Thursday 31 May 2018

Samyutta nikaya 35.13.ಗಹಪತಿವಗ್ಗೋ (ಗೃಹಪತಿ ವರ್ಗ)

ಗಹಪತಿವಗ್ಗೋ (ಗೃಹಪತಿ ವರ್ಗ)



35.13.1 ವೇಸಾಲಿ ಸುತ್ತಂ


124. ಒಮ್ಮೆ ಭಗವಾನರು ವೈಶಾಲಿಯ ಮಹಾವನದಲ್ಲಿರುವ ಕೂಟಾಗಾರಸಾಲಯದಲ್ಲಿ (ಶಿಬಿರಗಳನ್ನು ಹೊಂದಿದ್ದ ಛಾವಣಿಯ ಬೃಹತ್ ಸಭಾಂಗಣದಲ್ಲಿ) ವಾಸಿಸುತ್ತಿದ್ದರು. ಆಗ ವೈಶಾಲಿಯ ಗೃಹಸ್ಥನಾಗಿದ್ದ ಉಗ್ಗ (ಉಗ್ರ)ನು ಭಗವಾನರ ಸಮೀಪಕ್ಕೆ ಬಂದನು. ಭಗವಾನರಿಗೆ ವಂದಿಸಿ, ಒಂದೆಡೆ ಕುಳಿತನು. ನಂತರ ಭಗವಾನರಲ್ಲಿ ಈ ರೀತಿ ಪ್ರಶ್ನಿಸಿದನು.

ಭಂತೆ, ಯಾವ ಹೇತುವಿನಿಂದ (ಕಾರಣದಿಂದ) ಹಾಗು ಯಾವ ಬೆಂಬಲದಿಂದ (ಉದ್ದೇಶದಿಂದ) (ಪಚ್ಚಯ) ಹಲವಾರು ಜೀವಿಗಳು ಈ ಜೀವನದಲ್ಲೇ ಇಲ್ಲೇ ನಿಬ್ಬಾಣವನ್ನು ಪಡೆಯುವುದಿಲ್ಲ ಹಾಗೂ ಯಾವ ಹೇತುವಿನಿಂದ (ಕಾರಣ) ಹಾಗು ಯಾವ ಉದ್ದೇಶ (ಬೆಂಬಲ) ದಿಂದ ಹಲವಾರು ಜೀವಿಗಳು ಈ ಜೀವಿತದಲ್ಲೇ ಇಲ್ಲೇ ನಿಬ್ಬಾಣವನ್ನು ಪಡೆಯುತ್ತಾರೆ.

ಓ ಉಗ್ಗನೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ ಮತ್ತು ಅಂಟಿಕೊಂಡರೆ ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾದರೆ, ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ. ಕಿವಿಯಿಂದ...

ಓ ಉಗ್ಗನೇ, ಮೂಗಿನಿಂದ ಗ್ರಹಿಸುವ ವಾಸನೆಗಳಿವೆ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದ ಧಮ್ಮಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ, ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾರೆ ಮತ್ತು ಅಂಟಿಕೊಂಡರೆ ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ.

ಇದೇ ಕಾರಣವಾಗಿದೆ ಹಾಗು ಇದೇ ಬೆಂಬಲವಾಗಿದೆ. ದೇವತೆಗಳೊಡೆಯ ಇದರಿಂದಾಗಿ ಹಲವರು ಈ ಜೀವಿತದಲ್ಲೇ ನಿಬ್ಬಾಣವನ್ನು ಪಡೆಯಲಾರರು.

ಓ ಉಗ್ಗನೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ... ಕಿವಿಯಿಂದ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದಂತಹ ಧಮ್ಮಗಳಿವೆ (ಮಾನಸಿಕ ವಿಷಯಗಳು). ಅವೆಲ್ಲಾ ಆಸೆ ಹುಟ್ಟಿಸುವಂತಹುದು, ಪ್ರಿಯವಾದವು, ಒಪ್ಪುವಂತಹುದು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಭಿಕ್ಷುವು ಅವುಗಳಲ್ಲಿ ಆನಂದಿತನಾಗದಿದ್ದರೆ, ಸ್ವಾಗತಿಸದಿದ್ದರೆ, ಅವುಗಳಿಗೆ ಅವಲಂಬಿತನಾಗದಿದ್ದರೆ ಅವಕ್ಕೆ ಅಂಟದಿದ್ದರೆ ಅಂತಹವನು ಮಾತ್ರ ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾರೆ.

ಇದೇ ಕಾರಣವಾಗಿದೆ, ಇದೇ ಉದ್ದೇಶವಾಗಿದೆ, ಓ ಉಗ್ಗನೇ, ಹೀಗಾಗಿ ಹಲವರು ಮಾತ್ರ ಇದೇ ಜೀವಿತದಲ್ಲಿ ನಿಬ್ಬಾಣ ಪ್ರಾಪ್ತಿಮಾಡುವರು.

35.13.2 ವಜ್ಜಿ ಸುತ್ತಂ


125. ಒಮ್ಮೆ ಭಗವಾನರು ವಜ್ಜಿಗಳ ಹತ್ಥಿಗಾಮ (ಆನೆಗಳ ಗ್ರಾಮ)ದಲ್ಲಿ ವಿಹರಿಸುತ್ತಿದ್ದರು. ಆಗ ಹತ್ಥಿಗಾಮದ ಉಗ್ಗನೆಂಬ ಗೃಹಸ್ಥನು ಭಗವಾನರ ಸಮೀಪಕ್ಕೆ ಬಂದನು. ಭಗವಾನರಿಗೆ ವಂದಿಸಿ, ಒಂದೆಡೆ ಕುಳಿತನು. ನಂತರ ಭಗವಾನರಲ್ಲಿ ಈ ರೀತಿ ಪ್ರಶ್ನಿಸಿದನು: ಭಂತೆ, ಯಾವ ಹೇತುವಿನಿಂದ (ಕಾರಣದಿಂದ) ಹಾಗು ಯಾವ ಬೆಂಬಲದಿಂದ (ಉದ್ದೇಶದಿಂದ) (ಪಚ್ಚಯ) ಹಲವಾರು ಜೀವಿಗಳು ಈ ಜೀವನದಲ್ಲೇ ಇಲ್ಲೇ ನಿಬ್ಬಾಣವನ್ನು ಪಡೆಯುವುದಿಲ್ಲ ಹಾಗೂ ಯಾವ ಹೇತುವಿನಿಂದ (ಕಾರಣ) ಹಾಗು ಯಾವ ಉದ್ದೇಶ (ಬೆಂಬಲ) ದಿಂದ ಹಲವಾರು ಜೀವಿಗಳು ಈ ಜೀವಿತದಲ್ಲೇ ಇಲ್ಲೇ ನಿಬ್ಬಾಣವನ್ನು ಪಡೆಯುತ್ತಾರೆ. - ಓ ಉಗ್ಗನೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ ಮತ್ತು ಅಂಟಿಕೊಂಡರೆ ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾದರೆ, ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ. ಕಿವಿಯಿಂದ... ಓ ಉಗ್ಗನೇ, ಮೂಗಿನಿಂದ ಗ್ರಹಿಸುವ ವಾಸನೆಗಳಿವೆ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದ ಧಮ್ಮಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ, ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾರೆ ಮತ್ತು ಅಂಟಿಕೊಂಡರೆ ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ. ಇದೇ ಕಾರಣವಾಗಿದೆ ಹಾಗು ಇದೇ ಬೆಂಬಲವಾಗಿದೆ. ದೇವತೆಗಳೊಡೆಯ ಇದರಿಂದಾಗಿ ಹಲವರು ಈ ಜೀವಿತದಲ್ಲೇ ನಿಬ್ಬಾಣವನ್ನು ಪಡೆಯಲಾರರು. ಓ ಉಗ್ಗನೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ... ಕಿವಿಯಿಂದ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದಂತಹ ಧಮ್ಮಗಳಿವೆ (ಮಾನಸಿಕ ವಿಷಯಗಳು). ಅವೆಲ್ಲಾ ಆಸೆ ಹುಟ್ಟಿಸುವಂತಹುದು, ಪ್ರಿಯವಾದವು, ಒಪ್ಪುವಂತಹುದು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಭಿಕ್ಷುವು ಅವುಗಳಲ್ಲಿ ಆನಂದಿತನಾಗದಿದ್ದರೆ, ಸ್ವಾಗತಿಸದಿದ್ದರೆ, ಅವುಗಳಿಗೆ ಅವಲಂಬಿತನಾಗದಿದ್ದರೆ ಅವಕ್ಕೆ ಅಂಟದಿದ್ದರೆ ಅಂತಹವನು ಮಾತ್ರ ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾರೆ. ಇದೇ ಕಾರಣವಾಗಿದೆ, ಇದೇ ಉದ್ದೇಶವಾಗಿದೆ, ಓ ಉಗ್ಗನೇ, ಹೀಗಾಗಿ ಹಲವರು ಮಾತ್ರ ಇದೇ ಜೀವಿತದಲ್ಲಿ ನಿಬ್ಬಾಣ ಪ್ರಾಪ್ತಿಮಾಡುವರು.

35.13.3 ನಾಳನ್ದ ಸುತ್ತಂ


126. ಒಮ್ಮೆ ಭಗವಾನರು ನಳಂದದ ಪಾವಾರಿಕದ ಆಮ್ರವನದಲ್ಲಿ ವಿಹರಿಸುತ್ತಿದ್ದರು. ಆಗ ಉಪಾಲಿ ಎಂಬ ಗೃಹಸ್ಥನು ಭಗವಾನರ ಸಮೀಪಕ್ಕೆ ಬಂದನು. ಭಗವಾನರಿಗೆ ವಂದಿಸಿ, ಒಂದೆಡೆ ಕುಳಿತನು. ನಂತರ ಭಗವಾನರಲ್ಲಿ ಈ ರೀತಿ ಪ್ರಶ್ನಿಸಿದನು: ಭಂತೆ, ಯಾವ ಹೇತುವಿನಿಂದ (ಕಾರಣದಿಂದ) ಹಾಗು ಯಾವ ಬೆಂಬಲದಿಂದ (ಉದ್ದೇಶದಿಂದ) (ಪಚ್ಚಯ) ಹಲವಾರು ಜೀವಿಗಳು ಈ ಜೀವನದಲ್ಲೇ ಇಲ್ಲೇ ನಿಬ್ಬಾಣವನ್ನು ಪಡೆಯುವುದಿಲ್ಲ ಹಾಗೂ ಯಾವ ಹೇತುವಿನಿಂದ (ಕಾರಣ) ಹಾಗು ಯಾವ ಉದ್ದೇಶ (ಬೆಂಬಲ) ದಿಂದ ಹಲವಾರು ಜೀವಿಗಳು ಈ ಜೀವಿತದಲ್ಲೇ ಇಲ್ಲೇ ನಿಬ್ಬಾಣವನ್ನು ಪಡೆಯುತ್ತಾರೆ. - ಓ ಉಪಾಲಿಯೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ ಮತ್ತು ಅಂಟಿಕೊಂಡರೆ ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾದರೆ, ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ. ಕಿವಿಯಿಂದ.... ಓ ಉಪಾಲಿಯೇ, ಮೂಗಿನಿಂದ ಗ್ರಹಿಸುವ ವಾಸನೆಗಳಿವೆ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದ ಧಮ್ಮಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ, ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾರೆ ಮತ್ತು ಅಂಟಿಕೊಂಡರೆ ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ. ಇದೇ ಕಾರಣವಾಗಿದೆ ಹಾಗು ಇದೇ ಬೆಂಬಲವಾಗಿದೆ. ಉಪಾಲಿಯೇ, ಇದರಿಂದಾಗಿ ಹಲವರು ಈ ಜೀವಿತದಲ್ಲೇ ನಿಬ್ಬಾಣವನ್ನು ಪಡೆಯಲಾರರು. ಓ ಉಪಾಲಿಯೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ... ಕಿವಿಯಿಂದ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದಂತಹ ಧಮ್ಮಗಳಿವೆ (ಮಾನಸಿಕ ವಿಷಯಗಳು). ಅವೆಲ್ಲಾ ಆಸೆ ಹುಟ್ಟಿಸುವಂತಹುದು, ಪ್ರಿಯವಾದವು, ಒಪ್ಪುವಂತಹುದು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಭಿಕ್ಷುವು ಅವುಗಳಲ್ಲಿ ಆನಂದಿತನಾಗದಿದ್ದರೆ, ಸ್ವಾಗತಿಸದಿದ್ದರೆ, ಅವುಗಳಿಗೆ ಅವಲಂಬಿತನಾಗದಿದ್ದರೆ ಅವಕ್ಕೆ ಅಂಟದಿದ್ದರೆ ಅಂತಹವನು ಮಾತ್ರ ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾರೆ. ಇದೇ ಕಾರಣವಾಗಿದೆ, ಇದೇ ಉದ್ದೇಶವಾಗಿದೆ, ಓ ಉಪಾಲಿಯೇ, ಹೀಗಾಗಿ ಹಲವರು ಮಾತ್ರ ಇದೇ ಜೀವಿತದಲ್ಲಿ ನಿಬ್ಬಾಣ ಪ್ರಾಪ್ತಿಮಾಡುವರು.

