Thursday 17 May 2018

Samyutta nikaya 35.9 ಛನ್ನ ವಗ್ಗೋ

ಛನ್ನ ವಗ್ಗೋ

35.9.1. ಪರಲೋಕ ಧಮ್ಮ ಸುತ್ತಂ

84. ಭಗವಾನರು ಶ್ರಾವಸ್ತಿಯಲ್ಲಿದ್ದಾಗ ಆಯುಷ್ಮಂತ ಆನಂದರವರು ಅವರ ಬಳಿಗೆ ಸಮೀಪಿಸಿದರು ಹಾಗು ಹೀಗೆ ನುಡಿದರು: ಭಂತೆ, ಲೋಕ ಲೋಕ ಎನ್ನುತ್ತಾರಲ್ಲ, ಯಾವ ವಿಧದಲ್ಲಿ ಯಾವ ಅರ್ಥದಲ್ಲಿ ಲೋಕ ಎನ್ನುತ್ತಾರೆ?
ಆನಂದ, ಯಾವುದೆಲ್ಲವೂ ವಿಘಟಿತವಾಗುತ್ತದೆಯೋ (ಕೊಳೆಯುತ್ತದೋ) ಅವನ್ನೆಲ್ಲಾ ಆರ್ಯರ ವಿನಯದಲ್ಲಿ ಲೋಕವೆನ್ನುತ್ತಾರೆ. ಮತ್ತೆ ಆನಂದ ಯಾವುದೆಲ್ಲವೂ ವಿಘಟಿತಕ್ಕೆ (ಕೊಳೆಯುವುದಕ್ಕೆ) ಗುರಿಯಾಗಿವೆ. ಆನಂದ, ಚಕ್ಷು ಕೊಳೆಯುತ್ತದೆ... ರೂಪಗಳು ಕೊಳೆಯುತ್ತವೆ... ಚಕ್ಷುವಿಞ್ಞಾನವು ವಿಘಟಿತವಗುವುದು... ಚಕ್ಷುಸಂಸ್ಪರ್ಶ... ಚಕ್ಷುವೇದನಾ... ಕಿವಿ... ಮೂಗು... ನಾಲಿಗೆ... ದೇಹ... ಮನಸ್ಸು ವಿಘಟಿತವಾಗುವುದು... ಮನೋವಿಷಯಗಳು ವಿಘಟಿತವಾಗುವುದು. ಮನೋವಿಞ್ಞಾನವು ವಿಘಟಿತವಾಗುವುದು... ಮನೋಸಂಸ್ಪರ್ಶ... ಮನೋವೇದನೆಗಳು... ಪ್ರಿಯ, ಅಪ್ರಿಯ, ತಟಸ್ಥ ವೇದನೆಗಳು ವಿಘಟಿತವಗುವುದು. ಹೀಗೆ ಯಾವುದೆಲ್ಲವೂ ವಿಘಟಿತವಾಗುವುವೋ ಅವೆಲ್ಲವನ್ನು ಆರ್ಯರ ವಿನಯದಲ್ಲಿ ಲೋಕ ಎನ್ನುತ್ತಾರೆ.

35.9.2. ಸುಞ್ಞತ ಲೋಕ ಸುತ್ತಂ

85. ಒಮ್ಮೆ ಆಯುಷ್ಮಂತರಾದ ಆನಂದರವರು ಭಗವಾನರ ಬಳಿಗೆ ಬಂದರು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತರು. ನಂತರ ಹೀಗೆ ಪ್ರಶ್ನಿಸಿದರು: ಭಂತೆ, ಸುಞ್ಞ (ಶೂನ್ಯ) ಲೋಕ ಎನ್ನುತ್ತಾರಲ್ಲ, ಯಾವ ವಿಧದಲ್ಲಿ ಭಂತೆ ಲೋಕವು ಶೂನ್ಯವಾಗಿದೆ? ಆನಂದ, ಇಲ್ಲಿ ಇದು ಸ್ವ (ಆತ್ಮ/ತಾನು)ನಿಂದ ಬರಿದಾಗಿದೆ. ಹಾಗೆಯೇ ತನ್ನಿಂದ/ತನ್ನತನದಿಂದ/ನನ್ನದು ಎಂಬುದರಿಂದ/ಆತ್ಮಕ್ಕೆ ಸೇರಿದ್ದು ಎಂಬುದರಿಂದಾಗಿ ಬರಿದಾಗಿದೆ. ಆದ್ದರಿಂದ ಲೋಕವು ಶೂನ್ಯ ಎನ್ನುತ್ತಾರೆ ಮತ್ತು ಯಾವುದು ಸ್ವಯಂ (ಆತ್ಮ)ನಿಂದ ಶೂನ್ಯವಾಗಿದೆ ಮತ್ತು ತನ್ನದು ಎಂಬುದರಿಂದ ಸೂನ್ಯವಾಗಿದೆ? ಕಣ್ಣು ಸ್ವಯಂ (ಆತ್ಮ) ನಿಂದ ಹಾಗು ತನ್ನದು ಎಂಬುದರಿಂದಾಗಿ ಶೂನ್ಯವಾಗಿದೆ. ಹಾಗೆಯೇ ರೂಪಗಳು ಆತ್ಮದಿಂದ ಶೂನ್ಯವಾಗಿದೆ. ಚಕ್ಷುವಿಞ್ಞಾನವು ಆತ್ಮದಿಂದ ಶೂನ್ಯವಾಗಿದೆ ಮತ್ತು ತನ್ನದು ಎಂಬುದರಿಂದಾಗಿ ಶೂನ್ಯವಾಗಿದೆ. ಚಕ್ಷು ಸಂಸ್ಪರ್ಶವು ಆತ್ಮದಿಂದ ಶೂನ್ಯವಾಗಿದೆ ಹಾಗು ತನ್ನದು ಎಂಬುದರಿಂದ ಶೂನ್ಯವಾಗಿದೆ. ಚಕ್ಷುಸಂಸ್ಪರ್ಶದಿಂದ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ತಟಸ್ಥವೇದನೆಗಳು ಆತ್ಮದಿಂದ ಶೂನ್ಯವಾಗಿದೆ, ತನ್ನದು ಎಂಬುದರಿಂದಾಗಿ ಶೂನ್ಯವಾಗಿದೆ. ಅದೇರೀತಿಯಾಗಿ ಕಿವಿಯು... ಮೂಗು... ನಾಲಿಗೆ... ದೇಹ... ಮನಸ್ಸು... ಧಮ್ಮವು... ಮನೋವಿಞ್ಞಾನವು ಆತ್ಮದಿಂದ ಶೂನ್ಯವಾಗಿದೆ ಹಾಗು ತನ್ನತನದಿಂದ ಶೂನ್ಯವಾಗಿದೆ. ಮನೋಸಂಸ್ಪರ್ಶವು... ಮನೋವೇದನೆಗಳಾದ ಪ್ರಿಯ, ಅಪ್ರಿಯ, ತಟಸ್ಥ ವೇದನೆಗಳು ಆತ್ಮದಿಂದ ಶೂನ್ಯವಾಗಿದೆ ಹಾಗು ತನ್ನತನದಿಂದ ಶೂನ್ಯವಾಗಿದೆ. ಆನಂದ, ಹೀಗೆ ಈ ಎಲ್ಲವೂ ಸ್ವಯಂನಿಂದ ಹಾಗು ತನ್ನದು ಎಂಬುದರಿಂದ ಬರಿದಾಗಿರುವುದರಿಂದ ಶೂನ್ಯ ಲೋಕ ಎನ್ನುತ್ತಾರೆ.

35.9.3. ಸಂಖಿತ್ತ ಧಮ್ಮ ಸುತ್ತಂ

86. ಒಂದು ಸಮಯದಲ್ಲಿ ಆಯುಷ್ಮಂತ ಆನಂದರವರು ಭಗವಾನರನ್ನು ಭೇಟಿ ಮಾಡಲು ಆಗಮಿಸಿದರು. ಭಗವಾನರಿಗೆ ಗೌರವಪೂರ್ವಕವಾಗಿ ವಂದಿಸಿ ಒಂದೆಡೆ ಕುಳಿತರು. ನಂತರ ಹೀಗೆ ಪ್ರಶ್ನಿಸಿದರು: ಭಗವಾನರು ನನಗೆ ಸಂಕ್ಷಿಪ್ತವಾಗಿ ಧಮ್ಮವನ್ನು ಉಪದೇಶಿಸುವಂತಾಗಲಿ, ಬಹಳ ಒಳಿತಾಗುವುದು. ಅದರಿಂದಾಗಿ ನಾನು ಏಕಾಂಗಿಯಾಗಿ, ನಿಲರ್ಿಪ್ತನಾಗಿ, ಅಪ್ರಮತ್ತನಾಗಿ, ಉತ್ಸಾಹಿಯಾಗಿ ಹಾಗು ದೃಢಪೂರ್ವಕವಾಗಿ ಶ್ರಮಿಸುವಂತಾಗಲಿ.
ಇದನ್ನು ಹೇಗೆ ಭಾವಿಸುವೆ ಆನಂದ, ಚಕ್ಷು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ, ದುಃಖದಂತಹ ವಿಪರಿಣಾಮ ಧಮ್ಮವನ್ನು ಹೊಂದಿದೆಯೋ ಅಂತಹವನ್ನು ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ರೂಪಗಳು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಚಕ್ಷುವಿಞ್ಞಾನ... ಚಕ್ಷುಸಂಸ್ಪರ್ಶ.... ಚಕ್ಷುಸಂಸ್ಪರ್ಶದಿಂದ ಉದಯಿಸುವ ಪ್ರಿಯವೇದನೆ, ಅಪ್ರಿಯವೇದನೆ ಹಾಗು ತಟಸ್ಥವೇದನೆಗಳು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ, ದುಃಖಕಾರಿಯೋ ವಿಪರಿಣಾಮ ಧಮ್ಮವನ್ನು ಹೊಂದಿದೆಯೋ ಅಂತಹವನ್ನು ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ನಾಲಿಗೆಯು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಜಿಹ್ವಾವಿಞ್ಞಾನ, ಜಿಹ್ವಾಸಂಸ್ಪರ್ಶ... ಮನೋಸಂಸ್ಪರ್ಶದಿಂದ ಉಂಟಾದ ಸುಖವೇದನೆ, ಅಪ್ರಿಯವೇದನೆ ಹಾಗು ತಟಸ್ಥ ವೇದನೆಗಳು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅವು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ.
ಯಾವುದು ಅನಿತ್ಯವೋ, ದುಃಖಕಾರಿಯೋ ವಿಪರಿಣಾಮ ಧಮ್ಮವನ್ನು ಹೊಂದಿದೆಯೋ ಅವನ್ನು ಇದು ನನ್ನದು, ಇದು ನಾನು, ಇದು ನನ್ನ ಆತ್ಮವೆಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ಆನಂದ, ಹೀಗೆ ದಶರ್ಿಸಿದಂತಹ ಆರ್ಯಶ್ರಾವಕನು ಚಕ್ಷುವಿನಿಂದ ವಿಕಷರ್ಿತನಾಗುತ್ತಾನೆ... ಚಕ್ಷುಸಂಸ್ಪರ್ಶಗಳಿಂದ ವಿಕಷರ್ಿತನಾಗುತ್ತಾನೆ... ಮನೋಸಂಸ್ಪರ್ಶಗಳಿಂದ ವಿಕಷರ್ಿತನಾಗುತ್ತಾನೆ... ವೇದನೆಗಳಿಂದ ವಿಕಷರ್ಿತನಾಗುತ್ತಾನೆ. ಹೀಗೆ ವಿಕಷರ್ಿತನಾದ್ದರಿಂದಾಗಿ ವಿರಾಗ ಹೊಂದುತ್ತಾನೆ. ವಿರಾಗಿಯಾದ್ದರಿಂದಾಗಿ ವಿಮುಕ್ತನಾಗುತ್ತಾನೆ. ವಿಮುಕ್ತನಾದ್ದರಿಂದಾಗಿ ವಿಮುಕ್ತಿ ಜ್ಞಾನ ಹೊಂದುತ್ತಾನೆ: ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯು ಪೂರ್ಣವಾಯಿತು, ಮಾಡಬೇಕಾದ್ದು ಮಾಡಿಯಾಯಿತು, ಇನ್ನೇನು ಉಳಿದಿಲ್ಲ, ಪುನರ್ಜನ್ಮವಿಲ್ಲ ಎಂದು ಅರಿಯುತ್ತಾನೆ.

