Thursday 31 May 2018

Samyutta nikaya 35.18 ಸಮುದ್ದ ವಗ್ಗೋ

ಸಮುದ್ದ ವಗ್ಗೋ


35.18.1 ಪಠಮ ಸಮುದ್ದ ಸುತ್ತಂ

228. ಭಿಕ್ಷುಗಳೇ, ಆಶ್ರುತರಾದ ಸಾಧಾರಣ ಜನರು ಸಮುದ್ರ ಸಮುದ್ರ ಎನ್ನುವರು. ಆದರೆ ಆರ್ಯರ ವಿನಯದಲ್ಲಿ ಇದು ಸಮುದ್ರವಲ್ಲ. ಇದು ಕೇವಲ ಉದಕದ (ಜಲದ) ಮಹಾರಾಶಿಯಾಗಿದೆ. ಜಲದ ಮಹಾ ವಿಸ್ತಾರವಾಗಿದೆ. ಚಕ್ಷುವು ಭಿಕ್ಷುಗಳೇ, ಪುರುಷನ (ವ್ಯಕ್ತಿಯ) ಸಮುದ್ರವಾಗಿದೆ. ಅದರ ಅಲೆಗಳು ರೂಪಗಳನ್ನು ಹೊಂದಿವೆ. ಯಾರು ಈ ರೂಪಗಳ ಅಲೆಗಳೊಂದಿಗೆ ತಡೆದುಕೊಂಡು ಈಜುವನೋ ಅಂತಹವನಿಗೆ ಚಕ್ಷು ಸಮುದ್ರದಲ್ಲಿ ರೂಪಗಳ ಆ ವೇಗಕ್ಕೆ ತಡೆದುಕೊಂಡು ಸುಳಿಗಳಿಗೆ ಸಿಲುಕದೆ, ಷಾಕರ್್ಗಳಿಗೆ ಸಿಲುಕದೆ, ತಿಮಿಂಗಲ (ರಾಕ್ಷಸ)ಗಳಿಗೆ ದೊರಕದೆ ಈಜಿ ಸಮುದ್ರ ದಾಟಿದವನು ಎನ್ನುತ್ತಾರೆ ಹಾಗು ಅಲ್ಲಿ ನೆಲೆಸಿದ ಬ್ರಾಹ್ಮಣ ಎನ್ನುತ್ತಾರೆ. ಭಿಕ್ಷುಗಳೇ, ಕಿವಿಯು ಸಮುದ್ರವಾಗಿದೆ. ಅದರ ಅಲೆಗಳು ಶಬ್ದಗಳನ್ನು ಹೊಂದಿವೆ. ಯಾರು ಈ ಶಬ್ದಗಳ ಅಲೆಗಳೊಂದಿಗೆ ಹೋರಾಡಿ ತಡೆದುಕೊಂಡು, ಸುಳಿಗಳಿಗೆ ಸಿಲುಕದೆ, ಸಾಗಾಹಂ (ಷಾಕರ್್) ಗಳಿಗೆ ಸಿಲುಕದೆ ನರಕ್ಷಸ (ತಿಮಿಂಗಲ/ರಾಕ್ಷಸ) ಗಳಿಗೆ ದೊರಕದೆ ಈಜಿ ದಾಟಿ ಆ ದಡದಲ್ಲಿ ನಿಂತಿರುವ ಬ್ರಾಹ್ಮಣ ಎನ್ನುತ್ತಾರೆ. ನಾಸಿಕವು... ನಾಲಿಗೆಯು... ಕಾಯವು... ಮನಸ್ಸು ಪುರುಷನ ಸಮುದ್ರವಾಗಿದೆ. ಇದರ ಅಲೆಗಳು ಮಾನಸಿಕ ವಿಷಯಗಳನ್ನು (ಧಮ್ಮ) ಹೊಂದಿವೆ. ಯಾರು ಈ ಮಾನಸಿಕ ವಿಷಯಗಳಂತಹ ಅಲೆಗಳ ಹೊಡೆತಕ್ಕೆ ತಡೆದುಕೊಂಡು ಸುಳಿಗಳಿಗೆ ಸಿಲುಕದೆ, ಷಾಕರ್್ಗಳಿಗೆ ಸಿಗದೆ, ತಿಮಿಂಗಲ (ರಾಕ್ಷಸ) ಗಳಿಗೆ ದೊರಕದೆ ಈಜಿ ದಾಟಿ ಆ ದಡದಲ್ಲಿ ನಿಂತಿರುವ ಬ್ರಾಹ್ಮಣ ಎನ್ನುತ್ತಾರೆ. ಹೀಗೆ ಭಗವಾನರು ನುಡಿದರು. ನಂತರ ಶಾಸ್ತರು ಹೀಗೆ ನುಡಿದರು.
ಯಾರು ಈ ಸಮುದ್ರದಲ್ಲಿರುವ ಮೀನು, ರಾಕ್ಷಸರಿಗೆ
ಅಲೆಗಳಿಗೆ ಬಲಿಯಾಗದೆ, ದುಷ್ಕರವಾಗಿರುವುದನ್ನು ದಾಟಿರುವನೋ
ಅಂತಹ ಜ್ಞಾನಿಯು ಬ್ರಹ್ಮಚಾರಿಯು
ಲೋಕದ ಅಂತ್ಯಕ್ಕೆ ತಲುಪುವವನು ಅಂತಹವನಿಗೆ
ಪಾರಗತೊತಿ (ಪಾರವನ್ನು ದಾಟಿರುವವನು) ಎನ್ನುತ್ತಾರೆ.


35.18.2 ದುತಿಯ ಸಮುದ್ದ ಸುತ್ತಂ

229. ಭಿಕ್ಷುಗಳೇ, ಆಶ್ರುತರಾದ ಸಾಧಾರಣ ಜನರು ಸಮುದ್ರ ಸಮುದ್ರ ಎನ್ನುವರು. ಆದರೆ ಆರ್ಯರ ವಿನಯದಲ್ಲಿ ಇವನ್ನು ಸಮುದ್ರ ಎನ್ನುವುದಿಲ್ಲ. ಇದು ಕೇವಲ ಜಲದ ಮಹಾರಾಶಿಯಾಗಿದೆ. ಜಲದ ಮಹಾ ವಿಸ್ತಾರವಾಗಿದೆ. ಭಿಕ್ಷುಗಳೇ, ಕಣ್ಣಿನಿಂದ ಗ್ರಹಿಸಬಹುದಾದ ರೂಪಗಳಿಗೆ. ಅವು ಇಷ್ಟಪಡುವಂತಹುದು, ಪ್ರಿಯವಾದುದು, ಒಪ್ಪುವಂತಹುದು, ಸಂತೋಷಕಾರಿ, ಇಂದ್ರೀಯ ಉದ್ರೇಕಕಾರಿ, ಪ್ರಲೋಭನಕಾರಿಯಾಗಿವೆ. ಅದನ್ನು ಆರ್ಯರ ವಿನಯದಲ್ಲಿ ಸಮುದ್ರವೆನ್ನುತ್ತಾರೆ. ಈ ದೇವತೆಗಳ ಸಹಿತವಾದ ಈ ಲೋಕದಲ್ಲಿ ಮಾರರು, ಬ್ರಹ್ಮರು, ಸಮಣ ಬ್ರಾಹ್ಮಣರು, ದೇವ, ಮನುಷ್ಯರು ಎಲ್ಲರೂ ಮುಳುಗಿ ಹೋಗಿದ್ದಾರೆ. ಸಿಕ್ಕಿನಲ್ಲಿ ಸಿಲುಕಿರುವ ಗೋಜಿನಂತೆ ಇದ್ದಾರೆ. ಗಂಟುಗಳು ಕಟ್ಟಿಕೊಂಡಿರುವ ದಾರದ ಉಂಡೆಯಂತೆ, ಜಟೆಯ ಸಿಲುಕಿನಂತೆ ಈ ದುಃಖದ ವಲಯವನ್ನು ದಾಟದವರಂತೆ ಆಗಿದ್ದಾರೆ. ಅಪಾಯಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ ಸಂಸಾರದಲ್ಲಿ ಸಿಲುಕಿದ್ದಾರೆ.
ಭಿಕ್ಷುಗಳೇ, ಕಿವಿಯಿಂದ ಆಲಿಸಬಹುದಾದಂತಹ ಶಬ್ದಗಳಿವೆ... ನಾಸಿಕದಿಂದ... ಜಿಹ್ವೆಯಿಂದ... ಕಾಯದಿಂದ... ಮನಸ್ಸಿನಿಂದ ಗ್ರಹಿಸಬಹುದಾದ ಮಾನಸಿಕ ವಿಷಯಗಳಿವೆ. ಅವು ಇಷ್ಟಪಡುವಂತಹುದು, ಪ್ರಿಯವಾದವು, ಒಪ್ಪುವಂತಹುದು, ಸಂತೋಷಕಾರಿ, ಇಂದ್ರೀಯ ಉದ್ರೇಕಕಾರಿ, ಪ್ರಲೋಭನಕಾರಿಯಾಗಿವೆ. ದೇವತೆಗಳ ಸಹಿತವಾದ ಈ ಲೋಕದಲ್ಲಿ ಮಾರರು, ಬ್ರಹ್ಮರು, ಸಮಣ ಬ್ರಾಹ್ಮಣರು, ದೇವ, ಮನುಷ್ಯರು ಎಲ್ಲರೂ ಮುಳುಗಿ ಹೋಗಿದ್ದಾರೆ. ಸಿಕ್ಕಿನಲ್ಲಿ ಸಿಲುಕಿರುವ ಗೋಜಿನಂತೆ ಇದ್ದಾರೆ. ಗಂಟುಗಳು ಕಟ್ಟಿಕೊಂಡಿರುವ ದಾರದ ಉಂಡೆಯಂತೆ, ಜಡೆಯ ಸಿಲುಕಿನಂತೆ ಈ ದುಃಖದ ವಲಯವನ್ನು ದಾಟದವರಂತೆ ಆಗಿದ್ದಾರೆ. ಅಪಾಯಗಳಲ್ಲಿ, ದುಗ್ತಿಗಳಲ್ಲಿ, ವಿನಿಪಾತದಲ್ಲಿ ಸಂಸಾರದಲ್ಲಿ ಸಿಲುಕಿದ್ದಾರೆ.
ಯಾರು ರಾಗವನ್ನು, ದ್ವೇಷವನ್ನು, ಅವಿದ್ಯೆಯನ್ನು
ಇಲ್ಲವಾಗಿಸಿದ್ದಾರೋ ಅಂತಹವರು ಸಮುದ್ರ ಮೀನುಗಳು
ರಾಕ್ಷಸರು ಹಾಗು ಬೃಹತ್ ಅಲೆಗಳಿರುವ
ದಾಟಲು ದುಷ್ಕರವಾಗಿರುವ ಸಮುದ್ರವನ್ನು ದಾಟುತ್ತಾರೆ.
ಯಾರು ಕಟ್ಟುಗಳಿಂದ ಸುತ್ತುವರೆಯಲ್ಪಟ್ಟವರೋ, ಮೃತ್ಯುವನ್ನು ಬಿಟ್ಟಿರುವನೋ
ಉಪಾದಿರಹಿತನೊ, ದುಃಖಗಳನ್ನು ವಜರ್ಿಸಿರುವವನೋ, ಪುನರ್ಭವ ಪಡೆಯುದವನೋ,
ಮರೆಯಾದರೂ ಮತ್ತೆ ಬಾರದವನು (ಅಳಿಯಲಾರದವನು) ಅಂತಹವನು
ಮೃತ್ಯುರಾಜನಿಗೆ ಭಯ ಹುಟ್ಟಿಸುವನು.