35.13.4 ಭಾರದ್ವಾಜ ಸುತ್ತಂ


127. ಒಮ್ಮೆ ಆಯುಷ್ಮಂತ ಪಿಂಡೋಲ ಭಾರದ್ವಜನು ಕೋಸಂಬಿಯ ಘೋಷಿತ ಆರಾಮದಲ್ಲಿ ವಾಸಿಸುತ್ತಿದ್ದನು. ಆಗ ರಾಜ ಉದೇನನು ಆಯುಷ್ಮಂತ ಪಿಂಡೂಲ ಭಾರದ್ವಜರಲ್ಲಿಗೆ ಬಂದು ವಂದಿಸಿ, ಕುಶಲ ಕ್ಷೇಮಗಳನ್ನು ವಿನಿಮಯ ಮಾಡಿಕೊಂಡನು. ನಂತರ ಒಂದೆಡೆ ಕುಳಿತು ಈ ರೀತಿ ಪ್ರಶ್ನಿಸಿದನು: ಭಾರದ್ವಜ ಗುರುಗಳೇ, ಯಾವ ಕಾರಣದಿಂದಾಗಿ ಮತ್ತು ಯಾವ ಉದ್ದೇಶದಿಂದಾಗಿ ಈ ಕಿರಿಯ ವಯಸ್ಸಿನ ಯುವಕರು ಇನ್ನೂ ಕೂದಲು ಕಪ್ಪಾಗಿರುವಾಗಲೇ, ಯೌವ್ವನದ ಪ್ರಧಾನ ಕಾಲದಲ್ಲೇ ಇಂದ್ರೀಯ ಸುಖಗಳನ್ನು ವಜರ್ಿಸಿ, ಪವಿತ್ರವಾದ ಬ್ರಹ್ಮಚರ್ಯೆಯ ಜೀವನವನ್ನು ನಡೆಸುತ್ತಿದ್ದಾರೆ ಹಾಗು ಮುಂದುವರೆಸುತ್ತಿದ್ದಾರೆ?

ಮಹಾರಾಜ, ಭಗವಾನರು ಅರಹಂತರು, ಸಮ್ಮಾಸಂಬುದ್ಧರು ಆಗಿರುವರು. ಅವರಿಗೆ ಎಲ್ಲಾ ತಿಳಿದಿದೆ. ಅವರು ಭಿಕ್ಷುಗಳಿಗೆ ಹೀಗೆ ಉಪದೇಶಿಸಿದ್ದಾರೆ, ಏನೆಂದರೆ ಬನ್ನಿ ಭಿಕ್ಖುಗಳೇ, ಯಾವ ಸ್ತ್ರೀಯರು ನಿಮ್ಮ ಮಾತೆಯ ವಯಸ್ಸಿನವರೋ ಅವರನ್ನೆಲ್ಲಾ ನಿಮ್ಮ ಮಾತೆಯರಂತೆಯೇ ಕಾಣಿರಿ, ಯಾವ ಸ್ತ್ರೀಯರು ನಿಮ್ಮ ಭಗಿನಿಯ (ಸಹೋದರಿ) ವಯಸ್ಸಿನವರೋ ಅವರನ್ನೆಲ್ಲಾ ನಿಮ್ಮ ಭಗಿನಿಯರಂತೆಯೇ ಕಾಣಿರಿ ಮತ್ತು ಯಾವ ಸ್ತ್ರೀಯರು ನಿಮ್ಮ ಮಗಳ (ಕಿರಿ) ವಯಸ್ಸಿನವರೋ ಅಂತಹವನ್ನೆಲ್ಲಾ ಮಗಳಂತೆಯೇ ಕಾಣಿರಿ. ಆದ್ದರಿಂದಲೇ ಮಹಾರಾಜ, ಇದೇ ಕಾರಣವಾಗಿದೆ ಹಾಗು ಇದೇ ಉದ್ದೇಶವಾಗಿದೆ. ಹಾಗಾಗಿಯೇ ಭಿಕ್ಷುಗಳು ಕಿರಿವಯಸ್ಸಿನ ಯುವಕರಾಗಿದ್ದರ, ಇನ್ನೂ ಕೂದಲು ಕಪ್ಪಾಗಿಯೇ ಇದ್ದರೂ, ಯೌವ್ವನದ ಪ್ರಧಾನ ಕಾಲದಲ್ಲೇ ಇದ್ದರೂ ಸಹಾ ಇಂದ್ರೀಯ ಸುಖಗಳನ್ನು ವಜರ್ಿಸಿ, ಪರಿಶುದ್ಧವಾದ ಬ್ರಹ್ಮಚರ್ಯೆಯ ಜೀವನವನ್ನು ನಡೆಸುತ್ತಿದ್ದಾರೆ.

ಆದರೆ ಭಾರದ್ವಜ ಗುರುಗಳೇ, ಈ ಮನಸ್ಸು ಪರಮ ಚಂಚಲವಾದುದು, ಹಲವುವೇಳೆ ಮಾತೃಸಮಾನ ವಯಸ್ಸಿದ್ದರೂ ಸಹಾ ಲೋಭವು ಉಂಟಾಗುತ್ತದೆ, ಭಗಿನಿ ಸಮಾನ ವಯಸ್ಸಿದ್ದರೂ ಸಹಾ ಲೋಭವು ಉದಯಿಸುವುದು. ಹಾಗೆಯೇ ಪುತ್ರಿಸಮಾನ ವಯಸ್ಸಿದ್ದರೂ ಸಹಾ ಲೋಭವು ಉದಯಿಸುವುದು. ಹೀಗಾಗಿ ಈ ಕಿರಿ ವಯಸ್ಸಿನ ಯುವಕರು ಇನ್ನೂ ಕೂದಲು ಕಪ್ಪಾಗಿರುವಾಗಲೇ... ಬೇರೆ ಕಾರಣವೂ, ಬೇರೆ ಉದ್ದೇಶ ಇರುವುದೇ? ಹೇಗೆ ಅವರ ಬ್ರಹ್ಮಚರ್ಯೆಯು ವಿಶುದ್ಧವಾಗುವುದು?

ಮಹಾರಾಜರೇ, ಭಗವಾನರು ಅರಹಂತರಾಗಿದ್ದಾರೆ, ಸಮ್ಮಾಸಂಬುದ್ಧರಾಗಿದ್ದಾರೆ. ಅವರು ಎಲ್ಲವನ್ನು ಅರಿತಿದ್ದಾರೆ. ಅವರು ಹೀಗೆ ಉಪದೇಶಿಸಿರುವರು: ಬನ್ನಿ ಭಿಕ್ಷುಗಳೇ, ನೀವು ಶರೀರವನ್ನು ಹೀಗೆ ಪರಿಶೀಲಿಸಿರಿ. ಈ ಶರೀರವು ಪಾದತಲದಿಂದ ಶಿರದ ಕೂದಲಿನವರೆಗೂ ಅನೇಕರೀತಿಯ ಅಸಹ್ಯಕರ, ಅಶುಚಿಗಳನ್ನು ಹೊಂದಿವೆ. ಹೇಳುವುದಾದರೆ ತಲೆಗೂದಲು, ಶರೀರದ ಕೂದಲು, ಉಗುರುಗಳು, ದಂತ, ಚರ್ಮ, ಮಾಂಸ, ಸ್ನಾಯು, ಮೂಳೆ, ಅಸ್ಥಿಮಚ್ಚೆ, ಮೂತ್ರಪಿಂಡಗಳು, ಹೃದಯ, ಯಕೃತ್, ಪ್ಲೀಹ, ಶ್ವಾಸಕೋಶಗಳು, ಕರುಳು, ಜಠರ, ಹೊಟ್ಟೆಯಲ್ಲಿರುವ ಮಲ, ಪಿತ್ತರಸ, ಕಫ, ಕೀವು, ರಕ್ತ, ಬೆವರು, ಕೊಬ್ಬು, ಕಣ್ಣೀರು, ಜೊಲ್ಲು, ಕೀಲುದ್ರವ, ಮೂತ್ರ ಇತ್ಯಾದಿ. ಓ ಮಹಾರಾಜ, ಶರೀರದ ಯಥಾಸ್ಥಿತಿಯು ಹೀಗಿರುವುದರಿಂದಾಗಿ ಇದೇ ಕಾರಣಕ್ಕಗಿ, ಇದೇ ಉದ್ದೇಶದಿಂದಾಗಿ ಪರಿಶುದ್ಧ ಬ್ರಹ್ಮಚರ್ಯ ಜೀವನವನ್ನು ಪಾಲಿಸುತ್ತಿದ್ದಾರೆ....

ಆದರೆ ಭಾರದ್ವಜ ಗುರುಗಳೇ, ಯಾವ ಭಿಕ್ಷುಗಳು ಶಾರೀರಿಕವಾಗಿ ಅಭಿವೃದ್ಧಿ ಹೊಂದಿದವರೊ, ಶೀಲದಲ್ಲಿ ಅಭಿವೃದ್ಧಿ ಹೊಂದಿರುವರೊ, ಚಿತ್ತಾಭಿವೃದ್ಧಿಯಲ್ಲಿ ನಿಷ್ಣಾತರೊ, ಪ್ರಜ್ಞಾಶೀಲತೆಯಲ್ಲಿ ಅಭಿವೃದ್ಧಿ ಹೊಂದಿಲ್ಲವೋ ಅಂತಹವರಿಗೆ ಇದು ಖಂಡಿತವಾಗಿ ದುಷ್ಕರವಾಗಿದೆ. ಆತನು ಈ ಶರೀರವೂ ಅಸಹ್ಯವೂ, ಅಶುಚಿಯು (ಅಶುಭ) ಆಗಿದೆ ಎಂದು ಪ್ರಯತ್ನಿಸಿದಾಗಲು ಆತನಿಗೆ ಸುಂದರವಾಗಿ (ಶುಭವಾಗಿ) ಕಾಣುತ್ತದೆ. ಹೀಗಾಗಿ ಬೇರೆ ಯಾವುದಾದರೂ ಕಾರಣವು ಹಾಗು ಉದ್ದೇಶವು ಇದೆಯೇ? ಈ ಕಿರಿವಯಸ್ಸಿನ ಯುವಕರು... ಹೇಗೆ ವಿಶುದ್ಧವಾದ ಬ್ರಹ್ಮಚರ್ಯೆ ಜೀವನವನ್ನು ಪಾಲಿಸುತ್ತಾರೆ?