35.9.4. ಚನ್ನ ಸುತ್ತಂ

87. ಒಮ್ಮೆ ಭಗವಾನರು ರಾಜಗೃಹದ ವೇಳುವನದ ಅಳಿಲುಧಾಮದಲ್ಲಿ ವಾಸಿಸುತ್ತಿದ್ದರು. ಆ ಸಮಯದಲ್ಲಿ ಆಯುಷ್ಮಂತ ಸಾರಿಪುತ್ತರು ಅಯುಷ್ಮಂತ ಮಹಾಚುಂದರು ಹಾಗು ಆಯುಷ್ಮಂತ ಛನ್ನರು ಗೃದ್ಧಕೂಟ ಪರ್ವತದಲ್ಲಿ ವಿಹರಿಸುತ್ತಿದ್ದರು. ಆ ಸಮಯದಲ್ಲಿ ಆಯುಷ್ಮಂತ ಚನ್ನರಿಗೆ ರೋಗಭಾದೆಯಾಯಿತು. ಅಪಾರ ನೋವುಳ್ಳ ಭೀಕರ ಕಾಯಿಲೆಗೆ ತುತ್ತಾದರು. ಆಗ ಸಂಜೆ ಸಮಯದಲ್ಲಿ ಆಯುಷ್ಮಂತ ಸಾರಿಪುತ್ತರು ಏಕಾಂತ ಧ್ಯಾನದಿಂದೆದ್ದು, ಆಯುಷ್ಮಂತರಾದ ಮಹಾಚುಂದರವರ ಬಳಿಗೆ ಬಂದರು ಹಾಗು ಹೀಗೆ ನುಡಿದರು. ಬಾ ಅಯುಷ್ಮಂತ ಚುಂದನೇ, ನಾವು ಆಯುಷ್ಮಂತ ಛನ್ನರ ಬಳಿಗೆ ಹೋಗಿ ಆತನ ಕುಶಲವನ್ನು ಕೇಳೋಣ.
ಆಯಿತು ಮಿತ್ರನೇ ಎಂದು ಆಯುಷ್ಮಂತ ಮಹಾಚುಂದರು ಉತ್ತರಿಸಿದರು. ಆಗ ಆಯುಷ್ಮಂತ ಛನ್ನರವರ ಬಳಿಗೆ ಬಂದರು. ಕುಶಲ ಕ್ಷೇಮವನ್ನು ವಿಚಾರಿಸಿ ತಮ್ಮ ಆಸನಗಳಲ್ಲಿ ಕುಳಿತರು. ನಂತರ ಆಯುಷ್ಮಂತ ಸಾರಿಪುತ್ತರವರು ಹೀಗೆ ಕೇಳಿದರು: ಆಯುಷ್ಮಂತ ಛನ್ನ ಕುಶಲವಷ್ಟೇ, ನಿನ್ನ ಕಾಯಿಲೆಯು ಕ್ಷೀಣವಾಗುತ್ತಿದೆ ಅಲ್ಲವೇ? ನೀನು ಗುಣಮುಖನಾಗುತ್ತಿರುವೆ, ಸರ್ವವನ್ನು ಸಹಿಸುತ್ತಿರುವೆ ಎಂದು ನಾವು ಭಾವಿಸುವೆವು. ನಿನ್ನಲ್ಲಿ ಅಹಿತಕರ ವೇದನೆಗಳು ಕ್ಷೀಣವಾಗಿ ಇನ್ನಿಲ್ಲವಾಗುತ್ತವೆ ಎಂದು ಭಾವಿಸುವೆವು. ಹಾಗೆಯೇ ಆರೋಗ್ಯ ವೃದ್ಧಿಯಾಗುತ್ತಿದೆ ಎಂದು ಭಾವಿಸುವೆವು.
ಆಯುಷ್ಮಂತ ಸಾರಿಪುತ್ತರೇ, ನನ್ನಿಂದ ಸಹಿಸಲಾಗುತ್ತಿಲ್ಲ, ಬಹುಶಃ ನಾನು ಗುಣಮುಖನಾಗುವುದಿಲ್ಲ. ಪ್ರಬಲವಾದ ನೋವಿನ ವೇದನೆಗಳು ನನ್ನಲ್ಲಿ ವೃದ್ಧಿಯಾಗುತ್ತಿವೆ, ಕಡಿಮೆಯಾಗುತ್ತಿಲ್ಲ. ಹಾಗೆಯೇ ಇವು ಸ್ಪಷ್ಟವಾಗಿ ತೋರುತ್ತಿವೆ. ಹೇಗೆಂದರೆ ಬಲಿಷ್ಠ ವ್ಯಕ್ತಿಯೊಬ್ಬನು ಹರಿತವಾದ ಖಡ್ಗದಿಂದ ತಲೆಯನ್ನು ಹೋಳು ಮಾಡುವಂತೆ, ಪ್ರಬಲವಾದ ವಾಯುವು ನನ್ನ ತಲೆಯೊಳಗೆ ಆಕ್ರಮಣ ಮಾಡಿದೆ. ನನ್ನಿಂದ ಸಹಿಸಲಾಗುತ್ತಿಲ್ಲ. ಹೇಗೆಂದರೆ ಬಲಿಷ್ಠ ವ್ಯಕ್ತಿಯೊಬ್ಬನು ತಲೆಗೆ ಚರ್ಮದ ಪಟ್ಟಿಯನ್ನು ಕಟ್ಟಿ ಅತಿ ಬಿಗಿಗೊಳಿಸುವಂತೆ ಪ್ರಬಲವಾದ ನೋವು ತಲೆಸುತ್ತಲು ಆವರಿಸಿದೆ, ನನ್ನಿಂದ ಸಹಿಸಲಾಗುತ್ತಿಲ್ಲ. ಹೇಗೆಂದರೆ ಕುಶಲಿ ಕಟುಕನೊಬ್ಬನೊ ಅಥವಾ ಆತನ ಸಹಾಯಕನೋ ಎತ್ತಿನ ಹೊಟ್ಟೆಯನ್ನು ಹರಿತವಾದ ಕಠಾರಿಯಿಂದ ಸಿಗಿದು ಹಾಕುವಂತೆ ಪ್ರಬಲವಾದ ವಾಯುವು ನನ್ನ ಹೊಟ್ಟೆಯ ಸುತ್ತಲೂ ಆವರಿಸಿದೆ. ನನ್ನಿಂದ ಸಹಿಸಲು ಆಗುತ್ತಿಲ್ಲ. ಹೇಗೆಂದರೆ ಇಬ್ಬರು ಬಲಿಷ್ಠ ವ್ಯಕ್ತಿಗಳು ಒಬ್ಬ ದುರ್ಬಲನನ್ನು ಎತ್ತಿಕೊಂಡು ಹೋಗಿ ಕೆಂಡಗಳ ಹಳ್ಳದ ಮೇಲಿಟ್ಟು ಸುಡುವಂತೆ ಇಡೀ ದೇಹವೆಲ್ಲಾ ಉರಿಯು ಆವರಿಸಿದೆ. ನನ್ನಿಂದ ಸಹಿಸಲು ಆಗುತ್ತಿಲ್ಲ. ನಾನು ಗುಣಮುಖನಾಗಲಾರೆ. ಪ್ರಬಲವಾದ ನೋವಿನ ಸಂವೇದನೆಗಳು ವೃದ್ಧಿಯಾಗುತ್ತಿವೆ ಹೊರತು ಕ್ಷೀಣಿಸುತ್ತಿಲ್ಲ. ಇದು ಸ್ಪಷ್ಟವಾಗಿ ತೋರುತ್ತಿದೆ. ಇದನ್ನೆಲ್ಲಾ ತಡೆಯಲು ಆಗದೆ ಚೂರಿಯನ್ನು ಇಟ್ಟುಕೊಂಡಿರುವೆ, ನನಗೆ ಜೀವನದ ಬಯಕೆಯಿಲ್ಲ.
ಸಾರಿಪುತ್ತರು ಓ ಛನ್ನ, ದಯವಿಟ್ಟು ಚೂರಿಯನ್ನು ಬಳಸಿ ಆತ್ಮಹತ್ಯೆಗೆ ಯತ್ನಿಸಬೇಡ, ಆಯುಷ್ಮಂತ ಛನ್ನ ದೀಘರ್ಾಯುವಾಗಿ ಸುಖಿಯಾಗಿ ಜೀವಿಸಲಿ. ಛನ್ನರಿಗೆ ಅಹಾರದ ಸಮಸ್ಯೆಯಾದರೆ, ನಾನು ಹುಡುಕಿ ತರುವೆ. ಔಷಧಿಯನ್ನು ಸಹಾ ತರುವೆ. ಛನ್ನರಿಗೆ ಯೋಗ್ಯ ಸಹಾಯಕನ ಅಗತ್ಯಬಿದ್ದರೆ ನಾನೇ ಸೇವಕನಾಗಿ ಸೇವೆ ಮಾಡುವೆ. ಹಾಗಾಗಿ ಛನ್ನ ಚೂರಿ ಬಳಸುವುದು ಬೇಡ. ಆಯುಷ್ಮಂತ ಛನ್ನ ಜೀವಿಸಲಿ, ನಾವೆಲ್ಲಾ ಛನ್ನರ ಜೀವಿತವನ್ನು ಬಯಸುವೆವು.
ಆಯುಷ್ಮಂತ ಸಾರಿಪುತ್ತರೇ, ನನಗೆ ಆಹಾರದ ಕೊರತೆಯೇನಿಲ್ಲ, ನನಗೆ ಯೋಗ್ಯವಾದ ಆಹಾರವೂ ಸಿಗುತ್ತಿದೆ, ನನಗೆ ಔಷಧಿಯು ಸಿಗುತ್ತಿಲ್ಲ ಎಂದಲ್ಲ, ಯೋಗ್ಯವಾದ ಔಷಧಿಗಳು ಇವೆ. ನನಗೆ ಸಹಾಯ ಮಾಡುವ ಸಹಾಯಕರು ಇಲ್ಲವೆಂದಲ್ಲ, ಅವರು ಸಹಾ ಇದ್ದಾರೆ. ಅಷ್ಟೇ ಅಲ್ಲದೆ ಬಹುಕಾಲದಿಂದ ಗುರುಗಳಿಗೆ ಒಪ್ಪುವ ರೀತಿಯಲ್ಲೇ ಸೇವೆಯು ನನ್ನಿಂದ ಆಗಿದೆ. ಹೀಗಾಗಿ ಸಾರಿಪುತ್ತರೇ ನೆನಪಿಡಿ, ಭಿಕ್ಷು ಚನ್ನ ಈ ಚೂರಿಯನ್ನು ನಿಂದಾತೀತವಾಗಿ ಬಳಸುತ್ತಾನೆ.
ನಾವು ಆಯುಷ್ಮಂತ ಚನ್ನನ ಬಳಿಯಲ್ಲಿ ಕೆಲವು ವಿಷಯಗಳ ಬಗ್ಗೆ ಮಾತನಾಡಬೇಕೆಂದಿದ್ದೇವೆ, ಚನ್ನ ಉತ್ತರಿಸುವ ಕೃಪೆ ತೋರಲಿ.
ಆಯುಷ್ಮಂತ ಸಾರಿಪುತ್ತರೇ, ಕೇಳಿರಿ, ಕೇಳಿದಾಗಲೇ ನನಗೂ ಅರಿವಾಗುವುದು.
ಆಯುಷ್ಮಂತ ಛನ್ನ, ನೀನು ಚಕ್ಷುವಿಞ್ಞಾನಕ್ಕೆ ಹಾಗು ಚಕ್ಷುವಿಞ್ಞಾನಕ್ಕೆ ಗೋಚರವಾಗಬಲ್ಲ ವಿಷಯಗಳ ಬಗ್ಗೆ ಹೀಗೆ ಪರಿಗಣಿಸುವೆಯಾ? ಇದು ನನ್ನದು, ಇದು ನಾನು, ಇದೇ ನನ್ನ ಆತ್ಮವೆಂದು? ಹಾಗೆಯೇ ಕಿವಿ ಹಾಗು ಶ್ರೋತಪಞ್ಞಾನಕ್ಕೆ... ಮೂಗು ಮತ್ತು ಘ್ರಾಣವಿಞ್ಞಾನಕ್ಕೆ... ನಾಲಿಗೆ ಮತ್ತು ಜಿಹ್ವಾವಿಞ್ಞಾಣಕ್ಕೆ... ಕಾಯ ಹಾಗು ಕಾಯವಿಞ್ಞಾನಕ್ಕೆ... ಮನಸ್ಸು ಮತ್ತು ಮನೋವಿಞ್ಞಾಕ್ಕೆ ಹಾಗು ಮಾನಸಿಕ ವಿಷಯಗಳ ಬಗ್ಗೆ ಹೀಗೆ ಪರಿಗಣಿಸುವೆಯಾ, ಇದು ನನ್ನದು, ಇದು ನಾನು, ಇದೇ ನನ್ನ ಆತ್ಮವೆಂದು.
ಮಿತ್ರ ಸಾರಿಪುತ್ತ, ನಾನು ಚಕ್ಷುವಿಗೆ, ಚಕ್ಷುವಿಞ್ಞಾನಕ್ಕೆ ಮತ್ತು ಚಕ್ಷುವಿಞ್ಞಾನದಿಂದ ಗ್ರಹಿಸಬಲ್ಲ ವಿಷಯಗಳನ್ನು ಹೀಗೆ ಪರಿಗಣಿಸುವೆನು. ಇದು ನನ್ನದಲ್ಲ, ಇದು ನಾನಲ್ಲ ಮತ್ತು ಇದು ನನ್ನ ಆತ್ಮವಲ್ಲ. ಅದೇರೀತಿಯಾಗಿ ಕಿವಿಗೆ... ಮೂಗಿಗೆ... ನಾಲಿಗೆಗೆ... ದೇಹಕ್ಕೆ... ಮನಸ್ಸಿಗೆ... ಮನೋವಿಞ್ಞಾನಕ್ಕೆ ಹಾಗು ಮನೋವಿಞ್ಞಾನದ ವಿಷಯಗಳ ಕುರಿತು ಹೀಗೆ ಪರಿಗಣಿಸುತ್ತೇನೆ, ಇದು ನನ್ನದಲ್ಲ, ಇದು ನಾನಲ್ಲ ಹಾಗು ಇದು ನನ್ನ ಆತ್ಮವಲ್ಲ.
