Thursday 22 March 2018

samyutta nikaya 7. ಮಿಗಜಾಲವಗ್ಗೊ (ಮೃಗಜಾಲ ವರ್ಗ)


7. ಮಿಗಜಾಲವಗ್ಗೊ (ಮೃಗಜಾಲ ವರ್ಗ)
35.7.1. ಪಠಮಮಿಗಜಾಲ ಸುತ್ತಂ (ಪ್ರಥಮ ಮೃಗಜಾಲ ಸುತ್ತ)

                63. ಘಟನೆಯು ಶ್ರಾವಸ್ತಿಯಲ್ಲಿ ನಡೆಯಿತು. ಒಮ್ಮೆ ಆಯುಷ್ಮಂತ ಮಿಗಜಾಲನು ಭಗವಾನರಲ್ಲಿ ಸಮೀಪಿಸಿ ವಂದಿಸಿ, ಪೂಜಿಸಿ ಒಂದೆಡೆ ಕುಳಿತನು. ನಂತರ ಹೀಗೆ ಕೇಳಿದನು: ಭಂತೆ, ಏಕಾಂಗಿ (ಏಕವಿಹಾರಿ), ಏಕಾಂಗಿ ಎನ್ನುವರಲ್ಲ, ಯಾವ ವಿಧದಲ್ಲಿ ಒಬ್ಬನು ಏಕಾಂಗಿ ಆಗುವನು ಮತ್ತು ಯಾವ ವಿಧದಲ್ಲಿ ಒಬ್ಬನು ಸಂಗಾತಿಯ ಜೊತೆ ವಿಹರಿಸುವನು.
                ಮಿಗಜಾಲನೇ, ಇಲ್ಲಿ ರೂಪಗಳನ್ನು ಕಣ್ಣಿನಿಂದ ಗುರುತಿಸುವುದು, ಅವು ಆಸೆ ಹುಟ್ಟಿಸುವಂತಹುದು, ಪ್ರಿಯವಾಗಿರುವಂತಹುದು, ಒಪ್ಪುವಂತಹಹುದು, ಇಂದ್ರೀಯ ಉದ್ರೇಕಕಾರಿಯಾಗಿರುವಂತಹುದು, ಪ್ರಲೋಭನಕಾರಿಯಾಗಿರುವಂತಹುದು. ಭಿಕ್ಷುವೇನಾದರೂ ಇವುಗಳಲ್ಲಿ ಆಸಕ್ತನಾದರೆ, ಸುಖಿಸುವುದಾದರೆ, ಸ್ವಾಗತಿಸುವವನಾದರೆ, ಅವುಗಳಲ್ಲಿ ತಲ್ಲೀನನಾದರೆ ಆನಂದವು ಉದಯಿಸುವುದು. ಯಾವಾಗ ಆನಂದವಿರುವುದೋ ಆಗ ರಾಗವು ಉದಯಿಸುವುದು. ಎಲ್ಲಿ ರಾಗವಿರುವುದೋ ಅಲ್ಲಿ ಬಂಧನವು ಇರುತ್ತದೆ. ಹೀಗಾಗಿ ಆನಂದದ ಸಂಕೋಲೆಯಿಂದ ಬಂಧಿತನಾದ ಭಿಕ್ಖುವು ಸಂಗಾತಿಯ ಜೊತೆ ವಿಹರಿಸುವಂತಹವನು ಎಂದು ಕರೆಸಿಕೊಳ್ಳುತ್ತಾನೆ. ಅದೇರೀತಿಯಲ್ಲಿ ಇಲ್ಲಿ ಮಿಗಜಾಲನೇ, ಶಬ್ದಗಳನ್ನು ಕಿವಿಯಿಂದ ಕೇಳಬಹುದು... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಮಾನಸಿಕ ವಿಷಯಗಳನ್ನು, ಆಸೆ ಹುಟ್ಟಿಸುವಂತಹ, ಪ್ರಿಯವಾಗಿರುವಂತಹ, ಒಪ್ಪುವಂತಹ, ಇಂದ್ರಿಯಗಳಲ್ಲಿ ಉದ್ರೇಕಕಾರಿಯಾಗಿರುವಂತಹ, ಪ್ರಲೋಭನಕಾರಿಯಾಗಿರುವಂತಹ ವಿಷಯಗಳಲ್ಲಿ ಭಿಕ್ಷುವು ಆಸಕ್ತನಾದರೆ, ಸುಖಿಸುವನಾದರೆ, ಸ್ವಾಗತಿಸುವವನಾದರೆ, ಅವುಗಳಲ್ಲೇ ತಲ್ಲೀನನಾಗುವವನಾದರೆ ಆನಂದವು ಉದಯಿಸುವುದು. ಯಾವಾಗ ಆನಂದವು ಉದಯಿಸುವುದೋ, ಆಗ ರಾಗವು ಉದಯಿಸುವುದು. ಎಲ್ಲಿ ರಾಗವಿರುವುದೋ ಅಲ್ಲಿ ಬಂಧನವು ಇರುತ್ತದೆ. ಹೀಗಾಗಿ ಆನಂದದ ಸಂಕೋಲೆಯಿಂದ ಬಂಧಿತನಾದ ಭಿಕ್ಷುವು ಸಂಗಾತಿಯ ಜೊತೆ ವಿಹರಿಸುವಂತಹನು ಎಂದು ಕರೆಸಿಕೊಳ್ಳುತ್ತಾನೆ. ಮಿಗಜಾಲನೇ, ಭಿಕ್ಷುವು ಅರಣ್ಯಗಳಲ್ಲಿ ಹಾಗು ತೋಪುಗಳಲ್ಲಿ ವಾಸಿಸಬಹುದು. ಅತಿ ಅಲ್ಪ ಶಬ್ದಗಳಿರುವಂತಹ  ದೂರದ ಪ್ರದೇಶಗಳಲ್ಲಿ ವಾಸಿಸಬಹುದು. ನಿರ್ಜನ ಪ್ರದೇಶಗಳಲ್ಲಿ ವಾಸಿಸಬಹುದು. ಆದರೂ ಸಹಾ ಅಂತಹ ಏಕಾಂತದ ಸ್ಥಳಗಳಲ್ಲಿ ವಾಸಿಸಿಯೂ ಸಹ ಆತನಿಗೆ ಸಂಗಾತಿಯ ಜೊತೆ ವಾಸಿಸುವವ ಎನ್ನುತ್ತಾರೆ. ಕಾರಣವೇನು? ತೃಷ್ಣೆಯೇ ಕಾರಣವಾಗಿದೆ. ಆತನು ತೃಷ್ಣೆಯೊಂದಿಗೆ ವಾಸಿಸುತ್ತಾನೆ, ತೃಷ್ಣೆಯನ್ನು ತ್ಯಜಿಸದ ಕಾರಣಕ್ಕೆ ಸಂಗಾತಿಯ ಜೊತೆ ವಾಸಿಸುವವ ಎನ್ನುತ್ತಾರೆ.
                ಮಿಗಜಾಲನೇ, ಕಣ್ಣಿನಿಂದ ಗ್ರಹಿಸಬಹುದಾದಂತಹ, ಆಸೆ ಹುಟ್ಟಿಸುವಂತಹ, ಪ್ರಿಯವಾದ, ಒಪ್ಪುವಂತಹ, ರಮಣೀಯವಾದ, ಇಂದ್ರಿಯ ಉದ್ರೇಕಕಾರಿಯಾದ, ಪ್ರಯೋಜನಕಾರಿಯಗಿರುವಂತಹ ದೃಶ್ಯಗಳು ಇದ್ದರೂ ಸಹಾ ಭಿಕ್ಷುವು ಅದರಲ್ಲಿ ಆನಂದಿಸದೆ ಹೋದರೆ ಅವನ್ನು ಸ್ವಾಗತಿಸದೆ ಹೋದರೆ, ಅವನ್ನು ಹಿಡಿಯದಿದ್ದರೆ, ಆನಂದವು ಅಳಿಯುವುದು. ಹೀಗಾಗಿ ಆನಂದವಿಲ್ಲದ್ದರಿಂದಾಗಿ ರಾಗವು ಸಹಾ ಇಲ್ಲದೇ ಹೋಗುವುದು. ರಾಗವಿಲ್ಲದೆ ಹೋದದ್ದರಿಂದಾಗಿ ಬಂಧನವು ಇಲ್ಲದೆ ಹೋಗುವುದು. ಹೀಗೆ ಆನಂದದ ಬಂಧನವಿಲ್ಲದೆ ಆತನಿಗೆ ಏಕಾಂಗಿ ವಿಹಾರಿ ಎಂದು ಕರೆಯುತ್ತಾರೆ. ಇಲ್ಲಿ ಮಿಗಜಾಲ ಶಬ್ದಗಳನ್ನು ಕಿವಿಯಿಂದ ಗ್ರಹಿಸುವೆವು... ವಾಸನೆಗಳನ್ನು ಮೂಗಿನಿಂದ ಗ್ರಹಿಸಬಲ್ಲೆವು... ರುಚಿಗಳನ್ನು ನಾಲಿಗೆಯಿಂದ ಗ್ರಹಿಸಬಲ್ಲೆವು... ಸ್ಪರ್ಶಗಳನ್ನು ದೇಹದಿಂದ ಗ್ರಹಿಸಬಲ್ಲೆವು... ಮಾನಸಿಕ ವಿಷಯಗಳನ್ನು (ಮನೋವಸ್ತುಗಳನ್ನು) ಮನಸ್ಸಿನಿಂದ ಗ್ರಹಿಸುವೆವು. ಅವೆಲ್ಲಾ ಆಸೆ ಹುಟ್ಟಿಸುವಂತಹವವು, ಪ್ರಿಯವಾದವು, ಒಪ್ಪುವಂತಹುದು, ಆಹ್ಲಾದಕಾರಿಯು, ಇಂದ್ರೀಯ ಉದ್ರೇಕಕಾರಿ, ಪ್ರಲೋಭನಕಾರಿಯಾಗಿರುವುವು. ಭಿಕ್ಖುವೇನಾದರು ಇವುಗಳಲ್ಲಿ ಆನಂದಿತನಾಗದಿದ್ದರೆ ಆತನು ಏಕಾಂಗಿ ಎಂದು ಕರೆಸಿಕೊಳ್ಳಲು ಅರ್ಹನಾಗುತ್ತಾನೆ.
                ಮಿಗಜಾಲ, ಭಿಕ್ಷುವು ಹಳ್ಳಿಗಳಲ್ಲಿ ಜೀವಿಸಬಹುದು, ಭಿಕ್ಖುಗಳೊಂದಿಗೆ ಭಿಕ್ಷುಣಿಯರೊಂದಿಗೆ ವಾಸಿಸಬಹುದು. ಉಪಾಸಕ ಹಾಗು ಉಪಾಸಿಕೆಯರೊಂದಿಗೆ ಇರಬಹುದು. ರಾಜರೊಂದಿಗೆ ಹಾಗು ಮಂತ್ರಿಗಳೊಂದಿಗೆ ಇರಬಹುದು, ಶ್ರಾವಕರೊಂದಿಗೆ ಹಾಗು ಅವರ ಶಿಷ್ಯರೊಂದಿಗೆ ಇರಬಹುದು. ಆದರೆ ಆತನು ಎಲ್ಲಾ ಇಂದ್ರೀಯಗಳ ತೃಷ್ಣೆಯನ್ನು ವಜರ್ಿಸಿರುವುದೇ ಆಗಿದ್ದರೆ ಆತನಿಗೆ ಕಾರಣಕ್ಕಾಗಿ ಏಕಾಂಗಿ ಎಂದು ಕರೆಯಬಹುದು.