ಮಹಾರಾಜ, ಭಗವಾನರು ಅರಹಂತರು, ಸಮ್ಮಾಸಂಬುದ್ಧರು ಆಗಿದ್ದಾರೆ, ಅವರು ಸರ್ವವನ್ನು ತಿಳಿದವರಾಗಿದ್ದಾರೆ. ಅವರು ಹೀಗೆ ಬೋಧಿಸಿದ್ದಾರೆ: ಬನ್ನಿ ಭಿಕ್ಷುಗಳೇ, ನಿಮ್ಮ ಇಂದ್ರೀಯಗಳನ್ನೆಲ್ಲಾ ಜೋಪಾನವಾಗಿ ಸಂರಕ್ಷಿಸಿರಿ. ಕಣ್ಣಿನಿಂದ ರೂಪಗಳನ್ನು ನೋಡುವಾಗ, ರೂಪಗಳ (ಸ್ತ್ರೀಯರ) ಸಂಕೇತಗಳನ್ನಗಲಿ, ವಿವರ ವಿಶೇಷಗಳನ್ನಾಗಲಿ ಹಿಡಿಯಬೇಡಿ. ಏಕೆಂದರೆ ನೀವು ಕಣ್ಣನ್ನು ರಕ್ಷಿಸದೆ ಹೋದರೆ, ಚಕ್ಷುವಿನ ಮೂಲಕ ಅಕುಶಲ ಸ್ಥಿತಿಗಳಾದ ದುರಾಸೆ, ಹಗೆತನ ಇತ್ಯಾದಿಗಳು ನಿಮ್ಮಲ್ಲಿ ಆಕ್ರಮಣ ಮಾಡಬಹುದು. ಹೀಗಾಗಿ ನಿಗ್ರಹವನ್ನು ಅಭ್ಯಸಿಸಿರಿ. ಚಕ್ಷು ಇಂದ್ರೀಯವನ್ನು ಕಾಪಾಡಿರಿ, ಕಣ್ಣನ್ನು ನಿಗ್ರಹಿಸಿರಿ. ಹಾಗೆಯೇ ಕಿವಿಯಿಂದ ಶಬ್ದಗಳನ್ನು ಕೇಳುವಾಗ ಸಂಕೇತಗಳನ್ನಾಗಲಿ, ವಿವರ ವಿಶೇಷತೆಗಳನ್ನಾಗಲಿ ಹಿಡಿಯಬೇಡಿ, ಏಕೆಂದರೆ ಆಗ ನಿಮ್ಮಲ್ಲಿ ದುರಾಸೆ ಮತ್ತು ಹಗೆತನಗಳು ಇತ್ಯಾದಿಗಳು ಉಂಟಾಗಬಹುದು. ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಮಾನಸಿಕ ವಿಷಯಗಳನ್ನು ಗ್ರಹಿಸುವಾಗ ಅವರ ಸಂಕೇತಗಳಾಗಲಿ, ಅದರ ವಿವರ ವಿಶೇಷತೆಗಳಾಗಲಿ ಹಿಡಿಯಬೇಡಿರಿ. ಏಕೆಂದರೆ ಮನೇಂದ್ರಿಯವು ಪಹರೆರಹಿತವಾಗಿರುತ್ತದೆ. ಅಂತಹ ಸಮಯದಲ್ಲಿ ಅಕುಶಲ ಸ್ಥಿತಿಗಳಾದ ದುರಾಸೆಯಾಗಲಿ, ಹಗೆತನವಾಗಲಿ ಇತ್ಯಾದಿ ಆಕ್ರಮಿಸಬಹುದು. ಆದ್ದರಿಂದಾಗಿ ನಿಗ್ರಹದ ಹಾದಿಯನ್ನು ಅಭ್ಯಸಿಸಿರಿ, ಮನೇಂದ್ರಿಯವನ್ನು ಚೆನ್ನಾಗಿ ಸಂರಕ್ಷಿಸಿ, ಮನೋನಿಗ್ರಹ ಕೈಗೊಳ್ಳಿರಿ. ಓ ಮಹಾರಾಜನೇ, ಇದೇ ಕಾರಣ ಹಾಗು ಇದೇ ಉದ್ದೇಶದಿಂದಾಗಿ ಭಿಕ್ಖುಗಳು... ವಿಶುದ್ಧಿ ಸಾಧಿಸುತ್ತಾರೆ. ಪರಿಪೂರ್ಣವಾದ ಬ್ರಹ್ಮಚರ್ಯೆಯ ಜೀವನವನ್ನು ಆಚರಿಸುತ್ತಾರೆ.

ಆಶ್ಚರ್ಯ ಭಾರದ್ವಜರೇ! ಅದ್ಭುತ ಭಾರದ್ವಜ ಗುರುಗಳೇ, ಭಗವಾನರು ಅರಹಂತರು ಹಾಗು ಸಮ್ಮಾಸಂಬುದ್ಧರಿಂದ ಎಂತಹ ಸುಭಾಷಿತವು ಹೇಳಲ್ಪಟ್ಟಿದೆ. ಹೀಗೆ ಈ ವಿಶುದ್ದಿ ಕಾರಣಕ್ಕಾಗಿ ಈ ಉದ್ದೇಶಕ್ಕಾಗಿಯೇ ಯುವ ಭಿಕ್ಖುಗಳು ಕೂದಲು ಕಪ್ಪಾಗಿರುವಾಗಲೇ, ಯೌವ್ವನದ ಶುಭ ವೇಳೆಯಲ್ಲಿಯೇ ಇಂದ್ರಿಯ ಸುಖಗಳಿಗೆ ಬಲಿಯಾಗದೆ ಬ್ರಹ್ಮಚರ್ಯೆಯ ಜೀವನವನ್ನು ಆಚರಿಸುತ್ತಾರೆ. ನಾನು ಸಹಾ ಅಂತಃಪುರದಲ್ಲಿ ಪ್ರವೇಶಿಸುವಾಗ ಅರಕ್ಷಿತ ಕ್ರಿಯೆ, ಅರಕ್ಷಿತ ಮಾತು ಹಾಗು ಅರಕ್ಷಿತ ಮನಸ್ಸಿನಿಂದ ಇರುತ್ತಿದ್ದೆನು. ಎಚ್ಚರಿಕೆಯಿಲ್ಲದೆ, ನಿಗ್ರಹವಿಲ್ಲದೆ ಇರುತ್ತಿದ್ದೆನು. ಆಗ ನನ್ನಲ್ಲಿ ರಾಗವು ಆಕ್ರಮಣ ಮಾಡುತ್ತಿತ್ತು. ಆದರೆ ಯಾವಾಗ ನಾನು ರಕ್ಷಿತ ಸ್ಮೃತಿಯಲ್ಲಿ ಅಂತಃಪುರವನ್ನು ಪ್ರವೇಶಿಸಿದಾಗ ನನ್ನ ಶಾರೀರಿಕ ಕ್ರಿಯೆಗಳು ಪಹರೆಯಿಂದಿರುತ್ತಿದ್ದವು. ರಕ್ಷಿತವಾದ ಮಾತು ಕ್ರಿಯೆ ನಡೆಯುತ್ತದೆ ಮತ್ತು ಚಿತ್ತವೂ ರಕ್ಷಣೆಯಲ್ಲಿರುತ್ತಿತ್ತು. ಜಾಗರೂಕತೆಯು ಸ್ಥಾಪಿತವಾಗಿರುತ್ತಿತ್ತು. ಇಂದ್ರೀಯಗಳೆಲ್ಲಾ ನಿಗ್ರಹದಿಂದಿರುತ್ತಿತ್ತು. ಅಂತಹ ಸಮಯದಲ್ಲಿ ನನ್ನಲ್ಲಿ ರಾಗವು ಆಕ್ರಮಿಸುತ್ತಿರಲಿಲ್ಲ.

ಭವ್ಯವಾಗಿದೆ ಭಾರದ್ವಜರೇ, ಶೋಭಾಯಮಾನವಾಗಿದೆ ಭಾರದ್ವಜ ಗುರುಗಳೇ, ಧಮ್ಮವು ಗುರು ಭಾರದ್ವಜರಿಂದ ಹಲವಾರು ವಿಧಗಳಿಂದ ಪ್ರಕಾಶಿಸಲ್ಪಟ್ಟಿತು. ಹೇಗೆಂದರೆ ತಲೆಕೆಳಗಾಗಿರುವುದು ಸರಿಯಾಗಿ ನಿಲ್ಲಿಸುವಂತೆ, ಅಡಗಿರುವುದು ಪ್ರಕಾಶಪಡಿಸುವಂತೆ, ದಾರಿತಪ್ಪಿರುವವರನ್ನು ಯೋಗ್ಯ ಹಾದಿ ತೋರಿಸುವಂತೆ, ಗಾಢ ಕತ್ತಲಿನಲ್ಲಿರುವವರಿಗೆ ಪ್ರಕಾಶಮಾನವಾದ ದೀಪವನ್ನು ಹಿಡಿದು ರೂಪಗಳನ್ನು ತೋರಿಸುವಂತೆ ನಿಮ್ಮಿಂದ ತೋರಿಸಲ್ಪಟ್ಟಿದೆ. ಗುರು ಭಾರದ್ವಜರೇ, ನಾನು ಭಗವಂತರಲ್ಲಿ ಶರಣು ಹೋಗುತ್ತೇನೆ. ಅವರ ಅನುಪಮ ಧಮ್ಮಕ್ಕೂ ಶರಣು ಹೋಗುತ್ತೇನೆ. ಹಾಗೆಯೇ ಸರಿಸಾಟಿಯಿಲ್ಲದ ಸಂಘಕ್ಕೂ ಶರಣು ಹೋಗುತ್ತೇನೆ. ಇಂದಿನಿಂದ ಗುರುಗಳಾದ ಭಾರದ್ವಜರು ನನ್ನನ್ನು ಉಪಾಸಕನೆಂದು ಪರಿಗಣಿಸಲಿ, ನಾನು ಪ್ರಾಣ ಇರುವವರೆಗೂ ಶರಣು ಹೋಗುತ್ತೇನೆ.

35.13.5 ಸೋಣ ಸುತ್ತಂ


128. ಒಮ್ಮೆ ಭಗವಾನರು ರಾಜಗೃಹದ ವೇಳುವನದ ಕಲನ್ದಕ ನಿವಾಪದಲ್ಲಿ ವಿಹರಿಸುತ್ತಿದ್ದರು. ಆಗ ಸೋಣನೆಂಬ ಗೃಹಪತಿ ಪುತ್ರನು ಭಗವಾನರ ಬಳಿಗೆ ಸಮೀಪಿಸಿದನು. ಭಗವಾನರಿಗೆ ವಂದಿಸಿ, ಒಂದೆಡೆ ಕುಳಿತನು. ನಂತರ ಭಗವಾನರಲ್ಲಿ ಹೀಗೆ ಕೇಳಿದನು: ಭಂತೆ, ಯಾವ ಹೇತುವಿನಿಂದ ಹಾಗು ಯಾವ ಬೆಂಬಲದಿಂದ ಹಲವಾರು ಜೀವಿಗಳು ಈ ಜೀವಿತದಲ್ಲೇ ಇಲ್ಲೇ ನಿಬ್ಬಾಣವನ್ನು ಪಡೆಯುವುದಿಲ್ಲ ಹಾಗು ಯಾವ ಹೇತುವಿನಿಂದ ಹಾಗು ಉದ್ದೇಶದಿಂದ ಹಲವಾರು ಜೀವಿಗಳು ಈ ಜೀವಿತದಲ್ಲೇ ಇಲ್ಲೇ ನಿಬ್ಬಾಣವನ್ನು ಪಡೆಯುತ್ತಾರೆ? - ಓ ಸೋಣನೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ ಮತ್ತು ಅಂಟಿಕೊಂಡರೆ ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾದರೆ, ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ. ಕಿವಿಯಿಂದ... ಓ ಸೋಣನೇ, ಮೂಗಿನಿಂದ ಗ್ರಹಿಸುವ ವಾಸನೆಗಳಿವೆ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದ ಧಮ್ಮಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ, ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾರೆ ಮತ್ತು ಅಂಟಿಕೊಂಡರೆ ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ. ಇದೇ ಕಾರಣವಾಗಿದೆ ಹಾಗು ಇದೇ ಬೆಂಬಲವಾಗಿದೆ. ಸೋಣನೇ, ಇದರಿಂದಾಗಿ ಹಲವರು ಈ ಜೀವಿತದಲ್ಲೇ ನಿಬ್ಬಾಣವನ್ನು ಪಡೆಯಲಾರರು. ಓ ಸೋಣನೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ... ಕಿವಿಯಿಂದ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದಂತಹ ಧಮ್ಮಗಳಿವೆ (ಮಾನಸಿಕ ವಿಷಯಗಳು). ಅವೆಲ್ಲಾ ಆಸೆ ಹುಟ್ಟಿಸುವಂತಹುದು, ಪ್ರಿಯವಾದವು, ಒಪ್ಪುವಂತಹುದು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಭಿಕ್ಷುವು ಅವುಗಳಲ್ಲಿ ಆನಂದಿತನಾಗದಿದ್ದರೆ, ಸ್ವಾಗತಿಸದಿದ್ದರೆ, ಅವುಗಳಿಗೆ ಅವಲಂಬಿತನಾಗದಿದ್ದರೆ ಅವಕ್ಕೆ ಅಂಟದಿದ್ದರೆ ಅಂತಹವನು ಮಾತ್ರ ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾರೆ. ಇದೇ ಕಾರಣವಾಗಿದೆ, ಇದೇ ಉದ್ದೇಶವಾಗಿದೆ, ಓ ಸೋಣನೇ, ಹೀಗಾಗಿ ಹಲವರು ಮಾತ್ರ ಇದೇ ಜೀವಿತದಲ್ಲಿ ನಿಬ್ಬಾಣ ಪ್ರಾಪ್ತಿಮಾಡುವರು.