ಮಿತ್ರ ಛನ್ನನೇ, ಏನನ್ನು ನೀನು ನೋಡಿರುವೆಯೋ ಮತ್ತು ನೇರವಾಗಿ ಚಕ್ಷುವಿನಿಂದ ಏನನ್ನು ನೋಡಿರುವೆಯೋ ಮತ್ತು ಯಾವ ವಿಷಯಗಳನ್ನು ನೀನು ಚಕ್ಷುವಿಞ್ಞಾನದಿಂದ ಮತ್ತು ಇದು ನನ್ನದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ. ಏನನ್ನು ನೀನು ಕಿವಿಯಿಂದ ಕೇಳಿರುವೆಯೋ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಮನೋ ವಿಞ್ಞಾನದಿಂದ ಗ್ರಹಿಸಬಹುದಾದ ವಿಷಯಗಳನ್ನು ನೀನು ಹೀಗೆ ಪರಿಗಣಿಸುವೆ, ಇದು ನನ್ನದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ.
ಆಯುಷ್ಮಂತ, ಸಾರಿಪುತ್ತರೇ, ನಾನು ನೇರವಾಗಿ ಚಕ್ಷು ನಿರೋಧವನ್ನು ಅರಿತಿರುವುದರಿಂದಾಗಿ, ನಾನು ನೋಡಿರುವುದರಿಂದಾಗಿ ನಾನು ಚಕ್ಷು, ರೂಪಗಳನ್ನು, ಚಕ್ಷು ವಿಞ್ಞಾನವನ್ನು ಹೀಗೆ ಪರಿಗಣಿಸುವೆನು ಇದು ನನ್ನದಲ್ಲ, ಇದು ನಾನಲ್ಲ ಮತ್ತು ಇದು ನನ್ನ ಆತ್ಮವಲ್ಲ. ಅದೇರೀತಿಯಾಗಿ ನಾನು ಶ್ರೋತ ನಿರೋಧವನ್ನು... ಘ್ರಾಣ ನಿರೋಧವನ್ನು... ಜಿಹ್ವಾ ನಿರೋಧವನ್ನು... ಕಾಯ ನಿರೋಧವನ್ನು... ಮನೋ ನಿರೋಧವನ್ನು ಅರಿತಿರುವುದರಿಂದಾಗಿ, ನೇರವಾಗಿ ನೋಡಿರುವುದರಿಂದಾಗಿ ನಾನು ಮನೋವಿಞ್ಞಾನವನ್ನು ಹಾಗು ಮಾನಸಿಕ ವಿಷಯಗಳನ್ನು ಹೀಗೆ ಪರಿಗಣಿಸುವೆನು, ಇವು ನನ್ನದಲ್ಲ, ಇವು ನಾನಲ್ಲ ಮತ್ತು ಇವು ನನ್ನ ಆತ್ಮವಲ್ಲ.
ಹೀಗೆ ನುಡಿದಾಗ ಆಯುಷ್ಮಂತ ಮಹಾಚುಂದರು ಛನ್ನರಿಗೆ ಹೀಗೆ ಹೇಳಿದರು: ಮಿತ್ರ ಛನ್ನನೇ, ಆದ್ದರಿಂದ ಭಗವಾನರ ಬೋಧನೆಯನ್ನು ನಿರಂತರ ಗಮನ ನೀಡುವಂತಾಗು. ಯಾರು ಅವಲಂಬಿತನಾಗಿರುತ್ತಾನೆ, ಆತನು ಅಸ್ಥಿರನಾಗುತ್ತಾನೆ ಹಾಗು ಯಾರು ನಿರವಲಂಬಿಯಾಗಿರುತ್ತಾನೋ ಆತನು ನಿಶ್ಚಲನಾಗುತ್ತಾನೆ. ಯಾವಾಗ ನಿಶ್ಚಲತೆಯಿರುವುದು, ಆಗ ಪ್ರಶಾಂತತೆಯಿರುತ್ತದೆ. ಯಾವಾಗ ಪ್ರಶಾಂತತೆಯಿರುವುದು, ಆಗ ಬಾಗುವಿಕೆಯಿರುವುದಿಲ್ಲ. ಯಾವಾಗ ಬಾಗುವಿಕೆಯಿರುವುದಿಲ್ಲವೋ ಆಗ ಯಾವುದೇ ಬರುವಿಕೆ ಹಾಗು ಹೋಗುವಿಕೆಗಳು ಇರುವುದಿಲ್ಲ. ಯಾವಾಗ ಬರುವಿಕೆ ಹಾಗು ಹೋಗುವಿಕೆ ಇರುವುದಿಲ್ಲವೋ ಆಗ ಯಾವುದೇ ಮರೆಯಾಗುವಿಕೆ ಹಾಗು ಆಗಮಿಸುವಿಕೆ ಇರುವುದಿಲ್ಲ. ಯಾವಾಗ ಯಾವುದೇ ಮರೆಯಾಗುವಿಕೆ ಹಾಗು ಆಗಮಿಸುವಿಕೆ ಇರುವುದಿಲ್ಲವೋ ಆಗ ಯಾವುದೇ ಸಾವಾಗಲಿ ಹಾಗು ಪುನರ್ಜನ್ಮವಿರುವುದಿಲ್ಲ. ಆಗ ಇಲ್ಲಿಯು ಇರುವುದಿಲ್ಲ, ಆಚೆಯು ಇರುವುದಿಲ್ಲ, ಮಧ್ಯದಲ್ಲಿಯು ಇರುವುದಿಲ್ಲ. ಇದೇ ದುಃಖದ ಅಂತ್ಯವಾಗಿದೆ.
ಹೀಗೆ ಆಯುಷ್ಮಂತ ಸಾರಿಪುತ್ತ ಹಾಗು ಆಯುಷ್ಮಂತ ಮಹಾಚುಂದರವರು ಆಯುಷ್ಮಂತ ಛನ್ನರವರಿಗೆ ಬೋಧಿಸಿ, ತಮ್ಮ ಪೀಠದಿಂದ ಎದ್ದುಹೊರಟರು. ಅವರು ಹೋದನಂತರ ಆಯುಷ್ಮಂತ ಛನ್ನರವರಿಗೆ ನೋವುಗಳು ಅತಿಯಾಗಿ ಸಹಿಸಲು ಅಸಾಧ್ಯವಾಯಿತು. ಹೀಗಾಗಿ ಛನ್ನರವರು ಚೂರಿಯನ್ನು ಬಳಸಿಬಿಟ್ಟರು. ಅಂದರೆ ಸ್ವಹತ್ಯೆಗೆ ಪ್ರಯತ್ನಿಸಿದರು. ಆದರೆ ಅಂತಿಮ ಕ್ಷಣಗಳಲ್ಲಿ ಪರಿನಿಬ್ಬಾಣ ಸಾಧಿಸಿದರು. ಹೀಗೆ ಅವರು ನಿಂದಾತೀತವಾಗಿ ಸ್ವಹತ್ಯೆ ಮಾಡಿಕೊಂಡರು. ಪರಿನಿಬ್ಬಾಣ ಸಾಧಿಸಿದರು.
ನಂತರ ಸಾರಿಪುತ್ತರು ಭಗವಾನರ ಬಳಿಗೆ ಬಂದರು. ಅವರು ಭಗವಾನರಿಗೆ ವಂದಿಸಿ ಒಂದೆಡೆ ಕುಳಿತರು. ನಂತರ ಹೀಗೆ ಕೇಳಿದರು: ಭಗವಾನ್, ಆಯುಷ್ಮಂತ ಚುಂದರವರು ಚೂರಿಯ ಬಳಕೆ ಮಾಡಿಬಿಟ್ಟರು. ಅಂದರೆ ಸ್ವಹತ್ಯೆಗೆ ಪ್ರಯತ್ನಿಸಿದರು. ಆದರೆ ಅಂತಿಮ ಕ್ಷಣಗಳಲ್ಲಿ ಪರಿನಿಬ್ಬಾಣ ಸಾಧಿಸಿದರು. ಹೀಗೆ ಅವರು ನಿಂದಾತೀತವಾಗಿ ಸ್ವಹತ್ಯೆ ಮಾಡಿಕೊಂಡರು, ಪರಿನಿಬ್ಬಾಣ ಸಾಧಿಸಿದರು.
ನಂತರ ಸಾರಿಪುತ್ತರು ಭಗವಾನರ ಬಳಿಗೆ ಬಂದರು. ಅವರು ಭಗವಾನರಿಗೆ ವಂದಿಸಿ ಒಂದೆಡೆ ಕುಳಿತರು, ನಂತರ ಹೀಗೆ ಕೇಳಿದರು: ಭಗವಾನ್, ಆಯುಷ್ಮಂತ ಚುಂದರವರು ಚೂರಿಯ ಬಳಕೆ ಮಾಡಿಬಿಟ್ಟರು. ಅವರ ಮುಂದಿನ ಗತಿ ಏನಾಗಿದೆ, ಎಲ್ಲಿ ಅವರು ಹುಟ್ಟಿದ್ದಾರೆ?
ಸಾರಿಪುತ್ತ, ಛನ್ನನು ನಿನ್ನ ಹಾಗು ಭಿಕ್ಖು ಸಮೂಹದ ಮುಂದೆಯೇ ನಿಂದಾತೀತತೆಯನ್ನು ಸ್ಪಷ್ಟಪಡಿಸಲಿಲ್ಲವೇ?
ಭಗವಾನ್, ಇಲ್ಲಿ ವಜ್ಜಿಗಳ ಹಳ್ಳಿಯಿದೆ, ಅದರ ಹೆಸರು ಪುಬ್ಬವಿಜ್ಝಾನ. ಅಲ್ಲಿ ಆಯುಷ್ಮಂತ ಛನ್ನನ ಮಿತ್ರರು, ಕುಟುಂಬದವರು ಎಲ್ಲರೂ ಇದ್ದಾರೆ. ಸಾರಿಪುತ್ತ, ಆಯುಷ್ಮಂತ ಛನ್ನನು ನಿಜಕ್ಕೂ ಆ ಕುಟುಂಬಗಳೊಡನೆ ಮೈತ್ರಿಯಿಂದ ಇದ್ದನು. ಆತ್ಮೀಯತೆಯಿಂದ ಇದ್ದನು, ಸತ್ಯಕ್ಕೆ ಪೂರ್ವಕವಾಗಿ ಇದ್ದನು. ಆದರೆ ಈ ಮಟ್ಟಿಗೆ ನಿಂದಾರ್ಹವೆಂದು ನಾನು ಹೇಳುವುದಿಲ್ಲ. ಸಾರಿಪುತ್ತ, ಯಾವಾಗ ಒಬ್ಬನು ಈ ಶರೀರವನ್ನು ಬಿಟ್ಟು ಮತ್ತೊಂದು ಶರೀರವನ್ನು ಪಡೆದು ಪುನರ್ಜನ್ಮ ತಾಳುತ್ತಾನೊ, ಆತನಿಗೆ (ಆರ್ಯರ ಭಾಷೆಯಲ್ಲಿ) ನಿಂದಾರ್ಹನೆನ್ನುತ್ತಾರೆ. ಆದರೆ ಛನ್ನನ ವಿಷಯದಲ್ಲಿ ಈ ರೀತಿ ಆಗಲಿಲ್ಲ. (ಅಂದರೆ ಆತ್ಮಹತ್ಯೆಯು ನಿಂದಾರ್ಹವಾಗುತ್ತದೆ. ಆದರೆ ಛನ್ನನು ಆತ್ಮಹತ್ಯೆಗೆ ಯತ್ನಿಸಿ ಅಂತಿಮ ಕ್ಷಣದಲ್ಲಿ ಕಶ್ಮಲರಹಿತನು, ಆಸ್ರವರಹಿತನೂ ಆಗಿ ಪರಿನಿಬ್ಬಾಣ ಪಡೆದದ್ದರಿಂದಾಗಿ ಮುಂದೆ ಪುನರ್ಜನ್ಮ ಪಡೆಯಲಿಲ್ಲವಾದುದ್ದರಿಂದಾಗಿ ಆತನು ನಿಂದಾತೀತ) ಹೀಗಾಗಿ ಛನ್ನ ಚೂರಿಯನ್ನು ನಿಂದತೀತವಾಗಿ ಬಳಸಿದ್ದಾನೆ, ಹೀಗೆ ಸಾರಿಪುತ್ತ ನೀನು ನೆನಪಿಡಬೇಕು.