35.7.2. ದುತಿಯ ಮಿಗಜಾಲ ಸುತ್ತಂ

                64. ಆಗ ಪೂಜ್ಯ ಮಿಗಜಾಲನು ಭಗವಾನರ ಬಳಿಗೆ ಬಂದನು. ವಂದಿಸಿ, ಪೂಜಿಸಿ ಒಂದೆಡೆ ಕುಳಿತನು. ನಂತರ ಹೀಗೆ ಕೇಳಿದನು ಭಗವಾನರು ನನಗೆ ಧಮ್ಮವನ್ನು ಸಂಕ್ಷಿಪ್ತವಾಗಿ ಬೋಧಿಸುವಂತಾಗಲಿ, ಧಮ್ಮದ ಆಲಿಸುವಿಕೆಯಿಂದಾಗಿ ನಾನು ಏಕಾಂಗಿಯಾಗಿ, ಏಕಾಂತ ಪ್ರವೃತ್ತಿಯವನು ಆಗುವಂತಾಗಲಿ, ಪರಿಶ್ರಮಿಸುವಂತಾಗಲಿ, ಉತ್ಸಾಹಿಯಾಗಿ, ದೃಢನಿಧರ್ಾರದಿಂದ ಶ್ರಮಿಸುವಂತಾಗಲಿ.
                ಮಿಗಜಾಲ, ಇಲ್ಲಿ ರೂಪಗಳನ್ನು ಕಣ್ಣಿನಿಂದ ಗ್ರಹಿಸುವೆವು. ರೂಪಗಳು ಆಸೆಹುಟ್ಟಿಸುವಂತಹುವವು, ಪ್ರಿಯವಾಗಿರುವಂತಹವು, ಒಪ್ಪುವಂತಹವು, ಪ್ರಿಯವಾಗಿರುವಂತಹವು, ಇಂದ್ರೀಯ ಉದ್ರೇಕ ತರಿಸುವಂತಹವು, ಪ್ರಲೋಭನಾಕಾರಿಯೂ ಆಗಿರುತ್ತದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಿತನಾದರೆ, ರೂಪಗಳನ್ನು ಸ್ವಾಗಿಸುತವವನಾದರೆ, ಅವುಗಳಲ್ಲಿ ಆನಂದಿತನಾದರೆ, ರೂಪಗಳನ್ನು ಸ್ವಾಗತಿಸುವವನಾದರೆ, ಅವುಗಳಲ್ಲಿ ಅಂಟುವವನಾದರೆ, ಆನಂದವು ವೃದ್ಧಿಯಾಗುವುದು. ಆನಂದದ ಉದಯದಿಂದಲೇ ಮಿಗಜಾಲನೇ ನಾನು ಹೇಳುತ್ತಿದ್ದೇನೆ, ದುಃಖವು ಉದಯವಾಗುವುದು. ಅದೇರೀತಿಯಲ್ಲಿ ಮಿಗಜಾಲನೇ ಶಬ್ದಗಳನ್ನು ಕಿವಿಯಿಂದ ಗ್ರಹಿಸುವೆವು... ವಾಸನೆಗಳನ್ನು ಮೂಗಿನಿಂದ ಗ್ರಹಿಸುವೆವು... ಸ್ಪರ್ಶಗಳನ್ನು ದೇಹದಿಂದ ಗ್ರಹಿಸುವೆವು... ಮಾನಸಿಕ ವಿಷಯಗಳನ್ನು ಮನಸ್ಸಿನಿಂದ ಗ್ರಹಿಸುವೆವು. ಅವೆಲ್ಲಾ ಆಸೆಯನ್ನು ಹುಟ್ಟುಸುವಂತಹುದು, ಪ್ರಿಯವಾಗಿರುವಂತಹುದು, ಒಪ್ಪುವಂತಹುದು, ಸುಖಾಕಾರಿಯಾಗಿರುವಂತಹುದು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿರುತ್ತವೆ. ಭಿಕ್ಷುವೇನಾದರೂ ಇವುಗಳಲ್ಲಿ ಆನಂದ ಹುಡುಕತೊಡಗಿದರೆ... ಆನಂದವು ಉದಯಿಸುವುದು. ಆನಂದದ ಉದಯದಿಂದಲೇ ದುಃಖದ ಉದಯವಾಗುವುದು ಎಂದು ನಾನು ಹೇಳುತ್ತಿದ್ದೇನೆ.
                ಮಿಗಜಾಲನೇ, ರೂಪಗಳನ್ನು ಕಣ್ಣಿನಿಂದ ಗ್ರಹಿಸುವೆವು. ಅವೆಲ್ಲಾ ಆಸೆ ಹುಟ್ಟಿಸುವಂತಹುದು, ಪ್ರಿಯವಾದವು, ಒಪ್ಪುವಂತಹವು, ಸುಖಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಾಕಾರಿಯು ಆಗಿವೆ. ಭಿಕ್ಷುವು ಇವುಗಳಲ್ಲಿ ಆನಂದಿತನಾಗದಿದ್ದರೆ, ಇವನ್ನು ಸ್ವಾಗತಿಸದಿದ್ದರೆ, ಅದನ್ನು ಹಿಡಿಯದಿದ್ದರೆ, ಆನಂದವು ಕ್ಷೀಣಿಸಿ ನಾಶವಾಗುವುವು. ಅನಂದದ ನಿರೋಧದಿಂದಾಗಿಯೇ ದುಃಖಗಳ ನಿರೋಧವೆಂದು ನಾನು ಹೇಳುತ್ತಿದ್ದೇನೆ. ಅದೇರೀತಿಯಲ್ಲಿ ಮಿಗಜಾಲನೇ, ಶಬ್ದಗಳನ್ನು ಕಿವಿಯಿಂದ ಗ್ರಹಿಸುವೆವು... ವಾಸನೆಗಳನ್ನು ಮೂಗಿನಿಂದ ಗ್ರಹಿಸುವೆವು... ಸ್ಪರ್ಶಗಳನ್ನು ದೇಹದಿಂದ ಗ್ರಹಿಸುವೆವು... ಮಾನಸಿಕ ವಿಷಯಗಳನ್ನು ಮನಸ್ಸಿನಿಂದ ಗ್ರಹಿಸುವೆವು. ಅವೆಲ್ಲಾ ಆಸೆಯನ್ನು ಹುಟ್ಟುಸುವಂತಹುದು, ಪ್ರಿಯವಾಗಿರುವಂತಹುದು, ಒಪ್ಪುವಂತಹುದು, ಸುಖಾಕಾರಿಯಾಗಿರುವಂತಹುದು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿರುತ್ತವೆ. ಆದರೆ ಭಿಕ್ಷುವು ಇವುಗಳಲ್ಲಿ ಆನಂದ ಹುಡುಕದಿದ್ದರೆ ಆನಂದವು ಕ್ಷೀಣಿಸುತ್ತದೆ, ನಾಶವಾಗುತ್ತದೆ. ಆನಂದದ ನಿರೋಧದಿಂದಲೇ ದುಃಖಗಳ ನಿರೋಧವಾಗುವುದು.
                ಇದನ್ನೆನ್ಲಾ ಆಲಿಸಿದಂತಹ ಮಿಗಜಾಲನು ಆನಂದಿತನಾದನು. ಆಸನದಿಂದ ಎದ್ದು ಭಗವಾನರಿಗೆ ಮನಪೂರ್ವಕವಾಗಿ ವಂದಿಸಿದನು. ನಂತರ ಭಗವಾನರ ಬಲಗಡೆಯಿಂದ ಪ್ರದಕ್ಷಿಣೆ ಹಾಕಿ ಅಲ್ಲಿಂದ ಹೊರಟನು. ನಂತರ ಆಯುಷ್ಮಂತನಾದ ಮಿಗಜಾಲನು ಏಕಾಂತತೆಯಲ್ಲಿ ವಾಸಿಸಿ ಅಪ್ರಮತ್ತನಾಗಿ, ಪರಿಶ್ರಮಿಯಾಗಿ, ಉತ್ಸಾಹಿಯಾಗಿ, ದೃಢತೆಯಿಂದ ಅಭಿಜ್ಜಾದಿಂದ ತನಗೆ ತಾನೇ ಯಾವುದಕ್ಕೆ ಕುಲಪುತ್ರರು ಗೃಹ ತ್ಯಾಗಮಾಡಿ, ಅನುತ್ತರವಾದ ಪರಿಶುದ್ಧವಾದ ಗುರಿಯನ್ನು ಸಾಧಿಸಿದನು. ನಂತರ ವಿಮುಕ್ತಿಜ್ಞಾನವನ್ನು ಹೀಗೆ ಪಡೆದನು: ಜನ್ಮವು ನಾಶವಾಯಿತು, ಬ್ರಹ್ಮಚರ್ಯ ಜೀವನವು ಜೀವಿಸಿಯಾಯಿತು, ಮಾಡಬೇಕಾದ್ದೆಲ್ಲಾ ಮಾಡಿಯಾಯಿತು, ಇನ್ನು ಪುನರ್ಜನ್ಮವಿಲ್ಲ ಎಂದು ಅರಿತನು ಹಾಗೂ ಮಿಗಜಾಲನು ಸಹಾ ಅರಹಂತರಲ್ಲಿ ಒಬ್ಬನಾದನು.