35.13.6 ಘೋಸಿತ ಸುತ್ತಂ


129. ಒಮ್ಮೆ ಆಯುಷ್ಮಂತ ಆನಂದರವರು ಕೊಸಂಬಿಯ ಘೋಷಿತ ಆರಾಮದಲ್ಲಿ ವಾಸಿಸುತ್ತಿದ್ದರು. ಆಗ ಘೋಷಿತ ಗೃಹಪತಿಯು ಆನಂದರವರ ಬಳಿಗೆ ಬಂದನು. ಹಾಗೂ ಗೌರವಯುತವಾಗಿ ವಂದಿಸಿ ಒಂದೆಡೆ ಕುಳಿತು, ನಂತರ ಹೀಗೆ ಪ್ರಶ್ನಿಸಿದನು. ಭಂತೆ ಆನಂದರವರೇ, ಹೀಗೆ ಹೇಳಲ್ಪಟ್ಟಿದೆ, ಏನೆಂದರೆ ಧಾತುಗಳ ವೈವಿದ್ಯತೆ, ಧಾತುಗಳ ವೈವಿದ್ಯತೆ ಎನ್ನುತ್ತಾರಲ್ಲ. ಭಂತೆ ಭಗವಾನರಿಂದ ಯಾವ ರೀತಿಗಳಲ್ಲಿ ಧಾತುಗಳ ವೈವಿದ್ಯತೆಗಳು ಹೇಳಲ್ಪಟ್ಟಿದೆ.

ಗೃಹಸ್ಥನೇ, ಇಲ್ಲಿ ಚಕ್ಷುಧಾತು ಇದೆ ಮತ್ತು ರೂಪಗಳಿವೆ. ಅವು ಒಪ್ಪುವಂತಹದು ಮತ್ತು ಚಕ್ಷುವಿಞ್ಞಾಣವು ಹಾಗು ಸ್ಪರ್ಶಗಳ ಅವಲಂಬನೆಯಿಂದಾಗಿ ಪ್ರಿಯವೇದನೆಗಳು ಉಂಟಾಗುವುವು. ಹಾಗೆಯೇ ಇಲ್ಲಿ ಚಕ್ಷುಧಾತುವಿದೆ, ಒಪ್ಪದೆ ಇರುವಂತಹ ರೂಪಗಳಿವೆ. ಹೀಗೆ ಚಕ್ಷುವಿಞ್ಞಾಣವು ಉದಯಿಸುತ್ತದೆ. ಹಾಗೆಯೇ ಸ್ಪರ್ಶಗಳ ಅವಲಂಬನೆಯಿಂದಾಗಿ ಅಪ್ರಿಯವೇದನೆಗಳು ಉಂಟಾಗುವುದು. ಅದೇರೀತಿಯಲ್ಲಿ ಇಲ್ಲಿ ಚಕ್ಷು ಧಾತುವಿರುವುದು. ತಟಸ್ಥ ರೂಪಗಳಿವೆ. ಆಗ ಚಕ್ಷುವಿಞ್ಞಾಣವು ಉದಯಿಸುತ್ತದೆ ಹಾಗು ಸ್ಪರ್ಶಗಳ ಅವಲಂಬನೆಯಿಂದಾಗಿ ಪ್ರಿಯವಾಗಿಲ್ಲದ ಅಪ್ರಿಯವಾಗಿಲ್ಲದ ತಟಸ್ಥ ವೇದನೆಗಳು ಉಂಟಾಗುತ್ತದೆ.... ಶ್ರೋತ ರೂಪವಿದೆ... ಜಿಹ್ವಾಧಾತು... ಮೂಗಿನಧಾತುವಿದೆ... ಕಾಯಧಾತುವಿದೆ... ಇಲ್ಲಿ ಮನೋಧಾತುವಿದೆ. ಒಪ್ಪುವಂತಹ ಧಮ್ಮಧಾತುವಿದೆ. ಆಗ ಮನೋವಿಞ್ಞಾಣವು ಸುಖವೇದನೆಯು ಉಂಟಾಗುವುದು. ಇಲ್ಲಿ ಸ್ಪರ್ಶಗಳಿಂದ ಪ್ರಿಯವಾದ ವೇದನೆಗಳು ಉಂಟಾಗುವುವು. ಹಾಗೆಯೇ ಗೃಹಪತಿಯೇ, ಇಲ್ಲಿ ಮನೋಧಾತುವಿದೆ. ಒಪ್ಪದೆಯಿರುವ ಮಾನಸಿಕ ವಿಷಯಗಳಿವೆ. ಆಗ ಮನೋವಿಞ್ಞಾಣವು ಜೊತೆಗೆ ಅಪ್ರಿಯ ವೇದನೆಗಳು ಉಂಟಾಗುವುವು. ಸ್ಪರ್ಶಗಳನ್ನು ಅವಲಂಬಿಸಿ ಅಪ್ರಿಯ ವೇದನೆಗಳು ಉಂಟಾಗುವುವು. ಇಲ್ಲಿ ಮನೋಧಾತುವಿದೆ. ಮಾನಸಿಕ ವಿಷಯಗಳಿವೆ ಅವಕ್ಕೆ ಆಧಾರವು ಉಪೇಕ್ಷೆಯಾಗಿದೆ. ಹೀಗಾಗಿ ಮನೋವಿಞ್ಞಾಣವು ಹಾಗು ತಟಸ್ಥ ವೇದನೆಗಳು ಉಂಟಾಗುವುದು. ಇಲ್ಲಿ ಸ್ಪರ್ಶಗಳನ್ನು ಅವಲಂಬಿಸಿ ಪ್ರಿಯವೂ ಅಲ್ಲದ ಅಪ್ರಿಯವೂ ಅಲ್ಲದ ತಟಸ್ಥ ವೇದನೆಗಳು ಉಂಟಾಗುತ್ತವೆ. ಈ ರೀತಿಯಾಗಿ ಗೃಹಸ್ಥನೇ ಭಗವಾನರಿಂದ ಅನೇಕ ಬಗೆಯಲ್ಲಿ ಧಾತುಗಳು ವಿವಿರಿಸಲ್ಪಟ್ಟಿವೆ.

35.13.7 ಹಾಲಿದ್ದಿಕಾನಿ ಸುತ್ತಂ


130. ಒಮ್ಮೆ ಆಯುಷ್ಮಂತರಾದ ಮಹಾಕಚ್ಚಾನರು ಅವಂತಿಯಲ್ಲಿನ ಕುಕುರಘರದ ಪಪಾತ ಪರ್ವತದಲ್ಲಿ ವಿಹರಿಸುತ್ತಿದ್ದರು. ಆಗ ಗೃಹಸ್ಥನಾದ ಹಾಲಿದ್ದಿಕಾನಿಯು ಮಹಾಕಚ್ಚಾನರ ಬಳಿಗೆ ಬಂದನು. ಪೂಜ್ಯ ಕಚ್ಚಾನರಿಗೆ ವಂದಿಸಿ ಒಂದೆಡೆ ಕುಳಿತನು, ನಂತರ ಹೀಗೆ ಪ್ರಶ್ನಿಸಿದನು: ಭಂತೆ, ಭಗವಾನರಿಂದ ಹೀಗೆ ಹೇಳಲ್ಪಟ್ಟಿದೆ, ವೈವಿಧ್ಯತೆಯ ಧಾತುಗಳನ್ನು ಅವಲಂಬಿಸಿ ವೈವಿದ್ಯತೆಯ ಸ್ಪರ್ಶಗಳು, ವೈವಿದ್ಯತೆಯ ಸ್ಪರ್ಶಗಳನ್ನು ಅವಲಂಬಿಸಿ ವೈವಿದ್ಯತೆಯ ವೇದನೆಗಳು ಉಂಟಾಗುತ್ತವೆ ಇದು ಹೇಗೆ ಭಂತೆ?

ಗೃಹಪತಿಯೇ, ಇಲ್ಲಿ ಭಿಕ್ಷುವೊಬ್ಬನು ಚಕ್ಷುವಿನಿಂದ ರೂಪಗಳನ್ನು ನೋಡುತ್ತಾನೆ. ಅವು ಪ್ರಿಯವಾದವು ಎಂದು ಅರಿಯುತ್ತಾನೆ. ಆಗ ಚಕ್ಷುವಿಞ್ಞಾನವು ಹಾಗು ಪ್ರಿಯವೇದನೆಯು ಉಂಟಾಗುವುದು. ಪ್ರಿಯವಾದ ಸ್ಪರ್ಶದ ಕಾರಣದಿಂದಾಗಿ ಅತನಲ್ಲಿ ಪ್ರಿಯವಾದ ವೇದನೆಗಳು ಉಂಟಾಗಿವೆ. ಹಾಗೆಯೇ ಆತನು ಚಕ್ಷುವಿನಿಂದ ರೂಪಗಳನ್ನು ನೋಡುತ್ತಾನೆ. ಅವು ಅಪ್ರಿಯವಾದವು ಎಂದು ಅರಿವಾದಾಗ ಚಕ್ಷುವಿಞ್ಞಾನವು ಹಾಗು ಅಪ್ರಿಯ ವೇದನೆಯು ಉಂಟಾಗುವುದು. ಅಪ್ರಿಯವಾದ ಸ್ಪರ್ಶದಿಂದಾಗಿ ಆತನಲ್ಲಿ ಅಪ್ರಿಯವಾದ ವೇದನೆಗಳು ಉಂಟಾಗುವುವು. ಹಾಗೆಯೇ ಇಲ್ಲಿ ಭಿಕ್ಷುವೊಬ್ಬನು ರೂಪಗಳನ್ನು ನೋಡುತ್ತಾನೆ. ಅದು ಪ್ರಿಯವಲ್ಲದ ಹಾಗೆಯೇ ಅಪ್ರಿಯವಲ್ಲದ್ದಾಗಿರುತ್ತದೆ. ಆಗ ಆತನಲ್ಲಿ ಚಕ್ಷುವಿಞ್ಞಾನವು ಹಾಗು ಪ್ರಿಯಾಪ್ರಿಯವಲ್ಲದ ವೇದನೆಗಳು (ತಟಸ್ಥ) ಉಂಟಾಗುತ್ತವೆ. ಆಗ ಆತನಿಗೆ ತಟಸ್ಥ ಸ್ಪರ್ಶಗಳಿಂದಾಗಿ ತಟಸ್ಥ ವೇದನೆಗಳು ಉಂಟಾಗಿವೆ ಎಂದು ಅರಿಯುತ್ತಾನೆ.