35.9.5. ಪುಣ್ಣ ಸುತ್ತಂ

88. ಆಗ ಆಯುಷ್ಮಂತ ಪುಣ್ಣರವರು ಭಗವಾನರ ಬಳಿಗೆ ಸಮೀಪಿಸಿದರು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತರು, ನಂತರ ಹೀಗೆ ಕೋರಿಕೊಂಡರು: ಭಂತೆ, ನನಗೆ ಒಳಿತಾಗುವುದು ಭಗವಾನರು ಸಂಕ್ಷಿಪ್ತವಾಗಿ ಧಮ್ಮವನ್ನು ಉಪದೇಶಿಸುವಂತಾಗಲಿ, ಅದರಿಂದಾಗಿ ಧಮ್ಮವನ್ನು ಆಲಿಸಿ ನಾನು ಏಕಾಂತವಾಸಿಯಾಗಿ ಎಲ್ಲದರಿಂದ ವಿಮುಖನಾಗಿ, ಅಪ್ರಮತ್ತನಾಗಿ, ಉತ್ಸಾಹಿಯಾಗಿ, ದೃಢತಾಪೂರ್ವಕವಾಗಿ ಪರಿಶ್ರಮದಿಂದ ವಿಹರಿಸುವೆನು.
ಪುಣ್ಣ, ಇಲ್ಲಿ ಚಕ್ಷುವಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ, ಅವು ಆಸೆ ಹುಟ್ಟಿಸುವಂತಹವು, ಪ್ರಿಯವಾದವು, ಒಪ್ಪುವಂತಹವು, ಆನಂದಮಯವಾಗಿರುವಂತಹವು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಭಿಕ್ಷುವು ಇವುಗಳಲ್ಲಿ ಆನಂದವನ್ನು ಹುಡುಕಿದರೆ, ಸ್ವಾಗತಿಸಿದರೆ, ಅದರಲ್ಲಿ ಅಂಟಿಕೊಂಡರೆ ಆತನಲ್ಲಿ ಆನಂದವು ಉಂಟಾಗುತ್ತದೆ. ಹೀಗೆ ಈ ಬಗೆಯ ಆನಂದದ ಉದಯದ ಹಿಂದೆ ದುಃಖದ ಉದಯವೂ ಆಗುತ್ತದೆ. ಹೀಗೆ ನಾನು ಹೇಳುತ್ತೇನೆ, ಪುಣ್ಣ ಇಲ್ಲಿ ಕಿವಿಯಿಂದ... ಮೂಗಿನಿಂದ... ನಾಲಿಗೆಯಿಂದ... ದೇಹದಿಂದ... ಮನಸ್ಸಿನಿಂದ ಗ್ರಹಸಿಬಹುದಾದ ಮಾನಸಿಕ ವಿಷಯಗಳು (ಧಮ್ಮ) ಇವೆ. ಅವು ಆಸೆ ಹುಟ್ಟಿಸುವಂತಹುದು, ಪ್ರಿಯವಾದುದು, ಒಪ್ಪುವಂತಹುದು, ಆನಂದಮಯವಾಗಿರುವಂತಹವು, ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಭಿಕ್ಷುವು ಇವುಗಳಲ್ಲಿ ಆನಂದವನ್ನು ಹುಡುಕಿದರೆ, ಸ್ವಾಗತಿಸಿದರೆ, ಅದರಲ್ಲಿ ಅಂಟಿಕೊಂಡರೆ ಆತನಲ್ಲಿ ಆನಂದವು ಉಂಟಾಗುತ್ತದೆ. ಹೀಗೆ ಈ ಬಗೆಯ ಆನಂದದ ಉದಯದಿಂದಾಗಿ ದುಃಖದ ಉದಯವು ಆಗುತ್ತದೆ, ಹೀಗೆ ನಾನು ಹೇಳುತ್ತೇನೆ.
ಪುಣ್ಣ, ಕಣ್ಣಿನಿಂದ ಗ್ರಹಿಸಬಹುದಾದಂತಹ ರೂಪಗಳಿವೆ. ಅವು ಆಸೆ ಹುಟ್ಟಿಸುವಂತಹುದು, ಪ್ರಿಯವಾದುದು, ಒಪ್ಪುವಂತಹುದು, ಆನಂದಮಯವಾಗಿರುವಂತಹುದು. ಇಂದ್ರೀಯ ಉದ್ರೇಕಕಾರಿಯು, ಪ್ರಲೋಭನಕಾರಿಯು ಆಗಿವೆ. ಭಿಕ್ಷುವು ಇವುಗಳಲ್ಲಿ ಆನಂದವನ್ನು ಹುಡುಕದಿದ್ದರೆ, ಅವನ್ನು ಸ್ವಾಗತಿಸದಿದ್ದರೆ, ಅವಕ್ಕೆ ಅಂಟಿಕೊಳ್ಳದಿದ್ದರೆ, ಆತನಲ್ಲಿ ಇಂದ್ರೀಯಾನಂದವು ನಾಶವಾಗುತ್ತದೆ. ಹೀಗೆ ಆನಂದದ ನಿರೋಧದಿಂದ ಪುಣ್ಣ ದುಃಖದ ನಿರೋಧವೆಂದು ನಾನು ಹೇಳುತ್ತಿದ್ದೇನೆ.
ಓ ಪುಣ್ಣ, ನೀನು ಈಗ ನನ್ನಿಂದ ಸಂಕ್ಷಿಪ್ತವಾಗಿ ಧಮ್ಮವನ್ನು ಸ್ವೀಕರಿಸಿರುವೆ, ಪುಣ್ಣ, ನೀನು ಯಾವ ಜನಪದದಲ್ಲಿ (ರಾಜ್ಯ) ವಾಸಿಸುತ್ತಿರುವೆ? - ಭಂತೆ ನಾನು ಸುನಾಪರಂತ ಎಂಬ ಜನಪದದಲ್ಲಿ ವಾಸಿಸುತ್ತಿರುವೆನು.
ಪುಣ್ಣ, ಸುನಾಪರಂತದ ಜನವಾಸಿಗಳು ವ್ಯಗ್ರರು ಹಾಗು ಒರಟರಾಗಿದ್ದಾರೆ, ಅವು ನಿನಗೆ ಬೈದರೆ ಹಾಗು ಕೆಟ್ಟ ಪದಗಳಿಂದ ಹೆಸರಿಡಿದು ಕರೆಯಬಹುದು. ಅದರ ಬಗ್ಗೆ ಏನು ಯೋಚಿಸುವೆ?
ಸುನಾಪರಂತರದ ಜನವಾಸಿಗಳು ವ್ಯಗ್ರರು ಹಾಗು ಒರಟಾಗಿರಬಹುದು. ನನಗೆ ಬೈದು ಕೆಟ್ಟ ಪದಗಳನ್ನಾಡಬಹುದು. ಆಗ ನಾನು ಹೀಗೆ ಯೋಚಿಸುವೆ: ಸುನಾಪರಂತದ ಜನವಾಸಿಗಳು ಶ್ರೇಷ್ಠರಾಗಿದ್ದಾರೆ, ನಿಜಕ್ಕೂ ಉತ್ಕೃಷ್ಟರಾಗಿದ್ದಾರೆ, ಏಕೆಂದರೆ ಅವರು ನನಗೆ ಹೊಡೆತಗಳಾಗಲಿ ಮತ್ತು ಮುಷ್ಠಿಯಿಂದ ಗುದ್ದಿಲ್ಲ. ಆಗ ಹೀಗೆ ನಾನು ಯೋಚಿಸುವೆ, ಭಗವಾನರೇ, ನಾನು ಆಗ ಹೀಗೆಯೇ ಯೋಚಿಸುವೆ ಸುಗತರೇ.
ಪುಣ್ಣ, ಆದರೆ ಸುನಾಪರಂತದ ಜನವಾಸಿಗಳು ನಿನಗೆ ಹೊಡೆತಗಳನ್ನು ಹಾಗು ಮುಷ್ಠಿಯ ಪಹಾರಗಳು ನೀಡಿದರು ಎಂದಿಟ್ಟಿಕೊ, ಆಗ ಅದರ ಬಗ್ಗೆ ಏನು ಯೋಚಿಸುವೆ?
ಭಂತೆ, ಸುನಪರಂತದ ಜನವಾಸಿಗಳು ನನಗೆ ಹೊಡೆತಗಳನ್ನು ಹಾಗು ಮುಷ್ಠಿ ಪ್ರಹಾರಗಳನ್ನು ನೀಡಿದಾಗಲು ನಾನು ಹೀಗೆ ಯೋಚಿಸುವೆ: ಈ ಸುನಾಪರಂತ ಜನವಾಸಿಗಳು ಶ್ರೇಷ್ಠರಾಗಿದ್ದಾರೆ, ನಿಜಕ್ಕೂ ಉತ್ಕೃಷ್ಟರಾಗಿದ್ದಾರೆ, ಏಕೆಂದರೆ ಅವರು ನನಗೆ ಹೆಂಟೆಗಳಿಂದ ಹೊಡೆದಿಲ್ಲ ಎಂದು ಹೀಗೆ ಯೋಚಿಸುವೆ ಭಗವಾನರೇ, ಹೀಗೆಯೇ ನಾನು ಯೋಚಿಸುವೆ ಸುಗತರೇ.
ಆದರೆ ಪುಣ್ಣ, ಸುನಾಪರಂತದ ಜನವಾಸಿಗಳು ನಿನಗೆ ಹೆಂಟೆಗಳಿಂದ ಹೊಡೆದರು ಎಂದಿಟ್ಟಿಕೋ, ಆಗ ಏನು ಯೋಚಿಸುವೆ.
ಭಂತೆ, ಸುನಾಪರಂತ ಜನವಾಸಿಗಳು ನನಗೆ ಹೆಂಟೆಗಳಿಮದ ಹೊಡೆದಾಗಲು ಹೀಗೆ ಯೋಚಿಸುವೆ: ಈ ಸುನಾಪರಂತ ಜನವಾಸಿಗಳು ಶ್ರೇಷ್ಠರಾಗಿದ್ದಾರೆ, ನಿಜಕ್ಕೂ ಉತ್ಕೃಷ್ಟರಾಗಿದ್ದಾರೆ, ಏಕೆಂದರೆ ಅವರು ನನಗೆ ದಂಡಗಳಿಂದ/ಸಲಾಕೆಗಳಿಂದ ಹೊಡೆದಿಲ್ಲ ಎಂದು ಹೀಗೆ ಯೋಚಿಸುವೆ ಭಗವಾನರೇ. ಹೀಗೆಯೇ ನಾನು ಯೋಚಿಸುವೆ ಸುಗತರೇ.
ಆದರೆ ಪುಣ್ಣ, ಸುನಾಪರಂತ ಜನವಾಸಿಗಳು ನಿನಗೆ ದಂಡಗಳಿಂದ ಹೊಡೆದರೂ ಎಂದಿಟ್ಟಿಕೋ, ಆಗ ಏನು ಯೋಚಿಸುವೆ?
ಭಂತೆ, ಸುನಾಪರಂತ ಜನವಾಸಿಗಳು ನನಗೆ ದಂಡಗಳಿಂದ ಹೊಡೆದಾಗಲೂ ಹೀಗೆ ಯೋಚಿಸುವೆ: ಈ ಸುನಾಪರಂತ ಜನವಾಸಿಗಳು ಶ್ರೇಷ್ಠರಾಗಿದ್ದಾರೆ, ನಿಜಕ್ಕೂ ಉತ್ಕೃಷ್ಟರಾಗಿದ್ದಾರೆ, ಏಕೆಂದರೆ ಅವರು ನನಗೆ ಚೂರಿಯಿಂದ ಇರಿದಿಲ್ಲ ಎಂದು ಹೀಗೆ ಯೋಚಿಸುವೆ ಭಗವಾನರೇ, ಹೀಗೆಯೇ ನಾನು ಯೋಚಿಸುವೆ ಸುಗತರೇ.
ಆದರೆ ಪುಣ್ಣ, ನಿನಗೇನಾದರೂ ಸುನಾಪರಂತ ಜನವಾಸಿಗಳು ಚೂರಿಯಿಂದಲೇ ಇರಿದರು ಎಂದಿಟ್ಟಿಕೋ, ಆಗ ಯಾವರೀತಿ ಯೋಚಿಸುವೆ?
ಭಂತೆ, ನನಗೇನಾದರೂ ಸುನಾಪರಂತ ಜನವಾಸಿಗಳು ಚೂರಿಯಿಂದಲೇ ಇರಿದರು ಸಹಾ ನಾನು ಹೀಗೆ ಯೋಚಿಸುವೆ: ಈ ಸುನಾಪರಂತ ಜನವಾಸಿಗಳು ಶ್ರೇಷ್ಠರಾಗಿದ್ದಾರೆ, ನಿಜಕ್ಕೂ ಉತ್ಕೃಷ್ಟರಾಗಿದ್ದಾರೆ. ಏಕೆಂದರೆ ಅವರು ಹರಿತವಾದ ಶಸ್ತ್ರಗಳಿಂದ ಕೊಲ್ಲಲಿಲ್ಲ ಹೀಗೆ ನಾನು ಯೋಚಿಸುವೆ ಭಗವಾನರೇ, ಆಗ ಹೀಗೆಯೇ ನಾನು ಯೋಚಿಸುವೆ ಸುಗತರೇ.
ಆದರೆ ಪುಣ್ಣ  ಸುನಾಪರಂತ ಜನವಾಸಿಗಳು ಹರಿತವಾದ ಶಸ್ತ್ರಗಳಿಂದ ನಿನ್ನ ಪ್ರಾಣವನ್ನೇ ತೆಗೆದರು ಎಂದಿಟ್ಟಿಕೊ, ಆಗ ಯಾವರೀತಿ ಯೋಚಿಸುವೆ?
ಭಂತೆ, ಸುನಾಪರಂತ ಜನವಾಸಿಗಳು ಹರಿತವಾದ ಶಸ್ತ್ರಗಳಿಂದ ನನ್ನ ಪ್ರಾಣವನ್ನು ತೆಗೆದರೂ, ನಾನು ಹೀಗೆ ಯೋಚಿಸುವೆ: ಭಗವಾನ್ ಬುದ್ಧರ ಶ್ರಾವಕ ಸಂಘವು ಕಾಯದ ಬಗ್ಗೆ ಹಾಗು ಜೀವನದ ಬಗ್ಗೆ ಸಾಮಾನ್ಯವಾಗಿ ವಿಕಷರ್ಿತರಾಗುತ್ತಾರೆ, ಅಶುಭವೆಂದೆಣಿಸುತ್ತಾರೆ (ಸುಂದರವಲ್ಲ), ಕ್ಷಣಿಕತೆಯ ಬಗ್ಗೆ ಅರಿತು ವಿರಾಗ ಹೊಂದಿ ಶಸ್ತ್ರಕ್ಕಾಗಿ (ಮರಣಕ್ಕಾಗಿ) ಕಾಯುತ್ತಿರುತ್ತಾರೆ. ಆದರೆ ನನಗಂತು ಹುಡುಕಾಟವಿಲ್ಲದೆ ಈ ಅವಕಾಶ ಸಿಕ್ಕಿತು ಹೀಗೆ ನಾನು ಯೋಚಿಸುವೆ ಭಗವಾನರೇ, ಆಗ ಹೀಗೆಯೇ ಯೋಚಿಸುವೆ ಸುಗತರೇ.
ಸಾಧು ಸಾಧು ಪುಣ್ಯ! ಸ್ವಸಂಯಮದಿಂದ ಹಾಗು ಶಾಂತತೆಯುತನಾಗಿ, ನೀನು ಸುನಾಪರಂತ ಜನಪದದಲ್ಲಿ ವಿಹರಿಸಲು ಅರ್ಹನಾಗಿದ್ದೀಯೆ. ಈಗ ಪುಣ್ಣ ನಿನಗೆ ಯೋಗ್ಯವೆನಿಸಿದಂತೆ ಮಾಡಬಹುದು.
ಭಗವಾನರ ಈ ನುಡಿಗಳಿಂದ ಆನಂದಿತನಾದ ಪುಣ್ಣನು ಭಗವಾನರಿಗೆ ಭಕ್ತಿಪೂರ್ವಕವಾಗಿ ವಂದಿಸಿ, ಭಗವಾನರ ಬಲಗಡೆಯಿಂದ ಪ್ರದಕ್ಷಿಣೆಯನ್ನು ಮಾಡಿ ಅಲ್ಲಿಂದ ಹೊರಟನು. ನಂತರ ವಾಸಸ್ಥಳವನ್ನು ನಿರ್ಧರಿಸಿ, ಪಿಂಡಪಾತ್ರೆ ಚೀವರಗಳನ್ನು ಧರಿಸಿ ಸುನಾಪರಂತ ಜನಪದಕ್ಕೆ (ರಾಜ್ಯ) ಬಂದನು ಹಾಗು ಅಲ್ಲಿಯೇ ವಾಸಿಸಿದನು. ನಂತರ ವರ್ಷವಾಸದ ಹೊತ್ತಿಗೆ 500 ಉಪಾಸಕರನ್ನು 500 ಉಪಾಸಿಕೆಯರನ್ನು ಸಿದ್ದಪಡಿಸಿದನು. ತಾನು ಸಹಾ ಅದೇ ವರ್ಷದಲ್ಲಿ ತ್ರಿವಿದ್ಯೆಗಳನ್ನು ಸಾಕ್ಷಾತ್ಕರಿಸಿದನು. ನಂತರ ಅದೇ ವರ್ಷದ ಅಂತ್ಯದಲ್ಲಿ ಪರಿನಿಬ್ಬಾಣವನ್ನು ಪ್ರಾಪ್ತಿಮಾಡಿದನು.
ನಂತರ ಅಸಂಖ್ಯಾತ ಭಿಕ್ಷುಗಳು ಭಗವಾನರ ಬಳಿಗೆ ಬಂದರು ಹಾಗು ಹೀಗೆ ಹೇಳಿದರು: ಭಂತೆ, ಪುಣ್ಣ ಎಂಬ ನಾಮಧೇಯ ಹೊಂದಿದಂತಹ ಕುಲಪುತ್ತನು, ತಮ್ಮಿಂದ ಸಂಕ್ಷಿಪ್ತ ಬೋಧನೆಯನ್ನು ಆಲಿಸಿದ್ದನು. ಆತನಿಂದ ಸುನಾಪರಂತದ ಜನಪದದಲ್ಲಿ ಧಮ್ಮ ಹರಡಿದೆ. ಆತನು ಮೃತ್ಯುವಶನಾಗಿರುವನು, ಆತನ ಭವಿಷ್ಯವೇನು? ಆತನು ಎಲ್ಲಿ ಪುನರ್ಜನ್ಮ ಪಡೆದಿರುವನು.
ಭಿಕ್ಷುಗಳೇ, ಪುಣ್ಣ ಪಂಡಿತನಾಗಿದ್ದನು (ಜ್ಞಾನಿ), ಆತನು ಧಮ್ಮಾನುಸಾರವಾಗಿ ಜೀವನ ನಡೆಸಿದ್ದಾನೆ. ಧಮ್ಮದ ವಿಚಾರದಲ್ಲಿ ಆತನು ಯಾವುದೇ ರೀತಿಯ ತೊಂದರೆ ನೀಡಿಲ್ಲ. ಕುಲಪುತ್ರ ಪಂಡಿತ ಪುಣ್ಣ ಪರಿನಿಬ್ಬಾಣ ಸಾಧಿಸಿದ್ದಾನೆ ಎಂದರು.