35.18.3 ಚಾಳಿಸಿಕೋಪಮ ಸುತ್ತಂ (ಮೀನುಗಾರನ ಉಪಮೆಯ ಸುತ್ತ)

230. ಭಿಕ್ಷುಗಳೇ, ಮೀನುಗಾರನೊಬ್ಬನು ಮೀನು ಹಿಡಿಯುವ ಕೊಕ್ಕೆಯನ್ನು (ಗಾಳ) ತೆಗದುಕೊಂಡು ಆಳವಾದ ಸರೋವರದಲ್ಲಿ ಬಿಡುತ್ತಾನೆ. ಮೀನೊಂದು ಆಹಾರವನ್ನು ಹುಡುಕುತ್ತಾ ಗಾಳವನ್ನು ನುಂಗಿದರೆ ಅದು ಆಪತ್ತನ್ನು, ಭೀಕರತೆಯನ್ನು ಸಂಧಿಸುತ್ತದೆ. ಆಗ ಮೀನುಗಾರನು ತನ್ನ ಇಚ್ಛೆಯಂತೆ ಅದರೊಂದಿಗೆ ವತರ್ಿಸಬಹುದು.
ಭಿಕ್ಷುಗಳೇ, ಅದೇರೀತಿಯಲ್ಲಿ ಜೀವಿಗಳಿಗೂ ಆರುಬಗೆಯ ಗಾಳಗಳಿವೆ. ಅದರಿಂದಾಗಿ ಜೀವಿಗಳಿಗೆ ವಿಪತ್ತು ಬರುವುದು. ಭೀಕರತೆ ಎದುರಿಸಬೇಕಾಗುವುದು. ಸತ್ವಗಳ ವಧೆಯು ಇದರಿಂದಾಗುತ್ತದೆ, ಯಾವುವವು? ಇಲ್ಲಿ ಭಿಕ್ಷುವು ಕಣ್ಣಿನಿಂದ ರೂಪಗಳನ್ನು ಗ್ರಹಿಸುತ್ತಾನೆ, ಅವು ಇಷ್ಟಪಡುವಂತಹವು, ಪ್ರಿಯವಾದವು, ಒಪ್ಪುವಂತಹುದು, ಇಂದ್ರೀಯ ಉದ್ರೇಕಕಾರಿ, ಪ್ರಲೋಭನಕಾರಿಯಾಗಿವೆ. ಅವನ್ನು ಭಿಕ್ಷುವು ಸ್ವಾಗತಿಸಿದರೆ, ಆನಂದಿಸಿದರೆ, ಅವುಗಳನ್ನು ಅಂಟಿಕೊಂಡಿದ್ದರೆ ಅಂತಹ ಭಿಕ್ಷುವಿಗೆ ಮಾರನ ಗಾಳವನ್ನು ನುಂಗಿರುವವನು ಎನ್ನುತ್ತಾರೆ. ಆತನು ಇಷ್ಟಬಂದಹಾಗೆ ವತರ್ಿಸಬಹುದು.
ಭಿಕ್ಷುಗಳೇ, ಇಲ್ಲಿ ಕಿವಿಯಿಂದ ಗ್ರಹಿಸಬಹುದಾದಂತಹ ಶಬ್ದಗಳಿವೆ... ಮೂಗಿನಿಂದ ಗ್ರಹಿಸಬಹುದಾದ ವಾಸನೆಗಳಿವೆ... ಜಿಹ್ವೆಯಿಂದ ಗ್ರಹಿಸಬಹುದಾದ ರಸಗಳಿವೆ... ಮನಸ್ಸಿನಿಂದ ಗ್ರಹಿಸಬಹುದಾದಂತಹ ಧಮ್ಮಗಳಿವೆ. ಅವು ಇಷ್ಟಪಡುವಂತಹುದು, ಪ್ರಿಯವಾದುದು, ಒಪ್ಪುವಂತಹುದು, ಸಂತೋಷಕಾರಿಯು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿರುತ್ತದೆ. ಆದರೆ ಭಿಕ್ಷುವು ಇವುಗಳಲ್ಲಿ ಆನಂದಿಸಿದರೆ, ಸ್ವಾಗತಿಸಿದರೆ, ಅಂತಹ ಭಿಕ್ಷುವು ಮಾರನ ಗಾಳವನ್ನು ನುಂಗಿದವನಂತೆ ಆಗುತ್ತಾನೆ. ಆತನು ವಿಪತ್ತನ್ನು, ಭೀಕರತೆಯನ್ನು ಭೇಟಿಮಾಡುತ್ತಾನೆ. ಅಂತಹವನಿಗೆ ಮಾರನು ಇಷ್ಟಬಂದಂತೆ ಆಟವಾಡುತ್ತಾನೆ.
ಭಿಕ್ಷುಗಳೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ, ಅವು ಇಷ್ಟಪಡುವಂತಹುದು, ಪ್ರಿಯವಾದುದು, ಒಪ್ಪುವಂತಹುದು, ಆನಂದಕಾರಿಯು, ಇಂದ್ರೀಯ ಉದ್ರೇಕಕಾರಿ ಹಾಗು ಪ್ರಲೋಭನಕಾರಿಯು ಆಗಿದೆ. ಭಿಕ್ಷುವು ಇವುಗಳಲ್ಲಿ ಆನಂದಿಸದಿದ್ದರೆ, ಸ್ವಾಗತಿಸದಿದ್ದರೆ, ಅಂಟಿಕೊಳ್ಳದಿದ್ದರೆ ಆತನು ಮಾರನ ಗಾಳವನ್ನು ನುಂಗದವನಾಗಿರುತ್ತಾನೆ. ಮಾರನ ಗಾಳವನ್ನು ಮುರಿದವನಾಗುತ್ತಾನೆ. ಮಾರನ ಗಾಳವನ್ನು ನಾಶ ಮಾಡಿದವನಾಗುತ್ತಾನೆ. ಅಂತಹವನು ಎಂದಿಗೂ ವಿಪತ್ತಿಗೆ ಮತ್ತು ದುರಂತಕ್ಕೆ ಒಳಗಾಗುವುದಿಲ್ಲ. ಅಂತಹವನಿಗೆ ಮಾರನು ತನ್ನಿಚ್ಛೆಯಂತೆ ಆಡಿಸಲು ಸಾಧ್ಯವಾಗುವುದಿಲ್ಲ.
ಭಿಕ್ಷುಗಳೇ, ಕಿವಿಯಿಂದ ಗ್ರಹಿಸಬಹುದಾದಂತಹ ಶಬ್ದಗಳಿವೆ... ಮೂಗಿನಿಂದ ಗ್ರಹಿಸಬಹುದಾದ ವಾಸನೆಗಳಿವೆ... ಜಿಹ್ವೆಯಿಂದ ಗ್ರಹಿಸಬಹುದಾದ ರಸಗಳಿವೆ... ಮನಸ್ಸಿನಿಂದ ಗ್ರಹಿಸಬಹುದಾದಂತಹ ಮಾನಸಿಕ ವಿಷಯಗಳಿವೆ. ಅವು ಇಷ್ಟಪಡುವಂತಹುದು, ಪ್ರಿಯವಾದುದು, ಸಂತೋಷಕಾರಿಯು, ಇಂದ್ರಿಯ ಉದ್ರೇಕಕಾರಿ ಹಾಗು ಪ್ರಲೋಭನಕಾರಿಯೂ ಆಗಿದೆ. ಆದರೆ ಭಿಕ್ಷುವು ಇವುಗಳಲ್ಲಿ ಆನಂದಿಸದಿದ್ದರೆ, ಸ್ವಾಗತಿಸದಿದ್ದರೆ, ಅಂಟಿಕೊಳ್ಳದಿದ್ದರೆ ಆತನು ಮಾರನ ಗಾಳವನ್ನು ನುಂಗದವನಾಗುತ್ತಾನೆ. ಮಾರನ ಗಾಳವನ್ನು ಮುರಿದವನಾಗುತ್ತಾನೆ. ಮಾರನ ಗಾಳವನ್ನು ನಾಶ ಮಾಡಿದವನಾಗುತ್ತಾನೆ. ಅಂತಹವನು ಎಂದಿಗೂ ವಿಪತ್ತಿಗೆ ಮತ್ತು ದುರಂತಕ್ಕೆ ಒಳಗಾಗುವುದಿಲ್ಲ. ಅಂತಹವನಿಗೆ ಮಾರನು ತನ್ನಿಚ್ಛೆಯಂತೆ ಆಡಿಸಲು ಸಾಧ್ಯವಾಗುವುದಿಲ್ಲ.


35.18.4 ಖೀರರುಕ್ಖೋಪಮ ಸುತ್ತಂ (ಕ್ಷೀರವೃಕ್ಷ ಉಪಮೆ ಸುತ್ತ)