ಮತ್ತೆ ಗೃಹಸ್ಥನೇ, ಇಲ್ಲಿ ಭಿಕ್ಷುವು ಕಿವಿಯಿಂದ ಶಬ್ದಗಳನ್ನು ಆಲಿಸಬಹುದು... ಮೂಗಿನಿಂದ ಗಂಧಗಳನ್ನು ಆಘ್ರಾಣಿಸಬಹುದು... ಜಿಹ್ವೆಯಿಂದ ರುಚಿಗಳನ್ನು ಆಸ್ವಾದಿಸಬಹುದು... ಕಾಯದಿಂದ ಸ್ಪರ್ಶಗಳನ್ನು ಗ್ರಹಿಸಬಹುದು... ಮನಸ್ಸಿನಿಂದ ಧಮ್ಮ (ಮಾನಸಿಕ ವಿಷಯಗಳು)ಗಳನ್ನು ಅರಿಯಬಹುದು. ಅವು ಪ್ರಿಯವಾದ ವಿಷಯಗಳಿದ್ದಾಗ ಮನೋವಿಞ್ಞಾನವು ಹಾಗು ಪ್ರಿಯವೇದನೆಯು ಉದಯಿಸುವುದು. ಪ್ರಿಯವಾದ ಸ್ಪರ್ಶಗಳಿಂದ ಪ್ರಿಯವೇದನೆಗಳು ಉಂಟಾಗುತ್ತವೆ. ಹಾಗೆಯೇ ಮನಸ್ಸಿನಿಂದ ಧಮ್ಮಗಳನ್ನು ಅರಿಯುವಾಗ ಅವು ಅಪ್ರಿಯವಾದ ವಿಷಯಗಳಿದ್ದಾಗ, ಮನೋವಿಞ್ಞಾನವು ಹಾಗು ಅಪ್ರಿಯ ವೇದನೆಯು ಉದಯಿಸುವುದು. ಅಪ್ರಿಯವಾದ ಸ್ಪರ್ಶದಿಂದ ಅಪ್ರಿಯ ವೇದನೆಗಳು ಉಂಟಾಗುತ್ತವೆ. ಹಾಗೆಯೇ ಮನಸ್ಸಿನಿಂದ ಧಮ್ಮವನ್ನು ಅರಿಯುವಾಗ ಅವು ಪ್ರಿಯವಲ್ಲದ ಅಪ್ರಿಯವಲ್ಲದ ವಿಷಯಗಳಿದ್ದಾಗ, ಮನೋವಿಞ್ಞಾನವು ಹಾಗು ಪ್ರಿಯಾಪ್ರಿಯಗಳಲ್ಲ (ತಟಸ್ಥ) ವೇದನೆಗಳು ಉಂಟಾಗುತ್ತವೆ. ತಟಸ್ಥ ಸ್ಪರ್ಶದಿಂದ ತಟಸ್ಥ ವೇದನೆಗಳು ಉಂಟಾಗುತ್ತವೆ. ಈ ರೀತಿಯಾಗಿ ಗೃಹಪತಿಯೇ ವಿವಿಧ ಧಾತುಗಳಿಂದ ವೈವಿದ್ಯತೆಯ ಸ್ಪರ್ಶಗಳು, ವೈವಿದ್ಯತೆಯ ಸ್ಪರ್ಶಗಳಿಂದಾಗಿ ವೈವಿದ್ಯತೆಯ ವೇದನೆಗಳು ಉಂಟಾಗುವುವು.

35.13.8 ನಕುಲಪಿತು ಸುತ್ತಂ


131. ಒಮ್ಮೆ ಭಗವಾನರು ಭಗ್ಗೆಸುವಿನ ಸುಸುಮಾರಗಿರದಲ್ಲಿನ ವೇಸಕಾರಾಮದಲ್ಲಿನ ಜಿಂಕೆಗಳ ಉದ್ಯಾನದಲ್ಲಿ ವಿಹರಿಸುತ್ತಿದ್ದರು. ಆಗ ಗೃಹಸ್ಥನಾದ ನಕುಲಪಿತನು ಭಗವಾನರ ಬಳಿಗೆ ಬಂದನು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತನು. ನಂತರ ಹೀಗೆ ಪ್ರಶ್ನಿಸಿದನು:  ಭಂತೆ, ಯಾವ ಹೇತುವಿನಿಂದ (ಕಾರಣದಿಂದ) ಹಾಗು ಯಾವ ಬೆಂಬಲದಿಂದ (ಉದ್ದೇಶದಿಂದ) (ಪಚ್ಚಯ) ಹಲವಾರು ಜೀವಿಗಳು ಈ ಜೀವನದಲ್ಲೇ ಇಲ್ಲೇ ನಿಬ್ಬಾಣವನ್ನು ಪಡೆಯುವುದಿಲ್ಲ ಹಾಗೂ ಯಾವ ಹೇತುವಿನಿಂದ (ಕಾರಣ) ಹಾಗು ಯಾವ ಉದ್ದೇಶ (ಬೆಂಬಲ) ದಿಂದ ಹಲವಾರು ಜೀವಿಗಳು ಈ ಜೀವಿತದಲ್ಲೇ ಇಲ್ಲೇ ನಿಬ್ಬಾಣವನ್ನು ಪಡೆಯುತ್ತಾರೆ. - ಓ ಗೃಹಸ್ಥನೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ ಮತ್ತು ಅಂಟಿಕೊಂಡರೆ ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾದರೆ, ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ. ಕಿವಿಯಿಂದ.... ಓ ಗೃಹಸ್ಥನೇ, ಮೂಗಿನಿಂದ ಗ್ರಹಿಸುವ ವಾಸನೆಗಳಿವೆ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದ ಧಮ್ಮಗಳಿವೆ. ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿದೆ. ಭಿಕ್ಷುವೇನಾದರೂ ಅವುಗಳಲ್ಲಿ ಆನಂದಪಟ್ಟರೆ, ಸ್ವಾಗತಿಸಿದರೆ, ಆತನ ಮನಸ್ಸು ಅವುಗಳಲ್ಲೇ ಅವಲಂಬಿತವಾರೆ ಮತ್ತು ಅಂಟಿಕೊಂಡರೆ ಅಂತಹ ಅಂಟುವಿಕೆಯ ಭಿಕ್ಷುವು ನಿಬ್ಬಾಣವನ್ನು ಸಾಧಿಸಲಾರ. ಇದೇ ಕಾರಣವಾಗಿದೆ ಹಾಗು ಇದೇ ಬೆಂಬಲವಾಗಿದೆ. ಗೃಹಸ್ಥನೇ, ಇದರಿಂದಾಗಿ ಹಲವರು ಈ ಜೀವಿತದಲ್ಲೇ ನಿಬ್ಬಾಣವನ್ನು ಪಡೆಯಲಾರರು.

ಓ ಗೃಹಸ್ಥನೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ... ಕಿವಿಯಿಂದ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಿಸಬಹುದಾದಂತಹ ಧಮ್ಮಗಳಿವೆ (ಮಾನಸಿಕ ವಿಷಯಗಳು). ಅವೆಲ್ಲಾ ಆಸೆ ಹುಟ್ಟಿಸುವಂತಹುದು, ಪ್ರಿಯವಾದವು, ಒಪ್ಪುವಂತಹುದು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಭಿಕ್ಷುವು ಅವುಗಳಲ್ಲಿ ಆನಂದಿತನಾಗದಿದ್ದರೆ, ಸ್ವಾಗತಿಸದಿದ್ದರೆ, ಅವುಗಳಿಗೆ ಅವಲಂಬಿತನಾಗದಿದ್ದರೆ ಅವಕ್ಕೆ ಅಂಟದಿದ್ದರೆ ಅಂತಹವನು ಮಾತ್ರ ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾರೆ. ಇದೇ ಕಾರಣವಾಗಿದೆ, ಇದೇ ಉದ್ದೇಶವಾಗಿದೆ, ಓ ಗೃಹಸ್ಥನೇ, ಹೀಗಾಗಿ ಹಲವರು ಮಾತ್ರ ಇದೇ ಜೀವಿತದಲ್ಲಿ ನಿಬ್ಬಾಣ ಪ್ರಾಪ್ತಿಮಾಡುವರು.

35.13.9 ಲೋಹಿಚ್ಚ ಸುತ್ತಂ


132. ಒಮ್ಮೆ ಆಯುಷ್ಮಂತರಾದ ಮಹಾಕಚ್ಚಾನರು ಅವಂತಿಯ ಮಕ್ಕರಕಟೆಯಲ್ಲಿನ ಅರಣ್ಯಕುಟಿಯಲ್ಲಿ ವಾಸಿಸುತ್ತಿದ್ದರು. ಆಗ ಲೋಹಿಚ್ಚ ಬ್ರಾಹ್ಮಣನ ಮಾಣವಕರು (ಶಿಷ್ಯರು) ಹಾಗು ಕಿರಿಯರು ಸೌದೆಯನ್ನು ಆಯುತ್ತಾ ಅಲ್ಲಿಗೆ ಬಂದರು. ಅವರು ಅರಣ್ಯಕುಟಿಯೊಳಗೆ ಪ್ರವೇಶಿಸದೆ ಅದರ ಸುತ್ತಲು ಅಡ್ಡಾಡುತ್ತ ಜೋರಾಗಿ ಟೀಕೆಗಳನ್ನು ಮಾಡುತ್ತ, ತಮ್ಮಲ್ಲೇ ಹಾಸ್ಯಚಟಾಕಿಗಳನ್ನು ಹರಿಸುತ್ತ, ಶಬ್ದಗಳನ್ನು ಮಾಡುತ್ತಿದ್ದರು, ಹೀಗೆ ಅವಹೇಳನವನ್ನು ಮಾಡಿದರು: ಈ ಮುಂಡಕ ಸಮಣರು ಮನೆ ಕೆಲಸದವರು, ಬ್ರಹ್ಮನ ಪಾದದಿಂದ ಹುಟ್ಟಿರುವರು, ಇವರು ಗುಲಾಮ ಭಕ್ತಾದಿಗಳಿಂದ ಮಾನ್ಯತೆ ಪಡೆದವರು, ಪೂಜಿತರಾಗಿರುವವರು, ಗೌರವಿಸಲ್ಪಡುವವರು ಆಗಿದ್ದಾರೆ. ಆಗ ಆಯುಷ್ಮಂತರಾದ ಮಹಾಕಚ್ಚಾನರು ತಮ್ಮ ಕುಟಿಯಿಂದ ಹೊರಬಂದರು. ಆ ಬ್ರಾಹ್ಮಣ ಯುವಕರಿಗೆ ಹೀಗೆ ಹೇಳಿದರು: ಓ ಮಾಣವಕರೇ, ಗದ್ದಲ ಮಾಡದಿರಿ, ನಾನು ನಿಮಗೆ ಧಮ್ಮವನ್ನು ಉಪದೇಶಿಸಲಿದ್ದೇನೆ. ಆಗ ಆ ಬ್ರಾಹ್ಮಣ ಯುವಕರು ನಿಶ್ಶಬ್ದರಾದರು. ನಂತರ ಆಯುಷ್ಮಂತ ಮಹಾಕಚ್ಚಾನರು ಈ ಗಾಥೆಗಳನ್ನು ನುಡಿದರು:

ಹಿಂದಿನ ಬ್ರಾಹ್ಮಣರು ಶೀಲಗಳಲ್ಲಿ ಉತ್ತಮರಾಗಿದ್ದರು,

ತಮ್ಮ ಸನಾತನ ನಿಯಮಗಳನ್ನು ನೆನೆಯುತ್ತಿದ್ದರು.

ಅವರ ಇಂದ್ರಿಯ ದ್ವಾರಗಳೆಲ್ಲವೂ ಸುರಕ್ಷಿತವಾಗಿರುತ್ತಿತ್ತು,

ಅವರು ಕ್ರೋಧವನ್ನು ಜಯಿಸಿ ವಾಸಿಸುತ್ತಿದ್ದರು.

ಅವರು ಧಮ್ಮದಲ್ಲಿ ಹಾಗು ಧ್ಯಾನದಲ್ಲಿ ರತರಾಗಿರುತ್ತಿದ್ದರು,

ತಮ್ಮ ಸನಾತನ ನಿಯಮಗಳನ್ನು ನೆನೆಯುತ್ತಿದ್ದರು.

ಆದರೆ ಇವರು ಬಿದ್ದಿರುವರು ತಾವು ಜಪಿಸುವೆವೆಂದು

ಗೋತ್ರಗಳಿಂದ ಮತ್ತರಾಗಿರುವರು, ವಿಷಮವಾಗಿ ವತರ್ಿಸುತಿಹರು.