35.7.3. ಪಠಮ ಸಮಿದ್ಧಿ ಮಾರ ಪಞ್ಞಾ ಸುತ್ತಂ

                65. ಒಮ್ಮೆ ಭಗವಾನರು ರಾಜಗೃಹದಲ್ಲಿನ ವೇಳುವನದಲ್ಲಿನ ಅಳಿಲುಧಾಮದಲ್ಲಿ ವಿಹರಿಸುತ್ತಿದ್ದರು. ಆಗ ಆಯುಷ್ಮಂತನಾದ ಸಮಿದ್ದಿಯು ಭಗವಾನರ ಬಳಿಗೆ ಬಂದು ವಂದಿಸಿ ಒಂದೆಡೆ ಕುಳಿತನು. ನಂತರ ಭಗವಾನರೊಂದಿಗೆ ಹೀಗೆ ಪ್ರಶ್ನಿಸಿದನು. ಮಾರ ಮಾರ ಎನ್ನುತ್ತಾರಲ್ಲ. ಭಂತೆ, ಯಾವ ವಿಧದಲ್ಲಿ ಮಾರನಿದ್ದಾನೆ ಅಥವಾ ಮಾರನ ವಿವರಣೆ ನೀಡಿರಿ.
                ಸಮಿದ್ದಿಯೇ, ಎಲ್ಲಿ ಚಕ್ಷುವಿರುವುದೋ, ಎಲ್ಲಿ ರೂಪಗಳಿವೆಯೋ, ಎಲ್ಲಿ ಚಕ್ಷುವಿಞ್ಞಾನವಿರುವುದೋ, ಚಕ್ಷುವಿಞ್ಞಾನಕ್ಕೆ ವಿಷಯಗಳಿವೆಯೋ, ಅಲ್ಲಿ ಮಾರನಿದ್ದಾನೆ ಅಥವಾ ಮಾರನ ವಿವರಣೆಯಿದೆ. ಹಾಗೆಯೇ ಎಲ್ಲಿ ಕಿವಿಯಿರುವುದೋ, ಶಬ್ದಗಳಿರುವುದೋ, ಎಲ್ಲಿ ಶ್ರೋತವಿಞ್ಞಾಣವಿರುವುದೋ, ಶ್ರೋತೃವಿಞ್ಞಾನಕ್ಕೆ ವಿಷಯಗಳಿರುವುದೋ ಅಲ್ಲಿ ಮಾರನಿದ್ದಾನೆ. ಅಥವಾ ಮಾರನ ವಿವರಣೆಯು ಸಿಗುವುದು. ಎಲ್ಲಿ ಪ್ರಾಣವಿರುವುದೋ ಎಲ್ಲಿ ಗಂಧವಿರುವುದೋ ಅಲ್ಲಿ ಪ್ರಾಣವಿಞ್ಞಾನವು ಇರುವುದು. ಎಲ್ಲಿ ಮೂಗಿನ ಅರಿವಿರುವುದೋ ಅಲ್ಲಿ ಅದಕ್ಕೆ ಪ್ರಾಣವಿಞ್ಞಾನಕ್ಕೆ ವಿಷಯಗಳಿರುವುವು. ಅಲ್ಲಿ ಮಾರನಿರುವನು ಹಾಗು ಮಾರನ ವಿವರಣೆಯು ಇರುವುದು. ಹಾಗೆಯೇ ಎಲ್ಲಿ ಜಿಹ್ವೆಯಿರುವುದೋ, ಎಲ್ಲಿ ರಸವಿರುವುದೋ ಅಲ್ಲಿ ಜಿಹ್ವಾವಿಞ್ಞಾನವು ಇರುವುದು. ಎಲ್ಲಿ ಜಿಹ್ವಾವಿಞ್ಞಾನವಿರುವುದೋ ಅಲ್ಲಿ ಜಿಹ್ವಾವಿಞ್ಞಾನಕ್ಕೆ ವಿಷಯಗಳಿರುವುವು, ಅಲ್ಲಿ ಮಾರನಿರುವನು. ಅಲ್ಲಿ ಮಾರನ ವಿವರಣೆಯು ಇರುವುದು. ಎಲ್ಲಿ ಕಾಯವಿರುವುದೋ ಎಲ್ಲಿ ಸ್ಪರ್ಶವಿರುವುದೋ ಅಲ್ಲಿ ಕಾಯವಿಞ್ಞಾನವಿರುವುದು. ಎಲ್ಲಿ ಕಾಯವಿಞ್ಞಾನವು ಇರುವುದೋ ಅಲ್ಲಿ ಕಾಯವಿಞ್ಞಾನಕ್ಕೆ ಸಂಬಂಧಿಸಿದ ವಿಷಯಗಳು ಇರುವುವು. ಅಲ್ಲಿ ಮಾರನಿರುತ್ತಾನೆ. ಅಲ್ಲಿ ಮಾರನ ನಿರೂಪಣೆಯಿರುವುದು. ಎಲ್ಲಿ ಮನಸ್ಸು ಇರುವುದೋ, ಎಲ್ಲಿ ಧಮ್ಮವಿರುವುದು, ಅಲ್ಲಿ ಮನೋವಿಞ್ಞಾನವು ಇರುವುದು, ಎಲ್ಲಿ ಮನೋವಿಞ್ಞಾನವಿರುವನೋ ಅಲ್ಲಿ ಅದಕ್ಕೆ ಸಂಬಂಧಿಸಿದ ಧಮ್ಮವಿರುವುದೋ ಅಲ್ಲಿ ಮಾರನಿರುವನು. ಅಲ್ಲಿ ಮಾರನ ವಿವರಣೆಯಿರುವುದು.
                ಸಮ್ಮಿದ್ದಿಯೇ, ಎಲ್ಲಿ ಚಕ್ಷುವಿಲ್ಲವೋ, ಎಲ್ಲಿ ರೂಪವಿಲ್ಲವೋ ಅಲ್ಲಿ ಚಕ್ಷುವಿಞ್ಞಾನವು ಇರುವುದಿಲ್ಲ. ಅಲ್ಲಿ ಅದಕ್ಕೆ ಸಂಬಂಧಿಸಿದ ಧಮ್ಮವೂ ಇರುವುದಿಲ್ಲ, ಅಲ್ಲಿ ಮಾರನು ಇಲ್ಲ, ಮಾರನ ನಿರೂಪಣೆಯೂ ಇಲ್ಲ. ಅದೇರೀತಿ ಎಲ್ಲಿ ಶ್ರೋತವಿಲ್ಲವೋ... ಜಿಹ್ವೆಯಿಲ್ಲವೋ... ಕಾಯವಿಲ್ಲವೋ... ಮನಸ್ಸು ಇಲ್ಲವೋ, ಧಮ್ಮವಿಲ್ಲವೋ ಅಲ್ಲಿ ಮನೋವಿಞ್ಞಾನವೂ ಇರುವುದಿಲ್ಲ, ಅದಕ್ಕೆ ಸಂಬಂಧಿಸಿದ ಧಮ್ಮವೂ ಇರುವುದಿಲ್ಲ, ಅಲ್ಲಿ ಮಾರನೂ ಇಲ್ಲ, ಮಾರನ ವಿವರಣೆಯೂ ಇಲ್ಲ.