231. ಭಿಕ್ಷುಗಳೇ, ಕಣ್ಣಿನಿಂದ ಗ್ರಹಿಸಹುದಾದ ರೂಪ (ದೃಶ್ಯ) ಗಳಿವೆ. ಆಗ ಯಾವುದೇ ಭಿಕ್ಷುವಾಗಲಿ ಅಥವಾ ಭಿಕ್ಷುಣಿಯಾಗಲಿ ಅವರಲ್ಲಿ ರಾಗವಿದ್ದು ಅದನ್ನು ತೊರೆಯದಿದ್ದರೆ, ದ್ವೇಷವಿದ್ದು ಅದನ್ನು ತೊರೆಯದಿದ್ದರೆ, ಮೋಹವಿದ್ದು ಅದನ್ನು ತೊರೆಯದಿದ್ದರೆ ಆಗ ಕ್ಷುಲ್ಲಕ ದೃಶ್ಯಗಳು ಸಹಾ ಮನಸ್ಸನ್ನು ಪೀಡಿಸುತ್ತವೆ. ಇನ್ನು ಅತ್ಯಂತ ಎದ್ದು ಕಾಣುವ ದೃಶ್ಯಗಳಿಗೆ ಏನೆನ್ನೋಣ, ಏಕೆ ಹೀಗೆ? ಏಕೆಂದರೆ ರಾಗವು ಇನ್ನೂ ಇದೆ, ತೊರೆಯಲ್ಪಟ್ಟಿಲ್ಲ. ದ್ವೇಷವು ಇನ್ನೂ ಇದೆ, ತೊರೆಯಲ್ಪಟ್ಟಿಲ್ಲ. ಮೋಹವು ಇನ್ನೂ ಇದೆ, ತೊರೆಯಲ್ಪಟ್ಟಿಲ್ಲ. ಅದೇರೀತಿಯಲ್ಲಿ ಕಿವಿಯಿಂದ ಗ್ರಹಿಸಬಹುದಾದಂತಹ ಶಬ್ದಗಳಿವೆ... ಮೂಗಿನಿಂದ... ನಾಲಿಗೆಯಿಂದ... ಕಾಯದಿಂದ... ಮನಸ್ಸಿನಿಂದ ಗ್ರಹಿಸಬಹುದಾದಂತಹ ಮಾನಸಿಕ ವಿಷಯಗಳಿವೆ (ಧಮ್ಮ). ಇವು ಸ್ಪರ್ಶವಾದಾಗ ಅವರಲ್ಲಿ ರಾಗವಿದ್ದು ಅವನ್ನು ತೊರೆಯದಿದ್ದರೆ, ದ್ವೇಷವಿದ್ದು ಅದನ್ನು ತೊರೆಯದಿದ್ದರೆ, ಮೋಹವಿದ್ದು ಅದನ್ನು ತೊರೆಯದಿದ್ದರೆ ಆಗ ಕ್ಷುಲ್ಲುಕ ಯೋಚನೆಗಳು ಸಹಾ ಮನಸ್ಸನ್ನು ಪೀಡಿಸುತ್ತವೆ. ಇನ್ನು ಅತ್ಯಂತ ಎದ್ದು ಆವರಿಸುವ ಮಾನಸಿಕ ವಿಷಯಗಳ ಬಗ್ಗೆ ಏನು ಹೇಳೋಣ? ಏಕೆ ಹೀಗೆ? ಏಕೆಂದರೆ ರಾಗವು ಇನ್ನೂ ಇದೆ, ತೊರೆಯಲ್ಪಟ್ಟಿಲ್ಲ. ದ್ವೇಷವು ಇನ್ನೂ ಇದೆ, ತೊರೆಯಲ್ಪಟ್ಟಿಲ್ಲ. ಮೋಹವು ಇನ್ನೂ ಇದೆ, ತೊರೆಯಲ್ಪಟ್ಟಿಲ್ಲ.
ಭಿಕ್ಷುಗಳೇ, ಕ್ಷೀರವೃಕ್ಷವೊಂದಿದೆ ಎಂದಿಟ್ಟುಕೊಳ್ಳೋಣ. ಉದಾಹರಣೆಗೆ: ಅಶ್ವತ್ಥ ವೃಕ್ಷ ಅಥವಾ ಆಲದಮರ ಅಥವಾ ಫಲಕ್ಖವೃಕ್ಷ ಅಥವಾ ಉದುಂಬರ ವೃಕ್ಷ, ಆ ವೃಕ್ಷದ ಎಳೆಯ, ತಾಜಾತನದ, ಕೋಮಲವಾದ ರೆಂಬೆಯನ್ನು ವ್ಯಕ್ತಿಯೊಬ್ಬನು ಮುರಿಯುತ್ತಾನೆ ಎಂದಿಟ್ಟುಕೊಳ್ಳೋಣ. ಆಗ ಕ್ಷೀರವು ಹೊರಬರುವುದಲ್ಲವೆ? - ಹೌದು ಭಂತೆ. - ಏಕೆ? - ಏಕೆಂದರೆ ಅದರಲ್ಲಿ ಕ್ಷೀರವಿದೆ.
ಅದೇರೀತಿಯಲ್ಲಿ ಭಿಕ್ಷುಗಳೇ ಕಣ್ಣಿನಿಂದ ಗ್ರಹಸಿಬಹುದಾದ ದೃಶ್ಯಗಳಿವೆ. ಆಗ ಕ್ಷುಲ್ಲುಕ ದೃಶ್ಯಗಳು ಸಹಾ ಮನಸ್ಸನ್ನು ಪೀಡಿಬಹುದು, ಇನ್ನು ಎದ್ದುಕಾಣಿಸುವಂತಹ ದೃಶ್ಯಗಳಿಗ ಏನು ಹೇಳೋಣ? ಇದಕ್ಕೆ ಏನು ಕಾರಣ? ಏಕೆಂದರೆ ರಾಗವು ಇನ್ನೂ ಇದೆ, ತೊರೆಯಲ್ಪಟ್ಟಿಲ್ಲ. ದ್ವೇಷವು ಇನ್ನೂ ಇದೆ, ತೊರೆಯಲ್ಪಟ್ಟಿಲ್ಲ. ಮೋಹವು ಇನ್ನೂ ಇದೆ, ತೊರೆಯಲ್ಪಟ್ಟಿಲ್ಲ. ಇದೇರೀತಿಯಾಗಿ ಕಿವಿಯಿಂದ... ಮನಸ್ಸಿನಿಂದ...
ಭಿಕ್ಷುಗಳೇ, ಕಣ್ಣಿನಿಂದ ಗ್ರಹಿಸಬಹುದಾದಂತಹ ದೃಶ್ಯಗಳಿವೆ. ಸ್ಪರ್ಶವಾದರೂ ಸಹಾ ಭಿಕ್ಷುವಿನಲ್ಲಿ ಅಥವಾ ಭಿಕ್ಷುಣಿಯಲ್ಲಿ ಯಾವುದೇ ರಾಗವಿರುವುದಿಲ್ಲ. ಅದು ತೊರೆಯಲ್ಪಟ್ಟಿರುತ್ತದೆ. ಯಾವುದೇ ದ್ವೇಷವಿರುವುದಿಲ್ಲ, ತೊರೆಯಲ್ಪಟ್ಟಿರುತ್ತದೆ. ಯಾವುದೇ ಮೋಹವಿರುವುದಿಲ್ಲ ಅದು ತೊರೆಯಲಟ್ಟಿರುತ್ತದೆ. ಎದ್ದುಕಾಣುವಂತಹ ಪ್ರಬಲ ದೃಶ್ಯಗಳು ಸಹಾ ಮನಸ್ಸನ್ನು ಪೀಡಿಸುವುದಿಲ್ಲ, ಇನ್ನು ಕ್ಷುಲ್ಲುಕ ದೃಶ್ಯಗಳ ಬಗ್ಗೆ ಏನೆಂದು ಹೇಳೋಣ. ಏಕೆ ಹೀಗೆ? ಏಕೆಂದರೆ ರಾಗವು ಇಲ್ಲ ತೊರೆಯಲ್ಟಟ್ಟಿದೆ, ದ್ವೇಷವೂ ಇಲ್ಲ ತೊರೆಯಲ್ಪಟ್ಟಿದೆ, ಮೋಹವು ಇಲ್ಲ ತೊರೆಯಲ್ಪಟ್ಟಿದೆ. ಅದೇರೀತಿಯಾಗಿ ಕಿವಿಯಿಂದ ಗ್ರಹಿಸಬಹುದಾದಂತಹ... ಮನಸ್ಸಿನಿಂದ ಗ್ರಹಿಸಬಹುದಾದಂತಹ...
ಭಿಕ್ಷುಗಳೇ, ಕ್ಷೀರವೃಕ್ಷವು ಅಂದರೆ ಅಶ್ವತ್ಥವೃಕ್ಷ ಅಥವಾ ಆಲದಮರ ಅಥವಾ ಪಿಲಕ್ಖ ಅಥವಾ ಉದುಂಬರ ವೃಕ್ಷವಾಗಬಹುದು. ಅದು ಒಣಗಿಹೋದರೆ, ಶುಷ್ಕವಾದರೆ ಅದನ್ನು ವ್ಯಕ್ತಿಯೊಬ್ಬನು ಒಂದು ಕೊಡಲಿಯಿಂದ ಕತ್ತರಿಸಿದರೆ ಕ್ಷೀರವು ಹೊರಬರುವುದೇ? - ಇಲ್ಲ ಭಂತೆ. - ಏಕೆ? - ಏಕೆಂದರೆ ಅದರಲ್ಲಿ ಕ್ಷೀರವು ಇಲ್ಲವಾಗಿದೆ.
ಅದೇರೀತಿಯಲ್ಲಿ ಭಿಕ್ಷುಗಳೇ, ಭಿಕ್ಷುವಾಗಲಿ ಅಥವಾ ಭಿಕ್ಷುಣಿಯಾಗಲಿ ಚಕ್ಷುವಿನಿಂದ ಗ್ರಹಿಸುವಾಗ ರಾಗವು ಇಲ್ಲವಾದರೆ, ದ್ವೇಷವು ಇಲ್ಲವಾದರೆ, ಮೋಹವು ಇಲ್ಲವಾದರೆ, ಅದಕ್ಕೆ ಕಾರಣ ರಾಗವನ್ನು ತೊರೆದಿರುವುದು, ದ್ವೇಷವನ್ನು ತೊರೆದಿರುವುದು, ಮೋಹವನ್ನು ತೊರೆದಿರುವುದು. ಆಗ ಎದ್ದುಕಾಣುವಂತಹ ದೃಶ್ಯಗಳು ವೀಕ್ಷಿಸಿದರೂ ಮನಸ್ಸನ್ನು ಪೀಡಿಸುವುದಿಲ್ಲ, ಆಕ್ರಮಿಸುವುದಿಲ್ಲ. ಏಕೆಂದರೆ ರಾಗವು ಇಲ್ಲಿ ತೊರೆಯಲ್ಪಟ್ಟಿದೆ. ದ್ವೇಷವು ಇಲ್ಲಿ ತೊರೆಯಲ್ಪಟ್ಟಿದೆ. ಮೋಹವು ಇಲ್ಲಿ ತೊರೆಯಲ್ಪಟ್ಟಿದೆ. ಅದೇರೀತಿಯಲ್ಲಿ ಕಿವಿಯಿಂದ ಗ್ರಹಿಸುವಾಗ... ಜಿಹ್ವೆಯಿಂದ ಗ್ರಹಿಸುವಾಗ...
ಇಲ್ಲಿ ಭಿಕ್ಷುವಾಗಲಿ ಅಥವಾ ಭಿಕ್ಷುಣಿಯಾಗಲಿ ಮನಸ್ಸಿನಿಂದ ಧಮ್ಮಗಳನ್ನು ಗ್ರಹಿಸುವಾಗ ರಾಗವಾಗಲಿ, ದ್ವೇಷವಾಗಲಿ, ಮೋಹವಾಗಲಿ ಇರುವುದಿಲ್ಲ. ಏಕೆಂದರೆ ಅವನ್ನು ಅವರು ತೊರೆದಿರುತ್ತಾರೆ. ಆಗ ಪ್ರಬಲವಾದ ಮಾನಸಿಕ ವಿಷಯಗಳು ಸಂಪರ್ಕವಾದರೂ ಸಹಾ ಚಿತ್ತವು ಪೀಡಿತವಾಗುವುದಿಲ್ಲ. ಇನ್ನು ದುರ್ಬಲವಾದ ವಿಷಯಗಳ ಬಗ್ಗೆ ಏನು ಹೇಳೋಣ? ಏಕೆ ಹೀಗೆ? ಏಕೆಂದರೆ ಅಂತಹ ಭಿಕ್ಷು ಅಥವಾ ಭಿಕ್ಷುಣಿಯಲ್ಲಿ ರಾಗವಾಗಲಿ, ದ್ವೇಷವಾಗಲಿ, ಮೋಹವಾಗಲಿ ಇಲ್ಲ, ಅವೆಲ್ಲಾ ತೊರೆಯಲ್ಪಟ್ಟಿವೆ.


