವುವವು? ಇಲ್ಲಿ ಚಕ್ಷುವಿನಿಂದ ಗ್ರಹಿಸಬಹುದಾದ ರೂಪಗಳಿವೆ. ಅವು ಆಸೆಪಡುವಂತಹುದು, ಪ್ರಿಯವಾದುದು, ಒಪ್ಪುವಂತಹುದು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಅದೇರೀತಿ ಕಿವಿಯಿಂದ.... ಮೂಗಿನಿಂದ.... ನಾಲಿಗೆಯಿಂದ.... ಕಾಯದಿಂದ.... ಸ್ಪಶರ್ಿಸಲ್ಪಡುವ ಸ್ಪರ್ಶಗಳು ಆಸೆಪಡುವಂತಹುದು, ಪ್ರಿಯವಾದುದು, ಒಪ್ಪುವಂತಹುದು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಈ ಪಂಚ ಕಾಮಗುಣಗಳನ್ನೇ ಸಾಮಿಷ ಪ್ರೀತಿ (ಆನಂದ) ಎನ್ನುತ್ತಾರೆ.
ಯಾವುದು ಭಿಕ್ಷುಗಳೇ ನಿರಾಮಿಷ ಪ್ರೀತಿ (ಆನಂದ)? ಇಲ್ಲಿ ಭಿಕ್ಷುವು ಇಂದ್ರೀಯ ಸುಖಗಳಿಂದ, ಅಕುಶಲ ಮಾನಸಿಕ ಸ್ಥಿತಿಗಳಿಂದ ವಿರಕ್ತನಾಗಿ, ಪ್ರಥಮ ಝಾನದಲ್ಲಿ ಪ್ರವೇಶಿಸಿ ನೆಲೆಸುತ್ತಾನೆ. ಆ ಸ್ಥಿತಿಯು ವಿತರ್ಕ, ವಿಚಾರ, ಆನಂದ, ಸುಖ ಮತ್ತು ಏಕಾಗ್ರತೆಯಿಂದ ಕೂಡಿರುತ್ತದೆ. ನಂತರ ವಿತರ್ಕ, ವಿಚಾರಗಳಿಂದ ಮುಕ್ತವಾದ ದ್ವಿತೀಯ ಸಮಾಧಿಯಲ್ಲಿ ಪ್ರವೇಶಿಸಿ ನೆಲೆಸುತ್ತಾನೆ. ಅಲ್ಲಿ ಅಂತರ್ಯದ ಶ್ರದ್ಧೆಯು ಚಿತ್ತ ಏಕಾಗ್ರತೆಯಿರುತ್ತದೆ. ಇದನ್ನು ನಿರಾಮಿಷ ಆನಂದ ಎನ್ನುತ್ತಾರೆ.
ಮತ್ತೆ ಯಾವುದು ನಿರಾಮಿಷದಲ್ಲಿ ನಿರಾಮಿಷವಾದ ಅನಂತವು? (ಲೋಕೋತ್ತರ ಆನಂದ)? ಇಲ್ಲಿ ಭಿಕ್ಷುವು ಖೀಣಾಸ್ರವನಾಗಿ, ತನ್ನ ಚಿತ್ತವು ರಾಗ, ದ್ವೇಷ ಮತ್ತು ಮೋಹಗಳಿಂದ ಮುಕ್ತನಾಗಿರುವುದನ್ನು ಕಾಣುತ್ತಾನೆ. ಆಗ ಅಲ್ಲಿ ಆನಂದವು ಉಂಟಾಗುವುದು. ಅದೇ ಲೋಕೋತ್ತರ (ನಿರಾಮಿಷದಲ್ಲಿ ನಿರಾಮಿಷ) ಆನಂದವಾಗಿದೆ.