35.9.6. ಬಾಹಿಯ ಸುತ್ತಂ

89. ಆಗ ಆಯುಷ್ಮಂತ ಬಾಹಿಯಾ ಭಗವಾನರ ಬಳಿಗೆ ಬಂದನು. ಭಗವಾನರಿಗೆ ವಂದಿಸಿ ಒಂದೆಡೆ ಕುಳಿತನು. ನಂತರ ಹೀಗೆ ಕೋರಿಕೊಂಡನು: ಭಂತೆ, ಭಗವಾನರು ನನಗೆ ಧಮ್ಮವನ್ನು ಸಂಕ್ಷಿಪ್ತವಾಗಿ ವಿವರಿಸಲಿ, ಅದರಿಂದಾಗಿ ನಾನು ಏಕಾಂತವಾಸಿಯಾಗಿ, ವಿರಕ್ತನಾಗಿ, ಅಪ್ರಮತ್ತನಾಗಿ, ಉತ್ಸಾಹಿಯಾಗಿ, ದೃಢತೆಯಿಮದ ಕೂಡಿ ವಾಸಿಸುವಂತಾಗಲಿ.
ಇದನ್ನು ಹೇಗೆ ಭಾವಿಸುವೆ, ಬಾಹಿಯಾ ಚಕ್ಷು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ದುಃಖಕರವೋ ಅಥವಾ ಸುಖಕರವೋ.
ದುಃಖಕಾರಕ ಭಂತೆ.
ಮತ್ತೆ ಯಾವುದು ಅನಿತ್ಯವೋ, ದುಃಖಕಾರಕವೋ ವಿಪರಿಣಾಮಧಮ್ಮ ಹೊಂದಿದೆಯೋ ಅದನ್ನು ಇದು ನನ್ನದು, ಇದೇ ನಾನು ಮತ್ತು ಇದೇ ನನ್ನ ಆತ್ಮವೆಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ರೂಪಗಳು ನಿತ್ಯವೋ ಅಥವಾ ಅನಿತ್ಯವೋ.
ಅನಿತ್ಯ ಭಂತೆ.
ಚಕ್ಷುವಿಞ್ಞಾನ... ಚಕ್ಷುಸಂಸ್ಪರ್ಶ... ಮನೋಸಂಸ್ಪರ್ಶಗಳಿಂದ ಉಂಟಾಗುವ ವೇದನೆಗಳಾದ ಪ್ರಿಯ, ಅಪ್ರಿಯ, ತಟಸ್ಥ ವೇದನೆಗಳು ನಿತ್ಯವೋ ಅಥವಾ ಅನಿತ್ಯವೋ?
ಅನಿತ್ಯ ಭಂತೆ.
ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ.
ಮತ್ತೆ ಯಾವುದು ಅನಿತ್ಯವೋ, ದುಃಖಕಾರಿಯೋ ವಿಪರಿಣಾಮ ಧಮ್ಮವನ್ನು ಹೊಂದಿದೆಯೋ ಅದನ್ನು ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಇಲ್ಲ ಭಂತೆ.
ಹೀಗೆ ದಶರ್ಿಸಿದಂತಹ ಆರ್ಯಶ್ರಾವಕನು ಚಕ್ಷುವಿನಿಂದ ವಿಕಷರ್ಿತನಾಗುತ್ತಾನೆ, ಚಕ್ಷುಸಂಸ್ಪರ್ಶದಿಂದ ವಿಕಷರ್ಿತನಾಗುತ್ತಾನೆ... ಮನೋಸಂಸ್ಪರ್ಶಗಳಿಂದ ವಿಕಷರ್ಿತನಾಗುತ್ತಾನೆ. ಅದರಿಂದಾಗಿ ಉಂಟಾದ ಪ್ರಿಯ/ಅಪ್ರಿಯ/ತಟಸ್ಥ ವೇದನೆಗಳಿಂದ ವಿಕಷರ್ಿತನಾಗುತ್ತಾನೆ. ವಿಕಷರ್ಿತನಾದ್ದರಿಂದಾಗಿ ವಿರಾಗ ಹೊಂದುತ್ತಾನೆ, ವಿರಾಗದಿಂದಾಗಿ ವಿಮುಕ್ತನಾಗುತ್ತಾನೆ, ವಿಮುಕ್ತನಾದ್ದರಿಂದಾಗಿ ವಿಮುಕ್ತಿ ಜ್ಞಾನವನ್ನು ಹೊಂದುತ್ತಾನೆ. ಜನ್ಮವು ಕ್ಷೀಣವಾಯಿತು, ಬ್ರಹ್ಮಚರ್ಯೆಯು ಪೂರ್ಣವಾಯಿತು, ಮಾಡಬೇಕಾದ್ದು ಮಾಡಿಯಾಯಿತು, ಮುಂದೆ ಇನ್ನೇನು ಉಳಿದಿಲ್ಲ, ಭವವಿಲ್ಲ ಎಂದು ಅರಿಯುತ್ತಾನೆ.
ಇದನ್ನು ಆಲಿಸಿದಂತಹ ಬಾಹಿಯನು ಆನಂದಿತನಾದನು, ಅಭಿವಂದಿಸಿದನು. ನಂತರ ಭಗವಾನರಿಗೆ ವಂದಿಸಿ, ಬಲಗಡೆಯಿಂದ ಪ್ರದಕ್ಷಿಣೆ ಮಾಡಿದನು. ನಂತರ ಅಲ್ಲಿಂದ ಹೊರಟಂತಹ ಬಾಹಿಯನು ಏಕಾಂತವಾಸಿಯಾಗಿ, ವಿರಕ್ತನಾಗಿ, ಅಪ್ರಮತ್ತನಾಗಿ, ಉತ್ಸಾಹಿಯಾಗಿ, ದೃಢತಾಪೂರ್ವಕ ಸಾಧನೆ ಮಾಡಿ ವಿಹರಿಸಿದನು. ನಂತರ ತನ್ನಿಂದ ತಾನೇ ಅಭಿಜ್ಞಾಸಹಿತ ಜ್ಞಾನೋದಯ ಪಡೆದನು. ಯಾವುದಕ್ಕಾಗಿ ಕುಲಪುತ್ತರು ಗೃಹಜೀವನದಿಂದ ಅನಿಕೇತನನಾಗಿ ವಿಮುಕ್ತನಾದನು. ನಂತರ ವಿಮುಕ್ತಿ ಜ್ಞಾನವನ್ನು ಪಡೆದನು. ಜನ್ಮವು ಕ್ಷೀಣವಾಯಿತು, ಬ್ರಹ್ಮಚರ್ಯೆಯು ಪೂರ್ಣಗೊಂಡಿತು, ಮಾಡಬೇಕಾದ್ದು ಮಾಡಿಯಾಯಿತು, ಇನ್ನು ಸ್ಥಿತಿಯ ಜೀವಿಯಲ್ಲ ಎಂದು ಅರಿತನು. ಆಯುಷ್ಮಂತ ಬಾಹಿಯನು ಅರಹಂತರಲ್ಲಿ ಒಬ್ಬನಾದನು.