35.7.4. ಸಮಿದ್ಧಿ ಸತ್ತಪಞ್ಞಾ ಸುತ್ತಂ

                66. ಸತ್ವ, ಸತ್ವ (ಜೀವಿ) ಎನ್ನುವರಲ್ಲ ಭಂತೆ, ಯಾವರೀತಿಯಲ್ಲಿ ಜೀವಿಯು ಇರುವುದು ಅಥವಾ ಜೀವಿಯ ವಿವರಣೆಯಿರುವುದು? (ಹಿಂದಿನ ಸುತ್ತದಂತೆಯೇ ಉತ್ತರ. ಮಾರನ ಬದಲು ಸತ್ವ ಎಂದು ಪರಿಗಣಿಸುವುದು).

35.7.5. ಸಮಿದ್ಧಿ ದುಕ್ಖಪಞ್ಞಾ ಸುತ್ತಂ
                67. ದುಃಖ, ದುಃಖ ಎನ್ನುವರಲ್ಲ ಭಂತೆ, ಯಾವರೀತಿಯಲ್ಲಿ ದುಃಖವು ಇರುವುದು ಅಥವಾ ದುಃಖದ ವಿವರಣೆಯೇನು? (ಹಿಂದಿನ ಸುತ್ತದಂತೆಯೇ ಉತ್ತರ. ಇಲ್ಲಿ ಮಾರನ ಬದಲು ದುಃಖವೆಂದು ಪರಿಗಣಿಸಬೇಕು)

35.7.6. ಸಮಿದ್ಧಿ ಲೋಕಪಞ್ಞಾ ಸುತ್ತಂ

                68. ಲೋಕ, ಲೋಕ ಎನ್ನುತ್ತಾರಲ್ಲ ಭಂತೆ. ಯಾವ ಅರ್ಥದಲ್ಲಿ ಲೋಕವು ಇರುವುದು ಅಥವಾ ಲೋಕದ ವಿವರಣೆಯೇನು?
                ಸಮಿದ್ಧಿಯೇ, ಎಲ್ಲಿ ಚಕ್ಷುಯಿರುವುದೋ, ರೂಪಗಳಿರುವುದೋ, ಅಲ್ಲಿ ಚಕ್ಷುವಿಞ್ಞಾನವೂ ಇರುತ್ತದೆ. ಎಲ್ಲಿ ಚಕ್ಷುವಿಞ್ಞಾನವು ಇರುವುದೋ ಅಲ್ಲಿ ಅದಕ್ಕೆ ಸಂಬಂಧಿಸಿದ ವಿಷಯಗಳು ಇರುತ್ತವೆ. ಅಲ್ಲಿ ಲೋಕವು ಇರುತ್ತದೆ ಅಥವಾ ಲೋಕದ ವಿವರಣೆಯು ಇರುತ್ತದೆ. ಅದೇಬಗೆಯಲ್ಲಿ ಎಲ್ಲಿ ಕಿವಿಯಿರುವುದೋ... ಎಲ್ಲಿ ಮೂಗು ಇರುವುದೋ... ಎಲ್ಲಿ ನಾಲಿಗೆಯಿರುವುದೋ... ಎಲ್ಲಿ ಕಾಯವಿರುವುದೋ... ಎಲ್ಲಿ ಮನಸ್ಸಿರುವುದೋ... ಎಲ್ಲಿ ಧಮ್ಮವಿರುವುದೋ ಅಲ್ಲಿ ಮನೋವಿಞ್ಞಾನವು ಇರುತ್ತದೆ. ಎಲ್ಲಿ ಮನೋವಿಞ್ಞಾನವು ಉದಯಿಸುವುದೋ ಅಲ್ಲಿ ಅದಕ್ಕೆ ಸಂಬಂಧಿಸಿದ ವಸ್ತುಗಳಿರುತ್ತವೆ, ಅಲ್ಲಿ ಲೋಕವಿರುತ್ತದೆ ಅಥವ ಲೋಕದ ವಿವರಣೆಯಿರುತ್ತದೆ.
                ಸಮ್ಮಿದ್ಧಿಯೇ, ಎಲ್ಲಿ ಚಕ್ಷುವಿಲ್ಲವೋ, ಎಲ್ಲಿ ರೂಪಗಳಿಲ್ಲವೋ, ಅಲ್ಲಿ ಚಕ್ಷುವಿಞ್ಞಾನವೂ ಇಲ್ಲ, ಅಲ್ಲಿ ಚಕ್ಷುವಿಞ್ಞಾನದಿಂದ ಗ್ರಹಿಸಬಹುದಾದಂತಹ ವಿಷಯಗಳು ಇರುವುದಿಲ್ಲ. ಅಲ್ಲಿ ಲೋಕವಿರುವುದಿಲ್ಲ ಅಥವಾ ಲೋಕದ ವಿವರಣೆಯಿರುವುದಿಲ್ಲ. ಅದೇರೀತಿಯಲ್ಲಿ ಎಲ್ಲಿ ಕಿವಿಯಿರುವುದಿಲ್ಲವೋ... ಮೂಗು ಇರುವುದಿಲ್ಲವೋ... ನಾಲಿಗೆಯಿರುವುದಿಲ್ಲವೋ... ದೇಹವಿರುವುದಿಲ್ಲವೋ... ಮನಸ್ಸಿರುವುದಿಲ್ಲವೋ... ಮನೋವಿಞ್ಞಾನವೂ ಇರುವುದಿಲ್ಲ... ಅಲ್ಲಿ ಲೋಕವಿರುವುದಿಲ್ಲ ಅಥವಾ ಲೋಕದ ವಿವರಣೆಯಿರುವುದಿಲ್ಲ.