ಮತ್ತೆ ಭಿಕ್ಷುಗಳೇ, ಯಾವುದು ಆಮಿಷ ಸುಖವು? ಅವೇ ಪಂಚೇಂದ್ರಿಯಗಳ ಸುಖಭೋಗಗಳು. ಯಾವುವವು? ಇಲ್ಲಿ ಚಕ್ಷುವಿನಿಂದ ಗ್ರಹಿಸಬಹುದಾದ ರೂಪಗಳಿವೆ. ಅವು ಆಸೆಪಡುವಂತಹುದು, ಪ್ರಿಯವಾದುದು, ಒಪ್ಪುವಂತಹುದು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಅದೇರೀತಿ ಕಿವಿಯಿಂದ.... ಮೂಗಿನಿಂದ.... ನಾಲಿಗೆಯಿಂದ.... ಕಾಯದಿಂದ.... ಸ್ಪಶರ್ಿಸಲ್ಪಡುವ ಸ್ಪರ್ಶಗಳು ಆಸೆಪಡುವಂತಹುದು, ಪ್ರಿಯವಾದುದು, ಒಪ್ಪುವಂತಹುದು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಇವೇ ಸಾಮಿಷ ಸುಖವಾಗಿದೆ. ಮತ್ತೆ ನಿರಾಮಿಷ ಸುಖವು ಹೇಗಿರುತ್ತದೆ? ಇಲ್ಲಿ ಭಿಕ್ಷುವು ಇಂದ್ರೀಯ ಸುಖಗಳಿಂದ ವಿಮುಖನಾಗಿ.... ಪ್ರಥಮ ಝಾನವನ್ನು ಪ್ರಾಪ್ತಿಮಾಡುತ್ತಾನೆ.... ದ್ವಿತೀಯ ಝಾನವನ್ನು ಪ್ರಾಪ್ತಿಮಾಡುತ್ತಾನೆ. ನಂತರ ಆನಂದವನ್ನು ದಾಟಿದವನಾಗಿ ಸಮಚಿತ್ತತೆಯಿಂದ ಕೂಡಿದವನಾಗಿ ಎಚ್ಚರಿಕೆ ಹಾಗು ಸ್ಪಷ್ಟ ಗ್ರಹಿಕೆಯುಳ್ಳವನಾಗಿ, ಆತನು ಶರೀರದಲ್ಲೆಲ್ಲಾ ಸುಖವನ್ನು ಅನುಭವಿಸುತ್ತಾನೆ. ಹೀಗೆ ಆತನು ಪ್ರೀತಿಯ ಝಾನ ಪ್ರಾಪ್ತಿಮಾಡುತ್ತಾನೆ. ಅದನ್ನು ಆರ್ಯನು, ಸಮಚಿತ್ತತೆಯುಳ್ಳವನು, ಸ್ಮೃತಿವಂತನು ವಿಹರಿಸುವ ಸುಖ ಎನ್ನುತ್ತಾರೆ. ಇದೇ ನಿರಾಮಿಷ ಸುಖವಾಗಿದೆ.
ಮತ್ತೆ ಯಾವುದು ಭಿಕ್ಷುಗಳೇ, ನಿರಾಮಿಷ ಸುಖದಲ್ಲೇ ನಿರಾಮಿಷ ಸುಖವು? (ಲೋಕೋತ್ತರ ಸುಖವು?) ಯಾವಾಗ ಭಿಕ್ಷುವು ಖೀಣಾಸ್ರವನಾಗಿ ತನ್ನ ಚಿತ್ತವು ರಾಗ, ದ್ವೇಷ ಮತ್ತು ಮೋಹದಿಂದ ಮುಕ್ತನಾಗುವುದು ಅವಲೋಕಿಸುತ್ತ ಇದ್ದಾಗ ಆತನಲ್ಲಿ ಸುಖವು ಉದಯವಾಗುವುದು. ಅದೇ ನಿರಾಮಿಷದಲ್ಲೇ ನಿರಾಮಿಷ (ಲೋಕೋತ್ತರ) ಸುಖವಾಗಿದೆ.
ಮತ್ತೆ ಯಾವುದು ಭಿಕ್ಷುಗಳೇ ಆಮಿಷವುಳ್ಳ ಉಪೇಕ್ಷೇ? ಇಲ್ಲಿ ಭಿಕ್ಷುಗಳೇ, ಐದು ರೀತಿಯ ಕಾಮಗುಣಗಳಿವೆ. ಅವೆಂದರೆ: ಚಕ್ಷುವಿನಿಂದ ಗ್ರಹಸಬಲ್ಲ ರೂಪಗಳಿವೆ. ಅವು ಆಸೆ ಹುಟ್ಟಿಸುವಂತಹುದು, ಪ್ರಿಯವಾದವು, ಒಪ್ಪುವಂತಹುದು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಹಾಗೆಯೇ ಕಿವಿಯಿಂದ.... ನಾಸಿಕದಿಂದ.... ನಾಲಿಗೆಯಿಂದ.... ಕಾಯದಿಂದ.... ಸ್ಪಶರ್ಿಸಲ್ಪಡುವ ಸ್ಪರ್ಶಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಈ ಇಂದ್ರೀಯ ಸುಖಗಳಲ್ಲಿ ಉಪೇಕ್ಷಾ ಭಾವನೆಯಿಡುವಿಕೆ, ಆಮಿಷ ಉಪೇಕ್ಷೆ ಎನ್ನಿಸುತ್ತದೆ.