35.9.7. ಪಠಮ ಏಜಾ ಸುತ್ತಂ

(ಏಜಾ ಎಂದರೆ ಕಲಕಿರುವಿಕೆ/ಚಲನೆ/ತೀವ್ರ ಬಯಕೆ)
90. ಭಿಕ್ಷುಗಳೇ, ಕಲಕಿರುವಿಕೆ (ತೀವ್ರ ಬಯಕೆಯಲ್ಲಿರುವಿಕೆ) ರೋಗದಂತೆ, ಗಡ್ಡೆಯಂತೆ, ಶಲ್ಯದಂತೆ (ಮುಳ್ಳಿನಂತಿರುವ ಎಸೆಯುವ ಅಸ್ತ್ರ). ಆದ್ದರಿಂದ ಭಿಕ್ಷುಗಳೇ, ತಥಾಗತರು ಕದಲಿಕೆಯಿಲ್ಲದೆ ಸ್ಥಿರವಾಗಿರುತ್ತಾರೆ, ಶಲ್ಯತೆಗೆದವರಂತೆ ಶಾಂತವಾಗಿರುತ್ತಾರೆ. ಆದ್ದರಿಂದ ಭಿಕ್ಷುಗಳೇ, ಭಿಕ್ಷುವು ಯಾವರೀತಿ ಹಾರೈಸಿಕೊಳ್ಳಬೇಕು ಎಂದರೆ ನಾನು ನಿಶ್ಚಲನಾಗಿ ವಿಹರಿಸುವಂತಾಗಲಿ, ಶಲ್ಯ ತೆಗೆದವರಂತೆ ಪ್ರಶಾಂತವಾಗಿರಲಿ. ಆತನು ಕಣ್ಣನ್ನು ಗ್ರಹಿಸುವುದಿಲ್ಲ, ಕಣ್ಣಿನಲ್ಲಿ ಗ್ರಹಿಸುವುದಿಲ್ಲ, ಕಣ್ಣಿನ ಮೂಲಕ ಗ್ರಹಿಸುವುದಿಲ್ಲ. ಕಣ್ಣು ನನ್ನದೆಂದು ಗ್ರಹಿಸುವುದಿಲ್ಲ. ಆತನು ರೂಪಗಳನ್ನು ಗ್ರಹಿಸುವುದಿಲ್ಲ, ರೂಪಗಳಲ್ಲಿ ಗ್ರಹಿಸುವುದಿಲ್ಲ, ರೂಪಗಳ ಮೂಲಕ ರೂಪಗಳನ್ನು ನನ್ನದೆಂದು ಗ್ರಹಿಸುವುದಿಲ್ಲ. ಆತನು ಚಕ್ಷು ವಿಞ್ಞಾಣವನ್ನು ಗ್ರಹಿಸುವುದಿಲ್ಲ, ಚಕ್ಷುವಿಞ್ಞಾನದಲ್ಲಿ ಗ್ರಹಿಸುವುದಿಲ್ಲ. ಚಕುವಿಞ್ಞಾನದ ಮೂಲಕ ಗ್ರಹಿಸುವುದಿಲ್ಲ. ಚಕ್ಷುವಿಞ್ಞಾನವನ್ನು ನನ್ನದೆಂದು ಗ್ರಹಿಸುವುದಿಲ್ಲ. ಹಾಗೆಯೇ ಚಕ್ಷುಸಂಸ್ಪರ್ಶವನ್ನು ಗ್ರಹಿಸುವುದಿಲ್ಲ, ಚಕ್ಷುಸಂಸ್ಪರ್ಶಗಳಲ್ಲಿ ಗ್ರಹಿಸುವುದಿಲ್ಲ, ಚಕ್ಷು ಸಂಸ್ಪರ್ಶದ ಮೂಲಕ ಗ್ರಹಿಸುವುದಿಲ್ಲ. ಆತನು ಚಕ್ಷುಸಂಸ್ಪರ್ಶದಿಂದ ಉಂಟಾದ ಪ್ರಿಯವೇದನೆ, ಅಪ್ರಿಯ ವೇದನೆ, ತಟಸ್ಥ ವೇದನೆಗಳನ್ನು ಗ್ರಹಿಸುವುದಿಲ್ಲ. ವೇದನೆಗಳಲ್ಲಿ ಗ್ರಹಿಸುವುದಿಲ್ಲ, ವೇದನೆಗಳಿಂದ ಗ್ರಹಿಸುವುದಿಲ್ಲ, ವೇದನೆಗಳ ಮೂಲಕ ಗ್ರಹಿಸುವುದಿಲ್ಲ. ವೇದನೆಗಳನ್ನು ನನ್ನದೆಂದು ಗ್ರಹಿಸುವುದಿಲ್ಲ. ಆತನು ಕಿವಿಯನ್ನು ಗ್ರಹಿಸುವುದಿಲ್ಲ... ಘ್ರಾಣವನ್ನು ಗ್ರಹಿಸುವುದಿಲ್ಲ... ಜಿಹ್ವೆಯಿಂದ ಗ್ರಹಿಸುವುದಿಲ್ಲ, ಜಿಹ್ವೆಯನ್ನು ತನ್ನದೆಂದು ಗ್ರಹಿಸುವುದಿಲ್ಲ.... ರಸಗಳನ್ನು ಗ್ರಹಿಸುವುದಿಲ್ಲ... ಜಿಹ್ವಾವಿಞ್ಞಾವನ್ನು ಗ್ರಹಿಸುವುದಿಲ್ಲ, ಜಿಹ್ವಾಸಂಸ್ಪರ್ಶಗಳನ್ನು ಗ್ರಹಿಸುವುದಿಲ್ಲ... ಜಿಹ್ವಾ ಸಂಸ್ಪರ್ಶದಿಂದ ಉಂಟಾಗುವ ವೇದನೆಗಳನ್ನು ಗ್ರಹಿಸುವುದಿಲ್ಲ, ವೇದನೆಗಳಲ್ಲಿ ಗ್ರಹಿಸುವುದಿಲ್ಲ, ವೇದನೆಗಳ ಮೂಲಕ ಗ್ರಹಿಸುವುದಿಲ್ಲ. ವೇದನೆಗಳನ್ನು ತನ್ನದೆಂದು ಗ್ರಹಿಸುವುದಿಲ್ಲ.
ಕಾಯವನ್ನು ಗ್ರಹಿಸುವುದಿಲ್ಲ... ಮನಸ್ಸನ್ನು ಗ್ರಹಿಸುವುದಿಲ್ಲ, ಮನಸ್ಸಿನಲ್ಲಿ ಗ್ರಹಿಸುವುದಿಲ್ಲ, ಮನಸ್ಸಿನಿಂದ ಗ್ರಹಿಸುವುದಿಲ್ಲ, ಮನಸ್ಸು ತನ್ನದೆಂದು ಗ್ರಹಿಸುವುದಿಲ್ಲ, ಧಮ್ಮಗಳನ್ನು (ಮಾನಸಿಕ ವಿಷಯಗಳನ್ನು) ಗ್ರಹಿಸುವುದಿಲ್ಲ. ಮನೋವಿಞ್ಞಾನವನ್ನು ಗ್ರಹಿಸುವುದಿಲ್ಲ... ಮನೋಸಂಸ್ಪರ್ಶವನ್ನು ಗ್ರಹಿಸುವುದಿಲ್ಲ... ಮನೋಸಂಸ್ಪರ್ಸಗಳಿಂದ ಉಂಟಾದ ವೇದನೆಗಳಾದ ಪ್ರಿಯ, ಅಪ್ರಿಯ, ಪ್ರಿಯಾಪ್ರಿಯವಲ್ಲದ ವೇದನೆಗಳನ್ನು ಗ್ರಹಿಸುವುದಿಲ್ಲ. ವೇದನೆಗಳಲ್ಲಿ ಗ್ರಹಿಸುವುದಿಲ್ಲ, ವೇದನೆಗಳಿಂದ ಗ್ರಹಿಸುವುದಿಲ್ಲ, ವೇದನೆಗಳನ್ನು ತನ್ನದೆಂದು ಗ್ರಹಿಸುವುದಿಲ್ಲ.
ಹೀಗೆ ಯಾವುದನ್ನು ಗ್ರಹಿಸದೆ ಇರುವುದರಿಂದಾಗಿ, ಆತನು ಲೋಕದ ಯಾವುದಕ್ಕೂ ಅಂಟಿಕೊಳ್ಳಲಾರನು. ಯಾವುದಕ್ಕೂ ಅಂಟಿಕೊಳ್ಳದೆ ಇರುವುದಿರಿಂದಾಗಿ ಕ್ಷೊಭೆಗೆ ಒಳಗಾಗುವುದಿಲ್ಲ. ಹೀಗೆ ಅಕ್ಷೊಭೆಯಿಂದ ಇದ್ದದ್ದರಿಂದ ಪರಿನಿಬ್ಬಾಣವನ್ನು ಪಡೆಯುತ್ತಾನೆ. ನಂತರ ವಿಮುಕ್ತಿಜ್ಞಾನವನ್ನು ಪಡೆಯುತ್ತಾನೆ. ಜನ್ಮವು ನಾಶವಾಯಿತು, ಬ್ರಹ್ಮಚರ್ಯೆಯು ಪೂರ್ಣಗೊಂಡಿತು, ಮಾಡಬೇಕಾದ್ದು ಮಾಡಿಯಾಯಿತು, ಈ ಸ್ಥಿತಿಯ ಜೀವಿಯು ಇನ್ನಿಲ್ಲ (ಪುನರ್ಜನ್ಮವಿಲ್ಲ) ಎಂದು ಅರಿಯುತ್ತಾನೆ.