35.18.5 ಕೋಟ್ಠಿಕ ಸುತ್ತಂ

232. ಒಮ್ಮೆ ಆಯುಷ್ಮಂತ ಸಾರಿಪುತ್ತರವರು ಹಾಗು ಆಯುಷ್ಮಂತ ಮಹಾಕೋಟ್ಠಿಕರವರು ವಾರಾಣಾಸಿಯಲ್ಲಿನ ಇಸಿಪಟ್ಟಣದ ಜಿಂಕೆವನದಲ್ಲಿ ವಿಹರಿಸುತ್ತಿದ್ದರು. ಆಗ ಸಂಜೆಯಲ್ಲಿ ಆಯುಷ್ಮಂತ ಮಹಾಕೋಟ್ಠಿಕರು ಏಕಾಂತದಿಂದ ಮೇಲೆದ್ದು, ಸಾರಿಪುತ್ರರ ಬಳಿಗೆ ಬಂದರು. ಕುಶಲ ಕ್ಷೇಮಗಳನ್ನು ವಿಚಾರಿಸಿ, ನಂತರ ಒಂದೆಡೆ ಕುಳಿತರು. ನಂತರ ಕೋಟ್ಠಿಕರು ಹೀಗೆ ಪ್ರಶ್ನಿಸಿದರು.
ಆಯುಷ್ಮಂತ ಸಾರಿಪುತ್ತರವರೇ, ಕಣ್ಣಿಗೆ ದೃಶ್ಯಗಳು (ರೂಪ) ಬಂಧನವೇ? ಅಥವಾ ದೃಶ್ಯಗಳಿಗೆ ಕಣ್ಣು ಬಂಧನವೇ? ಕಿವಿಗೆ ಶಬ್ದಗಳು ಬಂಧನವೇ? ಅಥವಾ ಶಬ್ದಗಳಿಗೆ ಕಿವಿಯು ಬಂಧನವೇ? ನಾಸಿಕಕ್ಕೆ ಗಂಧಗಳು ಬಂಧನವೇ? ಅಥವಾ ಗಂಧಗಳಿಗೆ ನಾಸಿಕವು ಬಂಧನವೇ? ಜಿಹ್ವೆಗೆ ರಸಗಳು ಬಂಧನವೇ? ಅಥವಾ ರಸಗಳಿಗೆ ಜಿಹ್ವೆಯು ಬಂಧನವೇ? ಕಾಯಕ್ಕೆ ಸ್ಪರ್ಶಗಳು ಬಂಧನವೇ? ಅಥವಾ ಸ್ಪರ್ಶಗಳಿಗೆ ಕಾಯವು ಬಂಧನವೇ? ಮನಸ್ಸಿಗೆ ಧಮ್ಮಗಳು (ಮಾನಸಿಕ ವಿಷಯಗಳು) ಬಂಧನವೇ? ಅಥವಾ ಮಾನಸಿಕ ವಿಷಯಗಳಿಗೆ ಮನಸ್ಸು ಬಂಧನವೇ?
ಆಯುಷ್ಮಂತ ಕೋಟ್ಠಿಕ, ಕಣ್ಣಿಗೆ ದೃಶ್ಯಗಳು ಬಂಧನವಲ್ಲ, ಹಾಗೆಯೇ ದೃಶ್ಯಗಳಿಗೆ ಕಣ್ಣು ಸಹಾ ಬಂಧನವಲ್ಲ. ಆದರೆ ಇವೆರಡನ್ನು ಅವಲಂಬಿಸಿ ಉದಯಿಸುವ ಆಸೆ ಹಾಗು ರಾಗಗಳೇ ಬಂಧನವಾಗಿದೆ. ಹಾಗೆಯೇ ಕಿವಿಗೆ ಶಬ್ದಗಳು ಬಂಧನವಲ್ಲ. ಶಬ್ದಗಳಿಗೆ ಕಿವಿಯು ಬಂಧನವಲ್ಲ. ಆದರೆ ಇವೆರಡನ್ನು ಅವಲಂಬಿಸಿ ಉದಯಿಸುವ ಆಸೆ ಹಾಗು ರಾಗಗಳೇ ಬಂಧನವಾಗಿದೆ. ಹಾಗೆಯೇ ನಾಸಿಕಕ್ಕೆ... ನಾಲಿಗೆಗೆ... ಕಾಯಕ್ಕೆ... ಮನಸ್ಸಿಗೆ ಮಾನಸಿಕ ವಿಷಯಗಳು ಬಂಧನವಲ್ಲ ಅಥವಾ ಮಾನಸಿಕ ವಿಷಯಗಳಿಗೆ ಮನಸ್ಸು ಬಂಧನವಲ್ಲ. ಇವೆರಡನ್ನು ಅವಲಂಬಿಸಿ ಉದಯಿಸುವ ಆಸೆ ಹಾಗು ರಾಗಗಳೇ ಬಂಧನಗಳಾಗಿವೆ.
ಉದಾಹರಣೆಗೆ ಆಯುಷ್ಮಂತನೇ, ನೇಗಿಲಿಗೆ ಕರಿ ಎತ್ತನ್ನು ಮತ್ತು ಬಿಳಿ ಎತ್ತನ್ನು ಕಟ್ಟಿರುತ್ತಾರೆ. ಆಗ ಯಾರಾದರೂ ಇದರ ಬಗ್ಗೆ ಹೀಗೆ ಹೇಳುತ್ತಾರೆ. ಕರಿ ಎತ್ತಿಗೆ ಬಿಳಿ ಎತ್ತು ಬಂಧನ ಅಥವಾ ಬಿಳಿ ಎತ್ತಿಗೆ ಕರಿ ಎತ್ತು ಬಂಧನವೆಂದು. ಅವರು ಸರಿಯಾಗಿ ಹೇಳುತ್ತಿರುವರೇ? - ಇಲ್ಲ ಆಯುಷ್ಮಂತನೇ, ಬದಲಾಗಿ ಅವುಗಳನ್ನು ಕಟ್ಟಿಹಾಕಿರುವಂತಹ ಹಗ್ಗಯುತ ನೇಗಿಲೇ ಅವುಗಳಿಗೆ ಬಂಧನವಾಗಿದೆ. - ಅದೇರೀತಿಯಾಗಿ ಆಯುಷ್ಮಂತ ಕೋಟ್ಠಿಕ, ಕಣ್ಣಿಗೆ ದೃಶ್ಯಗಳು ಬಂಧನವಲ್ಲ, ಹಾಗೆಯೇ ದೃಶ್ಯಗಳಿಗೆ ಕಣ್ಣು ಸಹಾ ಬಂಧನವಲ್ಲ. ಆದರೆ ಇವೆರಡನ್ನು ಅವಲಂಬಿಸಿ ಉದಯಿಸುವ ಆಸೆ ಹಾಗು ರಾಗಗಳೇ ಬಂಧನವಾಗಿದೆ. ಹಾಗೆಯೇ ಕಿವಿಗೆ ಶಬ್ದಗಳು ಬಂಧನವಲ್ಲ. ಶಬ್ದಗಳಿಗೆ ಕಿವಿಯು ಬಂಧನವಲ್ಲ. ಆದರೆ ಇವೆರಡನ್ನು ಅವಲಂಬಿಸಿ ಉದಯಿಸುವ ಆಸೆ ಹಾಗು ರಾಗಗಳೇ ಬಂಧನವಾಗಿದೆ. ಹಾಗೆಯೇ ನಾಸಿಕಕ್ಕೆ... ನಾಲಿಗೆಗೆ... ಕಾಯಕ್ಕೆ... ಮನಸ್ಸಿಗೆ ಮಾನಸಿಕ ವಿಷಯಗಳು ಬಂಧನವಲ್ಲ ಅಥವಾ ಮಾನಸಿಕ ವಿಷಯಗಳಿಗೆ ಮನಸ್ಸು ಬಂಧನವಲ್ಲ. ಇವೆರಡನ್ನು ಅವಲಂಬಿಸಿ ಉದಯಿಸುವ ಆಸೆ ಹಾಗು ರಾಗಗಳೇ ಬಂಧನಗಳಾಗಿವೆ.
ಆಯುಷ್ಮಂತನೇ, ಒಂದುವೇಳೆ ಚಕ್ಷುವಿಗೆ ದೃಶ್ಯಗಳು ಬಂಧನವಾಗಿದ್ದರೆ ಅಥವಾ ದೃಶ್ಯಗಳಿಗೆ ಚಕ್ಷುವೇ ಬಂಧನವಾಗಿದ್ದರೆ ಬ್ರಹ್ಮಚರ್ಯದ (ಶ್ರೇಷ್ಠ) ಜೀವನ ನಡೆಸಲಾಗುತ್ತಿರಲಿಲ್ಲ. ದುಃಖವಿಮುಕ್ತಿಯು ಸಾಧ್ಯವಿರುತ್ತಿರಲಿಲ್ಲ. ಆದರೆ ಚಕ್ಷು ಮತ್ತು ದೃಶ್ಯ ಇವೆರಡರ ಸಂಬಂಧದಿಂದಾಗಿ ಉದಯಿಸುವ ಆಸೆ ಹಾಗು ರಾಗಗಳು ಬಂಧನವಾಗಿವೆ. ಹೀಗಾಗಿ ಶ್ರೇಷ್ಠಕರವಾದ ಬ್ರಹ್ಮಚರ್ಯ ಜೀವನವು ಸಾಧ್ಯವಾಗುತ್ತದೆ. ದುಃಖ ವಿಮುಕ್ತಿಯು ಸಾಧ್ಯವಿದೆ.
ಹಾಗೆಯೇ ಕಿವಿಗೆ ಶಬ್ದಗಳು ಬಂಧನವಾಗಿದೆ.... ಮನಸ್ಸಿಗೆ ಮಾನಸಿಕ ವಿಷಯಗಳು ಬಂಧನವಾಗಿದ್ದರೆ ಶ್ರೇಷ್ಠವಾದ ಬ್ರಹ್ಮಚರ್ಯೆ ಜೀವನ ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ ದುಃಖನಾಶವೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಹಾಗೆ ಆಗದೆ ಮನಸ್ಸು ಹಾಗು ಮಾನಸಿಕ ವಿಷಯಗಳಿಂದ ಉಂಟಾಗುವಂತಹ ಆಸೆ ಹಾಗು ರಾಗಗಳು ಬಂಧನವಾಗಿವೆ. ಹೀಗಾಗಿ ಶ್ರೇಷ್ಠವಾದ ಬ್ರಹ್ಮಚರ್ಯಜೀವನ ನಡೆಸಲು ಸಾಧ್ಯವಿದೆ ಹಾಗು ದುಃಖನಾಶವು ಸಾಧ್ಯವಿದೆ.
ಈ ರೀತಿಯಾಗಿ ಮಿತ್ರನೇ, ಹೀಗೆಯೇ ಅರ್ಥಮಾಡಿಕೊಳ್ಳಬೇಕು. ಹೇಗೆಂದರೆ ಭಗವಾನರಿಗೆ ಚಕ್ಷುವಿದೆ, ಭಗವಾನರು ಚಕ್ಷುವಿನಿಂದ ದೃಶ್ಯಗಳನ್ನು ನೋಡುತ್ತಾರೆ. ಅವರಲ್ಲಿ ರಾಗವಾಗಲಿ ಅಥವಾ ಆಸೆಯಾಗಲಿ ಉಂಟಾಗಲಾರದು. ಭಗವಾನರ ಚಿತ್ತವು ಸುವಿಮುಕ್ತವಾಗಿದೆ. ಅದೇರೀತಿ ಭಗವಾನರು ಕಿವಿಯಿಂದ ಶಬ್ದಗಳನ್ನು ಕೇಳುತ್ತಾರೆ. ಆದರೂ ಅವರಲ್ಲಿ ರಾಗವಾಗಲಿ ಅಥವಾ ಆಸೆಯಾಗಲಿ ಉಂಟಾಗಲಾರದು. ಭಗವಾನರ ಚಿತ್ತವು ಸುವಿಮುಕ್ತವಾಗಿದೆ. ಅದೇರೀತಿ ಭಗವಾನರು ನಾಸಿಕದಿಂದ... ನಾಲಿಗೆಯಿಂದ... ಕಾಯದಿಂದ... ಮನಸ್ಸಿನಿಂದ ಮಾನಸಿಕ ವಿಷಯಗಳನ್ನು ಅರಿಯುತ್ತಾರೆ. ಆದರೂ ಅವರಲ್ಲಿ ರಾಗವಾಗಲಿ ಅಥವಾ ಆಸೆಯಾಗಲಿ ಉಂಟಾಗಲಾರದು. ಭಗವಾನರ ಚಿತ್ತವು ಸುವಿಮುಕ್ತವಾಗಿದೆ.
ಆಯುಷ್ಮಂತನೇ, ಹೀಗೆಯೇ ಅರ್ಥಮಾಡಿಕೊಳ್ಳಬೇಕು. ಚಕ್ಷುವು ದೃಶ್ಯಗಳಿಗೆ ಬಂಧನವಲ್ಲ. ಹಾಗೆಯೇ ದೃಶ್ಯಗಳಿಗೆ ಚಕ್ಷುವು ಬಂಧನವಲ್ಲ. ಬದಲಾಗಿ ಇವೆರಡರ ಅವಲಂಬಿನೆಯಿಂದ ಉಂಟಾಗುವ ರಾಗ ಮತ್ತು ಆಸೆಗಳೇ ಬಂಧನಗಳಾಗಿವೆ. ಕಿವಿಯು... ನಾಸಿಕವು... ನಾಲಿಗೆಯು... ಕಾಯವು... ಮನಸ್ಸು... ರಾಗ ಮತ್ತು ಆಸೆಗಳೇ ಬಂಧನಗಳಾಗಿವೆ.