ಕ್ರೋಧದಿಂದ ಅಭಿಭೂತವಾಗಿ ವಿವಿಧ ಶಸ್ತ್ರಗಳಿಂದ

ಬಲಹೀನ ಬಲಯುತರಿಗೆ ಕಿರುಕುಳ ನೀಡುತಿಹರು

ಹೀಗೆ ಇಂದ್ರಿಯ ದ್ವಾರಗಳಲ್ಲಿ ಅಸುರಕ್ಷರಾಗಿರುವವರು

ಸ್ವಪ್ನಗಳಲ್ಲಿ ಐಶ್ವರ್ಯಗಳನ್ನು ಗಳಿಸಿದಂತಹ ಮೂರ್ಖರಾಗಿರುವರು.

ಉಪವಾಸದಲ್ಲಿ ತೊಡಗಿ, ನೆಲದಲ್ಲಿ ಮಲಗಿ

ಮುಂಜಾನೆಯಲ್ಲಿ ಸ್ನಾನಮಾಡಿ, ವೇದಗಳಲ್ಲಿ ತೊಡಗುತ್ತಾರೆ.

ಒರಟಾದ ಚರ್ಮದ ವಸ್ತ್ರತೊಟ್ಟು ಜಟಾಧಾರಿಗಳಾಗಿರುತ್ತಾರೆ

ವ್ಯರ್ಥವಾದ ಶೀಲಾಚರಣೆಗಳಲ್ಲಿ ತೊಡಗಿ, ಕಠಿಣ ತಪೋಗಳಲ್ಲಿ ನಿರತರಾಗುತ್ತಾರೆ.

ಆದರೆ ಕುಹಕತನವಿರುತ್ತದೆ, ಬಾಗಿದ ದಂಡಧಾರಿಗಳಾಗಿರುತ್ತಾರೆ

ಸ್ನಾನಗಳನ್ನು ಪದೇಪದೇ ಮಾಡುವವರಾಗಿರುತ್ತಾರೆ, ಇದು ಬ್ರಾಹ್ಮಣತನ ಚಿಹ್ನೆಗಳಾಗಿರುತ್ತವೆ

ಇವುಗಳಿಂದಾಗಿ ಕೇವಲ ಪ್ರಾಪಂಚಿಕ ಗಳಿಕೆಯಾಗುತ್ತವೆಯಷ್ಟೆ.

ಆದರೆ ಯಾರ ಚಿತ್ತವೂ ಸುಸಮಾಹಿತವಾಗಿದೆಯೋ

ವಿಪಸ್ಸನಾದಿಂದ ಸ್ಪಷ್ಟವಾಗಿದೆಯೋ, ಕಲೆಗಳಿಂದ ನಿರ್ಮಲವಾಗಿದೆಯೋ

ಸರ್ವಜೀವಿಗಳಲ್ಲಿ ಕೋಮಲತೆಯ (ಮೆತ್ತ) ಭಾವದಿಂದಿರುವರೋ

ಅಂತಹವರು ಮಾತ್ರವೇ ಈ ಮಾರ್ಗದಿಂದಾಗಿ ಬ್ರಹ್ಮಪ್ರಾಪ್ತಿ ಗಳಿಸುವರು.

ಇದನ್ನು ಆಲಿಸಿದಂತಹ ಆ ಬ್ರಾಹ್ಮಣ ಯುವಕರು ಕ್ಷುದ್ರರಾದರು, ಅಸಂತುಷ್ಟರಾದರು, ಅಲ್ಲಿಂದ ನಿರ್ಗಮಿಸಿ, ಬ್ರಾಹ್ಮಣ ಲೋಹಿಚ್ಚನ ಬಳಿಗೆ ಬಂದು, ಹೀಗೆ ನುಡಿದರು: ಗುರುವರ್ಯರೇ ನೋಡಿ, ಮಹಾಸಮಣರಾದ ಮಹಾಕಚ್ಚಾನರು ಬ್ರಾಹ್ಮಣರ ಶ್ಲೋಕಗಳಿಗೆ ತಿರಸ್ಕಾರ ಮಾಡಿ, ಮನಬಂದಂತೆ ನುಡಿದಿದ್ದಾರೆ. ಇದನ್ನು ಆಲಿಸಿದಂತಹ ಲೋಹಿಚ್ಚ ಬ್ರಾಹ್ಮಣನು ಕುಪಿತನಾದನು, ಅಸಂತುಷ್ಟನಾದನು. ಆದರೂ ಹೀಗೆ ಚಿಂತನೆ ಮಾಡಿದನು: ಕೇವಲ ನನ್ನ ಶಿಷ್ಯರಿಂದ ಕೇಳಿದೆ ಎಂಬ ಮಾತ್ರಕ್ಕೆ ನಾನು ಸಮಣ ಮಹಾಕಚ್ಚಾನರಿಗೆ ನಿಂದಿಸುವುದು ಸರಿಯಲ್ಲ, ನಾನೇ ಸ್ವಯಂ ಪರಿಶೀಲಿಸುವೆ ಎಂದು ನಿರ್ಧರಿಸಿದನು.

ನಂತರ ಬ್ರಾಹ್ಮಣ ಲೋಹಿಚ್ಚನು ತಮ್ಮ ಮಾಣವಕರ ಸಹಿತವಾಗಿ ಮಹಾಚ್ಚಾನರಲ್ಲಿಗೆ ಬಂದನು. ಮಹಾಕಚ್ಚಾನರ ತೇಜಸ್ಸು ಗಮನಿಸಿ ವಂದಿಸಿದನು. ನಂತರ ಕುಶಲ ಕ್ಷೇಮಗಳನ್ನು ವಿನಿಮಯ ಮಾಡಿಕೊಂಡನು. ನಂತರ ಒಂದೆಡೆ ಕುಳಿತು ಹೀಗೆ ಕೇಳಿದನು: ಮಹಾಕಚ್ಚಾನರೇ, ಕೆಲವು ಬ್ರಾಹ್ಮಣ ಯುವಕರು ಹಾಗು ನನ್ನ ಮಾಣವಕರು ಈ ಹಾದಿಯಲ್ಲಿ ಸೌದೆ ಆರಿಸಲು ಬಂದಿದ್ದರೇ? - ಹೌದು ಬ್ರಾಹ್ಮಣರೇ. - ಅವರೊಂದಿಗೆ ಮಹಾಕಚ್ಚಾನರು ಸಂಭಾಷಣೆಯನ್ನು ನಡೆಸಿದರೆ? - ಹೌದು ಬ್ರಾಹ್ಮಣರೇ - ಯಾವರೀತಿಯ ಸಂಭಾಷಣೆಯು ನಡೆಯಿತು? - ಅವರೊಂದಿಗೆ ಹೀಗೆ ಗಾಥೆಗಳಿಂದ ಹೇಳಿದೆನು.

ಹಿಂದಿನ ಬ್ರಾಹ್ಮಣರು ಶೀಲಗಳಲ್ಲಿ ಉತ್ತಮರಾಗಿದ್ದರು,

ತಮ್ಮ ಸನಾತನ ನಿಯಮಗಳನ್ನು ನೆನೆಯುತ್ತಿದ್ದರು.

ಅವರ ಇಂದ್ರಿಯ ದ್ವಾರಗಳೆಲ್ಲವೂ ಸುರಕ್ಷಿತವಾಗಿರುತ್ತಿತ್ತು.....

ಸರ್ವಜೀವಿಗಳಲ್ಲಿ ಕೋಮಲತೆಯ (ಮೆತ್ತ) ಭಾವದಿಂದಿರುವರೋ

ಅಂತಹವರು ಮಾತ್ರವೇ ಈ ಮಾರ್ಗದಿಂದಾಗಿ ಬ್ರಹ್ಮಪ್ರಾಪ್ತಿ ಗಳಿಸುವರು.

ಈ ರೀತಿಯಲ್ಲಿ ನಮ್ಮ ಸಂಭಾಷಣೆಯು ನಡೆಯಿತು. ಎಂದರು.

ಮಹಾಕಚ್ಚಾನರೇ, ಇಂದ್ರೀಯ ದ್ವಾರಗಳಲ್ಲಿ ಅಸುರಕ್ಷತೆ ಎಂದು ನುಡಿದಿದ್ದೀರಿ, ಯಾವ ವಿಧದಲ್ಲಿ ಒಬ್ಬನು ಇಂದ್ರೀಯ ದ್ವಾರಗಳಲ್ಲಿ ಅಸುರಕ್ಷಿತನಾಗಿರುತ್ತಾನೆ? - ಬ್ರಾಹ್ಮಣನೇ, ಇಲ್ಲಿ ಕಣ್ಣಿನಿಂದ ರೂಪಗಳನ್ನು ನೋಡುತ್ತಾ ಪ್ರಿಯವಾದ ರೂಪಗಳಿಂದ ಆಕಷರ್ಿತನಾಗುತ್ತಾನೆ. ಹಾಗೆಯೇ ಅಪ್ರಿಯವಾದ ರೂಪಗಳಿಂದ ವಿಕಷರ್ಿತನಾಗುತ್ತಾನೆ. ಆತನು ಕಾಯದಿಂದ ಸ್ಮೃತಿರಹಿತನಾಗಿ ವಿಹರಿಸುತ್ತಾನೆ. ಪರಿಮಿತವಾದ ಚಿತ್ತದವನಾಗಿರುತ್ತಾನೆ. ಹಾಗು ಅಂತಹವನಿಗೆ ಚಿತ್ತವಿಮುಕ್ತಿಯು ಅರ್ಥವಾಗದು. ಪ್ರಜ್ಞಾವಿಮುಕ್ತಿಯು ಅರ್ಥವಾಗದು. ಯಥಾಭೂತವಾಗಿ ದಶರ್ಿಸುವ, ನಿಶ್ಶೇಷವಾಗಿ ಅಕುಶಲ ಸ್ಥಿತಿಗಳು ನಿರೋಧವಾಗುವ ಬಗ್ಗೆಯೂ ಆತನಿಗೆ ತಿಳಿಯದು. ಇಲ್ಲಿ ಕಿವಿಯಿಂದ ಶಬ್ದಗಳನ್ನು ಕೇಳುತ್ತಾ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಮಾನಸಿಕ ವಿಷಯಗಳನ್ನು ಅರಿಯುತ್ತಾ ಪ್ರಿಯವಾದ ವಿಷಯಗಳಿಂದ ಆಕಷರ್ಿತನಾಗುತ್ತಾನೆ. ಹಾಗೆಯೇ ಅಪ್ರಿಯವಾದ ವಿಷಯಗಳಿಂದ ವಿಕಷರ್ಿತನಾಗುತ್ತಾನೆ. ಸ್ಮೃತಿರಹಿತನಾಗಿರುತ್ತಾನೆ.... ತಿಳಿಯದು. ಈ ರೀತಿಯಾಗಿ ಬ್ರಾಹ್ಮಣನೇ, ಒಬ್ಬನು ಇಂದ್ರೀಯ ದ್ವಾರಗಳಲ್ಲಿ ಅಸುರಕ್ಷಿತನಾಗಿರುತ್ತಾನೆ.

ಆಶ್ಚರ್ಯಕರ ಭಂತೆ ಕಚ್ಚಾನರೇ, ಅದ್ಭುತವು ಭಂತೆ ಕಚ್ಚಾನರೇ, ತಮ್ಮಿಂದ ಹೇಗೆ ಒಬ್ಬನು ಇಂದ್ರೀಯ ದ್ವಾರಗಳಲ್ಲಿ ಅಸುರಕ್ಷಿತನಾಗಿತ್ತಾನೆ ಎಂದು ವಿವರಿಸಿದಿರಿ. ಆದರೆ ಮಹಾಕಚ್ಚಾನರೇ, ಯಾವ ವಿಧವಾಗಿ ಒಬ್ಬನು ಇಂದ್ರೀಯ ದ್ವಾರಗಳಲ್ಲಿ ಸುರಕ್ಷತೆಯನ್ನು ತಾಳುತ್ತಾನೆ ಎಂಬುದನ್ನು ಸಹಾ ವಿವರಿಸಿರಿ.