35.9.8. ದುತಿಯ ಏಜಾ ಸುತ್ತಂ

91. ಭಿಕ್ಷುಗಳೇ, ಕದಡುವಿಕೆಯು (ತೀವ್ರಬಯಕೆ) ರೋಗವಾಗಿದೆ, ಗಡ್ಡೆಯಾಗಿದೆ, ಶಲ್ಯವಾಗಿದೆ. ಆದ್ದರಿಂದಲೇ ಭಿಕ್ಷುಗಳೇ, ತಥಾಗತರು ನಿಶ್ಚಲರಾಗಿ ವಿಹರಿಸುತ್ತಾರೆ, ಅವರಿಂದ ಶಲ್ಯನಿವಾರಣೆಯಾಗಿದೆ. ಆದ್ದರಿಂದಲೇ ಭಿಕ್ಷುಗಳೇ, ಚಕ್ಷುವೇನಾದರೂ ಅಪೇಕ್ಷೆ ಪಡುವುದಾದರೆ, ನಾನು ಕದಡುವಿಕೆಯಿಲ್ಲದೆ, ನಿಶ್ಚಲನಾಗಿ, ಶಲ್ಯವು ನಿವಾರಣೆಯಾಗಲಿ. ಹೀಗಾಗಿ ಆತನು ಕಣ್ಣನ್ನು ಗ್ರಹಿಸದಿರಲಿ. ಹಾಗೆಯೇ ರೂಪಗಳನ್ನು... ಚಕ್ಷುವಿಞ್ಞಾನವನ್ನು... ಚಕ್ಷುಸಂಸ್ಪರ್ಶವನ್ನು... ಚಕ್ಷು ವೇದನೆಗಳನ್ನು ಗ್ರಹಿಸದಿರಲಿ. ಹಾಗೆಯೇ ಇವ್ಯಾವುದನ್ನು ಇದು ನನ್ನದು ಎಂದು ಭಾವಿಸದಿರಲಿ. ಯಾವುದೆಲ್ಲವನ್ನು ಗ್ರಹಿಸದಿರಲಿ, ಯಾವುದರಿಂದಲೂ ಗ್ರಹಿಸದಿರಲಿ, ಯಾವುದನ್ನು ನನ್ನದೆಂದು ಗ್ರಹಿಸದಿರಲಿ. ಈ ರೀತಿಯಾಗಿ ಗ್ರಹಿಸದಿದ್ದಾಗ, ಆತನು ಲೋಕದ ಯಾವುದಕ್ಕೂ ಅಂಟಿಕೊಳ್ಳಲಾರನು. ಆದರೆ ಇದರ ಬದಲಾಗಿ ಗ್ರಹಿಸಿದಾಗ, ಭವಕ್ಕೆ ಅಂಟಿಕೊಳ್ಳುತ್ತನೆ, ಅಸ್ತಿತ್ವದಲ್ಲಿಯೇ ಆನಂದಿಸುತ್ತಾನೆ.
ಜಿಹ್ವಾವನ್ನು ಗ್ರಹಿಸದಿರಲಿ, ಜಿಹ್ವಾದಲ್ಲಿ ಗ್ರಹಿಸದಿರಲಿ, ಜಿಹ್ವಾದಿಂದ ಗ್ರಹಿಸದಿರಲಿ, ಜಿಹ್ವಾ ನನ್ನದೆಂದು ಗ್ರಹಿಸದಿರಲಿ. ರಸವನ್ನು ಗ್ರಹಿಸದಿರಲಿ... ಜಿಹ್ವಾ ವಿಞ್ಞಾನವನ್ನು... ಜಿಹ್ವಾಸಂಸ್ಪರ್ಶವನ್ನು... ಜಿಹ್ವಾಸಂಸ್ಪರ್ಶದಿಂದ ಉಂಟಾದ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ತಟಸ್ಥ ವೇದನೆಗಳನ್ನು ಗ್ರಹಿಸದಿರಲಿ. ಹೀಗೆ ಯಾವುದೆಲ್ಲವನ್ನು ಗ್ರಹಿಸದಿರಲಿ, ಯಾವುದರಿಂದಲೂ ಗ್ರಹಿಸದಿರಲಿ, ಯಾವುದನ್ನೂ ನನ್ನದೆಂದು ಗ್ರಹಿಸದಿರಲಿ. ಈ ರೀತಿ ಗ್ರಹಿಸದಿದ್ದಾಗ ಆತನು ಲೋಕದ ಯಾವುದಕ್ಕೂ ಅಂಟಲಾರನು. ಆದರೆ ಇದರ ಬದಲಾಗಿ ಗ್ರಹಿಸಿದಾಗ, ಭವಕ್ಕೆ ಅಂಟಿಕೊಳ್ಳುತ್ತಾನೆ, ಅಸ್ತಿತ್ವದಲ್ಲಿಯೇ ಆನಂದಿಸುತ್ತಾನೆ.
ಮನಸ್ಸನ್ನು ಗ್ರಹಿಸದಿರಲಿ, ಮನಸ್ಸಿನಲ್ಲಿ ಗ್ರಹಿಸದಿರಲಿ, ಮನಸ್ಸಿನಿಂದ ಗ್ರಹಿಸದಿರಲಿ, ಮನಸ್ಸು ನನ್ನದೆಂದು ಗ್ರಹಿಸದಿರಲಿ.... ಮನೋವಿಞ್ಞಾನವನು... ಮನೋಸಂಸ್ಪರ್ಶವನ್ನು... ಸ್ಪರ್ಶದಿಂದ ಉಂಟಾಗುವ ವೇದನೆಗಳಾದ ಪ್ರಿಯವೇದನೆ, ಅಪ್ರಿಯವೇದನೆ, ಪ್ರಿಯಾಪ್ರಿಯಗಳಲ್ಲದ ವೇದನೆಗಳನ್ನು ಗ್ರಹಿಸದಿರಲಿ. ವೇದನೆಗಳಲ್ಲಿ ಗ್ರಹಿಸದಿರಲಿ, ವೇದನೆಗಳಿಂದ ಗ್ರಹಿಸದಿರಲಿ, ವೇದನೆಗಳನ್ನು ತನ್ನದೆಂದು ಗ್ರಹಿಸದಿರಲಿ. ಈ ರೀತಿ ಗ್ರಹಿಸಿದಾಗ ಆತನು ಲೋಕದ ಯಾವುದಕ್ಕೂ ಅಂಟಲಾರನು. ಆದರೆ ಇದರ ಬದಲಾಗಿ ಗ್ರಹಿಸಿದಾಗ ಭವಕ್ಕೆ ಅಂಟುತ್ತಾನೆ, ಅಸ್ತಿತ್ವದಲ್ಲಿಯೇ ಆನಂದಿಸುತ್ತಾನೆ.
ಆದ್ದರಿಂದಾಗಿ ಭಿಕ್ಷುಗಳೇ, ಖಂಧಗಳಾಗಲಿ, ಧಾತುಗಳಾಗಲಿ, ಇಂದ್ರೀಯ ಆಧಾರಗಳಾಗಲಿ (ಸಳಾಯತನ) ಅವನ್ನು ಗ್ರಹಿಸದಿರಲಿ, ಅವುಗಳಲ್ಲೇ ಗ್ರಹಿಸದಿರಲಿ, ಅವುಗಳಿಂದಲೇ ಗ್ರಹಿಸದಿರಲಿ, ಅವನ್ನು ನನ್ನದೆಂದು ಗ್ರಹಿಸದಿರಲಿ. ಏಕೆಂದರೆ ಹೀಗೆ ಗ್ರಹಿಸಿದಾಗ ಆತನು ಲೋಕದ ಯಾವುದಕ್ಕೂ ಅಂಟಲಾರನು. ಅಂಟದಿರುವುದರಿಂದಾಗಿ ಯಾವುದೇ ಕ್ಷೊಭೆಗೆ ಒಳಗಾಗುವುದಿಲ್ಲ, ಹೀಗೆ ತಾನಾಗಿಯೇ ನಿಬ್ಬಾಣವನ್ನು ಪಡೆಯುತ್ತಾನೆ. ನಂತರ ವಿಮುಕ್ತಿ ಜ್ಞಾನವನ್ನು ಪಡೆಯುತ್ತಾನೆ. ಜನ್ಮವು ನಾಶವಾಯಿತು, ಬ್ರಹ್ಮಚರ್ಯೆ ಪೂರ್ಣಗೊಂಡಿತು, ಮಾಡಬೇಕಾದ್ದು ಮಾಡಿಯಾಯಿತು, ಈ ಸ್ಥಿತಿಯ ಜೀವಿಯು ಇನ್ನಿಲ್ಲ ಎಂದು ಅರಿಯುತ್ತಾನೆ.

35.9.9. ಪಠಮ ದ್ವಯ ಸುತ್ತಂ

92. ಭಿಕ್ಷುಗಳೇ, ದ್ವಯ (ಜೋಡಿಗಳ) ಬಗ್ಗೆ ಉಪದೇಶಿಸುತ್ತಿದ್ದೇನೆ, ತಾವೆಲ್ಲರೂ ಆಲಿಸಿರಿ. ಯಾವುದು ಭಿಕ್ಷುಗಳೇ, ದ್ವಯವು (ಜೋಡಿಗಳು). ಚಕ್ಷು ಮತ್ತು ರೂಪ, ಶ್ರೋತ ಹಾಗು ಶಬ್ದ, ಘ್ರಾಣ ಹಾಗು ಗಂಧ, ಜಿಹ್ವೆ ಹಾಗು ರಸ, ಕಾಯ ಮತ್ತು ಸ್ಪರ್ಶ, ಮನಸ್ಸು ಹಾಗು ಧಮ್ಮ. ಇದನ್ನೇ ಭಿಕ್ಷುಗಳೇ ದ್ವಯವೆನ್ನುತ್ತಾರೆ.
ಭಿಕ್ಷುಗಳೇ, ಯಾರಾದರೊಬ್ಬ ಹೀಗೆ ಕೇಳಬಹುದು, ನಾನು ಈ ಜೋಡಿಗಳು ಹೊರತು ಬೇರೆ ಜೋಡಿಗಳ ಬಗ್ಗೆ ಹೇಳುವೆನು. ಆದರೆ ಅದು ಕೇವಲ ಆತನ ಸ್ವಪ್ರಶಂಸೆಯಾಗಿದೆ. ಆತನಿಗೆ ಯಾರಾದರೂ ಪ್ರಶ್ನಿಸಿದರೆ ಆತನು ಉತ್ತರಿಸಲು ಅಸಮರ್ಥನಾಗುತ್ತಾನೆ. ಪುನಃ ಆತನಿಗೆ ಏನಾದರೂ ಪ್ರಶ್ನಿಸಲು ಹೊರಟರೆ ಆತನು ವ್ಯಗ್ರನಾಗುತ್ತಾನೆ. ಏಕೆಂದರೆ ಭಿಕ್ಷುಗಳೇ, ಅದು ಆತನ ಕ್ಷೇತ್ರವಲ್ಲ.