35.18.6 ಕಾಮಭೂ ಸುತ್ತಂ

233. ಒಮ್ಮೆ ಆಯುಷ್ಮಂತರಾದ ಆನಂದರು ಹಾಗು ಆಯುಷ್ಮಂತರಾದ ಕಾಮಭೂರವರು ಕೋಶಂಬಿಯ ಘೋಷಿತಾರಾಮದಲ್ಲಿ ವಾಸಿಸುತ್ತಿದ್ದರು. ಆಗ ಸಂಜೆಯಲ್ಲಿ ಆಯುಷ್ಮಂತರಾದ ಕಾಮಭೂರವರು ಏಕಾಂತದಿಂದ ಎದ್ದು ಆಯುಷ್ಮಂತರಾದ ಆನಂದರ ಬಳಿಗೆ ಬಂದರು. ಅಲ್ಲಿ ಕುಶಲ ಕ್ಷೇಮಗಳನ್ನು ವಿನಿಯಮ ಮಾಡಿಕೊಂಡರು. ನಂತರ ಕಾಮಭೂರವರು ಒಂದೆಡೆ ಕುಳಿತು ಹೀಗೆ ಪ್ರಶ್ನಿಸಿದರು:
ಆಯುಷ್ಮಂತ ಆನಂದರವರೇ, ಯಾವರೀತಿಯಲ್ಲಿ ಚಕ್ಷುವು ದೃಶ್ಯಗಳಿಗೆ ಬಂಧನವಾಗಿದೆ ಅಥವಾ ದೃಶ್ಯಗಳು ಚಕ್ಷುವಿಗೆ ಬಂಧನವಾಗಿದೆ... ಕಿವಿಯು... ನಾಸಿಕವು... ನಾಲಿಗೆಯು... ಕಾಯವು... ಮನಸ್ಸು ಮಾನಸಿಕ ವಿಷಯಗಳಿಗೆ ಬಂಧನವಾಗಿದೆ ಅಥವಾ ಮಾನಸಿಕ ವಿಷಯಗಳು ಮನಸ್ಸಿಗೆ ಬಂಧನಗಳಾಗಿದೆ?
ಆಯುಷ್ಮಂತ ಕಾಮಭೂ ಚಕ್ಷುವು ದೃಶ್ಯಗಳಿಗೆ ಬಂಧನವಾಗಿಲ್ಲ. ಹಾಗೆಯೇ ದೃಶ್ಯಗಳು ಚಕ್ಷುವಿಗೆ ಬಂಧನವಾಗಿಲ್ಲ. ಹಾಗೆಯೇ ಕಿವಿಯು... ನಾಸಿಕವು... ನಾಲಿಗೆಯು... ಕಾಯವು... ಮನಸ್ಸು ಮಾನಸಿಕ ವಿಷಯಗಳಿಗೆ ಬಂಧನವಾಗಿಲ್ಲ ಅಥವಾ ಮಾನಸಿಕ ವಿಷಯಗಳು ಮನಸ್ಸಿಗೆ ಬಂಧನವಾಗಿಲ್ಲ. ಆದರೆ ಇವೆರಡರ ಅವಲಂಬನೆಯಿಂದ ಉಂಟಾಗುವ ಆಸೆ ಹಾಗು ರಾಗಗಳೇ ಬಂಧನವಾಗಿವೆ.
ಹೇಳುವುದಾದರೆ ಒಂದು ಕರಿ ಎತ್ತು ಮತ್ತು ಬಿಳಿ ಎತ್ತೊಂದು ನೇಗಿಲಿಗೆ ಹಗ್ಗದಿಂದ ಕಟ್ಟಿರುತ್ತಾರೆ. ಯಾರಾದರೂ ಹೀಗೆ ಹೇಳುತ್ತಾರೆ, ಏನೆಂದರೆ ಈ ಕರಿ ಎತ್ತಿಗೆ ಬಿಳಿ ಎತ್ತು ಬಂಧನವಾಗಿದೆ ಅಥವಾ ಈ ಬಿಳಿ ಎತ್ತಿಗೆ ಕರಿ ಎತ್ತು ಬಂಧನವಾಗಿದೆ. ಅವರು ಸರಿಯಾಗಿ ಹೇಳುತ್ತಿರುವರೇ? - ಇಲ್ಲ ಆಯುಷ್ಮಂತರೇ, ಕರಿ ಎತ್ತಿಗೆ ಬಿಳಿ ಎತ್ತು ಬಂಧನವಾಗಿಲ್ಲ ಅಥವಾ ಬಿಳಿ ಎತ್ತಿಗೆ ಕರಿ ಎತ್ತು ಬಂಧನವಾಗಿಲ್ಲ. ಬದಲಾಗಿ ಅವೆರಡನ್ನು ಹಗ್ಗದಿಂದ ಕಟ್ಟಿಹಾಕಿರುವ ನೊಗವೇ ಬಂಧನವಾಗಿದೆ. - ಅದೇರೀತಿಯಾಗಿ ಆಯುಷ್ಮಂತನೇ, ಚಕ್ಷುವು ದೃಶ್ಯಗಳಿಗೆ ಬಂದನವಾಗಿಲ್ಲ ಹಾಗೆಯೇ ದೃಶ್ಯಗಳು ಚಕ್ಷುವಿಗೆ ಬಂಧನವಾಗಿಲ್ಲ... ಕಿವಿಯು... ನಾಸಿಕವು... ನಾಲಿಗೆಯು... ಕಾಯವು... ಮನಸ್ಸು ಮಾನಸಿಕ ವಿಷಯಗಳಿಗೆ ಬಂಧನವಾಗಿಲ್ಲ ಅಥವಾ ಮಾನಸಿಕ ವಿಷಯಗಳು ಮನಸ್ಸಿಗೆ ಬಂಧನವಾಗಿಲ್ಲ. ಬದಲಾಗಿ ಇವೆರಡರ ಅವಲಂಬನೆಯಿಂದ ಉಂಟಾಗುವ ಆಸೆ ಹಾಗು ರಾಗಗಳೇ ಬಂಧನವಾಗಿದೆ.