ಬ್ರಾಹ್ಮಣನೇ, ಇಲ್ಲಿ ಕಣ್ಣಿನಿಂದ ರೂಪಗಳನ್ನು ನೋಡುವಾಗ ಆ ರೂಪಗಳು ಪ್ರಿಯವಾಗಿದ್ದರೂ ಆಕಷರ್ಿತನಾಗಲಾರ ಹಾಗು ಅಪ್ರಿಯವಾಗಿದ್ದರೆ ವಿಕಷರ್ಿತನಾಗಲಾರನು. ಜೊತೆಗೆ ಆತನು ಶಾರೀತಿಕ ಕ್ರಿಯೆಗಳಲ್ಲೆಲ್ಲಾ ಜಾಗರೂಕತೆಯನ್ನು ಸ್ಥಾಪಿಸುತ್ತಾನೆ. ಆತನು ಅಪರಿಮಿತ ಮನಸ್ಸಿನಿಂದ ಕೂಡಿರುತ್ತಾನೆ. ಹಾಗು ಆತನು ವಿಮುಕ್ತಿಚಿತ್ತವನ್ನು ಯಥಾಭೂತವಾಗಿ ಅರಿಯುತ್ತಾನೆ. ಪ್ರಜ್ಞಾವಿಮುಕ್ತಿಯನ್ನು ಯಥಾಭೂತವಾಗಿ ಅರಿಯುತ್ತಾನೆ. ಆತನಲ್ಲಿ ಅಕುಶಲ ಸ್ಥಿತಿಗಳು ನಿಶ್ಶೇಷವಾಗಿ ನಿರೋಧಗೊಳ್ಳುತ್ತವೆ. ಅದೇರೀತಿಯಲ್ಲಿ ಕಿವಿಯಿಂದ ಶಬ್ದಗಳನ್ನು ಆಲಿಸುವಾಗ... ಮೂಗಿನಿಂದ ವಾಸನೆಗಳನ್ನು ಗ್ರಹಿಸುವಾಗ... ನಾಲಿಗೆಯಿಂದ ರಸಸ್ವಾದ ಮಾಡುವಾಗ.... ದೇಹದಿಂದ ಸ್ಪಶರ್ಿಸುವಾಗ... ಮನಸ್ಸಿನಿಂದ ಮಾನಸಿಕ ವಿಷಯಗಳನ್ನು ಅರಿಯುವಾಗ ಅವು ಪ್ರಿಯವಾಗಿದ್ದರೆ ಅವುಗಳಲ್ಲಿ ಆಕಷರ್ಿತನಾಗುವುದಿಲ್ಲ. ಅವು ಅಪ್ರಿಯವಾಗಿದ್ದರೆ ಅವುಗಳಲ್ಲಿ ವಿಕಷರ್ಿತನಾಗುವುದಿಲ್ಲ. ಆತನು ಕಾಯದಲ್ಲಿ ಜಾಗರೂಕತೆಯನ್ನು ಸ್ಥಾಪಿಸುತ್ತಾನೆ. ಆತನು ಅಪರಿಮಿತ ಚಿತ್ತದಿಂದ ಕೂಡಿರುತ್ತಾನೆ. ಆತನು ಯಥಾಭೂತವಾಗಿ ಚಿತ್ತವಿಮುಕ್ತಿಯನ್ನು, ಪ್ರಜ್ಞಾವಿಮುಕ್ತಿಯನ್ನು ಅರಿಯುತ್ತಾನೆ. ಹಾಗೆಯೇ ಆತನಲ್ಲಿ ಎಲ್ಲಾ ಅಕುಶಲ ಸ್ಥಿತಿಗಳು ನಿಶ್ಶೇಷವಾಗಿ ನಾಶವಾಗಿರುತ್ತವೆ. ಬ್ರಾಹ್ಮಣನೇ, ಈ ರೀತಿಯಾಗಿ ಒಬ್ಬನ ಇಂದ್ರೀಯಗಳು ಸುರಕ್ಷಿತವಾಗಿರುತ್ತವೆ.

ಆಶ್ಚರ್ಯಕರವು ಭಂತೆ ಕಚ್ಚಾಯನರೆ, ಅದ್ಭುತವು ಭಂತೆ ಕಚ್ಚಾಯನರೇ, ಯಾವರೀತಿಯಲ್ಲಿ ಇಂದ್ರೀಯ ದ್ವಾರಗಳನ್ನು ಕಾಪಾಡಬೇಕೆಂದು ಭಂತೆ ಕಚ್ಚಾಯನರಿಂದಾಗಿ ಬಹುಚೆನ್ನಾಗಿ ವಿವರಿಸಲ್ಪಟ್ಟಿದೆ. ಭವ್ಯವಾಗಿದೆ ಕಚ್ಚಾಯನರೇ, ಶೋಭಾಯಮಾನವಾಗಿದೆ. ತಮ್ಮಿಂದ ಧಮ್ಮವು ಹಲವಾರು ವಿಧಗಳಿಂದ ತಿಳಿಸಲ್ಪಟ್ಟಿದೆ. ಹೇಗೆಂದರೆ ತಲೆಕೆಳಗಾಗಿರುವುದು ನೆಟ್ಟಗೆ ನಿಲ್ಲಿಸುವಂತೆ, ಅಡಗಿರುವುದು ಕೆರೆದು ತೋರಿಸಿದಂತೆ, ಪ್ರಕಾಶಮಾನವಾದ ದೀಪವನ್ನು ಹಿಡಿದು ವಸ್ತುಗಳನ್ನು ತೋರಿಸುವಂತೆ ನಿಮ್ಮಿಂದ ತೋರಿಸಲ್ಪಟ್ಟಿದೆ. ಇಂದಿನಿಂದ ನಾನು ಭಗವಾನರಲ್ಲಿ ಶರಣು ಹೋಗುತ್ತೇನೆ, ಭಗವಾನರ ಧಮ್ಮಕ್ಕೂ ಶರಣು ಹೋಗುತ್ತೇನೆ, ಅವರ ಸಂಘಕ್ಕೂ ಶರಣು ಹೋಗುತ್ತೇನೆ. ನಾನು ಪ್ರಾಣವಿರುವತನಕ ಬುದ್ದೋಪಾಸಕನಾಗಿರುತ್ತೇನೆ ಎಂದು ಮಹಾಕಚ್ಚಾನರು ತಿಳಿಯಲಿ. ಮಹಾಕಚ್ಚಾನರವರು ಈ ಲೋಹಿಚ್ಚನ ಮನೆಗೂ ಆಗಮಿಸಲಿ. ಈ ಬ್ರಾಹ್ಮಣನ ಎಲ್ಲಾ ಯುವಶಿಷ್ಯ ಹಾಗು ಶಿಷ್ಯೆಯರು ಮಹಾಕಚ್ಚಾನರಿಗೆ ಗೌರವಿಸುತ್ತಾರೆ, ಎದ್ದು ವಂದಿಸುತ್ತಾರೆ, ತಮಗೆ ಆಸನ, ಉದಕ, ಔತಣವನ್ನು ನೀಡುತ್ತಾರೆ ಮತ್ತು ಅದರಿಂದಾಗಿ ಭವಿಷ್ಯದಲ್ಲಿ ಬಹುಕಾಲದವರೆಗೆ ಹಿತವು ಸುಖವು ಸಿಗುವುದು.

35.13.10 ವೇರಾಹಚ್ಚಾನಿ ಸುತ್ತಂ


133. ಒಮ್ಮೆ ಆಯುಷ್ಮಂತ ಉದಾಯಿಯು ಕಾಮಂಡಾಯದ ತೋದೆಯ್ಯ ಬ್ರಾಹ್ಮಣನ ಆಮ್ರವನದಲ್ಲಿ ವಿಹರಿಸುತ್ತಿದ್ದರು. ಆ ಸಮಯದಲ್ಲಿ ವೇರಹಚ್ಚಾನಿ ಬ್ರಾಹ್ಮಣಿಯ ಗೋತ್ರದ ಯುವಕನು ಆಯುಷ್ಮಂತ ಉದಾಯಿಯ ಬಳಿಗೆ ಬಂದನು ಹಾಗು ವಂದಿಸಿದನು, ಕುಶಲ ಕ್ಷೇಮಗಳ ನಂತರ ಒಂದೆಡೆ ಕುಳಿತನು. ಆಗ ಆಯುಷ್ಮಂತ ಉದಾಯಿಯು ತಮ್ಮ ಧಮ್ಮ ಬೋಧನೆಯನ್ನು ಬಹುಚೆನ್ನಾಗಿ ಮಾಡಿದರು. ಅದರಲ್ಲಿ ಬುದ್ಧಿವಾದವಿತ್ತು, ಪ್ರೇರೇಪಣೆಯಿತ್ತು, ಸ್ಫೂತರ್ಿಯಿತ್ತು ಹಾಗು ಆನಂದದಾಯಕವಾಗಿತ್ತು. ಈ ಬಗೆಯ ಧಮ್ಮವನ್ನು ಆಲಿಸಿದಂತಹ ಆ ಬ್ರಾಹ್ಮಣ ಯುವಕನು ಈ ವಿಷಯವನ್ನು ವೇರಹಚ್ಚಾನಿ ಗೋತ್ರದ ಬ್ರಾಹ್ಮಿಣಿಗೆ ಹೇಳಿದನು. ನೋಡಿ ಅಮ್ಮನವರೇ, ನೀವು ಆಯುಷ್ಮಂತ ಉದಾಯಿಯು ಬೋಧಿಸುವುದನ್ನು ನೋಡಬೇಕು. ಅವರ ಧಮ್ಮವು ಆರಂಭದಲ್ಲಿ ಕಲ್ಯಾಣಕಾರಿಯು, ಮಧ್ಯದಲ್ಲಿಯು ಕಲ್ಯಾಣಕಾರಿಯು ಹಾಗು ಅಂತ್ಯದಲ್ಲಿಯೂ ಕಲ್ಯಾಣಕಾರಿಯೂ ಆಗಿದೆ. ಅವರು ಪರಿಶುದ್ಧವಾದ ಹಾಗು ಪರಿಪೂರ್ಣವಾದ ಬ್ರಹ್ಮಚರ್ಯದ ಬಗ್ಗೆ ವಿವರಿಸುವರು.

ಹಾಗಾದರೆ ಮಾಣವಕನೇ, ಸಮಣ ಉದಾಯಿಯನ್ನು ನನ್ನ ಹೆಸರಿನಲ್ಲಿ ನಾಳೆ ಭೋಜನಕ್ಕೆ ಆಹ್ವಾನಿಸು ಎಂದು ಬ್ರಾಹ್ಮಿಣಿಯು ಹೇಳಿದಳು. ಆಯಿತು ಅಮ್ಮ ಎಂದು ಯುವಕನು ನುಡಿದು ಆಯುಷ್ಮಂತ ಉದಾಯಿಯ ಬಳಿಗೆ ಬಂದು ಹೀಗೆ ನುಡಿದನು: ಆಯುಷ್ಮಂತರಾದ ಉದಾಯಿಯವರೇ, ವೇರಹಚ್ಚಾನಿ ಗೋತ್ರದ ಬ್ರಾಹ್ಮಿಣಿಯ ಮನೆಗೆ ನಾಳೆ ಭೋಜನಕ್ಕೆ ಆಹ್ವಾನಿಸುತ್ತಿದ್ದೇನೆ, ತಾವು ದಯವಿಟ್ಟು ಒಪ್ಪಿಗೆ ಸೂಚಿಸಬೇಕು. ಆಯುಷ್ಮಂತ ಉದಾಯಿಯು ಮೌನದಿಂದ ಒಪ್ಪಿಗೆ ಸೂಚಿಸಿದರು. ನಂತರ ರಾತ್ರಿಯು ಕಳೆದು, ಮಾರನೆಯದಿನ ಬೆಳಿಗ್ಗೆ ಆಯುಷ್ಮಂತರಾದ ಉದಾಯಿಯು ಚೀವರವನ್ನು ಸರಿಪಡಿಸಿಕೊಂಡು ಪಿಂಡಪಾತ್ರೆಯನ್ನು ಎತ್ತಿಕೊಂಡು ವೇರಹಚ್ಚಾನಿ ಗೋತ್ರದ ಬ್ರಾಹ್ಮಣಿಯ ಬಳಿಗೆ ಬಂದರು. ಅಲ್ಲಿ ಅವರಿಗಾಗಿ ಮೀಸಲಾಗಿದ್ದಂತಹ ಆಸನದಲ್ಲಿ ಕುಳಿತರು. ನಂತರ ಆ ಬ್ರಾಹ್ಮಿಣಿಯು ತಮ್ಮ ಕೈಯಾರೆ ಆಹಾರವನ್ನು ಬಡಿಸಿದಳು. ವಿವಿಧರೀತಿಯ ಆಹಾರಗಳಿಂದ ಸತ್ಕರಿಸಿದಳು. ಆಯುಷ್ಮಂತರಾದ ಉದಾಯಿಯು ಭೋಜನವನ್ನು ಮುಗಿಸಿ, ಪಿಂಡಪಾತ್ರೆಯನ್ನು ತೆಗೆದುಕೊಂಡರು. ಆ ನಂತರ ಬ್ರಾಹ್ಮಣಿಯು ಚಪ್ಪಲಿಗಳನ್ನು ಧರಿಸಿ, ಉನ್ನತವಾದ ಆಸನದಲ್ಲಿ ಕುಳಿತು ತಲೆಗೆ ಬಟ್ಟೆಯನ್ನು ಆವರಿಸಿಕೊಂಡು ಧಮ್ಮವನ್ನು ಬೋಧಿಸಿರಿ ಸಮಣರೇ ಎಂದಳು. ಆದರೆ ಆಯುಷ್ಮಂತ ಉದಾಯಿಯು ಹೀಗೆ ನುಡಿದರು: ಅದಕ್ಕಾಗಿ ಬೇರೆ ಸಂದರ್ಭವಿದೆ ಸೋದರಿಯೇ ಎಂದು ನುಡಿದು ಅಲ್ಲಿಂದ ಹೊರಟರು.