35.7.7. ಉಪಸೇನ ಅಸೀವಿಸ ಸುತ್ತಂ

                69. ಒಮ್ಮೆ ಆಯುಷ್ಮಂತ ಸಾರಿಪುತ್ತ ಹಾಗು ಆಯುಷ್ಮಂತ ಉಪಸೇನರವರು ರಾಜಗೃಹದ ಸೀತವನದಲ್ಲಿ ಸರ್ಪದ ಹೆಡೆಯಾಕಾರದ ಗುಹೆಯಲ್ಲಿ ವಾಸಿಸುತ್ತಿದ್ದರು. ಸಮಯದಲ್ಲಿ ಆಯುಷ್ಮಂತ ಉಪನೇನರ ಕಾಯದ (ದೇಹ) ಮೇಲೆ ಹಾವೊಂದು ಬಿದ್ದಿತು. ಅದು ಹಾವುಗಳಿರುವಂತಹ ಪ್ರದೇಶವಾಗಿತ್ತು. ತಕ್ಷಣ ಉಪಸೇನರವರು ರೀತಿ ಹೇಳಿದರು: ಬನ್ನಿ ಆಯುಷ್ಮಂತರೇ, ದೇಹವನ್ನು ಮಂಚಸಮೇತ ಈಚೆಗೆ ಎತ್ತೊಯ್ಯಿರಿ, ಕಾಯವು ಧೂಳಾಗಿ ಚದುರುವ ಮುನ್ನ ಹೀಗೆ ಮಾಡಿರಿ.
                ಆಗ ಸಾರಿಪುತ್ತರು ಅಯುಷ್ಮಂತರಾದ ಉಪಸೇನರಿಗೆ ಹೀಗೆ ನುಡಿದರು: ನಾವಂತು ಆಯುಷ್ಮಂತ ಉಪಸೇನರ ಶರೀರದಲ್ಲಿಯಾಗಲಿ ಅಥವಾ ಇಂದ್ರೀಯಗಳಲ್ಲಾಗಲಿ ಯಾವುದೇ ಬದಲಾವಣೆ ಕಂಡಿಲ್ಲ. ಆದರೂ ಉಪಸೇನರವರು ಕಾಯವು ಧೂಳಾಗಿ ಚದುರುವು ಮುನ್ನ ಹೊರಕ್ಕೆ ಮಂಚಸಮೇತ ಕಾಯವನ್ನು ಹೊತ್ತು ಒಯ್ಯಿರಿ ಎಂದು ನುಡಿಯುತ್ತಿದ್ದಾರೆ ಎಂದರು. ಆಯುಷ್ಮಂತ ಸಾರಿಪುತ್ತ, ಯಾರು ನಾನೇ ಕಣ್ಣು ಅಥವಾ ಕಣ್ಣು ನನ್ನದು, ನಾನೇ ಕಿವಿ ಅಥವಾ ಕಿವಿಯು ನನ್ನದು, ನಾನೇ ಮೂಗು ಅಥವಾ ಮೂಗು ನನ್ನದು... ನಾನೇ ಶರೀರ ಅಥವಾ ಶರೀರ ನನ್ನದು, ನಾನೇ ಮನಸ್ಸು ಅಥವಾ ಮನಸ್ಸು ನನ್ನದು ಎಂದು ಯೋಚಿಸುವವರಾಗಿದ್ದರೆ ಶರೀರದಲ್ಲಿಯಾಗಲೀ ಅಥವಾ ಇಂದ್ರೀಯಗಳಲ್ಲಾಗಲಿ ಬದಲಾವಣೆ ಕಾಣಬಹುದಿತ್ತು. ಆದರೆ ನನ್ನಲ್ಲಿ ಅಂತಹ ಯೋಚನೆಗಳು ಬರಲಾರವು. ಆಯುಷ್ಮಂತ ಉಪಸೇನರಲ್ಲಿ ನಾನು ಎಂಬ ಭಾವವಾಗಲಿ, ನನ್ನದು ಎಂಬ ಭಾವವಾಗಲಿ, ದೀರ್ಘಕಾಲದಿಂದಲೇ ತೊಡೆದುಹಾಕಲ್ಪಟ್ಟಿತ್ತು. ಹೀಗಾಗಿ ನಾನೇ ಕಣ್ಣು ಅಥವಾ ಕಣ್ಣು ನನ್ನದು, ನಾನೇ ಕಿವಿ ಅಥವಾ ಕಿವಿಯು ನನ್ನದು, ನಾನೇ ಮೂಗು ಅಥವಾ ಮೂಗು ನನ್ನದು... ನಾನೇ ಶರೀರ ಅಥವಾ ಶರೀರ ನನ್ನದು, ನಾನೇ ಮನಸ್ಸು ಅಥವಾ ಮನಸ್ಸು ನನ್ನದು ಎಂಬ ಯೋಚನೆಗಳು ಆತನಲ್ಲಿ ಉಂಟಾಗಲಾರವು. ಆಗ ಅಲ್ಲಿದ್ದಂತಹ ಭಿಕ್ಷುಗಳು ಪೂಜ್ಯ ಉಪಸೇನರ ಶರೀರವನ್ನು ಹೊತ್ತು ಹೊರತಂದರು. ತಕ್ಷಣವೇ ಅಲ್ಲೇ ಅವರ ಶರೀರವು ಹಿಡಿಯಷ್ಟು ಬೂದಿ (ಧೂಳು) ಯಾಯಿತು ಹಾಗು ಚದುರಿತು. (ವಿಷಪೂರಿತ ಹಾವು ಕಚ್ಚಿದ್ದರಿಂದಾಗಿ ಅವರ ಆಯು ಕೊನೆಯ ಹಂತಕ್ಕೆ ಬಂದಿತ್ತು. ಹೀಗಾಗಿ ಉಪಸೇನರವರು ಕಸಿಣಾ ಧ್ಯಾನದಿಂದ ಪರಿನಿಬ್ಬಾಣವನ್ನು ಕ್ಷಣದಲ್ಲೇ ಪಡೆದರು. ಅವರ ಶರೀರ ಕೇವಲ ಬೂದಿಯಾಯಿತು. ಗುಹೆಯಲ್ಲೇ ಇದ್ದಿದ್ದರೆ ಶಾಖ ತೀವ್ರತೆಗೆ ಬೇರೆಯವರಿಗೆ ತೊಂದರೆಯಾಗುತ್ತಿತ್ತು. ಹೀಗಾಗಿ ಅವರು ಹೊರಗಡೆ ತೆಗೆದುಕೊಂಡು ಹೋಗಿ ಎಂದು ಕೋರಿದರು. ಆದರೆ ಅವರ ಮನಸ್ಸು ಘಟನೆಗೆ ಕ್ಷಣಮಾತ್ರವೂ ವಿಚಲಿತವಾಗಲಿಲ್ಲ, ಪರಮಶಾಂತತೆಯಿಂದಿತ್ತು.)