35.18.7 ಉದಾಯಿ ಸುತ್ತಂ

234. ಒಮ್ಮೆ ಆಯುಷ್ಮಂತ ಆನಂದರವರು ಹಾಗು ಆಯುಷ್ಮಂತ ಉದಾಯಿಯವರು ಕೋಶಂಬಿಯ ಘೋಸಿತ ಆರಾಮದಲ್ಲಿ ವಿಹರಿಸುತ್ತಿದ್ದರು. ಆಗ ಆ ದಿನ ಸಂಜೆಯಲ್ಲಿ ಆಯುಷ್ಮಂತ ಉದಾಯಿಯು ಏಕಾಂತದಿಂದ ಎದ್ದು ಆಯುಷ್ಮಂತ ಆನಂದರ ಬಳಿಗೆ ಬಂದರು. ಅಲ್ಲಿ ಕುಶಲ ಕ್ಷೇಮಗಳನ್ನು ವಿನಿಮಯ ಮಾಡಿಕೊಂಡ ನಂತರ ಒಂದೆಡೆ ಕುಳಿತರು. ನಂತರ ಉದಾಯಿಯವರು ಹೀಗೆ ಪ್ರಶ್ನಿಸಿದರು:
ಆಯುಷ್ಮಂತ ಆನಂದರೆ, ಭಗವಾನರಿಂದ ಹಲವಾರು ವಿಧಗಳಲ್ಲಿ ಶರೀರವು ಅನಾತ್ಮ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕಾರಣದಿಂದಾಗಿ ಅನಾತ್ಮ ಅದೇರೀತಿಯಲ್ಲಿ ವಿಞ್ಞಾಣ (ಅರಿವು/ಮನಸ್ಸು)ವನ್ನು ಸಹಾ ಅನಾತ್ಮವೆಂದು ಸ್ಪಷ್ಟಪಡಿಸಬಹುದೇ? ಸ್ಥಾಪಿಸಬಹುದೇ, ವಿಶ್ಲೇಷಿಸಬಹುದೇ, ವಿವರಿಸಬಹುದೇ?
ಇದು ಸಾಧ್ಯವಿದೆ ಆಯುಷ್ಮಂತ ಉದಾಯಿಯೇ, ಚಕ್ಷುವಿಞ್ಞಾಣವು ಚಕ್ಷು ಹಾಗು ದೃಶ್ಯಗಳ (ರೂಪ) ಅವಲಂಬನೆಯಿಂದಾಗಿ ಉದಯಿಸುವುದಿಲ್ಲವೇ? - ಹೌದು ಭಂತೆ. - ಹಾಗಾದರೆ ಚಕ್ಷುವಿಞ್ಞಾಣಕ್ಕೆ ಕಾರಣವಾದುದನ್ನು ಪೂರ್ಣವಾಗಿ ನಿರೋಧಿಸಿದರೆ, ನಿಶ್ಶೇಷಗೊಳಿಸಿದರೆ ಚಕ್ಷುವಿಞ್ಞಾಣವನ್ನು ಗ್ರಹಿಸಲು ಆಗುವುದೇ? - ಇಲ್ಲ ಭಂತೆ. - ಈ ರೀತಿಯಾಗಿ ಆಯುಷ್ಮತನೇ, ಭಗವಾನರು ಸ್ಪಷ್ಟಪಡಿಸಿದ್ದಾರೆ, ಘೋಷಿಸಿದ್ದಾರೆ, ತೆರೆದಿದ್ದಾರೆ ಮತ್ತು ಪ್ರಕಟಿಸಿದ್ದಾರೆ. ಈ ಕಾರಣಗಳಿಂದಾಗಿ ವಿಞ್ಞಾಣವು ಅನಾತ್ಮವಾಗಿದೆ... ಶ್ರೋತವಿಞ್ಞಾಣ...
ಆಯುಷ್ಮಂತನೇ, ಜಿಹ್ವಾ ವಿಞ್ಞಾಣವು ನಾಲಿಗೆ ಹಾಗು ರಸಗಳ ಅವಲಂಬನೆಯಿಂದಾಗಿ ಉದಯಿಸುವುದಲ್ಲವೇ? ಹೌದು ಭಂತೆ. - ಹಾಗಾದರೆ ಜಿಹ್ವಾ ವಿಞ್ಞಾಣಕ್ಕೆ ಕಾರಣವಾದುದನ್ನು ಪೂರ್ಣವಾಗಿ ನಿರೋಧಿಸಿದರೆ, ನಿಶ್ಶೇಷಗೊಳಿಸಿದರೆ ಜಿಹ್ವಾ ವಿಞ್ಞಾಣವನ್ನು ಗ್ರಹಿಸಲು ಆಗುವುದೇ? - ಇಲ್ಲ ಭಂತೆ. - ಈ ರೀತಿಯಾಗಿ ಆಯುಷ್ಮಂತರೇ, ಭಗವಾನರು ಸ್ಪಷ್ಟಪಡಿಸಿದ್ದಾರೆ, ಘೋಷಿಸಿದ್ದಾರೆ, ತೆರೆದಿದ್ದಾರೆ ಮತ್ತು ಪ್ರಕಟಪಡಿಸಿದ್ದಾರೆ. ಈ ಕಾರಣಗಳಿಂದಾಗಿ ವಿಞ್ಞಾಣವು ಅನಾತ್ಮವಾಗಿದೆ... ಕಾಯವಿಞ್ಞಾಣದ...
ಆಯುಷ್ಮಂತನೇ, ಮನೋವಿಞ್ಞಾಣವು ಮನಸ್ಸು ಹಾಗು ಧಮ್ಮಗಳ ಅವಲಂಬಿನೆಯಿಂದಾಗಿ ಉದಯಿಸುವುದಲ್ಲವೇ? - ಹೌದು ಭಂತೆ. - ಹಾಗಾದರೆ ಮನೋವಿಞ್ಞಾಣಕ್ಕೆ ಕಾರಣವಾದುದನ್ನು ಪೂರ್ಣವಾಗಿ ನಿರೋಧಿಸಿದರೆ, ನಿಶ್ಶೇಷಗೊಳಿಸಿದರೆ, ಮನೋವಿಞ್ಞಾಣವನ್ನು ಗ್ರಹಿಸಲು ಸಾಧ್ಯವೇ? - ಇಲ್ಲ ಭಂತೆ. - ಈ ರೀತಿಯಾಗಿ ಆಯುಷ್ಮಂತನೇ, ಭಗವಾನರು ಸ್ಪಷ್ಟಪಡಿಸಿದ್ದಾರೆ, ಘೋಷಿಸಿದ್ದಾರೆ ಮತ್ತು ಪ್ರಕಟಪಡಿಸಿದ್ದಾರೆ. ಈ ಕಾರಣಗಳಿಂದಾಗಿ ವಿಞ್ಞಾಣವು ಅನಾತ್ಮವಾಗಿದೆ.
ಆಯುಷ್ಮಂತನೇ, ಒಬ್ಬನಿಗೆ ಮರದ ಸಾರಯುಕ್ತವಾದ ದಿಂಡು ಬೇಕಾಗಿದ್ದು, ಅದನ್ನು ಅರಸುತ್ತ ಬರುತ್ತಾನೆ. ಅಂತಹ ಸಾರಯುಕ್ತವಾದ ದಿಂಡನ್ನು ಹುಡುಕಲು ಕೊಡಲಿ ಸಮೇತ ಅರಣ್ಯಕ್ಕೆ ಹೊರಡುತ್ತಾನೆ. ಅಲ್ಲಿ ಆತನು ವಿಸ್ತಾರವಾದ, ಎತ್ತರವಾದ ಬಾಳೆಹಣ್ಣಿನ ಗಿಡವನ್ನು ಕಾಣುತ್ತಾನೆ. ಅದು ನೇರವಾಗಿ, ನವೀನವಾಗಿರುತ್ತದೆ. ಆತನು ಸಾರಯುಕ್ತವನ್ನು ಹುಡುಕಲು ಆ ಬಾಳೆಗಿಡದ ಬುಡ ಕತ್ತರಿಸುತ್ತಾನೆ. ಅದರ ಅತ್ಯಂತ ಮೇಲ್ಬಾಗವನ್ನು ಕತ್ತರಿಸುತ್ತಾನೆ. ಅದನ್ನು ತಿರುಗಿಸುತ್ತಾ ಕಾಯವನ್ನು ಕತ್ತರಿಸಿ ಹಾಕುತ್ತಾನೆ, ಹುಡುಕುತ್ತಾನೆ. ಆತನಿಗೆ ಮೆದು ಮರವು ಸಿಗದು. ಇನ್ನೂ ಸಾರಯುಕ್ತವಾದುದರ ಬಗ್ಗೆ ಏನೂ ಹೇಳುವುದು? ಅದೇರೀತಿಯಾಗಿ ಭಿಕ್ಷುವಿಗೆ ಈ ಆರು ಇಂದ್ರೀಯಗಳಲ್ಲಿ ಆತ್ಮವಾಗಲಿ, ಆತ್ಮಕ್ಕೆ ಸೇರಿದ್ದು ಆಗಲಿ (ಸ್ವಯಂ, ನನ್ನದು ಎಂಬುದಾಗಲಿ) ಸಿಗಲಾರದು. ಏಕೆಂದರೆ ಅಂತಹುದು ಯಾವುದೂ ಅಲ್ಲಿ ಗ್ರಹಿತವಾಗವುದಿಲ್ಲ. ಹೀಗೆ ಆತನು ಲೋಕದಲ್ಲಿ ಯಾವುದಕ್ಕೂ ಅಂಟಲಾರನು. ಹಾಗೆಯೇ ಕ್ಷೊಭೆಯು ಪಡನು. ಹೀಗೆ ಕ್ಷೊಭೆಗೊಳ್ಳದೆ ತನಗೆತಾನೇ ಒಂಟಿಯಾಗಿ ನಿಬ್ಬಾಣವನ್ನು ಸಾಧಿಸುತ್ತಾನೆ. ನಂತರ ವಿಮುಕ್ತಿ ಜ್ಞಾನವನ್ನು ಅರಿಯುತ್ತಾನೆ. ಜನ್ಮವು ನಾಶವಾಯಿತು... ಈ ರೀತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.


35.18.8 ಆದಿತ್ತ ಪರಿಯಾಯ ಸುತ್ತಂ (ಆದಿತ್ಯ ಉರಿಯುತ್ತಿರುವಿಕೆಯ ಪ್ರತಿಪಾದನೆ)