ಮತ್ತೆ ಭಿಕ್ಷುಗಳೇ, ಯಾವುದು ನಿರಾಮಿಷ ಉಪೇಕ್ಷೆ? ಇಲ್ಲಿ ಭಿಕ್ಷುವು ಸುಖ ಹಾಗು ದುಃಖಗಳನ್ನು ಪರಿತ್ಯಜಿಸಿ, ಹಿಂದಿನ ಸುಖ ನೋವುಗಳೆಲ್ಲವನ್ನು ವಜರ್ಿಸಿ, ಚತುರ್ಥ ಝಾನದಲ್ಲಿ ನೆಲೆಸುತ್ತಾನೆ. ಅದು ಅದುಃಖ-ಅಸುಖದಿಂದ ಕೂಡಿರುತ್ತದೆ. ಹಾಗೆಯೇ ಸಮಚಿತ್ತತೆಯಿಂದ ಆತನ ಸ್ಮೃತಿಯು ಪರಿಶುದ್ಧವಾಗುವುದು.
ಮತ್ತೆ ಯಾವುದು ಭಿಕ್ಷುಗಳೇ, ನಿರಾಮಿಷದಲ್ಲಿ ನಿರಾಮಿಷ ಉಪೇಕ್ಷೆಯು? (ಲೋಕೋತ್ತರ ನಿರಾಮಿಷ ಉಪೇಕ್ಷೆಯು) ಯಾವಾಗ ಭಿಕ್ಷುವಿನ ಆಸವಗಳು ನಾಶವಾಗುವುದೋ ಆಗ ಆತನು ಅದನ್ನು ಅವಲೋಕಿಸಿದಾಗ ಆತನು ರಾಗ, ದ್ವೇಷ, ಮತ್ತು ಮೋಹದಿಂದ ಮುಕ್ತನಾಗಿರುವುದು ಅವಲೋಕಿಸಿದಾಗ ಆತನಲ್ಲಿ ಉಪೇಕ್ಷೆಯು (ಸಮಚಿತ್ತತೆಯು) ಉದಯಿಸುವುದು. ಇದನ್ನೇ ನಿರಾಮಿಷದಲ್ಲೇ ನಿರಾಮಿಷ ಸಮಚಿತ್ತತೆ ಎನ್ನುತ್ತಾರೆ (ಲೋಕೋತ್ತರ ನಿರಾಮಿಷ ಉಪೇಕ್ಖಾ).
ಮತ್ತೆ ಯಾವುದು ಭಿಕ್ಷುಗಳೇ, ಆಮಿಷ ವಿಮುಕ್ತಿ? ಇಲ್ಲಿ ಭಿಕ್ಷುವು ರೂಪ ಲೋಕದ (ಧ್ಯಾನ) ಸುಖಗಳಿಂದ ವಿಮುಕ್ತನಾಗುವುದೇ ಆಮಿಷ ವಿಮುಕ್ತಿಯಾಗಿದೆ.
ಮತ್ತೆ ಯಾವುದು ನಿರಾಮಿಷ ವಿಮುಕ್ತಿ? ಇಲ್ಲಿ ಭಿಕ್ಷುವು ಅರೂಪ ಲೋಕಗಳ (ಧ್ಯಾನ) ವಲಯದಿಂದ ವಿಮುಕ್ತನಾಗುವುದೇ ನಿರಾಮಿಷ ವಿಮುಕ್ತಿಯಾಗಿದೆ.
ಮತ್ತೆ ಯಾವುದು ಭಿಕ್ಷುಗಳೇ, ನಿರಾಮಿಷದಲ್ಲೇ ನಿರಾಮಿಷ ವಿಮುಕ್ತಿ (ಲೋಕೋತ್ತರ ವಿಮುಕ್ತಿ)? ಇಲ್ಲಿ ಭಿಕ್ಷುವು ಖೀಣಾಸ್ರವನಾಗಿ ತನ್ನ ಚಿತ್ತವು ರಾಗದಿಂದ, ದ್ವೇಷದಿಂದ, ಮೋಹದಿಂದ ವಿಮುಕ್ತವಾಗಿರುವುದನ್ನು ಅವಲೋಕಿಸಿದಾಗ ಆಗ ಉದಯಿಸುವ ಉಪೇಕ್ಷೆಯೇ (ಸಮಚಿತ್ತತೆ). ಇದನ್ನೇ ಲೋಕೋತ್ತರ ವಿಮುಕ್ತಿ (ನಿರಾಮಿಷದಲ್ಲೇ ನಿರಾಮಿಷ ವಿಮುಕ್ತಿ) ಎನ್ನುತ್ತಾರೆ.
ಇಲ್ಲಿಗೆ ಅಟ್ಠಸತ ಪರಿಯಾಯ ವರ್ಗ ಮುಗಿಯಿತು
ಇಲ್ಲಿಗೆ ವೇದನಾ ಸಂಯಕ್ತ ಸಮಾಪ್ತಿಯಾಯಿತು.

No comments:

Post a Comment

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...