35.7.8. ಉಪವಾಣ ಸಂಧಿಟ್ಠಿಕ ಸುತ್ತಂ

                70. ಆಗ ಆಯುಷ್ಮಂತರಾದ ಉಪವಾಣರು... ಭಗವಾನರ ಬಳಿಗೆ ಬಂದರು. ನಂತರ ಹೀಗೆ ಹೇಳಿದರು: ಭಂತೆ, ಸನ್ದಿಟ್ಠಿಕೊ ಸನ್ದಿಟ್ಠಿಕೊ (ಧಮ್ಮವನ್ನು ಇಲ್ಲೇ ನೇರವಾಗಿ ದಶರ್ಿಸುವುದು) ಎನ್ನುತ್ತಾರಲ್ಲ. ಯಾವ ವಿಧದಲ್ಲಿ ಧಮ್ಮವನ್ನು ಇಲ್ಲೇ ನೇರವಾಗಿ ದಶರ್ಿಸಬಹುದು? ಕಾಲವಿಳಂಬವಿಲ್ಲದೆ, ತಕ್ಷಣವೇ ಫಲಕಾರಿ, ಜ್ಞಾನಿಗಳೆಲ್ಲರಿಗೂ ಬಂದು ಪರೀಕ್ಷಿಸಿ ಎಂದು ಆಹ್ವಾನಿಸುವಂತಹುದು, ಊದ್ರ್ವ ದಿಕ್ಕಿನೆಡೆಗೆ ಸಾಗಿಸುವಂತಹುದು ಹೇಗೆ?
                ಉಪವಾಣ, ಇಲ್ಲಿ ಕಣ್ಣಿನಿಂದ ರೂಪವನ್ನು ನೋಡುತ್ತಾರೆ, ರೂಪವನ್ನು ಹಾಗೆಯೇ ರೂಪ ರಾಗವನ್ನು ಅನುಭವಿಸುತ್ತಾರೆ. ಆಗ ಆತನು ಹೀಗೆ ಅರ್ಥಮಾಡಿಕೊಳ್ಳುತ್ತಾನೆ. ಆಂತರ್ಯದಲ್ಲಿ ರೂಪಗಳ ಬಗ್ಗೆ ರಾಗವಿದೆ. ಉಪವಾಣ, ಹೀಗಾಗಿ ಧಮ್ಮವು ಹೀಗೆ ನೇರವಾಗಿ ದಶರ್ಿಸಬಹುದಾಗಿದೆ. ಕಾಲವಿಳಂಬವಿಲ್ಲದೆ, ಪರೀಕ್ಷಿಸಿ ಎಂದು ಆಹ್ವಾನಿಸತ್ತಾ, ಅನ್ವಯಿಸುವಂತಹ, ಊದ್ರ್ವಗಾಮಿಯಾದ, ಜ್ಞಾನಿಗಳಿಂದ ಅನುಭವಿಸಲ್ಪಡುವ ಧಮ್ಮವಾಗಿದೆ.
                ಉಪವಾಣ, ನಂತರ ಕಿವಿಯಿಂದ ಶಬ್ದಗಳನ್ನು ಆಲಿಸುತ್ತ... ಮೂಗಿನಿಂದ ವಾಸನೆಯನ್ನು ಆಘ್ರಾಣಿಸುತ್ತಾ... ನಾಲಿಗೆಯಿಂದ ರುಚಿಯನ್ನು ಆಸ್ವಾದಿಸುತ್ತಾ... ದೇಹದಿಂದ ಸ್ಪರ್ಶಗಳನ್ನು ಅನುಭವಿಸುತ್ತಾ... ಮನಸ್ಸಿನಿಂದ ಮಾನಸಿಕ ವಿಷಯಗಳನ್ನು ಗ್ರಹಿಸುತ್ತಾ ಮಾನಸಿಕ ವಿಷಯಗಳಲ್ಲಿ ರಾಗವನ್ನು ವೀಕ್ಷಿಸುತ್ತಾನೆ. ನಂತರ ಹೀಗೆ ಅರ್ಥಮಾಡಿಕೊಳ್ಳುತ್ತಾನೆ. ಆಂತರ್ಯದಲ್ಲಿ ಧಮ್ಮರಾಗವಿದೆ (ಮಾನಸಿಕ ವಿಷಯಗಳಲ್ಲಿ ರಾಗವಿದೆ). ಹೀಗಾಗಿ ಉಪವಾಣನೇ, ಧಮ್ಮವನ್ನು ನೇರವಾಗಿ ದಶರ್ಿಸಬಹುದಾಗಿದೆ, ಕಾಲವಿಳಂಬವಿಲ್ಲದೆ ಲಾಭ ಪಡೆಯಬಹುದಾಗಿದೆ. ಪರರನ್ನು ಬನ್ನಿ ಪರೀಕ್ಷಿಸಿ ಎನ್ನಬಹುದಾಗಿದೆ. ಊದ್ರ್ವಗಾಮಿಯಾಗಿ ಇದನ್ನು ಅನ್ವಯಿಸಬಹುದಾಗಿದೆ, ಪ್ರಾಜ್ಞರಾದ ಪ್ರತಿಯೊಬ್ಬರಿಂದಲೂ ಇದನ್ನು ಅನುಭವಿಸಬಹುದಾಗಿದೆ.
                ಉಪವಾಣ, ಆದರೆ ಇಲ್ಲಿ ಭಿಕ್ಷುವೊಬ್ಬನು ಕಣ್ಣಿನಿಂದ ರೂಪಗಳನ್ನು ಗ್ರಹಿಸುವಾಗ ರೂಪಗಳಲ್ಲಿ ರಾಗವಿಲ್ಲದೆ ಅನುಭವಿಸುತ್ತಾನೆ ಹಾಗು ನನ್ನ ಆಂತರ್ಯದಲ್ಲಿ ರಾಗವಿಲ್ಲ ಎಂದು ಸ್ಪಷ್ಟವಾಗಿ ಅರಿಯುತ್ತಾನೆ. ಹೀಗಾಗಿ ಧಮ್ಮವು ನೇರವಾಗಿ ದಶರ್ಿಸಬಹುದಾಗಿದ್ದು, ಕಾಲವಿಳಂಬವಿಲ್ಲದೆ ಲಾಭ ಪಡೆಯಬಹುದಾಗಿದೆ. ಪರರನ್ನು ಬನ್ನಿ, ಪರೀಕ್ಷಿಸಿ ಎಂದು ಅಹ್ವಾನಿಸಬಹುದಾಗಿದೆ. ಅನ್ವಯಿಸುವಂತಹ ಪ್ರಾಜ್ಞರಾದ ಪ್ರತಿಯೊಬ್ಬರಿಂದಲೂ ಅರಿಯಬಹುದಾಗಿದೆ. ಅದೇರೀತಿಯಲ್ಲಿ ಉಪವಾಣ, ಕಿವಿಯಿಂದ ಶಬ್ದವನ್ನು ಆಲಿಸಿ... ಮೂಗಿನಿಂದ ವಾಸನೆಗಳನ್ನು ಆಘ್ರಾಣಿಸಿ... ನಾಲಿಗೆಯಿಂದ ರುಚಿನ್ನು ಆಸ್ವಾದಿಸುವಾಗ... ದೇಹದಿಂದ ಸ್ಪರ್ಶಗಳನ್ನು ಪಡೆಯುವಾಗ... ಮನಸ್ಸಿನಿಂದ ಧಮ್ಮಗಳನ್ನು ಅರಿಯುವಾಗ, ಭಿಕ್ಷುವೊಬ್ಬನು ರಾಗರಹಿತನಾಗಿರುತ್ತಾನೆ. ಅದನ್ನು ಹಾಗೆಯೇ ವೀಕ್ಷಿಸಿದಂತಹ ಆತನು ನನ್ನ ಆಂತರ್ಯದಲ್ಲಿ ಧಮ್ಮರಾಗವಿಲ್ಲ ಎಂದು ಅರಿಯುತ್ತಾನೆ. ಹೀಗೆ ಉಪವಾಣ ಧಮ್ಮವನ್ನು ನೇರವಾಗಿ ದಶರ್ಿಸಬಹುದು. ಕಾಲವಿಳಂಬಿಲ್ಲದೆ ಫಲಕಾರಿಯು, ಪರರನ್ನು ಬನ್ನಿ ಪರೀಕ್ಷಿಸಿ ಎಂದು ಆಹ್ವಾನಿಸುವಂತಹುದು, ಅನ್ವಯಿಸುವಂತಹುದು, ಪ್ರಾಜ್ಞರಾದ ಪ್ರತಿಯೊಬ್ಬರಿಂದಲೂ ಅನುಭವಿಸಲ್ಪಡುವಂತಹುದಾಗಿದೆ.