235. ಭಿಕ್ಷುಗಳೇ, ನಾನು ಉರಿಯುತ್ತಿರುವ ವಿಷಯವಸ್ತುವಿನ ಮೇಲೆ ಧಮ್ಮವನ್ನು ಉಪದೇಶಿಸುತ್ತಿದ್ದೇನೆ, ತಾವೆಲ್ಲರೂ ಆಲಿಸಿರಿ. ಯಾವುದು ಭಿಕ್ಷುಗಳೇ ಧಗಧಗಿಸುತ್ತಿರುವ (ಉರಿಯುತ್ತಿರುವ) ಧಮ್ಮ ಪ್ರವಚನವು? ಭಿಕ್ಷುಗಳೇ, ಕಣ್ಣನಿಂದಾಗಿ ದೃಶ್ಯಗಳನ್ನು ಗ್ರಹಿಸಿ ಬಂಧನಕ್ಕೆ ಈಡಾಗುವುದಕ್ಕಿಂತ ಚಕ್ಷು ಇಂದ್ರೀಯವನ್ನು ಕೆಂಪಗೆ ಕಾಯ್ದ ಗುಂಡುಸೂಜಿಯಿಂದ ಚುಚ್ಚಿಕೊಳ್ಳುವುದು ಉತ್ತಮವಾಗಿದೆ. ಏಕೆಂದರೆ ಚಕ್ಷುವಿನಿಂದ ದೃಶ್ಯಗಳನ್ನು ಗ್ರಹಿಸಿ ನಿಮಿತ್ತ ಧಗಧಗನೆ ಉರಿಯುತ್ತಿರುವ ವಿವರಣೆಗಳಿಂದಾಗಿ ಉತ್ತೇಜನ ಹೊಂದಿ, ಭಾವಾವೇಶದಲ್ಲಿಯೇ ಒಬ್ಬನು ಸತ್ತರೆ ಆ ಕ್ಷಣದಲ್ಲೇ ಆತನಿಗೆ ಗತಿಗಳಿವೆ. ಅವೆಂದರೆ: ಪ್ರಾಣಿ ಜನ್ಮ (ತಿರಚ್ಚಾನ ಯೋನಿ) ಮತ್ತು ನರಕ (ನಿರಯ). ಈ ರೀತಿಯ ಅಪಾಯವನ್ನು ವೀಕ್ಷಿಸಿಯೇ ನಾನು ಹೀಗೆ ಪ್ರವಚಿಸಿದೆನು.
ಭಿಕ್ಷುಗಳೇ, ಕಿವಿಯಿಂದ ಶಬ್ದಗಳನ್ನು ಗ್ರಹಿಸಿ ಬಂಧನಕ್ಕೆ ಈಡಾಗುವುದಕ್ಕಿಂತ ಶ್ರೋತ ಇಂದ್ರೀಯವನ್ನು ಕೆಂಪಗೆ ಕಾಯ್ದ ಗುಂಡುಸೂಜಿಯಿಂದ ಚುಚ್ಚಿಸಿಕೊಳ್ಳುವುದು ಉತ್ತಮವಾಗಿದೆ. ಏಕೆಂದರೆ ಕಿವಿಯಿಂದ ಶಬ್ದಗಳನ್ನು ಗ್ರಹಿಸಿದ ನಿಮಿತ್ತ ಹಾಗು ವಿವರಣೆಯಿಂದಾಗಿ ಉತ್ತೇಜನ ಹೊಂದಿ ಆ ಭಾವವೇಶದಲ್ಲಿ ಒಬ್ಬನು ಸತ್ತರೆ ಆ ಕ್ಷಣದಲ್ಲಿಯೇ ಆತನಿಗೆ ಎರಡು ಗತಿಗಳಿವೆ. ಅವೆಂದರೆ ತಿರಚ್ಚಾನ ಯೋನಿ (ಪ್ರಾಣಿ ಜನ್ಮ) ಮತ್ತು ನಿರಯ (ನರಕ). ಈ ರೀತಿಯ ಅಪಾಯವನ್ನು ಗಮನಿಸಿಯೇ ನಾನು ಹೀಗೆ ಪ್ರವಚಿಸಿದೆನು.
ಭಿಕ್ಷುಗಳೇ ನಾಸಿಕದಿಂದ ಗಂಧಗಳನ್ನು ಗ್ರಹಿಸಿ ಬಂಧನಕ್ಕೆ ಈಡಾಗುವುದಕ್ಕಿಂತ ಘ್ರಾಣ ಇಂದ್ರೀಯವನ್ನು ಕೆಂಪಕೆ ಕಾಯ್ದ ಕತ್ತರಿಯಿಂದ ಕತ್ತರಿಸಿಕೊಳ್ಳುವುದು ಉತ್ತಮವಾಗಿದೆ. ಏಕೆಂದರೆ ನಾಸಿಕದಿಂದ ಗಂಧಗಳನ್ನು ಗ್ರಹಿಸಿದ ನಿಮಿತ್ತ ಹಾಗು ವಿವರಣೆಯಿಂದಾಗಿ ಉತ್ತೇಜನ ಹೊಂದಿ ಆ ಭಾವಾವೇಶದಲ್ಲಿಯೇ ಒಬ್ಬನು ಸತ್ತರೆ ಆ ಕ್ಷಣದಲ್ಲಿಯೇ ಆತನಿಗೆ ಎರಡು ಗತಿಗಳಿವೆ. ಅವೆಂದರೆ ಪ್ರಾಣಿಲೋಕ ಮತ್ತು ನಿರಯ. ಈ ರೀತಿಯ ಅಪಾಯವನ್ನು ಗಮನಿಸಿಯೇ ನಾನು ಹೀಗೆ ಪ್ರವಚಿಸಿದೆನು.
ಭಿಕ್ಷುಗಳೇ, ಜಿಹ್ವೆಯಿಂದ ರಸಗಳನ್ನು ಗ್ರಹಿಸಿ ಬಂಧನಕ್ಕೆ ಒಳಗಾಗುವುದಕ್ಕಿಂತ ಜಿಹ್ವೇಂದ್ರಿಯವನ್ನು ಕೆಂಪಗೆ ಧಗಧಗಿಸಿ ಉರಿಯುತ್ತಿರವ ಹರಿತವಾದ ಚೂರಿಯಿಂದ ಕತ್ತರಿಸಿಕೊಳ್ಳುವುದು ಉತ್ತಮವಾಗಿದೆ. ಏಕೆಂದರೆ ಜಿಹ್ವೆಯಿಂದ ರಸಗಳನ್ನು ಗ್ರಹಿಸಿದ ನಿಮಿತ್ತ ಹಾಗು ವಿವರಣೆಯಿಂದಾಗಿ ಉತ್ತೇಜನ ಹೊಂದಿ ಆ ಭಾವಾವೇಶದಲ್ಲಿಯೇ ಒಬ್ಬನು ಸತ್ತರೆ ಆ ಕ್ಷಣದಲ್ಲಿಯೇ ಅವನಿಗೆ ಎರಡು ಗತಿಗಳಿವೆ. ಅವೆಂದರೆ, ಪ್ರಾಣಿಲೋಕ ಮತ್ತು ನಿರಯ. ಇದನ್ನು ವೀಕ್ಷಿಸಿಯೇ ನಾನು ಹೀಗೆ ಪ್ರವಚಿಸಿದೆನು.
ಭಿಕ್ಷುಗಳೇ, ಕಾಯದಿಂದ ಸ್ಪರ್ಶದ ಅನುಭವ ಹೊಂದಿ ಸುಖಿಸುವುದಕ್ಕಿಂತಲೂ ಕೆಂಪಗೆ ಕಾಯ್ದು ಧಗಧಗನೆ ಉರಿಯುತ್ತಿರುವ ಈಟಿಗಳಿಂದ ಚುಚ್ಚಿಸಿಕೊಳ್ಳುವುದು ಲೇಸು. ಏಕೆಂದರೆ ಆತನ ಕಾಯವಿಞ್ಞಾಣವು ಆ ಕ್ಷಣದಲ್ಲಿ ದೈಹಿಕ ಸುಖ ಆಸ್ವಾದನೆಯಲ್ಲಿಯೇ ಸತ್ತರೆ ಎರಡು ಗತಿಗಳಿವೆ. ಅವೆಂದರೆ, ನಿರಯ ಮತ್ತು ಪ್ರಾಣಿಲೋಕ. ಇದನ್ನು ವೀಕ್ಷಿಸಿಯೇ ನಾನು ಹೀಗೆ ಪ್ರವಚಿಸಿದೆನು.
ಭಿಕ್ಷುಗಳೇ, ಚಿತ್ತದಿಂದ ವಿತರ್ಕಗಳಲ್ಲಿ ಮುಳುಗಿ, ಅಕುಶಲಗಳನ್ನು ತಕರ್ಿಸುತ್ತಾ ಸಂಘಭೇದಕ್ಕೂ ಸಂಕಲ್ಪಿಸುವ ಯೋಚನೆಗಳಿಗಿಂತ ಭಿಕ್ಷುವು ನಿದ್ರಿಸುವುದು ಒಳ್ಳೆಯದು. ಏಕೆಂದರೆ ನಿದ್ರೆಯಲ್ಲಿ ಜೀವನದ ಬಂಜರುತನವಿರುವುದಿಲ್ಲ, ಜೀವಿತದ ನಿಷ್ಫಲವಿರುವುದಿಲ್ಲ. ಯೋಚನೆಗಳಿಂದಾಗಿ ಜೀವನವು ಮಹಾ ಮೋಹದಲ್ಲಿ ಬೀಳುವುದು. ಸಂಘಭೇದದಂತಹ ಅಪಾಯವನ್ನು ವೀಕ್ಷಿಸಿ ಹೀಗೆ ಹೇಳಿದೆನು. ಇದಕ್ಕೆ ಸಂಬಂಧಿಸಿದಂತೆ ಆರ್ಯಶ್ರಾವಕ ಭಿಕ್ಷುವು ಹೀಗೆ ಯೋಚಿಸುತ್ತಾನೆ. ಕೆಂಪಗೆ ಕಾಯ್ದು ಉರಿಯುತ್ತಿರುವ ಸೂಜಿಯಿಂದ ಚುಚ್ಚುವುದನ್ನು ಬಿಟ್ಟುಬಿಡೋಣ. ನಾನು ಕೇವಲ ಹೀಗೆ ಗಮನಹರಿಸುವೆನು. ಚಕ್ಷುವು ಅನಿತ್ಯಕರವಾಗಿದೆ, ರೂಪಗಳು ಅನಿತ್ಯಕರವಾಗಿವೆ, ಚಕ್ಷುಸಂಸ್ಪರ್ಶವು ಅನಿತ್ಯಕರವಾಗಿದೆ, ಚಕ್ಷುವಿಞ್ಞಾಣವು ಅನಿತ್ಯಕವಾಗಿದೆ. ಚಕ್ಷುವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ಪ್ರಿಯಾಪ್ರಿಯವಲ್ಲದ ವೇದನೆಗಳು ಸಹಾ ಅನಿತ್ಯಕರವಾಗಿವೆ.
ಕೆಂಪಗೆ ಕಾಯ್ದು ಉರಿಯುತ್ತಿರುವ ಸೂಜಿಯಿಂದ ಚುಚ್ಚುವುದನ್ನು ಬಿಟ್ಟುಬಿಡೋಣ. ಕೇವಲ ಹೀಗೆ ಗಮನಹರಿಸೋಣ. ಕಿವಿಯು ಅನಿತ್ಯಕರವಾಗಿದೆ, ಶಬ್ದಗಳು ಅನಿತ್ಯಕರವಾಗಿವೆ, ಶ್ರೋತವರ್ಣವು ಅನಿತ್ಯಕರವಾಗಿವೆ. ಶ್ರೋತ ಸಂಸ್ಪರ್ಶವು ಅನಿತ್ಯಕರವಾಗಿವೆ. ಸಂಸ್ಪರ್ಶದಿಂದ ಉಂಟಾದ ವೇದನೆಗಳಾದ ಪ್ರಿಯ, ಅಪ್ರಿಯ ತಟಸ್ಥ ವೇದನೆಗಳು ಅನಿತ್ಯಕರವಾಗಿವೆ.
ಹರಿತವಾದ ಉರಿಯುತ್ತಿರುವ ಕತ್ತರಿಯಿಂದ ಮೂಗನ್ನು ಕತ್ತರಿಸುವುದು ಬಿಟ್ಟುಬಿಡೋಣ. ಅವಕ್ಕೆ ಬದಲಾಗಿ ಹೀಗೆ ಗಮನಹರಿಸುವಂತಾಗಲಿ, ನಾಸಿಕವು ಅನಿತ್ಯಕರವಾಗಿದೆ, ಗಂಧಗಳು ಅನಿತ್ಯಕರವಾಗಿವೆ, ಘ್ರಾಣವಿಞ್ಞಾಣವು ಅನಿತ್ಯಕರವಾಗಿವೆ, ಘ್ರಾಣ ಸಂಸ್ಪರ್ಶವು ಅನಿತ್ಯಕರವಗಿವೆ, ಸಂಸ್ಪರ್ಶಗಳಿಂದ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳು ಅನಿತ್ಯಕರವಾಗಿವೆ.
ಹರಿತವಾದ ಹಾಗು ಉರಿಯುತ್ತಿರುವ ಶಸ್ತ್ರದಿಂದ ನಾಲಿಗೆಯನ್ನು ಕತ್ತರಿಸಿಕೊಳ್ಳುವುದನ್ನು ಬಿಟ್ಟುಬಿಡೋಣ. ಅದಕ್ಕೆ ಬದಲಾಗಿ ಹೀಗೆ ಗಮನಹರಿಸೋಣ. ನಾಲಿಗೆಯು ಅನಿತ್ಯಕರವಾಗಿದೆ, ರಸಗಳು ಅನಿತ್ಯಕರವಾಗಿವೆ, ಜಿಹ್ವಾವಿಞ್ಞಾಣವು ಅನಿತ್ಯಕರವಾಗಿವೆ, ಜಿಹ್ವಾಸಂಸ್ಪರ್ಶವು ಅನಿತ್ಯಕರವಾಗಿವೆ ಹಾಗು ಅದರಿಂದಾಗಿ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳು ಅನಿತ್ಯಕರವಾಗಿವೆ.
ಉರಿಯುತ್ತಿರುವ ಹಾಗು ಹರಿತವಾದ ಈಟಿಗಳಿಂದ ಶರೀರವನ್ನು ಛಿದ್ರಗೊಳಿಸುವುದನ್ನು ಬಿಟ್ಟುಬಿಡೋಣ. ಅದರ ಬದಲಾಗಿ ಕೇವಲ ಹೀಗೆ ಗಮನಹರಿಸೋಣ. ಈ ಶರೀರವು ಅನಿತ್ಯಕರವಾಗಿದೆ, ಸ್ಪರ್ಶಗಳು ಅನಿತ್ಯಕರವಾಗಿದೆ, ಕಾಯವಿಞ್ಞಾಣವು ಅನಿತ್ಯಕರವಾಗಿದೆ, ಕಾಯಸಂಸ್ಪರ್ಶವು ಅನಿತ್ಯಕರವಾಗಿವೆ. ಕಾಯಸಂಸ್ಪರ್ಶದಿಂದ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳು ಸಹಾ ಅನಿತ್ಯಕರವಾಗಿವೆ.
ನಿದ್ರಿಸುವುದನ್ನು ಬಿಟ್ಟುಬಿಡೋಣ, ಅದರ ಬದಲಾಗಿ ಹೀಗೆ ಗಮನಹರಿಸೋಣ. ಮನಸ್ಸು ಅನಿತ್ಯಕರವಾಗಿದೆ, ಧಮ್ಮವು ಅನಿತ್ಯಕರವಾಗಿದೆ, ಮನೋವಿಞ್ಞಾಣವು ಅನಿತ್ಯಕರವಾಗಿವೆ. ಮನೋಸಂಸ್ಪರ್ಶವು ಅನಿತ್ಯಕರವಾಗಿವೆ, ಮನೋಸಂಸ್ಪರ್ಶಗಳಿಂದ ಉಂಟಾಗುವ ಪ್ರಿಯ, ಅಪ್ರಿಯ ಹಾಗು ತಟಸ್ಥ ವೇದನೆಗಳು ಅನಿತ್ಯಕರವಾಗಿವೆ.
ಹೀಗೆ ದಶರ್ಿಸಿದಂತಹ ಆರ್ಯಶ್ರಾವಕನು ಚಕ್ಷುವಿನಿಂದ ವಿಕಷರ್ಿಸುತ್ತಾನೆ, ರೂಪಗಳಿಂದ ವಿಕಷರ್ಿಸುತ್ತಾನೆ, ಚಕ್ಷುವಿಞ್ಞಾಣದಿಂದ ವಿಕಷರ್ಿಸುತ್ತಾನೆ, ಚಕ್ಷುಸಂಸ್ಪರ್ಶಗಳಿಂದ ವಿಕಷರ್ಿಸುತ್ತಾನೆ. ಚಕ್ಷುಸಂಸ್ಪರ್ಶಗಳಿಂದ ಉಂಟಾದ ಪ್ರಿಯ, ಅಪ್ರಿಯ ಹಾಗು ತಟಸ್ಥ ವೇದನೆಗಳಿಂದ ವಿಕಷರ್ಿಸುತ್ತಾನೆ. ವಿಕಷರ್ಿತನಾದ್ದರಿಂದಾಗಿ ವಿರಾಗ ಹೊಂದುತ್ತಾನೆ. ವಿರಾಗದಿಂದ ವಿಮುಕ್ತನಾಗುತ್ತಾನೆ. ವಿಮುಕ್ತತೆಯಿಂದಾಗಿ ವಿಮುಕ್ತಿಜ್ಞಾನ ಪಡೆಯುತ್ತಾನೆ. ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯು ಪೂರ್ಣಗೊಂಡಿತು, ಮಾಡಬೇಕಾದ್ದು ಮಾಡಿಯಾಯಿತು, ಈ ಸ್ಥಿತಿಯ ಜೀವಿಯು ಇನ್ನಿಲ್ಲವೆಂದು ಅರಿಯುತ್ತಾನೆ. ಇದೇ ಭಿಕ್ಷುಗಳೇ, ಅದಿತ್ಯಪರಿಯಾಯ ಧಮ್ಮಪರಿಯಾಯವಾಗಿದೆ.