ಈಗ ಎರಡನೆಯಬಾರಿ ಆ ಬ್ರಾಹ್ಮಣ ಯುವಕನು ಉದಾಯಿಯವರ ಬಳಿಗೆ ಧಮ್ಮವನ್ನು ಆಲಿಸಲು ಬಂದನು. ಆಯುಷ್ಮಂತ ಉದಾಯಿಯವರು ತಮ್ಮ ಬೋಧನೆಯಿಂದ ಆತನಿಗೆ ಬುದ್ಧಿವಾದವನ್ನು, ಜ್ಞಾನವನ್ನು, ಸ್ಫೂತರ್ಿಯನ್ನು ಹಾಗು ಆನಂದವನ್ನು ನೀಡಿದರು. ಇದನ್ನು ಆಲಿಸಿದಂತಹ ಆತನು ಮತ್ತೆ ಹಿಂದಿನಂತೆಯೇ ಅವರನ್ನು ಕುರಿತು ಬ್ರಾಹ್ಮಣಿಯ ಬಲಿಯಲ್ಲಿ ಹಿಂದಿನಂತೆಯೇ ಪ್ರಶಂಸಿಸಿದನು. ಆಗ ಬ್ರಾಹ್ಮಿಣಿಯು ಹೀಗೆ ನುಡಿದಳು: ಓ ಮಾಣವಕನೇ, ನೀನಂತೂ ಅವರ ಬಗ್ಗೆ ಹೀಗೆ ಪ್ರಶಂಸಿಸುತ್ತಲೇ ಇರುವೆ, ಆದರೆ ಅವರಿಗೆ ಧಮ್ಮವನ್ನು ಉಪದೇಶಿಸಿರಿ ಎಂದರೆ ಬೇರೆ ಸಂದರ್ಭವಿದೆ ಸೋದರಿ ಎಂದು ಆಸನದಿಂದೆದ್ದು ಹೊರಟುಹೋದರು.

ಆದರೆ ಅಮ್ಮನವರೇ, ಅದು ಏತಕ್ಕೆಂದರೆ ನೀವು ಚಪ್ಪಲಿಗಳನ್ನು ಧರಿಸಿ, ಉನ್ನತವಾದ ಪೀಠದ ಮೇಲೆ ಕುಳಿತು, ತಲೆಗೆ ವಸ್ತ್ರಧರಿಸಿ ಧಮ್ಮವನ್ನು ಬೋಧಿಸಿರಿ ಸಮಣರೇ ಎಂದರೆ ಅದು ಧಮ್ಮಕ್ಕೆ ಅಪಚಾರ ಎಸಗಿದಂತೆ. ಭಿಕ್ಷುಗಳು ಧಮ್ಮಕ್ಕೆ ಅಪಾರ ಗೌರವ ನೀಡುವರು. - ಹಾಗಾದರೆ ಮಾಣವಕನೇ ಈ ಬಾರಿ ನನ್ನ ಹೆಸರಿನಲ್ಲಿ ನಾಳೆಯೇ ಔತಣಕ್ಕೆ ಆಹ್ವಾನಿಸು. - ಆಯಿತು ಅಮ್ಮನವರೇ ಎಂದು ಆತನು ಅಲ್ಲಿಂದ ಎದ್ದು ಹೊರಟು ಆಯುಷ್ಮಂತ ಉದಾಯಿಯವರ ಬಳಿಗೆ ಬಂದನು. ಹೀಗೆ ನುಡಿದನು: ಆಯುಷ್ಮಂತರಾದ ಉದಾಯಿರವರಿಗೆ ವೇರಹಚ್ಚಾನಿ ಗೋತ್ರದ ಬ್ರಾಹ್ಮಣಿಯು ಆದರಪೂರ್ವಕವಾಗಿ ಔತಣಕ್ಕೆ ನಾಳೆಯು ಆಹ್ವಾನಿಸಿದ್ದಾಳೆ. ತಾವುಗಳು ಬರಲು ದಯವಿಟ್ಟು ಒಪ್ಪಿಗೆ ಸೂಚಿಸಬೇಕು ಎಂದು ವಿನಂತಿಸಿಕೊಂಡನು. ಆಯುಷ್ಮಂತರಾದ ಉದಾಯಿಯು ಮೌನವಾಗಿ ಒಪ್ಪಿಗೆಯನ್ನು ಸೂಚಿಸಿದರು.

ನಂತರ ಆಯುಷ್ಮಂತರಾದ ಉದಾಯಿಯು ರಾತ್ರಿ ಕಳೆದು ಮಾರನೆಯದಿನ ಪೂವರ್ಾಹ್ನ ಸಮಯದಲ್ಲಿ ವೇರಹಚ್ಚಾನಿ ಗೋತ್ರದ ಬ್ರಾಹ್ಮಣಿಯ ಮನೆಗೆ ಚೀವರ ಪಿಂಡಪಾತ್ರೆ ಸಹಿತ ಬಂದರು. ತಮಗಾಗಿ ಮೀಸಲಾಗಿದ್ದಂತಹ ಆಸನದಲ್ಲಿ ಕುಳಿತರು. ನಂತರ ಬ್ರಾಹ್ಮಣಿಯು ತನ್ನ ಕೈಯಾರೆ ವಿವಿಧರೀತಿಯ ಸ್ವಾದಿಷ್ಟ ಭೋಜನವನ್ನು ಅವರಿಗೆ ಬಡಿಸಿದಳು. ಆಹಾರ ಸೇವಿಸಿದ ನಂತರ ತಮ್ಮ ಪಿಂಡಪಾತ್ರೆಯನ್ನು ತೆಗೆದುಕೊಳ್ಳಲು ಹೋದಾಗ, ಆ ಬ್ರಾಹ್ಮಿಣಿಯು ತನ್ನ ಚಪ್ಪಲಿಗಳನ್ನು ತ್ಯಾಗಮಾಡಿ ತಗ್ಗಾದ ಆಸನದಲ್ಲಿ ಕುಳಿತಳು. ತಲೆಯಿಂದ ವಸ್ತ್ರವನ್ನು ತೆಗೆದಳು ಹಾಗು ಹೀಗೆ ಧಮ್ಮಪ್ರಶ್ನೆಯನ್ನು ಕೇಳಿದಳು. ಭಂತೆ, ಯಾವ ಉಪಸ್ಥಿತಿಯು ಇದ್ದಾಗ ಅರಹಂತರು ಸುಖ ಹಾಗು ದುಃಖಗಳನ್ನು ತೋರಿಸಿಕೊಳ್ಳುವರು ಮತ್ತು ಯಾವ ಅನುಪಸ್ಥಿತಿಯಲ್ಲಿ ಅರಹಂತರು ಸುಖ-ದುಃಖಗಳನ್ನು ತೋರಿಸಿಕೊಳ್ಳಲಾರರು?

ಭಗಿನಿಯೇ, ಚಕ್ಷು ಇದ್ದಾಗ ಅರಹಂತರು ಸುಖ ದುಃಖಗಳನ್ನು ತೋರಿಸಿಕೊಳ್ಳಬೇಕಾಗುತ್ತದೆ. ಆದರೆ ಚಕ್ಷುವಿಲ್ಲದಿದ್ದರೆ ಯಾವ ಸುಖ ದುಃಖಗಳು ಇಲ್ಲ. ಕಿವಿಯು ಇದ್ದಾಗ... ಮೂಗು ಇದ್ದಾಗ... ನಾಲಿಗೆಯಿದ್ದಾಗ... ಕಾಯವು ಇದ್ದಾಗ... ಮನಸ್ಸು ಇದ್ದಾಗ ಅರಹಂತರು ಸುಖ ದುಃಖಗಳನ್ನು ತೋರಿಸಿಕೊಳ್ಳಬೇಕಾಗುತ್ತದೆ. ಆದರೆ ಮನಸ್ಸೇ ಇಲ್ಲದಿದ್ದಾಗ ಸುಖವು ಇಲ್ಲ, ದುಃಖವೂ ಇಲ್ಲ.

ಆಯುಷ್ಮಂತ ಉದಾಯಿಯು ಯಾವಾಗ ಹೀಗೆ ಉತ್ತರಿಸಿದರೋ ಆಗ ಆ ಬ್ರಾಹ್ಮಿಣಿಯು ಹೀಗೆ ಪ್ರಶಂಸಿಸಿದಳು: ಭವ್ಯವಾಗಿದೆ ಭಂತೆ, ಶೋಭಾಯಮಾನವಾಗಿದೆ ಭಂತೆ, ಭಂತೆಯವರಿಂದ ಧಮ್ಮವು ಅನೇಕರೀತಿಯಲ್ಲಿ ಪ್ರಕಾಶಿಸಲ್ಪಟ್ಟಿದೆ. ಹೇಗೆಂದರೆ, ತಲೆಕೆಳಗಾಗಿರುವುದು ಸರಿಯಾಗಿ ನಿಲ್ಲಿಸಿದಂತೆ, ಅಡಗಿರುವುದು ತೆರೆದು ತೋರಿಸಿದಂತೆ, ದಾರಿತಪ್ಪಿದವರಿಗೆ ಯೋಗ್ಯ ಮಾರ್ಗದಶರ್ಿಯಂತೆ, ಕತ್ತಲಿರುವವರಿಗೆ ದೀಪವನ್ನು ಹಿಡಿದು ವಸ್ತುಗಳನ್ನು ತೋರಿಸುವಂತೆ ತಮ್ಮಿಂದ ಅನೇಕ ವಿಧವಾಗಿ ಧಮ್ಮ ಪ್ರಕಾಶಿಸಲ್ಪಟ್ಟಿದೆ. ಇಂದಿನಿಂದ ನಾನು ಜೀವವಿರುವವರೆಗೂ ಬುದ್ಧಶಾಸನಕ್ಕೆ ಉಪಾಸಕಿಯೆಂದು ಎಲ್ಲರೂ ಪರಿಗಣಿಸಲಿ. ನಾನು ಭಗವಂತರಲ್ಲಿ ಶರಣು ಹೋಗುವೆನು, ಧಮ್ಮಕ್ಕೂ ಮತ್ತು ಭಿಕ್ಷುಸಂಘಕ್ಕೆ ಸಹಾ ಶರಣು ಹೋಗುವೆನು.

ಇಲ್ಲಿಗೆ 13ನೇಯದಾದ ಗೃಹಪತಿ ವಗ್ಗವು ಮುಗಿಯಿತು

No comments:

Post a Comment

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...