35.7.9. ಪಠಮಛ ಪಸ್ಸಾಯಾತನ ಸುತ್ತಂ

                71. ಭಿಕ್ಷುಗಳೇ, ಭಿಕ್ಷುವು ಆರು ಇಂದ್ರೀಯ ಆಧಾರಗಳಲ್ಲಿ ಉದಯವನ್ನು, ಅಳಿಯುವಿಕೆಯನ್ನು, ಆಸ್ವಾದನೆಯನ್ನು ಹಾಗು ಅಪಾಯವನ್ನು ಮತ್ತು ಬಿಡುಗಡೆಯನ್ನು ಅರಿಯದಿದ್ದರೆ ಆತನು ಬ್ರಹ್ಮಚರ್ಯ ಜೀವನವನ್ನು ಪಾಲನೆ ಮಾಡಿದಂತೆಯೇ ಆಗುವುದಿಲ್ಲ. ಅಂತಹವನು ಧಮ್ಮವಿನಯದಿಂದ ದೂರವಾಗಿಯೇ ಇರುತ್ತಾನೆ.
                ಇದನ್ನು ಆಲಿಸಿದಂತಹ ಭಿಕ್ಷುವೊಬ್ಬನು ಭಗವಾನರೊಂದಿಗೆ ಹೀಗೆ ಹೇಳಿದನು: ಭಂತೆ, ಇಲ್ಲಿ ನಾನು ನೋಡಿದ್ದೇನೆ, ಏಕೆಂದರೆ ನಾನು ಆರು ಇಂದ್ರೀಯ ಆಧಾರಗಳಲ್ಲಿ ಉದಯವನ್ನು, ಅಳಿಯುವಿಕೆಯನ್ನು, ಆಸ್ವಾದನೆಯನ್ನು ಹಾಗು ಅಪಾಯವನ್ನು ಮತ್ತು ಬಿಡುಗಡೆಯನ್ನು ಅರಿತಿರಲಿಲ್ಲ. ಈಗ ವೇಗವಾಗಿ ಮುಂದುವರೆಯುತ್ತೇನೆ.
                ಓಹ್ ಭಿಕ್ಷುವೇ, ಇದನ್ನು ಹೇಗೆ ಭಾವಿಸುವೆ? ನೀನು ಚಕ್ಷುವನ್ನು ಇದು ನನ್ನದು, ಇದೇ ನಾನು ಮತ್ತು ಇದು ನನ್ನ ಆತ್ಮ ಎಂದು ಪರಿಗಣಿಸುವೆಯಾ? - ಇಲ್ಲ ಭಂತೆ.
                ಸಾಧು (ಒಳ್ಳೆಯದು) ಭಿಕ್ಷುವೇ, ನೀನು ಚಕ್ಷುವನ್ನು ಕುರಿತು ಪ್ರಜ್ಞಾದಿಂದ ಹೀಗೆ ದಶರ್ಿಸಬೇಕು: ಇದು ನನ್ನದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ. ಇದರಿಂದಲೇ ದುಃಖದ ಅಂತ್ಯವಾಗುವುದು.
ಸಾಧು ಭಿಕ್ಷುವೇ, ನೀನು ಕಿವಿಯನ್ನು ಕುರಿತು... ಮೂಗನ್ನು ಕುರಿತು... ನಾಲಿಗೆಯನ್ನು ಕುರಿತು... ದೇಹವನ್ನು ಕುರಿತು... ಮನಸ್ಸನ್ನು ಕುರಿತು ಇದು ನನ್ನದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪರಿಗಣಿಸುವೆಯಾ? - ಇಲ್ಲ ಭಂತೆ.
                ಸಾಧು ಭಿಕ್ಷುವೇ, ನೀನು ಮನಸ್ಸು ಕುರಿತು ಪ್ರಜ್ಞಾದಿಂದ ರೀತಿ ದಶರ್ಿಸಬೇಕು: ಇದು ನನ್ನದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ. ಇದರಿಂದಲೇ ದುಃಖದ ಅಂತ್ಯವಾಗುವುದು.

35.7.10. ದುತಿಯಾಛ ಪಸ್ಸಾಯಾತನ ಸುತ್ತಂ

                72. ಭಿಕ್ಷುಗಳೇ, ಭಿಕ್ಷುವು ಆರು ಇಂದ್ರೀಯ ಆಧಾರಗಳಲ್ಲಿ ಉದಯವನ್ನು, ಅಳಿಯುವಿಕೆಯನ್ನು, ಆಸ್ವಾದನೆಯನ್ನು ಹಾಗು ಅಪಾಯವನ್ನು ಮತ್ತು ಬಿಡುಗಡೆಯನ್ನು ಅರಿಯದಿದ್ದರೆ ಆತನು ಬ್ರಹ್ಮಚರ್ಯ ಜೀವನವನ್ನು ಪಾಲನೆ ಮಾಡಿದಂತೆಯೇ ಆಗುವುದಿಲ್ಲ. ಅಂತಹವನು ಧಮ್ಮವಿನಯದಿಂದ ದೂರವಾಗಿಯೇ ಇರುತ್ತಾನೆ.
                ಇದನ್ನು ಆಲಿಸಿದಂತಹ ಭಿಕ್ಷುವೊಬ್ಬನು ಭಗವಾನರೊಂದಿಗೆ ಹೀಗೆ ಹೇಳಿದನು: ಭಂತೆ, ಇಲ್ಲಿ ನಾನು ನೋಡಿದ್ದೇನೆ, ಏಕೆಂದರೆ ನಾನು ಆರು ಇಂದ್ರೀಯ ಆಧಾರಗಳಲ್ಲಿ ಉದಯವನ್ನು, ಅಳಿಯುವಿಕೆಯನ್ನು, ಆಸ್ವಾದನೆಯನ್ನು ಹಾಗು ಅಪಾಯವನ್ನು ಮತ್ತು ಬಿಡುಗಡೆಯನ್ನು ಅರಿತಿರಲಿಲ್ಲ. ಈಗ ವೇಗವಾಗಿ ಮುಂದುವರೆಯುತ್ತೇನೆ.
                ಭಿಕ್ಷುವೇ, ಇದನ್ನು ಹೇಗೆ ಭಾವಿಸುವೆ? ನೀನು ಕಣ್ಣಿನ ಕುರಿತು ಹೀಗೆ ಪರಿಗಣಿಸುವೆಯಾ? ಇದು ನನ್ನದಲ್ಲ, ಇದು ನಾನಲ್ಲ ಮತ್ತು ಇದು ನನ್ನ ಆತ್ಮವಲ್ಲ?
                ಹೌದು ಭಂತೆ.
                ಸಾಧು ಭಿಕ್ಷುವೇ, ಭಿಕ್ಷುವೇ ಇಲ್ಲಿ ನೀನು ಪ್ರಜ್ಞಾದಿಂದ ಚಕ್ಷುವನ್ನು ಕುರಿತು ಹೀಗೆ ಸ್ಪಷ್ಟವಾಗಿ ದಶರ್ಿಸಬೇಕು: ಇದು ನನ್ನದಲ್ಲ, ಇದು ನಾನಾಲ್ಲ, ಇದು ನನ್ನ ಆತ್ಮವಲ್ಲ. ಹೀಗೆ ಮೊದಲನೆಯ ಆಧಾರದಲ್ಲಿ ನಿನ್ನಿಂದ ಸ್ಪರ್ಶವನ್ನು ವಜರ್ಿತವಾದರೆ ಭವಿಷ್ಯದಲ್ಲಿ ಪುನರ್ಭವವಿರುವುದಿಲ್ಲ.
                ಭಿಕ್ಷುವೇ, ಇದು ಹೇಗೆ ಭಾವಿಸುವೆ? ನೀನು ಕಿವಿಯ ಕುರಿತು... ಮೂಗಿನ ಕುರಿತು... ನಾಲಿಗೆಯ ಕುರಿತು... ದೇಹದ ಕುರಿತು... ಮನಸ್ಸಿನ ಕುರಿತು ಹೀಗೆ ಪರಿಗಣಿಸುವೆಯಾ?
                ಇದು ನನ್ನದಲ್ಲ, ಇದು ನಾನಲ್ಲ ಮತ್ತು ಇದು ನನ್ನ ಆತ್ಮವಲ್ಲ.
                ಹೌದು ಭಂತೆ.
                ಸಾಧು ಭಿಕ್ಷುವೇ, ಇಲ್ಲಿ ಭಿಕ್ಖುವು ಸಮ್ಯಕ್ ಜ್ಞಾನದಿಂದಾಗಿ ಮನಸ್ಸನ್ನು ಕುರಿತು ಹೀಗೆ ಸ್ಪಷ್ಟವಾಗಿ ದಶರ್ಿಸಬೇಕು: ಇದು ನನ್ನದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ. ಹೀಗೆ ಆರನೆಯ ಆಧಾರದಲ್ಲಿ ನಿನ್ನಿಂದ ಸ್ಪರ್ಶವೂ ವಜರ್ಿತವಾದರೆ ಭವಿಷ್ಯದಲ್ಲಿ ಪುನರ್ಭವವೂ ಇರುವುದಿಲ್ಲ.