35.18.9 ಪಠಮ ಹತ್ಥಪಾದೋಪಮ ಸುತ್ತಂ (ಪ್ರಥಮಹತ್ಥಪಾದ ಉಪಮೆಯ ಸುತ್ತ)

236. ಭಿಕ್ಷುಗಳೇ, ಯಾವಾಗ ಹಸ್ತಗಳಿರುವವೋ ಆಗ ಕೀಳುವಿಕೆ, ಎತ್ತುವಿಕೆ, ಇಡುವಿಕೆ ಇವೆಲ್ಲವೂ ಗ್ರಹಿಸುತ್ತೇವೆ. ಯಾವಾಗ ಪಾದಗಳಿರುತ್ತವೆಯೋ ಅಗ ಬರುವಿಕೆ, ಹೋಗುವಿಕೆ ಇವೆಲ್ಲವೂ ಗ್ರಹಿಸುವೆವು. ಹಾಗೆಯೇ ಯಾವಾಗ ಅಂಗಾಂಗ ಇರುತ್ತವೆಯೋ ಆಗ ಬಾಗುವಿಕೆ ಹಾಗು ವಿಸ್ತರಿಸುವೆ ಗ್ರಹಿಸುವೆವು. ಹಾಗೆಯೇ ಯಾವಾಗ ಹೊಟ್ಟೆಯಿರುವುದೋ ಆಗ ಹಸಿವು ಬಾಯಾರಿಕೆ ಗ್ರಹಿಸುವೆವು. ಅದೇರೀತಿಯಲ್ಲಿ ಭಿಕ್ಷುಗಳೇ, ಯಾವಾಗ ಕಣ್ಣಿರುವುದೋ ಆಗ ಚಕ್ಷುಸಂಸ್ಪರ್ಶದಿಂದಾಗಿ ಪ್ರಿಯ ಹಾಗು ಅಪ್ರಿಯ ಸುಖ ದುಃಖಗಳು ಉಂಟಾಗುತ್ತವೆ. ಯಾವಾಗ ಕಿವಿಯಿರುವುದೋ ಆಗ ಶ್ರೋತ ಸಂಸ್ಪರ್ಶದಿಂದಾಗಿ ಸುಖ ಹಾಗು ದುಃಖಗಳು ಉಂಟಾಗುವುವು. ಜಿಹ್ವೆಯಿರುವುದೋ... ಕಾಯವಿರುವುದೋ... ಮನಸ್ಸಿರುವುದೋ... ಆಗ ಮನೋಸಂಸ್ಪರ್ಶದಿಂದಾಗಿ  ಸುಖ ಹಾಗು ದುಃಖಗಳು ಉಂಟಾಗುತ್ತವೆ.
ಯಾವಾಗ ಹಸ್ತಗಳು ಇರುವುದಿಲ್ಲವೋ ಆಗ ಕೀಳುವಿಕೆಯಾಗಲಿ, ಇಡುವಿಕೆಯಾಗಲಿ ಗ್ರಹಿಸಲು ಸಾಧ್ಯವಿಲ್ಲ. ಯಾವಾಗ ಪಾದಗಳು ಇರುವುದಿಲ್ಲವೋ ಆಗ ಬರುವಿಕೆ ಮತ್ತು ಹೋಗುವಿಕೆಯನ್ನು ಗ್ರಹಿಸಲು ಸಾಧ್ಯವಿಲ್ಲ. ಯಾವಾಗ ಅಂಗಾಂಗಗಳು ಇಲ್ಲವೋ ಆಗ ಬಾಗುವಿಕೆಯಾಗಲಿ, ವಿಸ್ತರಿಸುವಿಕೆಯಾಗಲಿ ಗ್ರಹಿಸಲು ಸಾಧ್ಯವಿಲ್ಲ. ಯಾವಾಗ ಹೊಟ್ಟೆಯಿಲ್ಲವೋ ಆಗ ಹಸಿವಾಗಲಿ ಅಥವಾ ಬಾಯಾರಿಕೆಯಾಗಲಿ ಗ್ರಹಿಸಲು ಸಾಧ್ಯವಿಲ್ಲ. ಅದೇರೀತಿಯಲ್ಲಿ ಯಾವಾಗ ಚಕ್ಷುವಿಲ್ಲವೋ, ಆಗ ಚಕ್ಷುಸಂಸ್ಪರ್ಶಗಳಿಂದ ಉಂಟಾಗುವಂತಹ ಸುಖ-ದುಃಖಗಳು ಉದಯಿಸಲಾರವು. ಹಾಗೆಯೇ ಯಾವಾಗ ಕಿವಿಯು ಇಲ್ಲವೋ ಆಗ ಶ್ರೋತಸಂಸ್ಪರ್ಶಗಳಿಂದ ಉಂಟಾಗುವಂತಹ ಸುಖ-ದುಃಖಗಳು ಉದಯಿಸಲಾರವು. ಯಾವಾಗ ನಾಸಿಕವಿಲ್ಲವೋ... ನಾಲಿಗೆಯಿಲ್ಲವೋ... ಕಾಯವಿಲ್ಲವೋ... ಯಾವಾಗ ಮನಸ್ಸಿಲ್ಲವೋ ಆಗ ಮನೋಸಂಸ್ಪರ್ಶಗಳಿಂದಾಗಿ ಉಂಟಾಗುವಂತಹ ಸುಖ-ದುಃಖಗಳು ಉದಯಿಸಲಾರವು.


35.18.10 ದುತಿಯ ಹತ್ಥಪಾದೋಪಮ ಸುತ್ತಂ (ದ್ವಿತೀಯ ಹತ್ಥಪಾದ ಉಪಮೆಯ ಸುತ್ತ)

237. ಭಿಕ್ಷುಗಳೇ, ಹಸ್ತಗಳಿಂದ ಕೀಳುವಿಕೆ, ಕೆಳಕ್ಕೆ ಇಡುವಿಕೆ ಇತ್ಯಾದಿ ಮಾಡಬಹುದು... ಅದೇರೀತಿ ಭಿಕ್ಷುಗಳೇ, ಯಾವಾಗ ಕಣ್ಣಿರುವುದೋ, ಆಗ ಚಕ್ಷುಸಂಸ್ಪರ್ಶದಿಂದಾಗಿ ಸುಖ-ದುಃಖಗಳು ಉದಯಿಸುವುವು... ಯಾವಾಗ ಮನಸ್ಸಿರುವುದೋ ಆಗ ಮನೋಸಂಸ್ಪರ್ಶಗಳಿಂದಾಗಿ ಸುಖ-ದುಃಖಗಳು ಉದಯಿಸುವುವು.
ಭಿಕ್ಷುಗಳೇ, ಯಾವಾಗ ಹಸ್ತಗಳು ಇರುವುದಿಲ್ಲವೋ ಆಗ ಕೀಳುವಿಕೆ, ಕೆಳಕ್ಕೆ ಇಡುವಿಕೆ... ಭಿಕ್ಷುಗಳೇ, ಹಾಗೆಯೇ ಯಾವಾಗ ಚಕ್ಷುವಿರುವುದಿಲ್ಲವೋ... ಯಾವಾಗ ಮನಸ್ಸು ಇರುವುದಿಲ್ಲವೋ ಆಗ ಮನೋಸಂಸ್ಪರ್ಶದಿಂದ ಉಂಟಾಗುವಂತಹ ಸುಖ-ದುಃಖಗಳು ಇರುವುದಿಲ್ಲ.

ಇಲ್ಲಿಗೆ ಹದಿನೆಂಟನೆ ಸಮುದ್ರ ವರ್ಗ ಮುಗಿಯಿತು.

No comments:

Post a Comment

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...