35.9.10. ದುತಿಯ ದ್ವಯ ಸುತ್ತಂ

93. ಭಿಕ್ಷುಗಳೇ, ವಿಞ್ಞಾನವು ಈ ದ್ವಯ (ಜೋಡಿಗಳ) ಗಳನ್ನು ಅವಲಂಬಿಸಿಯೇ ಉದಯಿಸುವುದು ಮತ್ತು ಹೇಗೆ ಭಿಕ್ಷುಗಳೇ, ವಿಞ್ಞಾನವು ದ್ವಯಗಳನ್ನು ಅವಲಂಬಿಸಿ ಉದಯಿಸುವುದು? ಹೇಗೆಂದರೆ ಕಣ್ಣು ಹಾಗು ರೂಪಗಳನ್ನು ಅವಲಂಬಿಸಿ ಚಕ್ಷುವಿಞ್ಞಾನವು ಉದಯಿಸುವುದು. ಈ ಕಣ್ಣು ಅನಿತ್ಯವಾಗಿದೆ, ಪರಿವರ್ತನೆಯಾಗಿದೆ, ಬೇರೆ ವಿಧವಾಗಿ ಆಗಿಹೋಗುತ್ತವೆ. ಈ ರೂಪಗಳು ಅನಿತ್ಯವಾಗಿವೆ, ಪರಿವರ್ತನಿಯವಾಗಿದೆ. ಬೇರೆ ವಿಧವಾಗಿ ಆಗಿಹೋಗುವುದು. ಹೀಗಾಗಿ ಈ ದ್ವಯವು ಅಸ್ಥಿರವು, ಕ್ಷಣಿಕವು, ಅನಿತ್ಯವು ಮತ್ತು ಬದಲಾವಣೆ ಹೊಂದುವಂತಹುದು ಆಗಿದೆ. ಚಕ್ಷು ವಿಞ್ಞಾನವು ಅನಿತ್ಯಕರವಾಗಿದೆ, ಪರಿವರ್ತನೀಯವಾಗಿದೆ. ಬೇರೆ ರೀತಿಯೇ ಬದಲಾವಣೆಯಾಗುವಂತಹದ್ದಾಗಿದೆ. ಈ ಚಕ್ಷುವಿಞ್ಞಾನಕ್ಕೆ ಕಾರಣವಾಗಿರುವಂತಹುದು ಕೂಡ ಅನಿತ್ಯಕರ, ಪರಿವರ್ತನೆ ಬೇರೊಂದು ವಿಧವಾಗಿ ಬದಲಾವಣೆಯಾಗುವಂತಹದ್ದಾಗಿದೆ. ಯಾವಾಗ ಚಕ್ಷು ವಿಞ್ಞಾನಕ್ಕೆ ಕಾರಣವಾದ ಸ್ಥಿತಿಗಳೇ ಅನಿತ್ಯಕರವಾಗಿರುವಾಗ ಹೇಗೆತಾನೇ ಇದು ನಿತ್ಯವಾದೀತು? ಈ ಚಕ್ಷು ರೂಪಗಳು ಮತ್ತು ಚಕ್ಷುವಿಞ್ಞಾನದ ಸಂಗಮವು ಚಕ್ಷುಸಂಸ್ಪರ್ಶದಿಂದ ಆಗುವುದು. ಈ ಚಕ್ಷು ಸಂಸ್ಪರ್ಶವು ಸಹಾ ಅನಿತ್ಯಕರವಾಗಿದೆ. ಬದಲಾವಣೆ ಹೊಂದುತ್ತಿರುತ್ತದೆ. ಯಾವಾಗ ಚಕ್ಷುಸಂಸ್ಪರ್ಶದ ಉದಯವೇ ಅನಿತ್ಯಕರಗಳಿಂದ ಸ್ಥಿತಿಗಳಿಂದ ಆಗಿರಬೇಕಾದರೆ ಅದು ಹೇಗೆ ನಿತ್ಯವಾಗುವುದು? ಸಂಸ್ಪರ್ಶದಿಂದಲೇ ವೇದನೆ ಅನುಭವಿಸುತ್ತಾನೆ, ಇಚ್ಛೆಯನ್ನು ವ್ಯಕ್ತಪಡಿಸುತ್ತಾನೆ ಹಾಗು ಗ್ರಹಿಸುತ್ತಾನೆ. ಹೀಗಾಗಿ ಈ ವಿಷಯಗಳು ಸಹಾ ಚಲಿಸುವಂತಹುದು, ಅನಿತ್ಯಕಾರಿಯು, ಪರಿವರ್ತನಿಯವಾದದ್ದು ಬೇರೆ ವಿಧವಾಗಿ ಆಗುವಂತದ್ದಾಗಿದೆ. ಅದೇ ವಿಧವಾಗಿ ಕಿವಿ ಮತ್ತು ಶಬ್ದಗಳನ್ನು ಅವಲಂಬಿಸಿ ಶ್ರೋತ ವಿಞ್ಞಾನವು ಉದಯಿಸುತ್ತದೆ...
ಜಿಹ್ವೆ ಹಾಗು ರಸಗಳನ್ನು ಅವಲಂಬಿಸಿ ಜಿಹ್ವಾವಿಞ್ಞಾಣವು ಉದಯಿಸುತ್ತದೆ. ನಾಲಿಗೆಯು ಅನಿತ್ಯಕಾರಕವೂ, ಪರಿವರ್ತನಿಯವು ಹಾಗು ಬೇರೆ ವಿಧವಾಗಿ ಆಗುವಂತಹುದು. ಹಾಗೆಯೇ ರಸಗಳು ಸಹಾ. ಆದ್ದರಿಂದಾಗಿ ಇವೆರಡೂ ಸಹ ಅಸ್ಥಿರವು, ಅನಿತ್ಯವು, ಪರಿವರ್ತನಶೀಲವು ಹಾಗು ಬದಲಾಗುವಂತಹದ್ದಾಗಿದೆ. ಇವುಗಳಿಂದ ಹುಟ್ಟುವಂತಹ ಜಿಹ್ವಾವಿಞ್ಞಾಣವು ಸಹಾ ಅನಿತ್ಯ ಹಾಗು ಪರಿವರ್ತನಿಯವಾಗಿದೆ. ಹಾಗೆಯೇ ಜಿಹ್ವಾವಿಞ್ಞಾನದಿಂದ ಉದಯಿಸುವ ಉತ್ಪನ್ನಗಳು ಸಹಾ ಅನಿತ್ಯಕರ ಹಾಗು ಬದಲಾಗುವಂತಹದ್ದಗಿದೆ. ಯಾವ ಅನಿತ್ಯಕಾರಕಗಳಿಂದ ಉದಯಿಸಿದಂತಹ ಜಿಹ್ವಾವಿಞ್ಞಾನವೂ ಹೇಗೆತಾನೆ ನಿತ್ಯವಾದೀತು? ಭಿಕ್ಷುಗಳೇ, ಈ ಮೂರು ಧಮ್ಮಗಳ ಸಂಗತಿ ಹಾಗು ಪರಸ್ಪರ ಉದಯಿಸುವಿಕೆ ಜಿಹ್ವಾಸಂಸ್ಪರ್ಶದಿಂದಲೇ ಆಗುವುದು. ಜಿಹ್ವಾಸಂಸ್ಪರ್ಶವು ಅನಿತ್ಯಕರವಾಗಿದೆ, ಪರಿವರ್ತನಾಶೀಲವಾಗಿದೆ, ಬದಲಾಗುವಂತಹದ್ದಾಗಿದೆ. ಯಾವ ಕಾರಣದಿಂದಾಗಿ, ಯಾವ ಬೆಂಬಲದಿಂದಾಗಿ ಜಿಹ್ವಾಸಂಸ್ಪರ್ಶವು ಉದಯಿಸುತ್ತದೋ ಅವು ಸಹಾ ಅಂತ್ಯಕಾರಕ, ಪರಿವರ್ತನಿಯ, ಬದಲಾವಣೆಯ ಧಮ್ಮವುಳ್ಳದ್ದಾಗಿದೆ. ಹೀಗೆ ಯಾವುದರ ಉದಯದಲ್ಲಿ ಬೆಂಬಲವೂ ಅನಿತ್ಯಕಾರಕವಾಗಿದೆಯೋ ಅದರ ಉತ್ಪನ್ನಗಳು ಹೇಗೆತಾನೇ ನಿತ್ಯವಾಗುವುವು? ಭಿಕ್ಷುಗಳೇ, ಸ್ಪರ್ಶದಿಂದಲೇ ವೇದನೆಗಳನ್ನು ಅನುಭವಿಸುತ್ತಾರೆ. ಇಚ್ಛೆಗಳನ್ನು ಪಡುತ್ತಾರೆ ಹಾಗು ಗ್ರಹಿಸುತ್ತಾರೆ. ಈ ವಿಷಯಗಳು ಸಹಾ ಅನಿತ್ಯಕರವೂ, ಪರಿವರ್ತನಶೀಲವೂ ಹಗು ಬದಲಾಗುವಂತಹದ್ದಾಗಿದೆ. ಕಾಯ ಹಾಗು ಸ್ಪರ್ಶಗಳು ಅವಲಂಬಿಸಿ...
ಮನಸ್ಸು ಹಾಗು ಧಮ್ಮ (ಮಾನಸಿಕ ವಿಷಯ/ವಸ್ತು) ಗಳನ್ನು ಅವಲಂಬಿಸಿ ಮನೋವಿಞ್ಞಾಣವು ಉದಯಿಸುವುದು. ಮನಸ್ಸು ಅನಿತ್ಯಕರವಾದುದು, ಪರಿವರ್ತನೆಯಾಗುವಂತಹುದು, ಬದಲಾಗುವಂತಹುದು ಹಾಗೆಯೇ ಧಮ್ಮವೂ ಸಹಾ ಅನಿತ್ಯಕರ, ಪರಿವರ್ತನಾಶೀಲ, ಬದಲಾಗುವಂತಹುದು. ಹೀಗಾಗಿ ಇವೆರಡು ಜೋಡಿಯು ಅನಿತ್ಯಕರ, ಪರಿವರ್ತನಶೀಲ, ಬದಲಾಗುವಂತಹುದು. ಮನೋವಿಞ್ಞಾನಕ್ಕೆ ಕಾರಣವಾದ ಹೇತು ಹಾಗು ಬೆಂಬಲವೂ ಸಹಾ ಅನಿತ್ಯಕರ, ಪರಿವರ್ತನಾಶೀಲ, ಬದಲಾಗುವಂತಹದ್ದಾಗಿದೆ. ಭಿಕ್ಷುಗಳೇ, ಯಾವಾಗ ಮನೋವಿಞ್ಞಾನದ ಕಾರಣವೂ ಅನಿತ್ಯವಾಗಿರಬೇಕಾದರೆ ಹೇಗೆತಾನೇ ಮನೋವಿಞ್ಞಾನ ನಿತ್ಯವಾದೀತು? ಭಿಕ್ಷುಗಳೇ, ಈ ಮೂರು ಧಮ್ಮಗಳ ಸಮ್ಮಿಲನವೂ ಪರಸ್ಪರ ಉದಯಿಸುವಿಕೆ ಮನೋಸಂಸ್ಪರ್ಶದಿಂದಲೇ ಆಗುವುದು. ಮನೋಸಂಸ್ಪರ್ಶವೂ ಸಹಾ ಅನಿತ್ಯಕರವಾಗಿದೆ. ಹೀಗೆ ಯಾವುದರ ಉದಯವು ಬೆಂಬಲವು ಅನಿತ್ಯಕಾರಕವೋ ಅದರ ಉತ್ಪನ್ನಗಳು ಹೇಗೆತಾನೇ ನಿತ್ಯವಾಗುವುದು? ಭಿಕ್ಷುಗಳೇ, ಸ್ಪರ್ಶವು ಸ್ಪರ್ಶದಿಂದಲೇ ವೇದನೆಗಳು ಉದಯಿಸುತ್ತವೆ, ಇಚ್ಛೆಗಳು ಉದಯಿಸುತ್ತವೆ ಹಾಗು ಗ್ರಹಿಕೆಯು ಉಂಟಾಗುತ್ತದೆ. ಈ ವಿಷಯಗಳು ಸಹಾ ಅನಿತ್ಯಕಾರಕವು, ಪರಿವರ್ತನಿಯವು ಹಾಗು ಬದಲಾಗುವಂತಹುದು. ಈ ರೀತಿಯಾಗಿ ಭಿಕ್ಷುಗಳೇ, ಈ ಜೋಡಿಯಿಂದ (ದ್ವಯ) ವಿಞ್ಞಾವು ಅಸ್ತಿತ್ವಕ್ಕೆ ಬರುವುದು.
ಛನ್ನ ವರ್ಗ ಮುಗಿಯಿತು.

No comments:

Post a Comment

Samyutta nikaya 44 ಅಬ್ಯಾಕತ ಸಂಯುಕ್ತ (ಅಘೋಷಿತ/ ಅವ್ಯಾಖ್ಯಾನ ಸಂಯುಕ್ತ)

ಅಬ್ಯಾಕತ ಸಂಯುಕ್ತ (ಅಘೋಷಿತ /  ಅವ್ಯಾಖ್ಯಾನ ಸಂಯುಕ್ತ) 1. ಖೇಮಾ ಸುತ್ತ 410. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿನ ಅನಾಥಪಿಂಡಿಕನ ಉದ್ಯಾನದಲ್ಲಿನ ಜೇತವನದಲ್ಲಿ ...