35.7.11. ತತಿಯಾಛ ಪಸ್ಸಾಯಾತನ ಸುತ್ತಂ

                73. ಭಿಕ್ಷುಗಳೇ, ಭಿಕ್ಷುವು ಆರು ಇಂದ್ರೀಯ ಆಧಾರಗಳಲ್ಲಿ ಉದಯವನ್ನು, ಅಳಿಯುವಿಕೆಯನ್ನು, ಆಸ್ವಾದನೆಯನ್ನು ಹಾಗು ಅಪಾಯವನ್ನು ಮತ್ತು ಬಿಡುಗಡೆಯನ್ನು ಅರಿಯದಿದ್ದರೆ ಆತನು ಬ್ರಹ್ಮಚರ್ಯ ಜೀವನವನ್ನು ಪಾಲನೆ ಮಾಡಿದಂತೆಯೇ ಆಗುವುದಿಲ್ಲ. ಅಂತಹವನು ಧಮ್ಮವಿನಯದಿಂದ ದೂರವಾಗಿಯೇ ಇರುತ್ತಾನೆ.
                ಇದನ್ನು ಆಲಿಸಿದಂತಹ ಭಿಕ್ಷುವೊಬ್ಬನು ಭಗವಾನರೊಂದಿಗೆ ಹೀಗೆ ಹೇಳಿದನು: ಭಂತೆ, ಇಲ್ಲಿ ನಾನು ನೋಡಿದ್ದೇನೆ, ಏಕೆಂದರೆ ನಾನು ಆರು ಇಂದ್ರೀಯ ಆಧಾರಗಳಲ್ಲಿ ಉದಯವನ್ನು, ಅಳಿಯುವಿಕೆಯನ್ನು, ಆಸ್ವಾದನೆಯನ್ನು ಹಾಗು ಅಪಾಯವನ್ನು ಮತ್ತು ಬಿಡುಗಡೆಯನ್ನು ಅರಿತಿರಲಿಲ್ಲ. ಈಗ ವೇಗವಾಗಿ ಮುಂದುವರೆಯುತ್ತೇನೆ.
                ಭಿಕ್ಷುವೇ, ಇದನ್ನು ಹೇಗೆ ಭಾವಿಸುವೆ? ಚಕ್ಷುವು ನಿತ್ಯವೋ ಅಥವಾ ಅನಿತ್ಯವೋ?
                ಅನಿತ್ಯ ಭಂತೆ.
                ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
                ದುಃಖಕಾರಿ ಭಂತೆ.
                ಯಾವುದು ದುಃಖಕಾರಿಯೋ ವಿಪರಿಣಾಮ ಧಮ್ಮವನ್ನು ಹೊಂದಿದೆಯೋ ಅಂತಹವನ್ನು ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮವೆಂದು ಪರಿಗಣಿಸುವೆಯಾ?
                ಇಲ್ಲ ಭಂತೆ.
                ಅದೇರೀತಿಯಾಗಿ ಕಿವಿ... ಮೂಗು... ನಾಲಿಗೆ... ದೇಹ... ಮನಸ್ಸು ಅನಿತ್ಯವೋ ಅಥವಾ ನಿತ್ಯವೋ?
                ಅನಿತ್ಯ ಭಂತೆ.
                ಯಾವುದು ಅನಿತ್ಯವೋ ಅದು ದುಃಖಕಾರಿಯೋ, ಸುಖಕಾರಿಯೋ?
                ದುಃಖಕಾರಿ ಭಂತೆ.
                ಯಾವುದು ದುಃಖಕಾರಿಯೋ, ವಿಪರಿಣಾಮ ಧಮ್ಮವನ್ನು ಹೊಂದಿದೆಯೋ ಅಂತಹವನ್ನು ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮವೆಂದು ಪರಿಗಣಿಸುವೆಯಾ?
                ಇಲ್ಲ ಭಂತೆ.
                ರೀತಿಯಾಗಿ ದಶರ್ಿಸಿದ ಆರ್ಯಶ್ರಾವಕ ಭಿಕ್ಷುವು ಚಕ್ಷುವಿನಿಂದ ವಿಕಷರ್ಿತನಾಗುತ್ತಾನೆ, ಕಿವಿಯಿಂದ ವಿಕಷರ್ಿತನಾಗುತ್ತಾನೆ, ಮೂಗಿನಿಂದ ವಿಕಷರ್ಿತನಾಗುತ್ತಾನೆ, ನಾಲಿಗೆಯಿಂದ ವಿಕಷರ್ಿತನಾಗುತ್ತಾನೆ, ದೇಹದಿಂದ ವಿಕಷರ್ಿತನಾಗುತ್ತಾನೆ. ವಿಕಷರ್ಿಸಿದ್ದರಿಂದಾಗಿ ವಿರಾಗಿಯಾಗುತ್ತಾನೆ, ವಿರಾಗಿಯಾದ್ದರಿಂದಾಗಿ ವಿಮುಕ್ತನಾಗುತ್ತಾನೆ. ವಿಮುಕ್ತನಾದ್ದರಿಂದಾಗಿ ವಿಮುಕ್ತಿಜ್ಞಾನವು ಲಭಿಸುವುದು. ಜನ್ಮವು ಕ್ಷೀಣವಾಯಿತು (ನಾಶವಾಯಿತು), ಬ್ರಹ್ಮಚರ್ಯೆಯು ಪೂರ್ಣವಾಯಿತು, ಮಾಡಬೇಕಾದ್ದು ಮಾಡಿಯಾಯಿತು, ಮುಂದೆ ಪುನರ್ಜನ್ಮವಿಲ್ಲ ಎಂದು ಸ್ಪಷ್ಟವಾಗಿ ಅರಿಯುತ್ತಾನೆ.

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...